ಒಂದು ಕಾಲದಲ್ಲಿ ಶ್ರೀಮಂತಿಕೆಯಿಂದ ಅದೇ ರೀತಿ ಗತ್ತಿನಿಂದ ಮೆರೆದು ಇಂದಿಗು ಅದೇ ಭವ್ಯತೆಯನ್ನು ಕಾಪಾಡಿಕೊಂಡ ಮನೆಯೆಂದರೆ ಅದು ಪುತ್ತೂರು ಎಳ್ನಾಡು ಸೀಮೆಯ ವ್ಯಾಪ್ತಿಯಲ್ಲಿರುವ ಬಿಲ್ಲವರ ಮರಕ್ಕೂರು ಜನನ. ತನ್ನದೇ ಆದ ಸಂಪ್ರದಾಯ ಕಟ್ಟುಕಟ್ಟಲೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಇಂದಿಗೂ ಕೂಡ ಆಚರಣೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ.ಅದರಲ್ಲಿ ಒಂದು ವಿಶಿಷ್ಟ ಆರಾಧನೆಯೆಂದರೆ ಕಂಡ ಕೋರಿ. ಈ ಆರಾಧನೆಯಲ್ಲಿ ಸಾಮರಸ್ಯದ ಪಾಠ ಇದೆ, ನಂಬಿಕೆಯ ಬುನಾಧಿ ಇದೆ ಅದೇ ರೀತಿ ಪ್ರಕೃತ್ತಿಯ ಆರಾಧನೆ ಇದೆ. ಎಲ್ಲವುದರ ಸಮ್ಮಿಳಿತವೆ ಈ ಆರಾಧನೆ. ಇಲ್ಲಿ ಆರಾಧನೆಗಿಂತ ಎರಡು ಸಮುದಾಯಗಳ ಸಾಮರಸ್ಯ ಎದ್ದು ಕಾಣುತ್ತೆ, ಒಂದು ಸಮುದಾಯ ಇನ್ನೊಂದು ಸಮುದಾಯವನ್ನು ಅವಲಂಬಿಸಿರುವುದು ಕಾಣುತ್ತೆ.
ತುಳುನಾಡ ಆಚರಣೆಗಳ ಮೂಲಕ ಎಷ್ಟೋ ಸಮುದಾಯಗಳು ಇಂದಿಗು ಕೂಡ ಸಾಮರಸ್ಯದಿಂದ ಕೂಡಿ ಬಾಳುವುದನ್ನು ಕಾಣುತ್ತಿದ್ದೇವೆ.ಅದಕ್ಕೆ ಸಾಕ್ಷಿಯಾಗಿ ಇಲ್ಲಿ ನಡೆಯುವ ಆರಾಧನೆ. ಕಾಪಾಡ( ಮಗೇರ) ಜಾತಿಯ ಸಮುದಾಯ ಬಿಲ್ಲವರ ಜನನದ ಮನೆಯಲ್ಲಿ ಆಗುವ ಎಲ್ಲಾ ಆರಾಧನೆಗಳಲ್ಲಿ ಉಪಸ್ಥಿತಿ ಇರಲೇಬೇಕು. ಗದ್ದೆಯನ್ನು ಬಿತ್ತುವುದಕ್ಕೆ ಮುಂಚೆ ಹದಮಾಡುವ ಪ್ರಕ್ರಿಯೆಯೆ ಕಂಡಕೋರಿ.
ಕಂಡಕೋರಿಯ ಮುಂಚಿನ ದಿವಸ ಮರಕ್ಕೂರಿಗೆ ಸಂಬಂಧಪಟ್ಟ ಆನಡ್ಕದ ಕಾಪಾಡ ಮನೆಯವರು ಕಂಬಳ ಗದ್ದೆಯ ಬದುವಿನ ಸುತ್ತ ಜೇಡಿಮಣ್ಣಿನಲ್ಲಿ ತ್ರಿಶೂಲ ರೂಪದ ಚಿತ್ರ ಬರೆಯುತ್ತಾರೆ. ಅನಂತರ ಬೆರ್ಮರ ಕಲ್ಲಿನಲ್ಲಿ ತ್ರಿಶೂಲ ಬಿಡಿಸುತ್ತಾರೆ. ಬಳಿಕ ದೈವಗಳ ಮೂಲಸ್ಥಾನಕ್ಕೆ ಬಂದು ಪ್ರಾರ್ಥನೆ ಮಾಡಿ ಕುಟುಂಬದ ಹಿರಿಯರು ಸುಮಾರು 350ಕ್ಕಿಂತ ಹೆಚ್ಚು ಕೋಲ್ತಿರಿ( ಕೋಲಿಗೆ ಬಟ್ಟೆ ಸುತ್ತಿ ಮಾಡುವ ದೀಪ) ತಯಾರಿಸಿ ಹಿರಿಯ ಕಾಪಾಡನಲ್ಲಿ ನೀಡುತ್ತಾರೆ. ಕಾಪಾಡ ಕುಟುಂಬದ ಹಿರಿಯ ವ್ಯಕ್ತಿ ಗದ್ದೆಯ ಬದಿಯಲ್ಲಿರುವ ಒಂಟಿ ನಾಗನ ಕಟ್ಟೆಯ ಎದುರು ಆವೇಶಭರಿತನಾಗಿ ಕೋಲ್ತಿರಿಗೆ ಬೆಂಕಿ ಹಚ್ಚಿ ಮರಕ್ಕೂರಿನ ಹಿರಿಯರ ಕೈಯಲ್ಲಿ ನೀಡುತ್ತಾರೆ. ಇಲ್ಲಿ ನಾವು ಗಮನಿಸಬೇಕಾದ ಅಂಶ ನಾಗಾರಾಧನೆಗು ಕಾಪಾಡ ಮನೆತನಗು ಇರುವ ಸಂಬಂಧವನ್ನು ಸೂಚಿಸುತ್ತದೆ.
ಕಡ್ಯನಾಟದ ಪಳೆಯುಳಿಕೆಯು ಇದು ಆಗಿದೆ. ನಾಗಾರಾಧನೆಯಲ್ಲಿ ಈ ಸಮುದಾಯಗಳ ಪಾಳ್ಗೊಳ್ಳುವಿಕೆ ಎದ್ದು ಕಾಣುತ್ತೆ. ನಾಗಾರಾಧನೆಯ ಎಲ್ಲಾ ನಂಬಿಕೆಗಳು ನಾವು ತಿಳಿದುಕೊಂಡದ್ದನ್ನು ಮೀರಿ ನಿಂತಿದೆ ಎಂದು ತಿಳಿಸುತ್ತೆ. ಇಲ್ಲಿ ಕಾಪಾಡ ಸಮುದಾಯದ ಹಿರಿಯನಿಗೆ ಆವೇಶ ಬರುವುದನ್ನು ನೋಡುವಾಗ ಎಲ್ಲೋ ಒಂದು ಕಡೆ ನಾಗಾರಾಧನೆಗು ದೈವಾರಾಧನೆಗು ಎಲ್ಲೋ ಒಂದು ಕಡೆ ಬಿಡಿಸಲಾರದ ನಂಟು ಇದೆ ಎಂದು ಒಮ್ಮೆ ಮನದಲ್ಲಿ ಪ್ರಶ್ನೆ ಮೂಡುತ್ತೆ. ಅದೇ ರೀತಿ ಇದು ದೈವಾರಾಧನೆಯ ಭಾಗವಾಗಿದ್ದು ಕಾಲಕ್ರಮೇಣ ವೈದಿಕ ಪದ್ದತಿಗೆ ರೂಪಾಂತರವಾಗಿರಬೇಕು.ಗುಳಿಗನ ಆರಾಧನೆಯಲ್ಲಿ ದೈವ ನರ್ತಕ ಮುಖದ ಮೇಲೆ ಬಿಡಿಸುವ ನಾಗ ಚಿತ್ರವು ಒಂದು ಸಾಕ್ಷಿಯಾಗಿ ಕಾಣುತ್ತಿದೆ. ಅದೇ ರೀತಿ ಇಲ್ಲಿ ನಾವು ಪ್ರಕೃತ್ತಿ ಆರಾಧನೆಯನ್ನು ನೋಡಬಹುದು. ಸಮೃದ್ಧಿಯನ್ನು ಕಣ್ತುಂಬಿಕೊಳ್ಳುವ ಮುಂಚೆ ಆರಾಧನೆಯನ್ನು ಕಾಣಬಹುದು, ಅದು ಬೆಳಕಿನ ಹಬ್ಬ ಭೂಮಿ ತಾಯಿಯನ್ನು ಹದಮಾಡುವ ಮುಂಚೆ ಆಕೆಯನ್ನು ಆರಾಧಿಸುವ ಪ್ರಕ್ರಿಯೆಯು ಇದು ಆಗಿದೆ. ತುಳುವರ ನಂಬಿಕೆಯೆ ಹಾಗೆ ಪ್ರಕೃತ್ತಿಯನ್ನು ದೇವರೆಂದೆ ನಂಬುವುದು ಹೆಚ್ಚು. ಅನ್ನ ನೀಡೋ ಭೂಮಿ ತಾಯಿಯನ್ನು ತಲೆಯಲ್ಲಿಟ್ಟು ಪೂಜಿಸುವುದೇ ಹೆಚ್ಚು.ಇಂತಹ ಆಚರಣೆಗಳಿಂದ ಇಂದಿಗೂ ಕೂಡ ಪ್ರಕೃತಿ ಸ್ವಲ್ಪವಾದರು ಉಳಿದಿದೆ.ನಂಬಿಕೆಯನ್ನು ಬಿಟ್ಟು ತುಳುವರು ಬದುಕುವುದಿಲ್ಲ ಎನ್ನುವುದಕ್ಕೆ ಸಾಕ್ಷಿ.ಈ ರೀತಿಯಾಗಿ ಮರಕ್ಕೂರು ಜನನ ಮನೆತನವು ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಂಪ್ರದಾಯಗಳಿಗೆ ಚ್ಯುತಿ ಬರದ ರೀತಿಯಲ್ಲಿ ಆರಾಧನೆಗೆ ಸಂಬಂಧಪಟ್ಟ ಸಮುದಾಯವನ್ನು ಒಟ್ಟುಗೂಡಿಸಿಕೊಂಡು ಹೋಗುತ್ತಿದೆ. ಸಾಮರಸ್ಯದ ಬೀಜವನ್ನು ಬಿತ್ತುತ್ತಾ ಮುಂದಿನ ಪೀಳಿಗೆಗೆ ಇಂತಹ ಆಚರಣೆಯನ್ನು ಕೊಂಡೊಯ್ಯುತ್ತಿರುವ ಮರಕ್ಕೂರು ಜನನ ಮನೆತನ ಎಲ್ಲಕ್ಕಿಂತ ಎತ್ತರದಲ್ಲಿದೆ ಅನಿಸುತ್ತೆ. ಇಂತಹ ಆಚರಣೆಗಳು ಕಾಲದ ಹೊಡೆತ್ತಕ್ಕೆ ಮರೆಯಾಗದಿರಲಿ ಎಂದು ಆಶಿಸುತ್ತ ಬರವಣಿಗೆಗೆ ವಿರಾಮ ನೀಡುತ್ತಿದ್ದೇನೆ.
ಬರಹ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ
ಆಧಾರ: ಡಾ ನವೀನ್ ಕುಮಾರ್ ಮರಿಕೆಯವರು ಬರೆದಿರುವ ಮರಕ್ಕೂರು ಜನನ ಪುಸ್ತಕ
ಪೋಟೋ ಕೃಪೆ: Harshith Kotiyan