ದಿನ ಕಳೆದಂತೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದೆ. ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆ ಎಂದರೆ ತಪ್ಪಾಗಲಾರದು. ಕಳೆದೊಂದು ವರ್ಷದಿಂದ ಕಾಡಿದ ಕೊರೋನಾ ತಗ್ಗಿತು ಎಂದು ಸಮಾಧಾನ ಪಟ್ಟುಕೊಳ್ಳುವಾಗಲೇ ಬೇಸಿಗೆಯ ತಾಪದಂತೆ ಪ್ರಕರಣದ ಸಂಖ್ಯೆಯೂ ಹೆಚ್ಚುತ್ತಿದೆ.
ಕೊರೋನಾವನ್ನು ಬದಿಗಿಟ್ಟು ನೋಡಿದರೆ ಬೇಸಿಗೆಯಲ್ಲಿ ಇನ್ನಷ್ಟು ರೋಗಗಳು ನಮ್ಮನ್ನು ಕಾಡಿದರೆ ಅಚ್ಚರಿಪಡಬೇಕಾಗಿಲ್ಲ. ನಾವು ಬೇಸಿಗೆಯ ಬಿಸಿಲು ಮತ್ತು ಬೇಸಿಗೆಯಲ್ಲಿ ಕಾಡಬಹುದಾದ ಸಾಂಕ್ರಾಮಿಕ ರೋಗಗಳಿಂದ ತಪ್ಪಿಸಿಕೊಂಡು ಬದುಕುವುದೇ ಸವಾಲ್ ಆಗಿ ಪರಿಣಮಿಸಿದೆ. ಹೀಗಾಗಿ ಬೇಸಿಗೆಯಲ್ಲಿ ಮೊದಲಿಗೆ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ.
ಅತಿಯಾದ ಬೆವರು ಮುಜುಗರ ತರುತ್ತದೆ. ಮೂಗು, ಕಿವಿ, ಬಾಯಿ, ಚರ್ಮಗಳಿಗೆ ಸಂಬಂಧಿಸಿದಂತೆ ಕಾಯಿಲೆಗಳಿದ್ದರೆ ವೈದ್ಯರಿಗೆ ತೋರಿಸಿ ಅವರು ನೀಡುವ ಸಲಹೆಗಳನ್ನು ಅನುಸರಿಸಬೇಕು. ಪ್ರತಿದಿನ ಕನಿಷ್ಟ ಎರಡು ಲೀಟರ್ ನಷ್ಟು ನೀರನ್ನು ಕುಡಿಯಬೇಕು. ತಲೆ ಕೂದಲು ಕೂಡ ವಾಸನೆ ಬೀರುತ್ತದೆ. ಆದ್ದರಿಂದ ಯುವಕರಾದರೆ ಚಿಕ್ಕದಾಗಿ ಕ್ಷೌರ ಮಾಡಿ ತಲೆಯಲ್ಲಿನ ಹೊಟ್ಟನ್ನು ನಿಯಂತ್ರಿಸಲು ಮುಂದಾಗಬೇಕು. ಸ್ನಾನ ಮಾಡುವಾಗ ಕಂಕುಳು, ಕಿವಿ, ಸೇರಿದಂತೆ ಇನ್ನಿತರ ಭಾಗಗಳನ್ನು ಚೆನ್ನಾಗಿ ಸೋಪು ಬಳಸಿ ತೊಳೆಯಬೇಕು. ವ್ಯಾಯಾಮ, ಮುಂಜಾನೆ ವಾಕಿಂಗ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬಿಗಿಯಾದ ಉಡುಪುಗಳನ್ನು ಧರಿಸದೆ, ಶರೀರಕ್ಕೆ ಗಾಳಿಯಾಡುವ ಹಾಗೂ ಹತ್ತಿಬಟ್ಟೆಗೆ ಆದ್ಯತೆ ನೀಡಬೇಕು. ಬೇರೆಯವರು ಬಳಸಿದ ಟವಲ್ ಬಳಸದೆ ಒಗೆದು ಒಣಗಿಸಿ ಬಳಸಬೇಕು. ಬೇರೆಯವರಿಗೆ ಅಸಹ್ಯ ಎನಿಸದ ಉತ್ತಮ ಸುವಾಸನೆ ಬೀರುವ ಸುಗಂಧ ದ್ರವ್ಯಗಳನ್ನು ಲೇಪಿಸಿಕೊಳ್ಳಬೇಕು. ಮಹಿಳಾ ಉದ್ಯೋಗಿಗಳು ಕೆಲಸದ ಜತೆಗೆ ತಮ್ಮ ಸೌಂದರ್ಯವನ್ನೂ ಕಾಪಾಡಿಕೊಳ್ಳುವುದು ಅನಿವಾರ್ಯ. ಉರಿ ಬಿಸಿಲಿಗೆ ತಮ್ಮ ಮುಖ ಕಾಂತಿಹೀನವಾಗಿ ಬಿಡುತ್ತದೆ.
ಬಿಸಿಲಿನ ತಾಪಕ್ಕೆ ಸುಸ್ತು, ನೀರಡಿಕೆ, ತಲೆಸುತ್ತು ಮೊದಲಾದವುಗಳು ಬಾಧಿಸುವುದು ಸಾಮಾನ್ಯವಾಗಿದ್ದು, ತಲೆನೋವು ಕಾಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಬಿಸಿಲಿನ ಝಳಕ್ಕೆ ಸಿಕ್ಕಿ ಒದ್ದಾಡುವ ಪರಿಸ್ಥಿತಿ ಬಂದೊದಗಿದ್ದು, ಮನೆ ಒಳಗೆಯೂ ನೆಮ್ಮದಿಯಾಗಿ ಕುಳಿತುಕೊಳ್ಳದಂತಾಗಿದೆ. ಬಿಸಿಲಿನಿಂದಾಗುವ ಕೆಲವು ತೊಂದರೆಗಳನ್ನು ತಪ್ಪಿಸುವ ಸಲುವಾಗಿ ತೆಳು ಬಣ್ಣದ ಸಡಿಲವಾದ ಹತ್ತಿಯ ಬಟ್ಟೆ ಧರಿಸಬೇಕು. ಕೈಗೆಟಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು. ಆಗಾಗ್ಗೆ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ ಪಾನಕ ಸೇವಿಸಬೇಕು. ಕಾಫಿ ಟೀ ಸೇವನೆ ಕಡಿಮೆ ಮಾಡಬೇಕು. ಕಾರ್ಬೋನೇಟೆಡ್ ಪಾನೀಯಗಳನ್ನು ತ್ಯಜಿಸಬೇಕು.
ನೀರು, ಮಜ್ಜಿಗೆ, ಎಳನೀರು ಕುಡಿಯಬೇಕು. ಬೆಚ್ಚಗಿನ ಮಸಾಲೆರಹಿತ ಶುದ್ದ ಆಹಾರ ಸೇವಿಸಬೇಕು. ಗಾಳಿಯಾಡುವಂತಹ ಪಾದರಕ್ಷೆ ಧರಿಸಬೇಕು. ದೇಹವನ್ನು ತಂಪಾಗಿಡಲು ಹಣ್ಣು, ತರಕಾರಿಗಳು ಸಹಕಾರಿ. ಸೌತೆಕಾಯಿಯನ್ನು ಹೆಚ್ಚು ಸೇವಿಸಿದಷ್ಟು ಆರೋಗ್ಯಕಾರಿ. ಇದರಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದಾಹವನ್ನು ಕಡಿಮೆ ಮಾಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆಯನ್ನು ಅಡಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಠಿಯಿಂದ ನೈಸರ್ಗಿಕ ಪಾನೀಯ ಎಳನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಕಲ್ಲಂಗಡಿಯ ರಸವನ್ನು ಸೇವಿಸುವುದರಿಂದಲೂ ಉತ್ತಮ ಪ್ರಯೋಜನವನ್ನು ಕಾಣಬಹುದು. ಈ ಹಣ್ಣಿನಲ್ಲಿ ಪೊಟಾಷಿಯಂ, ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಸೋಡಿಯಂ ಹೇರಳವಾಗಿ ಇರುವುದರಿಂದ ಆರೋಗ್ಯವನ್ನು ಕಾಪಾಡುತ್ತದೆ. ಬಿಸಿಲಲ್ಲಿ ಓಡಾಡಿ ಬಂದವರು ನಿಂಬೆ ರಸವನ್ನು ಸೇವಿಸಿದರೆ ವಿಟಮಿನ್ ‘ಸಿ’ ಅಂಶ ಇರುವುದರಿಂದ ಡಿಹೈಡ್ರೇಷನ್ ಸಮಸ್ಯೆ ಉಂಟಾಗುವುದಿಲ್ಲ. ಪ್ರತಿದಿನ ಒಂದು ಬಟ್ಟಲು ಬೀಟ್ರೋಟಿನ ರಸವನ್ನು ಸೇವಿಸಿದರೆ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ದೇಹದ ಉಷ್ಣಾಂಶವನ್ನು ತಂಪುಗೊಳಿಸಬೇಕಾದರೆ ಎಳನೀರು ಅತ್ಯಗತ್ಯ. ಎಳನೀರು ಕೇವಲ ಬಾಯಾರಿಕೆಯನ್ನು ಮಾತ್ರ ನೀಗಿಸದೆ, ಆರೋಗ್ಯದ ದೃಷ್ಟಿಯಿಂದಲೂ ಅತಿ ಉತ್ತಮ ಎಂದು ವೈಜ್ಞಾನಿಕವಾಗಿಯೇ ತಿಳಿದು ಬಂದಿದೆ.
ಇನ್ನು ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳಾದ ಜಾಂಡೀಸ್, ಪೋಲಿಯೋ, ಕಾಲರಾ, ಕರುಳುಬೇನೆ, ವಿಷಮ ಶೀತ ಜ್ವರ, ಆಮಶಂಕೆ, ಇಲಿಜ್ವರ, ಇತರೆ ಸೂಕ್ಷ್ಮಜೀವಿಗಳಿಂದ ಹರಡುವ ವಾಂತಿ-ಭೇದಿ ಪ್ರಕರಣಗಳು ಕಲುಷಿತ ನೀರು ಹಾಗೂ ಕಲುಷಿತ ಆಹಾರ ಸೇವನೆ ಮೂಲಕ ಹರಡುವ ಸಾಧ್ಯತೆ ಹೆಚ್ಚಿರುವ ಕಾರಣ ಈ ರೋಗವು ಹರಡದಂತೆ ಮುನ್ನಚ್ಚರಿಕೆ ವಹಿಸುವುದು ಅಗತ್ಯವಾಗಿರುತ್ತದೆ.
ಪ್ರತಿಯೊಬ್ಬರೂ ಕುದಿಸಿ, ಆರಿಸಿದ ನೀರನ್ನು ಕುಡಿಯಲು ಉಪಯೋಗಿಸಬೇಕು. ಬಿಸಿಯಾದ ಆಹಾರ ಪದಾರ್ಥಗಳನ್ನು ಉಪಯೋಗಿಸಬೇಕು. ಆಹಾರ ಪದಾರ್ಥಗಳನ್ನು ಮುಚ್ಚಿಡಬೇಕು. ರಸ್ತೆ ಬದಿಗಳಲ್ಲಿ, ಹೋಟೆಲ್‍ಗಳಲ್ಲಿ, ತೆರೆದಿಟ್ಟು ಮಾರುವ ಹಣ್ಣು ಹಂಪಲು ಹಾಗೂ ಆಹಾರ ಪದಾರ್ಥಗಳನ್ನು ಉಪಯೋಗಿಸಬಾರದು. ಹೋಟೆಲ್‍ಗಳಲ್ಲಿ ಕುಡಿಯಲು ಬಿಸಿ ನೀರನ್ನು ಕೇಳಿ ಪಡೆಯಬೇಕು. ಊಟಕ್ಕೆ ಮುಂಚಿತವಾಗಿ ಕೈಗಳನ್ನು ಶುಚಿಗೊಳಿಸಬೇಕು. ಬಯಲಿನಲ್ಲಿ ಮಲ, ಮೂತ್ರ ವಿಸರ್ಜನೆ ಮಾಡದೆ ಶೌಚಾಲಯವನ್ನು ಬಳಸಬೇಕು. ಮಲ ವಿಸರ್ಜನೆ ನಂತರ ಕೈಗಳನ್ನು ಸೋಪಿನಿಂದ ತೊಳೆಯಬೇಕು. ವಾಂತಿಭೇದಿ ಕಾಣಿಸಿಕೊಂಡರೆ ಅತಿಯಾಗಿ ನೀರು ಸೇವಿಸಬೇಕು ಅಥವಾ ಓಆರ್‍ಎಸ್ ಪಾನಕ ಸೇವಿಸಬೇಕು. ಮನೆಯ ಒಳಗೆ, ಹೊರಗಡೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಜ್ವರ, ಕಾಮಾಲೆ, ವಾಂತಿಭೇದಿ, ರಕ್ತದೊಂದಿಗೆ ಭೇದಿ ಆಗುವುದು, ಹೊಟ್ಟೆನೋವು ಮತ್ತು ಭೇದಿ ರೋಗಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಕಾಣುವುದು ಒಳ್ಳೆಯದು.