ಮಂಗಳೂರು: ಎರಡು ಸಂಘಟನೆಗಳ ಮಧ್ಯದ ಮನಸ್ತಾಪದ ವಿಚಾರದಲ್ಲಿ ಬಜರಂಗದಳ ನಾಯಕರಾದ ಶರಣ್ ಪಂಪ್ವೆಲ್ ಅವರು ಸದಾ ಒಂದೇ ಜಾತಿ ಒಂದೆ ಮತ ಎಂಬ ಧ್ಯೇಯದೊಂದಿಗೆ ಕಾರ್ಯಾಚರಿಸುತ್ತಿರುವ ಬಿಲ್ಲವ ಸಂಘಟನೆಯ ಹೆಸರನ್ನು ಎಳೆದು ತಂದಿರುವುದು ಖಂಡನೀಯವಾಗಿದೆ ಎಂದು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದ್ದಾರೆ.ನಾರಾಯಣ ಗುರುಗಳ ತತ್ವದಡಿಯಲ್ಲಿ ಎಲ್ಲರೂ ಕೂಡ ಒಂದೇ ಜಾತಿ ಒಂದೇ ಧರ್ಮ ಎಂಬ ಧ್ಯೇಯದೊಂದಿಗೆ ಜಿಲ್ಲೆಯಲ್ಲಿ ಬಿಲ್ಲವ ಸಂಘಟನೆ ಕಾರ್ಯಾಚರಿಸುತ್ತಿದ್ದು ಯಾವುದೇ ರೀತಿಯ ಘರ್ಷಣೆ ಕಲಹಕ್ಕೆ ಅವಕಾಶ ಮಾಡಿಕೊಡದೆ ತನ್ನ ಪಾಡಿಗೆ ಸಮಾಜದ ಉದ್ದಾರಕ್ಕಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಇತ್ತೀಚೆಗೆ ಬಜರಂಗದಳದ ನಾಯಕರಾಗಿರುವ ಶರಣ್ ಪಂಪ್ವೆಲ್ ಅವರು ಇನ್ನೊಂದು ಸಂಘಟನೆಯೊಂದಿಗೆ ನಡೆದಿರುವ ಮಾತಿನ ಕಲಹದ ವೇಳೆ ವಿನಾಕಾರಣ ಬಿಲ್ಲವ ಸಂಘಟನೆಯನ್ನು ಎಳೆದು ತಂದಿರುವುದು ಮಾಧ್ಯಮಗಳಿಂದ ತಿಳಿದುಬಂದಿದೆ. ಬಿಲ್ಲವ ಸಂಘಟನೆ ಎಂದೂ ಕೂಡ ಯಾವುದೇ ಜಾತಿ ಧರ್ಮದ ವಿಚಾರದಲ್ಲಿ ಮೂಗು ತೂರಿಸದೇ ತನ್ನ ಸಮುದಾಯದ ಉದ್ದಾರಕ್ಕೆ ಶ್ರಮಿಸುತ್ತಿರುವಾಗ ತಮ್ಮ ವೈಯುಕ್ತಿಕ ದ್ವೇಷಕ್ಕೆ ಬಿಲ್ಲವ ಸಂಘಟನೆಯ ಹೆಸರನ್ನು ಬಳಸಿಕೊಂಡಿರುವುದು ಸರಿಯಲ್ಲ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೆಲಸ ಮಾಡಿಕೊಂಡು ಬಂದಿರುವಾಗ ಅನಾವಶ್ಯಕವಾಗಿ ಸಂಘಟನೆಗಳ ಹೆಸರನ್ನು ಬಳಸಿಕೊಂಡು ಸಮಾಜದಲ್ಲಿ ಘರ್ಷಣೆಗೆ ಕಾರಣವಾಗುವ ಪರಿಸ್ಥಿತಿ ಉಂಟಾಗುತ್ತದೆ ಎನ್ನುವುದನ್ನು ನಾಯಕರಾದವರು ಅರಿಯಬೇಕಾಗಿದೆ. ಇನ್ನಾದರೂ ಅನಾವಶ್ಯಕವಾಗಿ ಬಿಲ್ಲವ ಸಂಘಟನೆಯ ಹೆಸರನ್ನು ಇಲ್ಲ ಸಲ್ಲದ ವಿಚಾರಕ್ಕೆ ಎಳೆದು ತರುವುದನ್ನು ನಿಲ್ಲಿಸುವಂತೆ ಅವರು ಆಗ್ರಹಿಸಿದ್ದಾರೆ.