ತುಳುನಾಡ ಗರೋಡಿಗಳ ಅಭಿವೃದ್ಧಿಗೆ ಅನುದಾನ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿರುವ ಸರ್ಕಾರದ ಕ್ರಮ ಖಂಡನೀಯ
ಕರ್ನಾಟಕ ಸರಕಾರ ಧಾರ್ಮಿಕ ದತ್ತಿ ಇಲಾಖೆ ವಿವಿಧ ಜಿಲ್ಲೆಗಳಲ್ಲಿನ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ,ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 2020-21 ಸಾಲಿನ ಅನುದಾನ ಬಿಡುಗಡೆ ಮಾಡಿದೆ.(ಅದೇಶ ಸಂಖ್ಯೆ; ಕಂಇ 38,ಮುಅಬಿ 2020)
ಇದು ಸ್ವಾಗತಾರ್ಹ.ಒಂದೂರಿನ ಧಾರ್ಮಿಕ ಸ್ಥಳಗಳು ಅಭಿವೃದ್ಧಿಯಾದಲ್ಲಿ ಅದು ಊರಿನ ಪ್ರಗತಿಯ ಸಂಕೇತವೆ ಸರಿ.ಆದರೆ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಕೋಟಿ ಚೆನ್ನಯರನ್ನು ಆರಾಧನೆ ಮಾಡುವ ಗರೋಡಿಗಳ ಸಂಖ್ಯೆ ದೊಡ್ಡದಾಗಿದ್ದು ಇದರಲ್ಲಿ ಅನೇಕ ಗರೋಡಿಗಳು ಅಜೀರ್ಣಾವಸ್ಥೆಯಲ್ಲಿದೆ.ಸರ್ಕಾರದ ಈ ವರ್ಷದ ಅನುದಾನ ಪಟ್ಟಿಯಲ್ಲಿ ಮೂಡಬಿದ್ರೆ ಭಾಗದ ಕೇವಲ ಒಂದು ಗರೋಡಿಗೆ ಐದು ಲಕ್ಷ ರೂಪಾಯಿ ಅನುದಾನ ಘೋಷಿಸಿದ್ದು ಬಿಟ್ಟರೆ ಬೇರೆ ಯಾವ ಗರೋಡಿಗೂ ಏನೂ ಇಲ್ಲ.ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಬರದೇ ಇರುವ ಇತರ ದೈವಸ್ಥಾನ,ಮಠ,ಮಂದಿರಗಳಿಗೆ ಅನುದಾನ ನೀಡಬಹುದಾದರೆ ಗರೋಡಿಯ ನಿರ್ಲಕ್ಷ್ಯ ಯಾಕೆ..? 436 ಧಾರ್ಮಿಕ ಸ್ಥಳಗಳಿಗೆ 800 ಲಕ್ಷ ನೀಡಿರುವುದಕ್ಕೆ ಅಕ್ಷೇಪವಲ್ಲ.ಇದರಲ್ಲಿ ಗರೋಡಿ ಮಾತ್ರ ನಿಮಗೆ ಹೊರತಾಯಿತೆ..?
ಗರೋಡಿ ಈ ಭಾಗದ ಜನರ ನಂಬಿಕೆ ಮತ್ತು ಆರಾಧನೆಯ ಪ್ರತೀಕ.ಈ ಕ್ಷೇತ್ರಕ್ಕೆ ಮಹತ್ವಪೂರ್ಣ ಹಿನ್ನೆಲೆಯಿದೆ.ಯಾವುದೇ ರಾಜಕೀಯ ಪಕ್ಷವಾಗಲಿ,ಜನಪ್ರತಿನಿಧಿಗಳಾಗಲಿ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಕೋಟಿ ಚೆನ್ನಯರು,ಹಾಗೂ ಬಿಲ್ಲವ ಸಮಾಜದ ಕುರಿತು ಉಲ್ಲೇಖ ಮಾಡಿ ವೋಟ್‌ಬ್ಯಾಂಕ್‌ಗೋಸ್ಕರ ನಡೆಯುವ ಗಿಮಿಕ್‌ಗಳು ಇನ್ನಾದರೂ ನಿಲ್ಲಬೇಕು.ಸಾಮರಸ್ಯ ಮತ್ತು ಸತ್ಯದ ಪ್ರತೀಕವಾದ ಎಲ್ಲಾ ಗರೋಡಿಗಳ ಅಭಿವೃದ್ಧಿಗೆ ಮತ್ತು ವಾರ್ಷಿಕ ಆರಾಧನ ಕಾರ್ಯಕ್ರಮಗಳಿಗೆ ಅನುದಾನ ಘೋಷಿಸಬೇಕು.ಮತ್ತು ಯಾವ ಗರೋಡಿಗಳ ಸ್ಥಳದ ಕುರಿತಾಗಿ ತಕರಾರುಗಳಿದೆಯೋ ಅದೆಲ್ಲದಕ್ಕೂ ಸಂಬಂಧಿಸಿ ಗ್ರಾಮದ ಹತ್ತು ಸಮಸ್ತರ ಆಡಳಿತ ಮಂಡಳಿಯ ತೀರ್ಮಾನಕ್ಕೆ ಆದ್ಯತೆಯ ನಿಯಮಗಳನ್ನು ರೂಪಿಸಬೇಕು.ಈಗ ಧಾರ್ಮಿಕ ಮಂತ್ರಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಗರೋಡಿಯ ಹಿನ್ನೆಲೆ ,ಅಲ್ಲಿನ ಅದಾಯ ಪರಿಸ್ಥಿತಿ,ಅಜೀರ್ಣಾವಸ್ಥೆ ,ಸ್ವಂತ ಸ್ಥಳದ ಸಮಸ್ಯೆ ಇವೆಲ್ಲವೂ ಖುದ್ದು ತಿಳಿದಿದ್ದು ಅದರೂ ಸರ್ಕಾರ ಈ ಮಟ್ಟದಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ.ಯಾವುದೇ ಸರ್ಕಾರವಾಗಲಿ ಪುಣ್ಯಪುರುಷರು ನೆಲೆಸಿದ ಗರೋಡಿಗೆ ಅನುದಾನವನ್ನು ನೀಡಲೇ ಬೇಕೆಂಬುದು ನಮ್ಮ ಒತ್ತಾಯವಾಗಿದೆ.
ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಉಡುಪಿ ಜಿಲ್ಲಾ ಬಿಲ್ಲವ ಯುವವೇದಿಕೆ (ರಿ)