ಇವರು ಬೆಟ್ಟಂಪಾಡಿಯ ಯುವಕ. ಹೆಸರು ಮನಮೋಹನ. ಕಾಯಕ ಜೇನು ಕೃಷಿ. ಆರಂಭಿಸಿದ್ದು 8ನೇ ಕ್ಲಾಸಿನಲ್ಲಿರುವಾಗ – ಕೇವಲ ಒಂದು ಪೆಟ್ಟಿಗೆಯಿಂದ. ಈಗ ಇರುವ ಜೇನುಪೆಟ್ಟಿಗೆಗಳ ಸಂಖ್ಯೆ ಎರಡು ಸಾವಿರ. ಒಂದು ಪೆಟ್ಟಿಗೆಯಿಂದ ಗರಿಷ್ಠ 48.6 ಕೆ.ಜಿ. ಜೇನು ಸಂಗ್ರಹಿಸಿದ್ದೂ ಇದೆ.ಬೆಟ್ಟಂಪಾಡಿಯಿಂದ ಮೈಸೂರುವರೆಗೆ 75 ಕಡೆ ಪೆಟ್ಟಿಗೆ ಇಟ್ಟಿದ್ದಾರೆ. ಇವರ ಜಾಗದಲ್ಲಿ ಅಲ್ಲ, ಯಾರದ್ದೋ ಜಮೀನಿನಲ್ಲಿ. ಸ್ಥಳ ಬಾಡಿಗೆಯಾಗಿ ಮಾಲೀಕನಿಗೆ ಒಂದಷ್ಟು ಜೇನು ಮತ್ತು ಪರಾಗಸ್ಪರ್ಶದಿಂದ ಫಸಲು ಹೆಚ್ಚಳದ ಖುಷಿ.
ವಾರ್ಷಿಕವಾಗಿ 16000 ಕೆ. ಜಿ. ಜೇನು, 250 ಕೆ. ಜಿ. ಮೇಣ ಸಂಗ್ರಹ, 2000 ಜೇನುಕುಟುಂಬ ಮಾರಾಟ ಮನಮೋಹನರ ಸಾಧನೆ. ‘ಹನಿ ವರ್ಲ್ಡ್’ ಇವರ ಬ್ರಾಂಡ್. ಜೇನು ಕುಟುಂಬ ಮಾರಾಟ ಮಾಡುವ , ಅಧಿಕ ಶುದ್ಧ ಜೇನು ಸಂಗ್ರಹಿಸುವ ಕರ್ನಾಟಕದ ಏಕೈಕ ಯುವ ಕೃಷಿಕ.ಜೇನು ನಿರ್ವಹಣೆಗಾಗಿ ಒಂದಷ್ಟು ಮಂದಿಗೆ ಕೆಲಸ ಕೊಟ್ಟ ಉದ್ಯೋಗದಾತ. ಪ್ರತಿ ವರ್ಷ ಸಾವಿರಕ್ಕೂ ಅಧಿಕ ಮಂದಿಗೆ ಇವರ ಮನೆಯಲ್ಲಿ ತರಬೇತಿಯಾಗುತ್ತದೆ. ಅದೆಷ್ಟೋ ಮಂದಿಯನ್ನು ಸ್ವಾವಲಂಬಿಯಾಗಿಸಿದ್ದಾರೆ.
ಜೇನುನಿರ್ವಹಣೆ ಬಗ್ಗೆ ಯಾವುದೇ ಹೊತ್ತಿನಲ್ಲಿ ಕರೆ ಮಾಡಿದರೂ ಆತ್ಮೀಯವಾಗಿ ತಿಳಿಹೇಳುವರು. ಹೊಸಬರಿಗೆ ಸಂಪೂರ್ಣ ಪ್ರಾತ್ಯಕ್ಷಿಕೆ ಇದ್ದೇ ಇದೆ. ಇವರಲ್ಲಿ ಪೆಟ್ಟಿಗೆ ಖರೀದಿಸಿದರೆ, ಒಂದರಿಂದ ಸಾವಿರವಾಗಲಿ ಎಂದು ದೇವರನ್ನು ಪ್ರಾರ್ಥಿಸಿಯೇ ಹಸ್ತಾಂತರಿಸುವುದು.
ಹಮ್ಮುಬಿಮ್ಮಿಲ್ಲದ ಮುಕ್ತ ಮನಸ್ಸು, ನನ್ನಂತೆ ಇನ್ನೊಬ್ಬರು ಬೆಳೆಯವೇಕೆಂಬ ಚಿಂತನೆ ಮನಮೋಹನರನ್ನು ಯಶಸ್ವಿ ರೈತೋದ್ಯಮಿಯನ್ನಾಗಿಸಿದೆ ಎನ್ನುವುದು ಸತ್ಯ.