ನವದೆಹಲಿ: ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೆಟ್ರೋಲ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಇಲೆಕ್ಟ್ರಿಕಲ್ ಗಾಡಿಗಳು ಬೀದಿಗಿಳಿದಿವೆ. ಬೈಕ್, ಸ್ಕೂಟರ್ ಅಷ್ಟೇ ಏಕೆ ಬಸ್ಸುಗಳು ಕೂಡ ಎಲೆಕ್ಟ್ರಿಕ್ ಆಗಿ ಪರಿವರ್ತನೆಗೊಂಡಿವೆ.
ಇದಾಗಲೇ ಇಲೆಕ್ಟ್ರಿಕ್ ಬೈಕ್‌ಗಳು ಭರ್ಜರಿ ಮಾರಾಟ ಕೂಡ ಆಗುತ್ತಿವೆ.
ಇಲೆಕ್ಟ್ರಿಕ್ ಚಾರ್ಜಿಂಗ್ ಬೈಕ್‌ಗಳು ನೂರಾರು ಕಿಲೋ ಮೀಟರ್ ಓಡುವುದು ನಿಜವಾದರೂ, ಕೆಲವು ಕಡೆಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಇಲ್ಲದೇ ಪರದಾಡುವ ಸ್ಥಿತಿ ಇದೆ. ಅಂಥವರಿಗೆ ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ಪುದುಚೇರಿ ಮೂಲದ ವಿಜಯನ್ ಪ್ರೇಮಾನಂದ್.
ಇದರ ಬೆನ್ನಲ್ಲೇ ಯಾರೂ ಊಹಿಸದ ಹೊಸದೊಂದು ತಂತ್ರಜ್ಞಾನವನ್ನು ಇವರು ಕಂಡುಹಿಡಿದಿದ್ದಾರೆ. ಅದೇನೆಂದರೆ ಇವರು ಕಂಡುಹಿಡಿದಿರುವ ಬೈಕ್ ಅನ್ನು ಚಾರ್ಜ್ ಮಾಡುವ ಅಗತ್ಯ ಕೂಡ ಇಲ್ಲ, ಹಾಗೆಂದು ಪೆಟ್ರೋಲ್ ಬೇಡ್ವವೇ ಬೇಡ. ಹಾಗಿದ್ದರೆ ಅದೆಂಥ ತಂತ್ರಜ್ಞಾನ ಅಂದಿರಾ?
ವಿಜಯನ್ ಅವರು ಕಂಡುಹಿಡಿದಿರುವ ಈ ಬೈಕ್‌ನಲ್ಲಿ ಇರುವ ಎರಡು ಬ್ಯಾಟರಿಗಳು ತಂತಾನೇ ಚಾರ್ಜ್ ಆಗುತ್ತವೆ, ಅದೂ ಗಾಡಿ ಓಡ್ತಾ ಓಡ್ತಾನೆ ಇದು ಚಾರ್ಜ್ ಆಗುತ್ತದೆ. ನೀವು ಚಾರ್ಜಿಂಗ್ ಸ್ಟೇಷನ್‌ಗೆ ಹೋಗಬೇಕಾಗಿಲ್ಲ. ಚಲಿಸುವಾಗ ಬೈಕ್ ತಂತಾನೇಯಾಗಿ ಚಾರ್ಜ್ ಆಗುತ್ತದೆ, ಇದರಿಂದ ವಿದ್ಯುತ್ ಉಳಿತಾಯ ಕೂಡ ಆಗುತ್ತದೆ ಎನ್ನುತ್ತಾರೆ ವಿಜಯನ್. ಇದಕ್ಕಾಗಿ ಇವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆಯಿಂದ ಪೇಟೆಂಟ್ ಕೂಡ ಪಡೆದುಕೊಂಡಿದ್ದಾರೆ.
‘ವಿದ್ಯುತ್ ಚಾರ್ಜಿಂಗ್ ಪಾಯಿಂಟ್‌ಗಳು ಬೇಕೆಂದ ಕಡೆಗಳಲ್ಲಿ ಸಿಗುವುದಿಲ್ಲ. ನಾನು ಕಂಡುಹಿಡಿದಿರುವ ಈ ಬೈಕ್ ಈ ಸಮಸ್ಯೆಯನ್ನು ನಿವಾರಿಸುತ್ತದೆ. ಚಾರ್ಜಿಂಗ್ ಸ್ಟೇಷನ್‌ನಲ್ಲಿ ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ. ಇದರಲ್ಲಿ ಇರುವ ಬ್ಯಾಟರಿಗಳು ಪರಸ್ಪರ ಚಾರ್ಜ್ ಆಗುವಂತೆ ವಿನ್ಯಾಸ ಮಾಡಲಾಗಿದೆ. ಈ ಎರಡೂ ಬ್ಯಾಟರಿಗಳು ಚಾರ್ಜ್ ಆಗುವುದರಿಂದ ಶಕ್ತಿಯ ಬಳಕೆ ತುಂಬಾ ಕಡಿಮೆಯಾಗುತ್ತದೆ. ಇದರ ಅರ್ಥ ಬೇರೆ ಬ್ಯಾಟರಿಗಳಂತೆ ಬೇಗನೆ ಚಾರ್ಜ್ ಖಾಲಿಯಾಗುವುದಿಲ್ಲ’ ಎನ್ನುತ್ತಾರೆ ವಿಜಯನ್.
ಈ ತಂತ್ರಜ್ಞಾನವನ್ನು ಬಳಸಲು, ಹಲವು ವಾಹನ ತಯಾರಕರನ್ನು ಕೋರಲಾಗಿದೆ. ಕಂಪನಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ. ಇದೆಲ್ಲಾ ಓಕೆಯಾದರೆ ಇನ್ನು ಯಾವುದೇ ಸಮಸ್ಯೆ ಇರದ ಬೈಕ್‌ಗಳು ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿವೆ ಎನ್ನುವುದು ಅವರ ವಿಶ್ವಾಸ.