ಕೋವಿಡ್ ಹಿನ್ನಲೆಯಲ್ಲಿ ಸರಕಾರದ ಮಾರ್ಗಸೂಚಿ ಪಾಲಿಸಿಕೊಂಡು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ಹೇಳಿದರು.
ಮಂಗಳೂರು ದಸರಾ ಮಹೋತ್ಸವ ಅಂಗವಾಗಿ ಕುದ್ರೋಳಿ ಕ್ಷೇತ್ರದ ಸಭಾಭವನದಲ್ಲಿ ಭಾನುವಾರ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೋವಿಡ್ ಹಿನ್ನಲೆಯಲ್ಲಿ ಮಂಗಳೂರು ದಸರಾ ಈ ಹಿಂದಿನಂತೆ ವೈಭವದಿಂದ ನಡೆಸಲು ಸಾಧ್ಯವಿಲ್ಲ. ದಸರಾ ಸಂದರ್ಭ ಕ್ಷೇತ್ರದ ಭೇಟಿ ನೀಡುವ ಸಂದರ್ಭ ಸ್ಯಾನಿಟೈಸರ್ , ಮಾಸ್ಕ್, ಥರ್ಮಲ್ ಸ್ಕ್ಯಾನ್ ಬಳಸಲು ಸೂಚನೆ ನೀಡಲಾಗುವುದು. ಇದಕ್ಕೆ ನಿದೇಶನ ನೀಡಲು ಪ್ರತಿನಿತ್ಯ 150ರಿಂದ 200ಸಂಖ್ಯೆಯ ಸ್ವಯಂಸೇವಕರ ತಂಡ ರಚಿಸಲಾಗುವುದು ಎಂದರು.
ಕ್ಷೇತ್ರದ ಆಡಳಿತ ಮಂಡಳಿ ಸದಸ್ಯ ರವಿಶಂಕರ್ ಮಿಜಾರು ಮಾತನಾಡಿ, ಕೋವಿಡ್ ಸಂಕಷ್ಟ ಮಧ್ಯೆಯೂ ಸಂಪ್ರದಾಯ ಪ್ರಕಾರ ದೇವರ ಸೇವೆಯನ್ನು ನಡೆಸುವುದು ಅನಿವಾರ್ಯವಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರ ಸುರಕ್ಷತೆ ದೃಷ್ಟಿಯಿಂದ ಆಗಮನ-ನಿರ್ಗಮನ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ದಸರಾ ಯಶಸ್ವಿಯಾಗಲು ಎಲ್ಲರ ಸಹಕಾರವೂ ಅಗತ್ಯ ಎಂದರು.
ದೇವಸ್ಥಾನ ಕೋಶಾಧಿಕಾರಿ ಪದ್ಮರಾಜ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾದನ ಪೂಜಾರಿ ಅಭಿಲಾಷೆ, ಮಾರ್ಗದಶನದಂತೆ ಈ ಬಾರಿಯ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ. ಸರಕಾರ ಮಾಗಸೂಚಿ ಅನುಸರಿಸಿ, ಧಾರ್ಮಿಕ ನಂಬಿಕೆ, ಸಂಪ್ರದಾಯ ಪ್ರಕಾರ ದಸರಾ ಮಹೋತ್ಸವ ನಡೆಯಲಿದೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಇದಕ್ಕಾಗಿ ಕಾಯಕತರ ತಂಡವನ್ನು ರಚಿಸಲಾಗುವುದು ಎಂದರು.
ಸಭೆಯಲ್ಲಿ ಹಾಜರಿದ್ದ ನಾನಾ ಸಂಘಸಂಸ್ಥೆಗಳ ಮುಖಂಡರು, ಕ್ಷೇತ್ರದ ಭಕ್ತಾದಿಗಳು, ಮಹಿಳಾ ಸಮಿತಿ ಸದಸ್ಯರು ತಮ್ಮ ಸಲಹೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಶೈಲೇಂದ್ರ ಸುವರ್ಣ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯ ರಮಾನಾಥ್ ಕಾರಂದೂರು, ರಾಧಾಕೃಷ್ಣ ಅಶೋಕನಗರ, ದೇವೇಂದ್ರ ಪೂಜಾರಿ, ಶೇಖರ್ ಪೂಜಾರಿ, ಲೀಲಾಕ್ಷ ಕಕೇರಾ ಉಪಸ್ಥಿತರಿದ್ದರು.