ಉಳ್ಳಾಲ: ರಿಕ್ಷಾ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನೇತ್ರಾವತಿ ಸೇತುವೆಯಲ್ಲಿ ಮಾ.27 ಬೆಳಗ್ಗೆ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ.
ಪಜೀರು ಸೇನೆರೆಬೈಲು ಸಂಜೀವ ಪೂಜಾರಿ ಎಂಬವರ ಪುತ್ರ 45 ವರ್ಷ ವಯಸ್ಸಿನ ಶ್ಯಾಮಪ್ರಸಾದ್ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಬಾಡಿಗೆಗೆ ಬೆಳಗ್ಗೆ ತೆರಳಿದ್ದ ಅವರು ವಾಪಸ್ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಕಾರು ಚಾಲಕ ತನ್ನ ಸಹೋದರನನ್ನು ಪಡೀಲ್ ಕಣ್ಣೂರಿನಿಂದ ತಲಪಾಡಿ ಶಾರದಾ ವಿದ್ಯಾಲಯಕ್ಕೆ ಬರುತ್ತಿದ್ದ. ಈ ವೇಳೆ ಚಲಿಸುತ್ತಿದ್ದ ಆಟೋಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ಸೇತುವೆ ಬದಿಯಲ್ಲಿ ಅಳವಡಿಸಿದ್ದ ಗಿಂಡಿಗೆಗೆ ತಗಲಿದ್ದು, ಈ ವೇಳೆ ಆಟೋ ಚಾಲಕ ರಸ್ತೆಗೆಸೆಯಲ್ಪಟ್ಟಿದ್ದು, ಕಾರಿನ ಚಕ್ರದಡಿಗೆ ಸಿಲುಕಿದ್ದು, ಚಾಲಕನ ಮೇಲೆಯೇ ಕಾರು ಚಲಿಸಿದ್ದರಿಂದ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಇಲ್ಲಿನ ಅಸೈಗೋಳಿ ಆಟೋ ಸ್ಟ್ಯಾಂಡ್ ನಲ್ಲಿ ಆಟೋ ಚಲಾಯಿಸುತ್ತಿದ್ದ ಶ್ಯಾಮ್ ಪ್ರಸಾದ್ ತಮ್ಮ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಇದೀಗ ಇವರು ಅಪಘಾತಕ್ಕೆ ಬಲಿಯಾಗಿದ್ದರಿಂದ ಕುಟುಂಬ ಕಂಗಾಲಾಗಿದೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಇಂದು ಬೆಳಗ್ಗೆ ಮನೆಯಿಂದ ಹೊರಟಿದ್ದ ಆಟೋ ಚಾಲಕ, ಬಾಡಿಗೆ ಇದೆ, ಈಗ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೊರಟಿದ್ದರು. ಆದರೆ, ಕೆಲವೇ ಸಮಯ ಕಳೆಯುವುದರೊಳಗೆ ಅವರ ಸಾವಿನ ಸುದ್ದಿ ಮನೆಯವರಿಗೆ ತಿಳಿದು ಬಂದಿದೆ.