ಬೆಂಗಳೂರು: ‘ಪ್ರಬಲ ಸಮುದಾಯಗಳು ಹಿಂದುಳಿದ ವರ್ಗಗಳ ಪ್ರವರ್ಗ ‘2-ಎ’ ಮೀಸಲಾತಿ ಪಡೆಯಲು ಪ್ರಯತ್ನ ನಡೆಸುತ್ತಿವೆ. ಇದರಿಂದ ಈಡಿಗ ಸಮುದಾಯ ಅವಕಾಶಗಳಿಂದ ವಂಚಿತವಾಗುತ್ತದೆ. ಆದುದರಿಂದ 26 ಉಪ ಪಂಗಡಗಳನ್ನು ಒಗ್ಗೂಡಿಸುವ ಕೆಲಸ ಯುವಕರ ಜವಾಬ್ದಾರಿಯಾಗಿದೆ’ ಎಂದು ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಕರೆ ನೀಡಿದ್ದಾರೆ.
ರವಿವಾರ ಬೆಂಗಳೂರಿನಲ್ಲಿ ನಾರಾಯಣ ಗುರು ವಿಚಾರ ವೇದಿಕೆ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಮೀಸಲಾತಿಯ ಕೂಗು ಕೇಳಿ ಬರುತ್ತಿದೆ. ಪ್ರಬಲ ಸಮುದಾಯಗಳು 2ಎ ಮೀಸಲಾತಿ ಪಟ್ಟಿಗೆ ಸೇರಿದರೆ, ಸವಲತ್ತುಗಳಿಂದ ವಂಚಿತರಾಗಿರುವ ನಮಗೆ ದೊಡ್ಡ ಅಪಾಯ. ಈ ಹಿನ್ನಲೆಯಲ್ಲಿ ಈಡಿಗ ಸಮುದಾಯ ತಮ್ಮ ಸಿಗಬೇಕಾದ ಸವಲತ್ತುಗಳಿಗಾಗಿ ಒಗ್ಗೂಡಿ ಹೋರಾಟ ನಡೆಸಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಸಹಾಯಕ ಪೋಲಿಸ್ ಆಯುಕ್ತೆ ರೀನಾ ಸುವರ್ಣ ಮಾತನಾಡಿ, ಯಾವುದೇ ಪಕ್ಷದಲ್ಲಿ ಯಾರೇ ದೊಡ್ಡದಾಗಿ ಬೆಳೆದಿದ್ದರೂ ಅವರು ಸಮಾಜದ ವಿಚಾರ ಬಂದಾಗ ಪಕ್ಷ ಬೇಧ ಮರೆತು ಕೆಲಸ ನಿರ್ವಹಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ 26 ಉಪ ಪಂಗಡಗಳನ್ನು ಒಳಗೊಂಡ ಇಂತಹ ಸಮುದಾಯ ಒಂದೆಡೆಯಲ್ಲಿ ಒಗ್ಗೂಡುವ ಅಗತ್ಯವಿದೆ. ಈಡಿಗ ಸಮುದಾಯ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಗಣ್ಯರನ್ನು ಗೌರವಿಸಲಾಯಿತು. ಕಾಂಗ್ರೆಸ್ ಪಕ್ಷದ ಡಾ.ರಾಜ ನಂದಿನಿ ಕಾಗೋಡು ತಿಮ್ಮಪ್ಪ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಚಿತ್ರನಟ ನಕುಲ್ ಗೋವಿಂದ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸುಂಟರಹಳ್ಳಿ, ಖಚಾಂಚಿ ದಿನೇಶ್ ಮಳಲಗದ್ದೆ, ಸಂಘಟನಾ ಕಾರ್ಯದರ್ಶಿ ಗಣೇಶ್, ಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು.