ಗೆಜ್ಜೆಗಿರಿಯಲ್ಲಿರುವ ದೇಯಿ ಬೈದ್ಯೆತಿ ಸಮಾಧಿಗೆ 450 ವರ್ಷಗಳ ಇತಿಹಾಸವಿದೆ. ಪಡುಮಲೆಯ ಅರಸು ಬಳ್ಳಾಲರಿಗೆ ಚಿಕಿತ್ಸೆನೀಡಲೆಂದು ಗೆಜ್ಜೆಗಿರಿ ಮನೆಯಿಂದ ತೆರಳಿದ್ದ ದೇಯಿ ಬೈದ್ಯೆತಿ ನಾಟಿ ವೈದ್ಯಕೀಯದ ಮೂಲಕ ಬಳ್ಳಾಲರ ಜೀವ ಉಳಿಸಿದ್ದರು. ಅರಸುಗುಣಮುಖನಾದ ಬಳಿಕ ಮತ್ತೆ ತನ್ನ ಮನೆಗೆ ಮರಳುತ್ತಿದ್ದ ಸಂದರ್ಭ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಬಳ್ಳಾಲರೇ ಮುಂದೆನಿಂತು ಹೆರಿಗೆಗೆ ವ್ಯವಸ್ಥೆ ಮಾಡಿದ್ದರು. ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ 16ನೇ ದಿನವೇ ದೇಯಿ ಬೈದ್ಯೆತಿ ಬೀಡಿನ ಸಮೀಪದಕೆರೆಯಲ್ಲಿ ಆಕಸ್ಮಿಕ ಮರಣ ಹೊಂದಿದ್ದರು. ವಿಷಯ ತಿಳಿದ ಅಣ್ಣಸಾಯನ ಬೈದ್ಯರು ಸಹೋದರಿಯ ಕಳೇಬರವನ್ನು ಗೆಜ್ಜೆಗಿರಿ ಮನೆಗೆತಂದು ದಫನ ಮಾಡಿದ್ದರು. ಬಳಿಕ ಅವಳಿ ಹಸುಳೆಗಳನ್ನು( ಕೋಟಿ ಚೆನ್ನಯರು) ಕೂಡ ಮನೆಗೆ ತಂದು ಸಾಕಿದ್ದರು. ತಾಯಿ, ಮಾವನಮನೆಯಾದ ಗೆಜ್ಜೆಗಿರಿಯಲ್ಲೇ ಮಕ್ಕಳು ಬೆಳೆದು ದೊಡ್ಡವರಾಗಿದ್ದರು. ಅದೇ ಮನೆ ಅವರ ಪಾಲಿಗೆ ಸ್ವಂತ ಮನೆಯೂ, ಕುಟುಂಬದಮನೆಯೂ ಆಗಿತ್ತು.
