ಮುಂದಿನ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ನಾನೂ ಸೇರಿದಂತೆ ೫೦ ಸ್ವಾಮೀಜಿಗಳು ಸ್ಪರ್ಧಿಸಲಿದ್ದೇವೆ ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ಶಿರಾಲಿಯ ಹಳೇಕೋಟೆ ಹನುಮಂತ ದೇವಸ್ಥಾನದ ಶಿಲಾಮಯ ದೇಗುಲ ಸಮರ್ಪಣೆ, ಶ್ರೀ ದೇವರ ಪುನರ್ ಪ್ರತಿಷ್ಠೆ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ಮಾತನಾಡಿದರು, ರಾಜಕೀಯ ಕ್ಷೇತ್ರ ಹಾಳಾಗಿದ್ದು, ರಾಜ್ಯಾಂಗದ ವ್ಯವಸ್ಥೆಯೇ ದಿಕ್ಕು ತಪ್ಪಿದ್ದು, ರಾಜಕೀಯ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲು ಸ್ವಾಮೀಜಿಗಳು ಸ್ಪರ್ಧಿಸಲಿದ್ದೇವೆ ಎಂದರು.
ಶಾಸಕನಾಗುವವನು ಇಂದು ತಾನೆಷ್ಟು ಗಳಿಸುತ್ತೇನೆ ಎಂಬ ಲೆಕ್ಕಚಾರದೊಂದಿಗೆ ಚುನಾವಣೆಗೆ ನಿಲ್ಲುತ್ತಾನೆ. ನಾವು ಚುನಾವಣೆಯಲ್ಲಿ ನಿಂತು ಗೆದ್ದರೆ ನಮಗೆ ಸರಕಾರ ಸಂಬಳ ಕೊಡುವುದು ಬೇಡ, ಕೇವಲ ರೇಷನ್ ಕೊಟ್ಟರೆ ಸಾಕು, ಕ್ಷೇತ್ರ ಸುತ್ತುವ ಭತ್ತೆಯನ್ನು ಕೂಡಾ ನಾವು ಕೇಳುವುದಿಲ್ಲ. ಪಿಂಚಣಿಯಂತೂ ಬೇಡವೇ ಬೇಡ, ಸದ್ಯ ಪ್ರಜೆಗಳ ಹಣವು ಅನವಶ್ಯಕವಾಗಿ ದುಂದು ವೆಚ್ಚವಾಗುತ್ತಿದೆ ಎಂದು ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದರು. ಇನ್ನು, ಸ್ವಾಮೀಜಿಗಳು ಚುನಾವಣೆಗೆ ಸ್ಪರ್ಧಿಸಲು ನಮಗೆ ಮೋದೀಜಿ ಹಾಗೂ ಯೋಗೀಜಿ ಪ್ರೇರಣೆಯಾಗಿದ್ದಾರೆ. ಆದರೆ, ನಾವು ಯಾವುದೇ ಪಕ್ಷದಿಂದಲೂ ನಿಲ್ಲುವುದಿಲ್ಲ. ಭಗವದ್ಗೀತೆಯೇ ನಮ್ಮ ಚುನಾವಣಾ ಚಿಹ್ನೆ ಎಂದರು.
ಸದ್ಯದ ರಾಜಕೀಯ ವ್ಯವಸ್ಥೆಯ ಬಗ್ಗೆ ಖೇದ ವ್ಯಕ್ತಪಡಿಸಿದ ಸ್ವಾಮೀಜಿಗಳು, ವಿಧಾನಸಭೆಯ ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸಬೇಕು. ಮಂತ್ರಿಗಳಾಗಲು ಕೂಡಾ ವಿದ್ಯಾರ್ಹತೆಯನ್ನು ಮಾನದಂಡವನ್ನಾಗಿಸಬೇಕು. ಆದರೆ, ಇಂದು ವಿದ್ಯೆಯಿಲ್ಲದ ಮಂತ್ರಿಗಳು ನಮ್ಮನ್ನು ಆಳುತ್ತಿದ್ದಾರೆ. ವಿಧಾನ ಸೌಧದಲ್ಲಿ ಕಚ್ಚಾಡಿಕೊಳ್ಳುವವರು ಹೊರ ಬಂದ ತಕ್ಷಣ ಟೇಬಲ್ ಹಂಚಿಕೊಂಡು ಚಹಾ ಸೇವಿಸುತ್ತಾರೆ. ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡುತ್ತಾ ಜನರ ಹಣ ದುರುಪಯೋಗವಾಗುತ್ತಿದೆ. ಇದು, ಸರಿಯಾಗಬೇಕು, ಹಳಿತಪ್ಪಿರುವ ರಾಜ್ಯಾಂಗ ವ್ಯವಸ್ಥೆಯನ್ನು ಸರಿಪಡಿಸುವ ಉದ್ಧೇಶದಿಂದ ನಾವು ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ ಎಂದರು.