” ಅಂದು ಬಸ್ಸಲ್ಲಿ ಎಣ್ಣೆ ಡಬ್ಬದ ಮೇಲೆ ಗೋಣಿಚೀಲ ಹಾಕಿಕೊಂಡು ಅದರ ಮೇಲೆ ಕುಳಿತು ಜೀವನವನ್ನು ಹುಡುಕಿಕೊಂಡು ಮುಂಬಯಿ ತಲುಪಿದ ಹುಡುಗ ಇಂದು ಸುಮಾರು ಐದು ಸಾವಿರ ಜನರಿಗೆ ಕೆಲಸ ಕೊಡಿಸಿದ ಅನ್ನದಾತ ”
ಸಾಮಾನ್ಯವಾಗಿ ಕೆಲವು ವರ್ಷಗಳ ಹಿಂದೆ ಕರಾವಳಿಯವರು ಜೀವನವನ್ನು ಹುಡುಕಿಕೊಂಡು ಹೋಗುತ್ತಿದ್ದುದು ಮಹಾನಗರಿ ಮುಂಬಯಿಗೆ. ಮುಖ್ಯವಾಗಿ ಹೋಟೇಲುಗಳಲ್ಲಿ ಕೆಲಸ ಮಾಡಲು. ಅಂದು ಏಳನೆಯ ತರಗತಿಯವರೆಗೆ ಓದಿದ್ದ ಆ ಹುಡುಗ ಕೂಡ ಜೀವನವನ್ನು ಹುಡುಕಿಕೊಂಡು ಮುಂಬಯಿ ಬಸ್ ಹತ್ತಿದ್ದ. ಕೈಯಲ್ಲಿ ದುಡ್ಡಿರಲಿಲ್ಲ. ಆದರೆ ಕಣ್ಣ ತುಂಬಾ ಕನಸುಗಳಿದ್ದವು. ಆ ಹುಡುಗನ ಹೆಸರು
” ಗೋವಿಂದ ಬಾಬು ಪೂಜಾರಿ “
ಊರು ಕಡಲತಡಿಯ ಬೈಂದೂರಿನ ಬಿಜೂರು. ಕಡು ಬಡತನ. ಓದು ಮುಂದುವರಿಸಲು ಸಾಧ್ಯವಾಗದ ಪರಿಸ್ಥಿತಿ. ಸಾಮಾನ್ಯವಾಗಿ ಸ್ವಲ್ಪ ಮಟ್ಟಿಗೆ ಈ ಕಷ್ಟಗಳಿಂದ ಹೊರಬರಲು ಕಣ್ಮುಂದೆ ಕಾಣಿಸುವುದೇ ಹೊಟೇಲ್ ಕೆಲಸ.
ಅಂದು ಕನಸು ತುಂಬಿದ್ದ ಕಣ್ಣುಗಳಿಂದ ಬಸ್ಸಿನಲ್ಲಿ ಎಣ್ಣೆ ಡಬ್ಬದ ಮೇಲೆ ಗೋಣಿಚೀಲ ಹಾಕಿಕೊಂಡು ಕುಳಿತು ಸುಮಾರು ಇಪ್ಪತ್ತು ಗಂಟೆ ಪ್ರಯಾಣ ಮಾಡಿ ಮುಂಬಯಿ ತಲುಪಿದ್ದ ಗೋವಿಂದ ಪೂಜಾರಿ ಆರಂಭದಲ್ಲಿ ಒಂದು ಕ್ಯಾಂಟೀನ್ ನಲ್ಲಿ ಟೀ ಮಾಡುವ ಹುಡುಗನಾಗಿ ಸೇರಿಕೊಳ್ಳುತ್ತಾರೆ. ಆಮೇಲೆ ಇನ್ನೊಂದು ಹೋಟೇಲ್ ನಲ್ಲಿ ಅಡಿಗೆಯವರಾಗಿ ಕೆಲಸಮಾಡುತ್ತಾರೆ. ಆದರೆ ತನ್ನದೇ ಆದ ಸ್ವಂತ ಉದ್ಯಮ ಮಾಡಬೇಕೆಂಬ ತುಡಿತ ಆ ಮನುಷ್ಯನಲ್ಲಿತ್ತು. ದುಡಿದು ಉಳಿಸಿದ ಹಣದಿಂದ ಒಂದು ಕಿರಾಣಿ ಅಂಗಡಿ ಆರಂಭಿಸುತ್ತಾರೆ. ಆದರೆ ವಿಪರೀತ ನಷ್ಟ ಅನುಭವಿಸುತ್ತಾರೆ.
ನಂತರ ಒಬ್ಬರ ಸಹಾಯದಿಂದ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಕ್ಲಿನಿಂಗ್ ಕೆಲಸಕ್ಕೆ ಸೇರುತ್ತಾರೆ. ನಂತರ ಅದೇ ಹೋಟೇಲ್ ನಲ್ಲಿ ಕಿಚನ್ ವಿಭಾಗ ಸೇರಿಕೊಳ್ಳುತ್ತಾರೆ. ಮುಂದೆ ಅನುಭವದಿಂದ ಹಾಗೂ ಪರಿಶ್ರಮದ ಫಲವಾಗಿ ನಾಲ್ಕೈದು ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಶೇಫ್ ಆಗಿ ಕೆಲಸಮಾಡುತ್ತಾರೆ. ಆದರೆ ತನ್ನ ಸ್ವಂತ ಉದ್ಯಮ ಮಾಡಬೇಕೆಂಬ ತುಡಿತ ನಿದ್ದೆ ಮಾಡಲಿಕ್ಕೆ ಬಿಡಬೇಕಲ್ವ.
ಒನ್ ಫೈನ್ ಡೇ ಈ ಕೆಲಸಗಳಿಗೆಲ್ಲ ಇತೀಶ್ರೀ ಹಾಡಿ ಒಂದು ಕಂಪನಿಯಲ್ಲಿ ತಮ್ಮದೇ ಕ್ಯಾಂಟೀನ್ ಆರಂಭಿಸುತ್ತಾರೆ. ಆಗ ಕಾಲ ಸ್ತಂಭಿಸಿತು. ಮುಂದೆಂದೂ ಅವರು ಹಿಂತಿರುಗಿ ನೋಡಲಿಲ್ಲ. ನಾಲ್ಕು ಜನ ಉದ್ಯೋಗಿಗಳಿಂದ ಆರಂಭವಾಯಿತು ಆ ಕ್ಯಾಂಟೀನ್ . ಮುಂದೆ ಆಹಾರದ ಗುಣಮಟ್ಟ, ಉತ್ತಮ ಸೇವೆಗಳಿಂದ ಮುಂಬಯಿಯ ಸುಮಾರು ಮೂವತ್ತು ಕಂಪನಿಗಳಲ್ಲಿ ಇವರ ಕ್ಯಾಂಟೀನ್ ಆರಂಭವಾಗುತ್ತದೆ. ಆಮೇಲೆ ಹೈದರಾಬಾದ್, ಪುಣೆ, ಜಾರ್ಖಂಡ್, ಗುಜರಾತ್ ಮುಂತಾದ ಕಡೆಗಳಲ್ಲಿನ ಕಂಪನಿಗಳಲ್ಲಿ ತಮ್ಮ ಕ್ಯಾಂಟೀನ್ ಆರಂಭಿಸುತ್ತಾರೆ. 2007 ರಲ್ಲಿ ಇವರ ಕಂಪನಿಗೆ “ಶೆಫ್ ಟಾಕ್ ಫುಡ್ ಆ್ಯಂಡ್ ಹಾಸ್ವಿಟ್ಯಾಲಿಟಿ ಪ್ರೈವೇಟ್ ಲಿಮಿಟೆಡ್ ” ಎಂದು ನಾಮಕರಣಗೊಂಡು ಇಂದು ಸುಮಾರು ಐದಾರು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸರಿ ಸುಮಾರು ಐದು ಸಾವಿರ ಜನರಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ.
ಕೆಲವೊಂದು ವಿಷಯಗಳನ್ನು ಓದಿ ತಿಳಿದು ಕೊಳ್ಳಬಹುದು . ಆದರೆ ಹಸಿವನ್ನು ಓದಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅದನ್ನು ಅನುಭವಿಸಿದವನು ಮಾತ್ರ ತಿಳಿದುಕೊಳ್ಳುತ್ತಾನೆ. ಗೋವಿಂದ ಪೂಜಾರಿ ಹಸಿವನ್ನು ಅನುಭವಿಸಿ ತಿಳಿದುಕೊಂಡವರು. ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಊರಿನಲ್ಲಿ ” ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ” ಸ್ಥಾಪಿಸಿದ್ದಾರೆ. ಇದರ ಮುಖ್ಯ ಧ್ಯೇಯ ವಿದ್ಯೆ ಮತ್ತು ಆರೋಗ್ಯ. ಕೋವಿಡ್ 19 ಸಂದರ್ಭದಲ್ಲಿ ಈ ಒಂದು ಟ್ರಸ್ಟಿನಿಂದ ಬೈಂದೂರು ಮತ್ತು ಕುಂದಾಪುರಗಳಲ್ಲಿನ ಹಲವಾರು ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಲಾಯಿತು. ನೀರಿನ ಅಭಾವವಿದ್ದ ಬೀಜೂರು ಗ್ರಾಮಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು. ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನೂಕೂಲ ಮಾಡಿ ಕೊಡಲಾಗುತ್ತಿದೆ.
ಬೆಂಗಳೂರಿನಲ್ಲಿ ಪ್ರಜ್ಞಾಸಾಗರ್ ಹೋಟೆಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಈಗಾಗಲೆ ನಾಲ್ಕು ಹೋಟೆಲುಗಳು ಆರಂಭಗೊಂಡಿವೆ. ಇನ್ನು ಹತ್ತು ಹೋಟೇಲುಗಳು ಆರಂಭಗೊಳ್ಳಲಿವೆ.
ಇನ್ನೂ ಹೊಸ ಪ್ರಾಡಕ್ಟ್ ” ಫಿಶ್ ಚಿಪ್ಸ್ ” ಕೂಡ ಇವರ ಕಂಪನಿಯ ವತಿಯಿಂದ ಲಾಂಚ್ ಆಗಿದೆ.
ಸುಮಾರು ಹತ್ತು ಸಾವಿರ ಉದ್ಯೋಗ ಸೃಷ್ಟಿಸಬೇಕೆಂಬ ಕನಸು ಗೋವಿಂದ ಬಾಬು ಪೂಜಾರಿಯವರದ್ದು. ಅವರ ಕನಸು ನನಸಾಗಲಿ.
ಯೂಟ್ಯೂಬ್ ನಲ್ಲಿ ಅವರ ಕೆಲವು ಸಂದರ್ಶನಗಳನ್ನು ನೋಡಿ ಶಬ್ಧ ರೂಪಕ್ಕೆ ಅಕ್ಷರ ರೂಪ ಕೊಟ್ಟಿದ್ದೇನೆ. ಇಂತವರು ಇಂದಿನ ಬಡ ವಿದ್ಯಾರ್ಥಿಗಳಿಗೆ ಆದರ್ಶವಾಗಲಿ. ಅವರ ಉದ್ಯಮದಲ್ಲಿ ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ. ಹಸಿವನ್ನು ಅನುಭವಿಸಿ ತಿಳಿದುಕೊಂಡಿರುವ ಅವರಿಂದ ಬಹಳಷ್ಟು ಕುಟುಂಬಗಳ ಹಸಿವಿನ ಚೀಲ ತುಂಬಲಿ.
✍️ಅರುಣ್ ವಿ ಬಾರ್ಕೂರ್