ಮ. ವ.1104 ರ ಕನ್ನಿ 5ನೇ ದಿನ ಬೆಳಗಿನಿಂದಲೇ ಆಕಾಶವು ತೆಳುವಾದ ಮೊಡದಿಂದ ಕೂಡಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ತುಂತುರು ಹನಿಗಳು ಬೀಳಲಾರಂಭಿಸಿದವು. ಗುರುಗಳು ಮಹಾನಿರ್ವಾಣಕ್ಕೆ ಪ್ರಾಪ್ತಿಯಾಗುವುದನ್ನು ಪ್ರಕೃತಿ ಸೂಚಿಸುವಂತೆ ತೋರುತ್ತಿತ್ತು. ಗುರುಗಳು ಪ್ರಸನ್ನರಾಗಿಯೇ ಇದ್ದರು. ಗುರುದೇವರು ಮೊದಲೇ ಸೂಚಿಸಿದ್ದಂತೆ ಆಶ್ರಮದಲ್ಲಿದ್ದ ಎಲ್ಲರಿಗೂ ಊಟವನ್ನು ಬಡಿಸಿದರು. ಪ್ರತಿಯೊಬ್ಬರ ಊಟವೂ ಆಯಿತು. ಕೆಲವು ದಿನಗಳಿಂದ ಹೆಚ್ಚಾಗಿ ಮೌನದಲ್ಲಿದ ಅವರು ಮಧ್ಯಾಹ್ನ ಶಿಷ್ಯರೊಂದಿಗೆ ಸ್ವಲ್ಪ ಮಾತನಾಡಿದರು. 3 ಗಂಟೆಯ ಸಮಯ ಆಗುತ್ತಿದ್ದಂತೆ ಶಿಷ್ಯರೊಂದಿಗೆ ತನಗೆ ಸಂಪೂರ್ಣ ಶಾಂತಿಯ ಅನುಭವ ವಾಗುತ್ತಿದೆ ಎಂದರು. ಅನೇಕ ಶಿಷ್ಯರು ಮಂತ್ರ ಪಠಣ ಮತ್ತು ಪ್ರಾರ್ಥನೆಗಳಲ್ಲಿ ನಿರತರಾಗಿದ್ದರು. 3.15 ಕ್ಕೆ ಗುರುಗಳು ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೆ ಬಳಿಯಲಿದ್ದವರ ಸಹಾಯದಿಂದ ಪದ್ಮಾಸನದಲ್ಲಿ ಕುಳಿತರು. ಶಿಷ್ಯರೆಲ್ಲರಿಗೂ ದೈವದಶಕವನ್ನು ಹಾಡಲು ಹೇಳಿದರು ದೈವದಶಕವನ್ನು ಹಾಡುತ್ತಿದ್ದಂತೆಯೇ ಹಾಗೆಯೇ ಧ್ಯಾನಸ್ಥರಾಗಿ ಕಣ್ಣುಗಳನ್ನು ನಿಧಾನವಾಗಿ ಮುಚ್ಚಿದರು. ಪದ್ಮಾಸನದಲ್ಲಿ ಧ್ಯಾನಸ್ಥರಾಗಿ ಯೋಗದಲ್ಲಿದ್ದ ಗುರುದೇವರು ಶಾಂತ ಚಿತ್ತದಿಂದ ಮಹಾಸಮಾಧಿಗೆ ಪ್ರಾಪ್ತರಾದರು.
ಮಹಾ ಸಮಾಧಿಯ ಈ ದಿನ ಕೇರಳದಲ್ಲಿ ಸಾರ್ವತ್ರಿಕ ರಜಾದಿನ. ವಿಶ್ವಾದ್ಯಂತ ಇಂದು ಸಾತ್ವಿಕ ಆಹಾರವನ್ನು ಸೇವಿಸಿ ಪೂಜೆ ಪ್ರಾರ್ಥನೆಯ ಮೂಲಕ ಗುರುಸ್ಮರಣೆ ಮಾಡುತ್ತಾರೆ ನಾವೂ ಕೂಡ ಈ ಪುಣ್ಯ ಕಾರ್ಯವನ್ನು ಮಾಡುವ.
ಥಿಯೋಸೊಫಿಕಲ್ ಸೊಸೈಟಿಯ ಎನ್ನಿಬೆಸಂಟ್ ತಮ್ಮ ಅಧಿಕೃತ ವರ್ತಮಾನ ಪತ್ರಿಕೆಯಾದ ಸನಾತನ ಧರ್ಮದಲ್ಲಿ ನಾರಾಯಣ ಗುರುಗಳು ಸಮಾಧಿಯಾದಾಗ ಹೀಗೆ ಬರೆಯುತ್ತಾರೆ. ” ಅವರೊಬ್ಬರು ಪ್ರಕಾಶಮಯ ಪೂರ್ಣ ಸೂರ್ಯನೇ ಆಗಿದ್ದರೆ… ಅವರು ಯೋಗದಲ್ಲಿ ಪತಂಜಲಿ. ಜ್ಞಾನದಲ್ಲಿ ಶಂಕರ, ತ್ಯಾಗದಲ್ಲಿ ಬುದ್ಧ, ಸ್ಥಿರತೆಯಲ್ಲಿ ನಭಿ, ಮಾನವ ಸೇವೆಯಲ್ಲಿ ಜೀಸಸ್,… ಅವರು ದೇವರು. ಮನುಷ್ಯ ರೂಪಧಾರಣೆ ಮಾಡಿದ ಅವತಾರ ಪುರುಷರಾದ ಅವರು ಮಹಿಮಾಯುಕ್ತ ತೇಜಸ್ಸಿನ ತನ್ನ ಜೀವನೊದ್ಧೇಶಗಳನ್ನು ಪೂರೈಸಿ, ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು. ….ನಿಜವಾಗಿಯೂ ಅವರೊಬ್ಬ ಅವತಾರಿ. ಮನುಷ್ಯರಲ್ಲಿ ದೇವರು. ಭವಿಷತ್ತಿನ ಭಾರತ ಅವರನ್ನು ದೇವರಾಗಿ ಪೂಜಿಸುವುದು.”
(ಆಧಾರ ಶ್ರೀ ನಾರಾಯಣ ಗುರು ವಿಜಯ ದರ್ಶನ: ಬಾಬು ಶಿವಪೂಜಾರಿ)
✍ ರಾಜೇಂದ್ರ ಚಿಲಿಂಬಿ