ಕೆಪಿಸಿಸಿಯ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ 13 ಮತ್ತು ಉಡುಪಿ ಜಿಲ್ಲೆಗೆ 3 ಸ್ಥಾನಗಳು ದೊರಕಿದೆ. ಅದರಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರ ಪುತ್ರ ದೀಪಕ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ಜನಾರ್ದನ ಪೂಜಾರಿ ಅವರ ಪುತ್ರನನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದ್ದು, ಪಕ್ಷದ ಬೆಳವಣಿಗೆಗಾಗಿ ಜನಾರ್ದನ ಪೂಜಾರಿ ಅವರು ನೀಡಿರುವ ಕೊಡುಗೆಯನ್ನು ಗೌರವಿಸಿ ಅವರ ಪುತ್ರನಿಗೆ ಈ ಹುದ್ದೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಪುತ್ರನಿಗೆ ಕೆಪಿಸಿಸಿ ಪ್ರ. ಕಾರ್ಯದರ್ಶಿ ನೀಡಿರುವುದಕ್ಕೆ ಜನಾರ್ದನ ಪೂಜಾರಿ ಸಮ್ಮತಿ ಸೂಚಿಸಿಲ್ಲ.ನನ್ನ ಕುಟುಂಬದವರು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಮತ್ತು ರಾಜಕೀಯ ರಂಗದ ಯಾವುದೇ ಹುದ್ದೆಗಳನ್ನು ಸ್ವೀಕರಿಸುವುದಿಲ್ಲ. ನನ್ನ ಇಬ್ಬರು ಪುತ್ರರು ಕೂಡ ಉನ್ನತ ಹುದ್ದೆಯಲ್ಲಿದ್ದಾರೆ ಮತ್ತು ಸಮಾಜ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಕೆಪಿಸಿಸಿಗೆ ಪೂಜಾರಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.