ಮಂಗಳೂರು: ನಾನು ‘ಮಂಗಳೂರು ದಸರಾ’ದ ರೂವಾರಿ ಎಂದು ಹೇಳುತ್ತಾರೆ. ಆದರೆ ನಾನು ಇದರ ರೂವಾರಿಯಾಗಲು ಸಾಧ್ಯವಿಲ್ಲ ಗರ್ಭಗುಡಿಯಲ್ಲಿರುವ ಶಿವನೇ ಇದರ ರೂವಾರಿಯಾಗಿದ್ದಾನೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ಹರಿಕಾರ, ಮಾಜಿ ಕೇಂದ್ರದ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.
ಕುದ್ರೋಳಿಯಲ್ಲಿ ಶನಿವಾರ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಶಿವನ ಆಶೀರ್ವಾದದಿಂದ ಮಂಗಳೂರು ಸಾಂಗವಾಗಿ ನಡೆದುಕೊಂಡು ಬರುತ್ತಿದೆ. ಶಿವನ ಆಶೀರ್ವಾದ ಎಲ್ಲರ ಮೇಲೆ ಇರಲಿದೆ ಎಂದು ಪೂಜಾರಿ ಹಾರೈಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ರೂಪಿಸಿದ ನಿಯಮಗಳಿಗೆ ಸ್ಪಂದಿಸಿ ದಸರಾ ಹಬ್ಬವನ್ನು ಸಂಭ್ರಮಿಸ ಬೇಕು. ಕ್ಷೇತ್ರದ ಆಡಳಿತ ಮಂಡಳಿ ಸರಕಾರದ ಆದೇಶಕ್ಕೆ ಸ್ಪಂದಿಸಬೇಕು. ಗೊಂದಲಗಳಿಗೆ ಅವಕಾಶ ಮಾಡಿ ಕೊಡ ಬಾರದು. ಕ್ಷೇತ್ರಾಡಳಿತ ಮಂಡಳಿ, ಭಕ್ತರು ಜತೆಯಾಗಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ ಎಂದವರು ಹೇಳಿದರು.
ಸಂಜೆ 6 ಗಂಟೆ ವೇಳೆಗೆ ಶ್ರೀಕ್ಷೇತ್ರಕ್ಕೆ ಆಗಮಿಸಿದ ಜನಾರ್ದನ ಪೂಜಾರಿ ಅವರನ್ನು ಕ್ಷೇತ್ರದ ಆಡಳಿತ ಸಮಿತಿಯ ಪದಾಧಿಕಾರಿಗಳು ಸ್ವಾಗತಿಸಿದರು. ಕ್ಷೇತ್ರದ ದರ್ಬಾರು ಮಂಟಪದಲ್ಲಿ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹಗಳನ್ನು ವೀಕ್ಷಿಸಿದ ಬಳಿಕ ಅವರು ದೀಪ ಬೆಳಗಿಸಿ ಮಂಗಳೂರು ದಸರಾ ಉದ್ಘಾಟಿಸಿದರು. ಸುಮಾರು ಅರ್ಧಗಂಟೆ ನೃತ್ಯ ಭಜನಾ ಕಾರ್ಯಕ್ರಮ ವೀಕ್ಷಿಸಿ ಪುನೀತರಾದರು. ಬಳಿಕ ಕ್ಷೇತ್ರದ ಮುಖ್ಯದ್ವಾರದ ಎದು ಹುಲಿವೇಷ ಕುಣಿತ ವೀಕ್ಷಿಸಿ ಅವರಿಗೆ ಹಾರೈಸಿದರು.
ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಶೇಖರ್ ಪೂಜಾರಿ, ಕೆ. ಮಹೇಶ್ಚಂದ್ರ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ್, ಡಾ. ಬಿ.ಜಿ. ಸುವರ್ಣ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಮೇಯರ್ ಪುರುಷೋತ್ತಮ ಚಿತ್ರಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಮ್‌ದಾಸ್, ಕಾರ್ಪೊರೇಟರ್‌ಗಳಾದ ಅನಿಲ್ ಕುಮಾರ್, ಸುಧೀರ್ ಶೆಟ್ಟಿ, ಯೋಗೀಶ್ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.