ಬಹರೈನ್ ದ್ವೀಪ ರಾಷ್ಟ್ರದಲ್ಲಿ ಸುಮಾರು ಮೂರು ದಶಕದಿಂದ ಕನ್ನಡ–ತುಳು ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದ ಶ್ರೀಕಮಲಾಕ್ಷ ಅಮೀನ್ ರವರ ಬಹುಮುಖೀ ಸೇವೆಯನ್ನು ಸರಕಾರವು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ “ರಾಜ್ಯೋತ್ಸವಪ್ರಶಸ್ತಿ” ಯನ್ನು ನೀಡಿ ಗೌರವಿಸಲು ನಿರ್ಧರಿಸಿದೆ. 1991ರಲ್ಲಿ ಬಹರೈನ್ ಗೆ ಬಂದಿದ್ದ “ಕಮಲ್” ನಂತರ ಹಿಂದೆ ತಿರುಗಿ ನೋಡಿಲ್ಲ. ಕನ್ನಡ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸುಧೆ, ಕನ್ನಡ–ತುಳು ಸಮ್ಮೇಳನಗಳು, ಹೀಗೆ ಎಲ್ಲಾಕಾರ್ಯಕ್ರಮಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು. ಬಹರೈನ್ ನ ಉತ್ಕೃಷ್ಟ ನಿರೂಪಕನೆಂಬ ಹೆಗ್ಗಳಿಕೆಗಳ ಮಧ್ಯೆ ಬಹರೈನ್ರೇಡಿಯೋದಲ್ಲಿ “ಕಸ್ತೂರಿ ಕನ್ನಡ” ವೆಂಬ ಕನ್ನಡ ಎಫ್.ಎಂ. ರೇಡಿಯೋವನ್ನೂ ಪ್ರಾರಂಭಿಸಿದ ಕೀರ್ತಿ ಇವರದ್ದು. ಇದೇ ಎಫ್.ಎಂ. ನಲ್ಲಿ ಜಯಮಾಲಾ ಹಾಗೂ ಆಗ ಕಾರ್ಮಿಕ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ರನ್ನು ಸಂದರ್ಶಿಸಿದ್ದರು. ಇವರ ಸ್ಪಷ್ಟ ಹಾಗೂಶುದ್ಧ ಕನ್ನಡದ ನಿರೂಪಣೆಯನ್ನು ಮೆಚ್ಚಿಕೊಂಡವರ ಸಾಲಿನಲ್ಲಿ ಶ್ರೀ ಬಿ. ಎಸ್. ಯೆಡಿಯೂರಪ್ಪ, ಶ್ರೀ ಅಭಯಚಂದ್ರ ಜೈನ್, ಕ್ಯಾಪ್ಟನ್ಗಣೇಶ್ ಕಾರ್ಣಿಕ್, ಮುಂತಾದವರು ಸೇರುತ್ತಾರೆ.
ಕರಾವಳಿ ಜಿಲ್ಲೆಗಳ ಕೆಲವೊಂದು ಕುಟುಂಬಗಳಿಗಾಗಿ ದ್ವೀಪದಲ್ಲಿ ಧನ ಸಂಗ್ರಹಿಸಿ ನೆರವಾದ ಹಿನ್ನೆಲೆಯೂ ಇವರದ್ದಾಗಿದೆ. ಕನ್ನಡ ಭಾಷೆಹಾಗೂ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿ, ಕನ್ನಡದ ಕಂಪನ್ನು ಬಹರೈನ್ ದೇಶದಲ್ಲಿ ಪಸರಿಸುವಲ್ಲಿ ಇವರ ಕೊಡುಗೆದೊಡ್ಡಮಟ್ಟದಲ್ಲಿದೆ. ಕನ್ನಡ ಸಿನೆಮಾ ರಂಗದಲ್ಲಿ ಬಹಳಷ್ಟು ಮೇರು ಕಲಾವಿದರೊಡನೆ ಇವರಿಗೆ ನಿಕಟ ಸಂಪರ್ಕವಿದೆ.
ಕಳೆದ ದಶಕದಲ್ಲಿ ಇವರು ಗೆಳೆಯರೊಡನೆ ಹುಟ್ಟು ಹಾಕಿದ “ನಮ್ಮ ಕನ್ನಡ” ವೇದಿಕೆಯು ಬಹರೈನ್ ನಲ್ಲಿ ಉತ್ಕೃಷ್ಟ ಮಟ್ಟದ ಕನ್ನಡಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನೀಡಿದೆ. ಸ್ಯಾಂಡಲ್ ವುಡ್ ನ ಶ್ರೀನಾಥ್, ನೆನಪಿರಲಿ ಪ್ರೇಮ್, ಗುರು ಕಿರಣ್, ದರ್ಶನ್, ರವಿ ಶಂಕರ್, ಅನುರಾಧ ಭಟ್ ರಂತಹಾ ದಿಗ್ಗಜರನ್ನು ಆಹ್ವಾನಿಸಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮಡದಿ ಸೋನಲ್, ಮಕ್ಕಳಾದ ರಿಶಾನ್ ಮತ್ತು ಚಿರಾಗ್ ರನ್ನೊಳಗೊಂಡ ಸುಖೀ ಸಂಸಾರ ಇವರದ್ದು. ಬಹರೈನ್ ನಿಂದ “ದಕ್ಷಿಣಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ“ಗೆ ಆಯ್ಕೆಯಾದ ಪ್ರಥಮ ಕನ್ನಡಿಗ ಇವರು.
ಅಭಿನಂದನೆಗಳು ಕಮಲ್. ಬಹರೈನ್ ಕನ್ನಡಿಗರ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಇತಿಹಾಸ ತಾನಾಗಿನಿರ್ಮಾಣವಾಗುವದಿಲ್ಲ. ಸಾಧಕರಿಂದ ನಿರ್ಮಿಸಲ್ಪಡುತ್ತದೆ.