ಉಡುಪಿ: ಗಣರಾಜ್ಯೋತ್ಸವ ಪೆರೇಡಿಗೆ ಕೇರಳ ಸರಕಾರವು ಕಳುಹಿಸಿದ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ತಡೆ ಹಿಡಿದಿರುವ ಕೇಂದ್ರದ ನಿಲುವು, ಗುರುಗಳಿಗೆ ಹಾಗೂ ಹಿಂದುಳಿದ ವರ್ಗದವರಿಗೆ ತೋರಿಸಿದ ಅಗೌರವ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಜಾತಿ ಪದ್ಧತಿ ಬಲವಾಗಿ ಬೇರೂರಿದ್ದ ಸಮಯದಲ್ಲಿ ಸಮಾಜದ ಶೋಷಣೆಗೊಳಗಾದ ಜನರಿಗೆ ದೇವರ ಪಾರ್ಥನೆ ಮಾಡಲು ಹಾಗೂ ದೇವಸ್ಥಾನಕ್ಕೂ ಪ್ರವೇಶವಿಲ್ಲದ ಸಮಯದಲ್ಲಿ ಗುರೂಜಿ ಧ್ವನಿಯಾಗಿ ಆತ್ಮವಿಶ್ವಾಸ ತುಂಬಿದರು. ಅವರಲ್ಲಿ ಸಮಾನತೆಯ ಆಶಾಕಿರಣ ಬೀರಿ, ಶೋಷಣೆಗೊಳಗಾದ ಜನರಿಗೆ ಭರವಸೆ ನೀಡಿದರು. ಒಂದೇ ಜಾತಿ, ಒಂದೇ ಮತ ಎಂಬ ವಿಶಾಲ ಸಂದೇಶ ನೀಡಿ, ಮಹಾ ಮಾನವತಾವಾದಿಯಾದ ಗುರುಗಳ ಸ್ತಬ್ದ ಚಿತ್ರವನ್ನು ಕಡೆಗಣಿಸಿರುವುದು, ಅವರ ಬೋಧನೆಗಳನ್ನು ಕೇಂದ್ರ ಸರಕಾರ ಕಡೆಗಣಿಸಿದಂತಿದೆ. ಗುರುಗಳನ್ನು ಭಕ್ತಿಯಿಂದ ಆರಾಧಿಸುವ ಬಿಜೆಪಿ ನಾಯಕರ ಮೌನ ಹಿಂದುಳಿದವರ ಬಗ್ಗೆ ಹಾಗೂ ನಾರಾಯಣ ಗುರುಗಳ ಬಗ್ಗೆ ಅವರಿಗಿರುವ ಕಾಳಜಿಯನ್ನು ಅನುಮಾನದಿಂದ ನೋಡುವಂತಾಗಿದೆ ಎಂದಿದ್ದಾರೆ.
ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯನ್ನು ಭಕ್ತಿಯಿಂದ ಆರಾಧನೆ ಮಾಡುವ ಬಹುಸಂಖ್ಯೆಯ ಹಿಂದುಳಿದ ವರ್ಗದವರ ಮನಸಿನ ಭಾವನೆಗೆ ಧಕ್ಕೆಯಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದು ಸರಕಾರವು ನಾರಾಯಣ ಗುರುಗಳ ಸ್ತಬ್ದ ಚಿತ್ರಕ್ಕೆ ಅವಕಾಶ ಮಾಡಿಕೊಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದು ಸೊರಕೆ ಆಗ್ರಹಿಸಿದ್ದಾರೆ.