ಭಕ್ತ ಸಾಗರದಿಂದ ಇತಿಹಾಸ ನಿರ್ಮಿಸಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್!
ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಸಾವಿರಾರು ವರ್ಷಗಳ ಇತಿಹಾಸವಿರುವ ಏರಾಜೆ ಬರ್ಕೆ ಎಂಬ ಪ್ರತಿಷ್ಠಿತ ಮನೆತನದ ನೆಲವೇ ಗೆಜ್ಜೆಗಿರಿ ನಂದನ ಬಿತ್ತ್ ಲ್. ಕೋಟಿ ಚೆನ್ನಯರ ಪಾಲಿಗಿದು ಮೂಲ ಸ್ಥಾನ.ಐದು ಶತಮಾನಗಳ ಹಿಂದೆ ಕೋಟಿ-ಚೆನ್ನಯರು ಬದುಕಿನ ಬಹುಪಾಲನ್ನು ಕಳೆದಿರುವ ಸತ್ಯದ ನೆಲ ಗೆಜ್ಜೆಗಿರಿ ನಂದನ ಬಿತ್ತ್ ಲ್ ಪುನರುತ್ಠಾನ ಗೊಂಡಿದೆ. ತುಳುನಾಡಿನಲ್ಲಿ ಆರಾಧಿಸಲ್ಪಡುತ್ತಿರುವ ಅದೆಷ್ಟೋ ಗರಡಿಗಳಿದ್ದರೂ ಇವೆಲ್ಲಕ್ಕೂ ತಿಲಕ ಪ್ರಾಯವೆಂಬಂತೆ ಈಗ ಗೆಜ್ಜೆಗಿರಿ ಮೂಡಿಬಂದಿದೆ.ಮಾತೆ ದೇಯಿ ಬೈದೆತಿಗೆ ಸಾಯನ ಬೈದರು ಪುನರ್ಜನ್ಮ ನೀಡಿದ ನೆಲ ಗೆಜ್ಜೆಗಿರಿ ಪ್ರಸ್ತುತ ಸತ್ಯ ಧರ್ಮಚಾವಡಿ ಯಾಗಿ ಪುನರುತ್ಥಾನಗೊಂಡು ಭಕ್ತರನ್ನು ಆಕರ್ಷಿಸುತ್ತಿದೆ.ಕಳೆದ 2020 ರ ಫೆಬ್ರವರಿ ತಿಂಗಳಲ್ಲಿ ಪುನರುತ್ಥಾನಗೊಂಡ ಗೆಜ್ಜೆ ಗಿರಿಯಲ್ಲಿ ಅಚ್ಚು ಕಟ್ಟಿನ ವ್ಯವಸ್ಥೆಯಲ್ಲಿ ಹತ್ತು ಲಕ್ಷಕ್ಕೂ ಮಿಕ್ಕಿ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಅದ್ದೂರಿಯ ಬ್ರಹ್ಮಕಲಶೋತ್ಸವ ಜರಗಿದೆ. ಈ ಸಂದರ್ಭದಲ್ಲಿ ಪ್ರತಿಕ್ಷಣವೂ ಗೆಜ್ಜೆ ಗಿರಿಯಲ್ಲಿ ದಾಖಲೆ ನಿರ್ಮಾಣಗೊಂಡಿದೆ. ಅಲ್ಲದೆ ಒಂದೊಂದು ವಿಶೇಷತೆ , ಪವಾಡಕ್ಕೆ ಗೆಜ್ಜೆಗಿರಿ ಸಾಕ್ಷಿಯಾಗಿದೆ. ಶ್ರೀ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರವನ್ನು ಪರಿಚಯಿಸುವ ಕಿರು ಪ್ರಯತ್ನ ಇಲ್ಲಿ ಮಾಡಲಾಗಿದೆ.
ವಿಭಿನ್ನ ಸಂಸ್ಕೃತಿ, ಅನೇಕ ನಂಬುಗೆ ,ಜಾನಪದ ಆಚರಣೆಗಳಿಂದ ಕೂಡಿದ ನಾಡು ನಮ್ಮ ತುಳುನಾಡು. ಇಲ್ಲಿನ ಜಾನಪದ ಆಚರಣೆಗಳು , ದೈವಾರಾಧನೆ,ನಾಗಾರಾಧನೆ, ದೇವತಾರಾಧನೆಗಳು ತುಳುನಾಡಿನ ಸಂಸ್ಕೃತಿಯನ್ನು ಸಾರಿಸುತ್ತದೆ. ಈ ಜಾನಪದ ಆಚರಣೆ, ನಂಬುಗೆ ,ಆರಾಧನೆಗಳಿಂದ ಒಂದು ಉತ್ತಮ ಬಾಂಧವ್ಯ, ಒಗ್ಗಟ್ಟು, ತುಳುವರ ಮಧ್ಯೆ ಬೆಳೆದುಕೊಂಡು ಬಂದಿದೆ. ತುಳುನಾಡ ಜನತೆಯ ಸಂಸ್ಕೃತಿ, ಸಂಸ್ಕಾರ ,ನಂಬುಗೆ, ಆಚಾರ-ವಿಚಾರ, ನಡೆ ,ಸಂಪ್ರದಾಯ ಮುಂತಾದುವುಗಳು ಬಹಳ ವಿಶಿಷ್ಟ .ಪ್ರಕೃತಿಯ ಆರಾಧಕರಾಗಿದ್ದು ಕೊಂಡು ಭಕ್ತಿ ಪ್ರಧಾನವಾದ ಜೀವನ ಸಾಗಿಸುತ್ತಿರುವ ತುಳುವರಿಗೆ ದೈವ ದೇವರ ಮೇಲೆ ಅಚಲ ಭಕ್ತಿ ವಿಶ್ವಾಸ. ತುಳುನಾಡ ಜನರ ಜೀವನದಲ್ಲಿ ದೈವಗಳದ್ದೇ ಪ್ರಧಾನ ಪಾತ್ರ. ತುಳುವರಿಗೆ ದೈವಾರಾಧನೆ ಪ್ರಮುಖವಾದುದು. ತಾವು ನಂಬಿಕೊಂಡು ಬಂದಿರುವ ದೈವಗಳಿಗೆ ತುಳುವರು ತಪ್ಪದೇ ಕಾಲಾವಧಿಯ, ಹರಕೆಯ, ಅಲ್ಲದೆ ಇತರ ಸೇವೆಗಳನ್ನು ಸಮಯಕ್ಕನುಸಾರವಾಗಿ ,ನಿಯಮಾನುಸಾರ ವಿಧಿವತ್ತಾಗಿ ಸಲ್ಲಿಸುತ್ತಾ ಬರುತ್ತಿರುವರು. ಅಲ್ಲದೆ ತಾವು ಎಲ್ಲೇ ನೆಲೆಸಿದ್ದರೂ ಹುಟ್ಟೂರಿನ ಇಲ್ಲವೇ ಕುಟುಂಬದ ದೈವಗಳ ಸೇವೆಯ ಸಂದರ್ಭದಲ್ಲಿ ತಪ್ಪದೇ ಅದರಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸುವರು. ದೈವದ ಒಂದೆಲೆ ಗಂಧ ಪ್ರಸಾದದಿಂದ ಸ್ವೀಕರಿಸುವುದರಿಂದ
ತಮಗೆ ಬಂದಿರುವ ಕಷ್ಟ ಸಮಸ್ಯೆಗಳು, ದುರಿತಗಳು ನಿವಾರಣೆಯಾಗಬಹುದು ಎಂಬ ಅಚಲ ನಂಬಿಕೆ ತುಳುವರದ್ದು. ತಮ್ಮ ಕುಟುಂಬ ಸದಸ್ಯರಿಗೆ ಕಷ್ಟ-ನಷ್ಟ ಉಂಟಾದಾಗ, ಸಮಸ್ಯೆ, ಆಪತ್ತುಗಳು ಎದುರಾದಾಗ, ಅನಾರೋಗ್ಯಕ್ಕೆ ತುತ್ತಾದಾಗ ತನ್ನ ಸಂತಾನದ ಕುಡಿಗೆ ಬಂದಿರುವ ಕಷ್ಟಗಳನ್ನು ನಿವಾರಿಸಿ ಅವರನ್ನು ರಕ್ಷಿಸು ಎಂದು ಮನೆಯ ಹಿರಿಯರು ದೈವಗಳ ಮಣೆ ಮಂಚದ ಸಮ್ಮುಖದಲ್ಲಿ ಕಣ್ಣೀರಿಟ್ಟು ಪ್ರಾರ್ಥಿಸುವ ಸನ್ನಿವೇಶಗಳು ಇಂದಿಗೂ ನಮಗೆ ಕಂಡುಬರುತ್ತದೆ.ನಮ್ಮ ಹಿರಿಯರು ದೈವಗಳನ್ನು ‘ಸತ್ಯೊಲು’ ಎಂದು ಸಂಬೋಧಿಸಿದ್ದಾರೆ. ‘ನಮ ನಂಬಿನ ಸತ್ಯೊಲು ನಮ್ಮ ಕೈ ಬುಡಯ’ ಎಂಬ ಬಲವಾದ ನಂಬಿಕೆ,ವಿಶ್ವಾಸ ತುಳುವರಲ್ಲಿದೆ.
ದೈವಗಳ ಕಲೆ-ಕಾರಣಿಕ-ನೆಲೆಯನ್ನು ತುಳುನಾಡಿನ ಜನರು ಸರಿಯಾಗಿ ಅರಿತು
ಕೊಂಡವರಾಗಿರುವರು. ದೈವಗಳ ಮೇಲಿನ ಭಯ -ಭಕ್ತಿಯ ನಂಬುಗೆಯಿಂದ ತುಳುವರ ಜೀವನ ಧರ್ಮ, ಸನ್ಮಾರ್ಗ, ಸದಾಚಾರದಲ್ಲಿ ಸಾಗಿ ಬರುತ್ತಿದೆ ಎಂದರೂ ಅತಿಶಯೋಕ್ತಿಯಾಗಲಾರದು.ಈ ದೈವಾರಾಧನೆಯಿಂದಾಗಿ ನಾಡಿನಲ್ಲಿ ಸಾಮಾಜಿಕ ಸಾಮರಸ್ಯದ ಜೊತೆಗೆ ತುಳು ಭಾಷೆಯ ಸೊಗಸನ್ನು ಕಾಪಾಡಿಕೊಂಡು ಬಂದಿದೆ .ಅಲ್ಲದೆ ದೈವಾರಾಧನೆಯು ತುಳು ಭಾಷೆಯ ಏಳಿಗೆಗೂ ಸಹಕಾರಿಯಾಗಿದೆ. ಹಿಂದಿನ ಕಾಲದಿಂದಲೂ ತುಳುನಾಡಿನಾದ್ಯಂತ ಅಸಂಖ್ಯಾತ ದೈವಗಳು ನೆಲೆಸಿ ತನ್ನ ದೈವಿಕ ಶಕ್ತಿಯನ್ನು ಬೀರಿ ಜನರಿಂದ ತನ್ನನ್ನು ನಂಬಿ ಕೊಂಡು ಬರುವಂತೆ ಮಾಡಿ ಸ್ಥಾನವನ್ನು,ಆರಾಧನೆಯನ್ನು ಪಡೆದುಕೊಂಡು ಬಂದಿದೆ.ದೈವಗಳ ಹುಟ್ಟು ಬೆಳವಣಿಗೆ ಹಾಗು ಅವುಗಳು ಒಂದೆಡೆಯಿಂದ ಮತ್ತೊಂದೆಡೆಗೆ ಬಂದು ನೆಲೆಸಿ ಭಕ್ತ ಜನಾಂಗಕ್ಕೆ ಆಗಾಗ್ಗೆ ತೋರ್ಪಡಿಸುತ್ತಿರುವ ಪವಾಡ,ಮಹಿಮೆಗಳ ವೈಶಿಷ್ಟ್ಯಗಳು ಇಂದಿನ ಆಧುನಿಕ ಯುಗಕ್ಕೆ ದೊಡ್ಡ ಸವಾಲಾಗಿದೆ.
ತುಳುವರು ವಿವಿಧ ನಾಮದಡಿ ದೈವ ಶಕ್ತಿಗಳನ್ನು ಬಹಳ ಭಯ ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿದ್ದಾರೆ. ತುಳುನಾಡಿನ ಜನರ ನಂಬಿಕೆ -ಭಕ್ತಿ ವಿಶ್ವಾಸಕ್ಕೆ ಪೂರಕವಾಗಿ ಈ ದೈವಗಳು ಕೂಡಾ ಭಕ್ತರನ್ನು ಬೆಂಗಾವಲಾಗಿ ಪೊರೆಯುತ್ತಿವೆ ಎನ್ನ ಬಹುದು . ತುಳುನಾಡಿನಲ್ಲಿ ಭಕ್ತರಿಂದ ಈಶ್ವರನ ಗಣಗಳಾಗಿಯೇ ಕೆಲವು ದೈವಗಳನ್ನು ನಂಬಿ ಆರಾಧಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ತುಳುನಾಡಿನ ಈ ಪುಣ್ಯ ಭೂಮಿ ಯಲ್ಲಿ ಹುಟ್ಟಿ ಅನುಕರಣೀಯ, ಆದರ್ಶ ಜೀವನ ನಡೆಸಿ ಸಾಧನೆ- ಪರಾಕ್ರಮದೊಂದಿಗೆ ದುರ್ಬಲ ವರ್ಗದವರಿಗೆ, ದೀನದಲಿತ, ಶೋಷಿತರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅಮರರಾಗಿ ದೈವತ್ವಕ್ಕೇರಿದವರನ್ನೂ ಕೂಡಾ ಆರಾಧಿಸಲಾಗುತ್ತದೆ.ದೈವಿಕ ಶಕ್ತಿಯೊಂದಿಗೆ ಸತ್ಯ-ಧರ್ಮ,ನ್ಯಾಯ,
ನಿಷ್ಠೆಯ ನಡೆಯಿಂದ ದೀನದಲಿತರನ್ನು, ಶೋಷಿತ ವರ್ಗದವರನ್ನು ಮೇಲೆತ್ತಿ ಜನಸಾಮಾನ್ಯರ ಒಳಿತಿಗಾಗಿ ನಿರಂತರ ಹೋರಾಡಿ ವೀರ ಮರಣವಪ್ಪಿದ, ಪ್ರಾಣತ್ಯಾಗ ಮಾಡಿದವರನ್ನು ದೈವಾಂಶ ಸಂಭೂತರೆಂಬ ನೆಲೆಯಲ್ಲಿ ತುಳುವರು ಶ್ರದ್ಧಾ ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿದ್ದಾರೆ. ಅಂತಹ ಶಕ್ತಿಗಳ ಸಾಲಿಗೆ ಶೌರ್ಯ, ಸತ್ಯ-ಧರ್ಮ ನ್ಯಾಯದ ಪ್ರತೀಕವಾಗಿರುವ ಕೋಟಿ-ಚೆನ್ನಯರು (ಬೈದೆರ್ಲು) ಸೇರುತ್ತಾರೆ.
*’ಸತ್ಯೊಡು ಬತ್ತಿನಕ್ಲೆಗ್ ತಿಗಲೆಡ್ ಸಾದಿ ತೋಜಾವ , ಅನ್ಯಾಯೊಡು ಬತ್ತಿನಕ್ಲೆಗ್ ಸುರಿಯೊಡ್ ಸಾದಿ ತೋಜಾವ’* ಎಂಬ ಅಮರ ವಾಕ್ಯವನ್ನು ಸಾರಿದ ವೀರ ಪುರುಷರು ಕೋಟಿ-ಚೆನ್ನಯರಾಗಿದ್ದಾರೆ. ಹಿಂದಿನ ಕಾಲದಲ್ಲಿ ಸಮಾಜದಲ್ಲಿನ ಅಸಮಾನತೆ, ಅನಿಷ್ಟ ಪದ್ಧತಿ,ಸಾಮಾಜಿಕ ತಾರತಮ್ಯದ ವಿರುದ್ಧ ತೊಡೆ ತಟ್ಟಿರುವ ಕೋಟಿ- ಚೆನ್ನಯರು ಆರಾಧ್ಯ ದೈವಗಳಾಗಿ ತುಳುನಾಡಿನ ಜನಮಾನಸದಲ್ಲಿ ನೆಲೆಯಾಗಿರುವರು. *ನಂಬಿನಕ್ಲೆಗ್ ಇಂಬು ಕೊರ್ಪ’ ‘ಸತ್ಯ ಗೆಂದಾದ್ ಕೊರ್ಪ’* ಎಂಬ ಅಭಯ ವಾಕ್ಯವನ್ನು ಸಾರಿದ ಅವಳಿ ವೀರರಾದ ಕೋಟಿ-ಚೆನ್ನಯರನ್ನು ತುಳುನಾಡಿನ ಹಳ್ಳಿಹಳ್ಳಿಗಳಲ್ಲಿ ಜನರು ಜಾತಿ, ವರ್ಗ ಭೇದವಿಲ್ಲದೆ ಅತ್ತ ದೇವಸ್ಥಾನವು ಅಲ್ಲ ಇತ್ತ ದೈವಸ್ಥಾನವೂ ಅಲ್ಲದ ಗರೊಡಿ (ಗರಡಿ= ವ್ಯಾಯಾಮ ಶಾಲೆ) ಗಳಲ್ಲಿ ಆರಾಧಿಸುತ್ತಾ ಬಂದಿರುತ್ತಾರೆ. ಗ್ರಾಮೀಣ ಪ್ರದೇಶದ ಬದುಕಿನಲ್ಲಿ ಸಾಮಾಜಿಕ ಸಾಮರಸ್ಯವನ್ನು ಉಳಿಸಿ ಬೆಳೆಸಿಕೊಂಡು ಬರುವಲ್ಲಿ ಕೋಟಿ-ಚೆನ್ನಯರ (ಬೈದೆರ್ಲು) ಆರಾಧನೆಯು ಮಹತ್ವದ ಪಾತ್ರವಹಿಸುತ್ತದೆ. ಶ್ರೀ ಬ್ರಹ್ಮ ಬೈದರ್ಕಳ ಗರಡಿ ಗಳು ಸಮಾಜವು ಸೌಹಾರ್ದತೆ, ಸಾಮರಸ್ಯದಿಂದ ಕೂಡಿ ಬಾಳುವುದಕ್ಕೆ ಆದರ್ಶ ದೇಗುಲವಾಗಿದೆ. ಅಲೌಕಿಕ ವೀರರಾದ ಕೋಟಿ-ಚೆನ್ನಯರು ತುಳುನಾಡಿನಾದ್ಯಂತ ತಮ್ಮ ಅವತಾರ ಕಾಲದಲ್ಲೇ ಅರುವತ್ತಾರು ‘ಗರಡಿ’ ಮತ್ತು ಮೂವತ್ತ ಮೂರು’ ತಾವು’ ಗಳ ಸ್ಥಾಪನೆಗೆ ಕಾರಣವಾದರು ಎಂಬ ಪ್ರತೀತಿ ಇದೆ.
ಕಾಯವಳಿದ ಮೇಲೆ ದೈವತ್ವಕ್ಕೇರಿ 250ಕ್ಕೂ ಹೆಚ್ಚು ಗರಡಿಗಳಲ್ಲಿ *’ಬ್ರಹ್ಮ ಬೈದೆರ್ಲು’* ಎಂಬ ನಾಮದಡಿ ಉಪಾಸನೆ ಪಡೆಯುತ್ತಾ ಬಂದಿರುವ ಕೋಟಿ-ಚೆನ್ನಯರಿಗೆ ಅವರ ಮೂಲದಲ್ಲಿ ಆರಾಧನೆ ಇದ್ದಿರಲಿಲ್ಲ.ಈ ಬಗ್ಗೆ ಕೋಟಿ ಚೆನ್ನಯರ ಭಕ್ತರಲ್ಲಿ ಕೂಡಾ ಅಸಮಾಧಾನ ವಿತ್ತು.
ಕೋಟಿ-ಚೆನ್ನಯರ ಮೂಲಸ್ಥಾನ ನಿರ್ಮಾಣ ಭಕ್ತರ ಕನಸಾಗಿತ್ತು. 1971 ರ ಸುಮಾರಿಗೆ ಗೆಜ್ಜೆಗಿರಿ ಮನೆಯಲ್ಲಿ ಬೇಯಿಸಿದ ಬತ್ತ ಮೊಳಕೆ ಯೊಡೆಯುವ ಮೂಲಕ ಇಲ್ಲಿ ಗರಡಿ ನಿರ್ಮಿಸಬೇಕೆಂಬ ಸಂಕಲ್ಪವನ್ನು ಕೋಟಿ-ಚೆನ್ನಯರು ಪ್ರಕಟಿಸಿದ್ದರು. ಆಗಿನ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಯ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. 2000 ಇಸವಿಯ ಹೊತ್ತಿಗೆ ಪ್ರಾಚೀನ ಧೂಮಾವತಿ ದೈವಸ್ಥಾನ ವನ್ನು ತೆರವು ಮಾಡಿ ನೂತನ ದೇವಸ್ಥಾನ ನಿರ್ಮಿಸಲಾಯಿತು. ಈ ಸಂದರ್ಭದಲ್ಲಿ ಇರಿಸಲಾದ ಪ್ರಶ್ನಾ ಚಿಂತನೆಯಲ್ಲಿ ಮುಂದೊಂದು ದಿನ ಈ ಮಣ್ಣು ಅದ್ಭುತವಾಗಿ ಬೆಳಗಲಿದೆ ಎಂಬ ಸಂಕೇತ ಲಭಿಸಿತು. 2013ರಲ್ಲಿ ಪಡುಮಲೆ ಕೂವೆ ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇರಿಸಲಾದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಗೆಜ್ಜೆಗಿರಿ ಮಹಿಮೆ ಹಾಗೂ ಮಹತ್ವವನ್ನು
ದೈವಜ್ಞರು ಬಿಡಿಬಿಡಿಯಾಗಿ ತಿಳಿಸಿ ಕೊಟ್ಟರು. 2015ರ ಮಾರ್ಚ್ ನಲ್ಲಿ ನಡೆದ ಧೂಮಾವತಿ ನೇಮೋತ್ಸವವು ಮೂಲಸ್ಥಾನ ಪುನರುತ್ಥಾನಕ್ಕೆ ಮಹತ್ವದ ಮೈಲುಗಲ್ಲಾಗಿ ಪರಿಣಮಿಸಿತು. 2016 ರ ಏಪ್ರಿಲ್ ನಲ್ಲಿ ಗರಡಿ ನಿರ್ಮಾಣಕ್ಕಾಗಿ
ಶಿಖರಾಗ್ರದಲ್ಲಿ ನೆಲ ಸಮತಟ್ಟು ಮಾಡುವ ಮೂಲಕ ಕೆಲಸ ಆರಂಭಗೊಂಡಿತು. 2017 ರ ಫೆಬ್ರವರಿ 19ರಂದು ಮೂಲಸ್ಥಾನ ಕ್ಷೇತ್ರ ಪುನರುತ್ಥಾನಕ್ಕೆ ಶಿಲಾನ್ಯಾಸ ಅದ್ಧೂರಿಯಾಗಿ ನಡೆಯಿತು.ಆ ಸಂದರ್ಭದಲ್ಲಿ ದಾಖಲೆಯ 40 ಸಾವಿರಕ್ಕೂ ಮಿಕ್ಕಿ ಭಕ್ತರು ಎಲ್ಲೆಡೆಯಿಂದ ಆಗಮಿಸಿ ಜೀರ್ಣೋದ್ಧಾರ ಕಾರ್ಯಕ್ಕೆ ಶಕ್ತಿ ತುಂಬಿದರು. ನಿರೀಕ್ಷೆಗೂ ಮೀರಿದ ಸಾವಿರಾರು ಮಂದಿ ಭಕ್ತರ ಉಪಸ್ಥಿತಿಯಲ್ಲಿ ಜರಗಿದ ಶಿಲಾನ್ಯಾಸ ಕಾರ್ಯಕ್ರಮದಂದೇ ಮುಂದೆ ಗೆಜ್ಜೆಗಿರಿಯಲ್ಲಿ’ ಸತ್ಯಧರ್ಮ ಚಾವಡಿ ‘ ವೈಭವದಿಂದ ಕಂಗೊಳಿಸಲಿದೆ ಎಂಬ ಭರವಸೆ ಮೂಡಿದ್ದಿತು. ಶಿಲಾನ್ಯಾಸದ ಬಳಿಕ ಕ್ಷೇತ್ರ ನಿರ್ಮಾಣ ಕಾರ್ಯಕ್ರಮ ಆರಂಭಗೊಂಡಿತು. ಗೆಜ್ಜೆಗಿರಿ ಕ್ಷೇತ್ರದ ಯಜಮಾನರು, ಆನುವಂಶಿಕ ಮೊಕ್ತೇಸರರು, ಕ್ಷೇತ್ರ ಆಡಳಿತ ಸಮಿತಿ,ನಾಡಿನ ಹಾಗೂ ಮುಂಬಯಿ ಅಲ್ಲದೆ ದೇಶ -ವಿದೇಶದ ಸಮಸ್ತ ಕೋಟಿ-ಚೆನ್ನಯರ ಭಕ್ತರು ಸೇರಿಕೊಂಡು ಕ್ಷೇತ್ರ ನಿರ್ಮಾಣಕ್ಕೆ ಬೆವರು ಸುರಿಸಿದರು. ವಿವಿಧ ರೀತಿಯಲ್ಲಿ ಸೇವೆಯನ್ನು ನೀಡಿ ಸಹಕರಿಸಿದರು. ಗೆಜ್ಜೆಗಿರಿ ಕ್ಷೇತ್ರದ ಶಕ್ತಿಗಳ ಅನುಗ್ರಹ ಹಾಗೂ ಭಕ್ತರ ಪರಿಶ್ರಮದ ಫಲವಾಗಿ ಗೆಜ್ಜೆಗಿರಿಯಲ್ಲಿ ಆಕರ್ಷಣೀಯ ‘ಸತ್ಯ ಧರ್ಮ ಚಾವಡಿ’ ನಿರ್ಮಾಣವಾಗಿ 2020 ರ ಫೆಬ್ರವರಿ ತಿಂಗಳಲ್ಲಿ ಲೋಕಾರ್ಪಣೆಗೊಂಡಿದೆ.
* ಇತಿಹಾಸ* —-
ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿರುವ ಏರಾಜೆ ಬರ್ಕೆ ಎಂಬ ಪ್ರತಿಷ್ಠಿತ ಮನೆತನದ ನೆಲವೇ ಗೆಜ್ಜೆಗಿರಿ ನಂದನ ಬಿತ್ತ್ ಲ್. ಸಾವಿರಾರು ವರ್ಷಗಳ ಇತಿಹಾಸ ಇರುವ ಈ ಮನೆತನ ಪಡುಮಲೆ ಅರಸು ಬಳ್ಳಾಲರ ಸಂಸ್ಥಾನದಲ್ಲಿ ಮಹತ್ವದ ಸ್ಥಾನಮಾನ ಪಡೆದ ಮಣ್ಣು. 500 ವರ್ಷಗಳ ಹಿಂದೆ ಈ ಮನೆತನದಲ್ಲಿ ಗುರಿಕಾರರಾಗಿ ಮೆರೆದವರು ಗುರು ಸಾಯನ ಬೈದ್ಯರು.ಇವರ ಕಾಲದಲ್ಲಿ ನಡೆದಿದ್ದೇ ಕೋಟಿ-ಚೆನ್ನಯರ ಕಥಾನಕ. ಮಾತೆ ದೇಯಿ ಬೈದ್ಯೆತಿಗೆ ಗುರು ಸಾಯನರು ಪುನರ್ಜನ್ಮ ನೀಡಿದ ನೆಲವೇ ಗೆಜ್ಜೆಗಿರಿ. ಕೋಟಿ-ಚೆನ್ನಯರು ಬದುಕಿದ ಬಹುಪಾಲನ್ನು ಕಳೆದ ತಾಣವಿದು.ಅವಳಿ ವೀರಪುರುಷರ ತಾಯಿ, ಮಾವನವರು ವಾಸಿಸಿದ್ದ ಕೌಟುಂಬಿಕ ಮೂಲವಿದು. ಒಟ್ಟಾರೆಯಾಗಿ ಕೋಟಿ-ಚೆನ್ನಯರ ಪಾಲಿಗಿದು ಮೂಲಸ್ಥಾನ. ಈ ಮೂರು ತಲೆಮಾರುಗಳ ಕಾರಣಿಕ ಶಕ್ತಿಗಳು ಮಾನವ ರೂಪದಲ್ಲಿ ವಾಸಿಸಿದ್ದ ಮನೆ ಈಗ ಸತ್ಯ ಧರ್ಮ ಚಾವಡಿಯಾಗಿ ಪುನರುತ್ಥಾನ ಗೊಂಡಿದೆ.ಇದರೊಂದಿಗೆ ಕೋಟಿ ಚೆನ್ನಯರ ಮೂಲಸ್ಥಾನ ನಿರ್ಮಾಣದ ಭಕ್ತರ ಕನಸು ಕೂಡಾ ನನಸಾಗಿದೆ.
*!ಸತ್ಯದ ನೆಲ ಗೆಜ್ಜೆ ಗಿರಿಯಲ್ಲಿ ಕೋಟಿ ಚೆನ್ನಯರ ಮೂಲಸ್ಥಾನ ಪುನರುತ್ಥಾನ!*
ಸತ್ಯದ ನೆಲ ಗೆಜ್ಜೆಗಿರಿಯ ಮೂಲ ಮಣ್ಣಿನಲ್ಲಿ ಕೋಟಿ ಚೆನ್ನಯರ ಮೂಲಸ್ಥಾನ ಗರಡಿ, ಬೆರ್ಮೆರ ಗುಂಡ ,ಸತ್ಯ ಧರ್ಮ ಚಾವಡಿ ಪುನರುತ್ಥಾನ ಗೊಂಡು ಕಂಗೊಳಿಸುತ್ತಿದೆ. ಧರ್ಮದೈವ ಧೂಮಾವತಿ ಮತ್ತು ಕುಪ್ಪೆ ಪಂಜುರ್ಲಿ ದೈವಗಳ ತಾಣ ಹಾಗು ನಾಗ ಬನ ಸಂಪೂರ್ಣವಾಗಿ ಜೀರ್ಣೋದ್ದಾರಗೊಂಡು ಎದ್ದು ನಿಂತಿದೆ.ಅಪೂರ್ವ ಇತಿಹಾಸದ ಸರೋಳಿ ಸೈಮಂಜನ ಕಟ್ಟೆಗೆ ಹೊಸ ರೂಪ ಬಂದಿದೆ. ದೇಯಿ ಮಹಾಮಾತೆಯ ಸಮಾಧಿ ಕೂಡ ಪಾರಂಪರಿಕ ಶೈಲಿಯಲ್ಲಿ ನೈಸರ್ಗಿಕ ಮಾದರಿಯಲ್ಲಿ ಪುನರ್ ನಿರ್ಮಾಣಗೊಂಡಿದೆ. ಸಾಯನ ಬೈದರ ಗುರುಪೀಠ ಸ್ಥಾಪನೆಗೊಂಡಿದೆ. ಗೆಜ್ಜೆಗಿರಿ ಕ್ಷೇತ್ರದ ಭಕ್ತರಿಗೆ ದುರಿತ ನಿವಾರಣೆಯ ಅದ್ಭುತ ಸಂಜೀವಿನಿಯಾಗಿರುವ ತೀರ್ಥಭಾವಿ ನಿರ್ಮಾಣವಾಗಿದೆ. ವಿಶೇಷವೆಂದರೆ ಉದ್ದೇಶಪೂರ್ವಕವಾಗಿ ತೋಡಿದ ಬಾವಿ
ಇದಲ್ಲ. ನೂರಾರು ವರ್ಷಗಳಿಂದಲೂ ಈ ಮಣ್ಣಿನಲ್ಲಿದ್ದ
ಬಾವಿ ಇದಾಗಿದೆ. ಅಷ್ಟಮಂಗಲ ಚಿಂತನೆಯಲ್ಲಿ ಪ್ರಾಚೀನ ಭಾವಿ ಇದ್ದ ಬಗ್ಗೆ ಗೋಚರವಾಯಿತು. ದೈವಜ್ಞರ ಸೂಚನೆಯಂತೆ ನಿರ್ದಿಷ್ಟ ಜಾಗವನ್ನು ಅಗೆದಾಗ ಹಿಂದಿನ ಕಾಲದ ಬಾವಿ ಇರುವುದು ಯಥಾ ಪ್ರಕಾರ ಪತ್ತೆಯಾಯಿತು. ಬಳಿಕ ಬಾವಿಯನ್ನು ಪೂರ್ಣವಾಗಿ ತೋಡಿ ಅದಕ್ಕೆ ಕೆಂಪು ಕಲ್ಲಿನಿಂದ ಸುಂದರವಾದ ಕಟ್ಟೆ ನಿರ್ಮಾಣ ಮಾಡಲಾಗಿದೆ . ದೇಯಿ ಬೈದೆತಿ ತಮ್ಮ ಮಂತ್ರಶಕ್ತಿಯಿಂದ ಈ ಬಾವಿಯ ನೀರನ್ನು ಪಾವನಗೊಳಿಸಿದ್ದಾರೆ ಎಂಬುದು ನಂಬಿಕೆ. ಆದ್ದರಿಂದ ಈ ಬಾವಿಯ ನೀರನ್ನು ತೀರ್ಥದ ರೂಪದಲ್ಲಿ ಭಕ್ತರಿಗೆ ಈಗ ನೀಡಲಾಗುತ್ತಿದೆ.ಒಟ್ಟಾರೆಯಾಗಿ ಗೆಜ್ಜೆಗಿರಿ ಕ್ಷೇತ್ರದ ಪುನರುತ್ಥಾನದಿಂದ ಬಡಗನ್ನೂರು ಗ್ರಾಮದ ಚಿತ್ರಣವೇ ಈಗ ಸಂಪೂರ್ಣ ಬದಲಾಗಿದೆ.
*! ಒಂದೇ ಮರದಲ್ಲಿ 4 ವಿಗ್ರಹಗಳ ಕೆತ್ತನೆ!*
ದಕ್ಷಿಣದಲ್ಲಿ ಮಾತೃಪ್ರಧಾನ ಕುಟುಂಬಕ್ಕೆ ಪ್ರಾಧಾನ್ಯತೆಯಿದೆ.
ಅಂದರೆ ಮಾತೆಯರೇ ಕುಟುಂಬದ ಪ್ರಧಾನ ಬೇರುಗಳಾಗಿದ್ದಾರೆ.ಈ ಮೂಲಾಶಯ ಪ್ರತಿಬಿಂಬಿಸುವಂತೆ
ಗೆಜ್ಜೆ ಗಿರಿಯಲ್ಲಿ ಹಲಸಿನ ಮರವೊಂದರ ತಳಭಾಗದಿಂದ ಕಾಂಡದ ವರೆಗಿನ ಕಾಷ್ಟದಿಂದ ಶ್ರೀ ಕ್ಷೇತ್ರದ ಪ್ರಧಾನ ಶಕ್ತಿಗಳಾದ ದೇಯಿ ಬೈದೆತಿ, ಸಾಯನ ಬೈದ್ಯ, ಮತ್ತು ಕೋಟಿ-ಚೆನ್ನಯರ ವಿಗ್ರಹ ಕೆತ್ತಲಾಗಿದೆ. ಒಂದು ಅಥವಾ ಎರಡು ವಿಗ್ರಹ ನಿರ್ಮಿಸಲಾಗುವ ಮರ ಸಿಗುವುದು ಅಪೂರ್ವ. ಆಗಿರುವಾಗ ಒಂದೇ ಕುಟುಂಬದ ನಾಲ್ಕು ಶಕ್ತಿಗಳ ವಿಗ್ರಹ ನಿರ್ಮಾಣಕ್ಕೆ ಅಗತ್ಯವಿರುವ ಒಂದೇ ಮರ ಸಿಕ್ಕಿರುವುದು ನಿಜಕ್ಕೂ ದೈವೀ ಕೃಪೆ ಎಂದರೆ ಅತಿಶಯೋಕ್ತಿಯೇನಲ್ಲ.
*! ಗೆಜ್ಜೆಗಿರಿ ಕ್ಷೇತ್ರದಲ್ಲಿ ಭಕ್ತರನ್ನು ಆಕರ್ಷಿಸುತ್ತಿರುವ ಕೊಡಿಮರ !*
ಗೆಜ್ಜೆಗಿರಿ ಕ್ಷೇತ್ರದ ಆದಿದೈವ ಶ್ರೀ ಧೂಮಾವತಿ ಸಾನಿಧ್ಯದಲ್ಲಿ ನೂತನ ಕೊಡಿ ಮರವನ್ನು ನಿರ್ಮಿಸಲಾಗಿದೆ. ಗಗನ ಮುಖಿಯಾಗಿರುವ ಈ ಕೊಡಿಮರವು ಭಕ್ತರನ್ನು ಆಕರ್ಷಿಸುತ್ತಿದೆ .34 ಅಡಿ ಎತ್ತರವಿರುವ ಈ ಕೊಡಿ ಮರವನ್ನು ಸಾಗುವಾನಿ ಮರದಲ್ಲಿ ಕೆತ್ತಲಾಗಿದೆ. ನೆಲದಲ್ಲಿ 6 ಅಡಿ ಇದ್ದು ಉಳಿದ 29 ಅಡಿ ನೆಲಮಟ್ಟದಿಂದ ಮೇಲಿದೆ.ಇಡೀ ಕೊಡಿ ಮರಕ್ಕೆ ಹಿತ್ತಾಳೆಯ ಕವಚವನ್ನು ತೊಡಿಸಲಾಗಿದೆ. ಈ ಕೊಡಿಮರ ಗೆಜ್ಜೆಗಿರಿ ಕ್ಷೇತ್ರದ ಮೆರಗನ್ನು ಹೆಚ್ಚಿಸಿದೆ. ಹಿರಿದಾದ ಕೊಡಿ ಮರವನ್ನು ಕಿರಿದಾದ ಮಾರ್ಗವಾಗಿ ಬೃಹತ್ ಗಾತ್ರದ ಲಾರಿಯ ಮೂಲಕ ಶ್ರೀಕ್ಷೇತ್ರಕ್ಕೆ ತಂದಿರುವುದೇ ದೊಡ್ಡ ಪವಾಡ ಎಂಬುದು ಭಕ್ತರ ಅಂಬೋಣ!
*!ಬ್ರಹ್ಮಕಲಶೋತ್ಸವಕ್ಕೆ ಹರಿದುಬಂದ ಭಕ್ತ ಜನ ಸಾಗರ!*
ಗೆಜ್ಜೆಗಿರಿ ಸತ್ಯಧರ್ಮ ಚಾವಡಿಯಲ್ಲಿ ಕಳೆದ ಫೆಬ್ರವರಿ ಯಲ್ಲಿ ಜರಗಿದ ಬ್ರಹ್ಮಕಲಶೋತ್ಸವದಂದು ಶಿಖರ ಪ್ರತಿಷ್ಠೆ ನಡೆದು ಬಿಂಬ ಪ್ರತಿಷ್ಠೆ ಆಗುತ್ತಲೇ ಭಕ್ತರ ಪ್ರವಾಹ ಹರಿದು ಬಂದಿತ್ತು.ಎಂದೂ ಕಂಡುಕೇಳರಿಯದ ಬ್ರಹ್ಮಕಲಶೋತ್ಸವಕ್ಕೆ ಗೆಜ್ಜೆಗಿರಿ ಸಾಕ್ಷಿಯಾಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಉತ್ಸವದಲ್ಲಿ ಕಾಣದಷ್ಟು ಜನಸ್ತೋಮವೇ ಗೆಜ್ಜೆ ಗಿರಿಯಲ್ಲಿ ಕಂಡುಬಂದಿದ್ದವು. ಬ್ರಹ್ಮಕಲಶೋತ್ಸವದಲ್ಲಿ ಹತ್ತು ಲಕ್ಷಕ್ಕೂ ಮಿಕ್ಕಿ ಭಕ್ತರು ಪಾಲ್ಗೊಂಡು ಹೊಸ ಇತಿಹಾಸ ಸೃಷ್ಟಿಯಾಯಿತು. ಶ್ರೀ ಕ್ಷೇತ್ರದಲ್ಲಿ ಲಕ್ಷಾಂತರ ಮಂದಿ ಸೇರಿಕೊಂಡಿದ್ದರೂ ನೂಕುನುಗ್ಗಲು ಇಲ್ಲವೆ ಅಹಿತಕರ ಘಟನೆಗಳು ನಡೆಯದೆ ಬ್ರಹ್ಮಕಲಶೋತ್ಸವವು ಸು ಸಾಂಗವಾಗಿ ಜರಗಿದ್ದಿತು.
ಗೆಜ್ಜೆಗಿರಿ ಕ್ಷೇತ್ರದ ಮಹಿಮೆ ಇದೆಂಬ ಉದ್ಗಾರ ಎಲ್ಲರ ಬಾಯಲ್ಲೂ ಕೇಳಿಬಂದಿತ್ತು.
*!ಗೆಜ್ಜೆಗಿರಿಯ ಸಾನಿಧ್ಯಗಳಲ್ಲಿ ನಾಲ್ಕು ಸಾವಿರಕ್ಕೂ ಮಿಕ್ಕಿ ಕಲಶಗಳಿಂದ ಅಭಿಷೇಕ!*
ಬ್ರಹ್ಮಕಲಶೋತ್ಸವದಂದು ಗೆಜ್ಜೆಗಿರಿಯ ಶಿಖರಾಗ್ರದಲ್ಲಿರುವ ಬೆರ್ಮೆರ ಗುಂಡ, ಕೋಟಿ ಚೆನ್ನಯರ ಮೂಲಸ್ಥಾನ ಗರಡಿ ಹಾಗೂ ತಪ್ಪಲಲ್ಲಿರುವ ಶ್ರೀ ಧೂಮಾವತಿ, ಶ್ರೀ ಕುಪ್ಪೆ ಪಂಜುರ್ಲಿ , ಪರಿವಾರ ದೈವಗಳಾದ ಕಲ್ಲಾಲ್ದಾಯ,ಕೊರತಿ ಮತ್ತು ಮಾತೆ ದೇಯಿ ಬೈದೆತಿ ಸಾನಿಧ್ಯದಲ್ಲಿ ಒಟ್ಟು 4000ಕ್ಕೂ ಮಿಕ್ಕಿ ಕಲಶಗಳಿಂದ ಅಭಿಷೇಕವನ್ನು ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮಾಡಲಾಗಿದೆ. ಈ ಕಲಶಾಭಿಷೇಕವು ತಂತ್ರಿವರ್ಯರಾದ ಎಮ್.ಲೋಕೇಶ್
ಶಾಂತಿ ಅವರ ಪೌರೋಹಿತ್ಯದಲ್ಲಿ ಹಾಗೂ ಪುರೋಹಿತ ವರ್ಗದವರ ಸಹಕಾರದೊಂದಿಗೆ ಜರಗಿದ್ದಿತು. ಬಿಲ್ಲವ ಸಮಾಜದ ನೂರಾರು ಪುರೋಹಿತರು ಧಾರ್ಮಿಕ ಕಾರ್ಯಕ್ರಮದಲ್ಲಿ ನೆರವಾಗಿದ್ದರು.
*!ಗೆಜ್ಜೆ ಗಿರಿಯಲ್ಲಿ ಪವಾಡ!*
ಬ್ರಹ್ಮಕಲಶೋತ್ಸವ ನಿಮಿತ್ತ 2020 ರ ಫೆಬ್ರವರಿ 25 ರಂದು ಗೆಜ್ಜೆಗಿರಿ ನಂದನ ಬಿತ್ತಿಲ್ ನಲ್ಲಿ ಗೆಜ್ಜೆ ಗಿರಿಯ *’ಹೆಜ್ಜೆಗುರುತು’* ಎಂಬ ಪುಸ್ತಕ ಬಿಡುಗಡೆಗೊಳಿಸಲಾಯಿತು. ವಿಶೇಷವೆಂದರೆ ಫೆಬ್ರವರಿ 26ರಂದು ಸತ್ಯದ ಮಣ್ಣು ಗೆಜ್ಜೆ ಗಿರಿಯಲ್ಲಿ ನಿಜರೂಪದ ಹೆಜ್ಜೆ ಗುರುತು ಮೂಡುವ ಮೂಲಕ ಭಕ್ತ ಕೋಟಿಯನ್ನು ರೋಮಾಂಚನಗೊಳಿಸಿತು. ಗೆಜ್ಜೆ ಗಿರಿಯ ಸತ್ಯ ಧರ್ಮ ಚಾವಡಿಯಲ್ಲಿ ಪುರೋಹಿತರು ಚಿತ್ತಾರ ಗೊಳಿಸಿದ್ದ
ಮಂಡಲದಲ್ಲಿ ಪುಟ್ಟ ಮಕ್ಕಳ ಗಾತ್ರದ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು ಭಕ್ತ ರಲ್ಲಿ ಆಶ್ಚರ್ಯ ಮೂಡಿಸಿತು.
ಪುರೋಹಿತರು ಧರ್ಮಚಾವಡಿಯ ಸಾಯನ ಗುರು ಪೀಠದಲ್ಲಿ ಆಕರ್ಷಣೀಯ ಮಂಡಲ ರಚಿಸಿ ಅದರಲ್ಲಿ ಅರ್ಧನಾರೀಶ್ವರ ಚಿತ್ತಾರ ರಚಿಸಿದ್ದರು. ಬೆಳಿಗ್ಗೆ ಧರ್ಮ ಚಾವಡಿಯಲ್ಲಿ ದೇಯಿ ಬೈದ್ಯೆತಿ ಬಿಂಬ, ಕೋಟಿ ಚೆನ್ನಯ ಸಾಯನ ಗುರುಗಳ ಪಂಚಲೋಹ ಬಿಂಬಗಳ ಶಯ್ಯಾಧಿವಾಸ ನಡೆದು ಮಧ್ಯಾಹ್ನ ಬಾಗಿಲು ಮುಚ್ಚಲಾಗಿತ್ತು. ಆದರೆ ಸಂಜೆ ಹೊತ್ತಿಗೆ ಬಾಗಿಲು ತೆರೆದು ನೋಡಿದಾಗ ಅಲ್ಲಿ ಆಶ್ಚರ್ಯ ಕಾದಿತ್ತು. ಮಂಡಲದ ಮಧ್ಯದಲ್ಲಿ ಪುಟ್ಟ ಮಕ್ಕಳ ಎಂಟು ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದೆ. ಮಂಡಲದ ಒಂದು ಭಾಗದಿಂದ ಪ್ರವೇಶಿಸಿ ಗುರುಪೀಠದ ಕಡೆಗೆ ನಡೆದು ಹೋಗುವ ರೀತಿಯಲ್ಲಿ ಈ ಹೆಜ್ಜೆಗುರುತು ಕಾಣಿಸಿಕೊಂಡಿದೆ. ವಿಶೇಷವೆಂದರೆ ಮಂಡಲದಲ್ಲಿ ಹಾಕಲಾದ ಹುಡಿ ಸ್ವಲ್ಪವೂ ಚೆಲ್ಲಾಪಿಲ್ಲಿಯಾಗಿಲ್ಲ. ಹೆಜ್ಜೆಯ ಅಚ್ಚು ಸ್ಪಷ್ಟವಾಗಿ ಗೋಚರಿಸಿದೆ. ಗೆಜ್ಜೆ ಗಿರಿಯಲ್ಲಿ ನಡೆದ ಕೋಟಿ ಚೆನ್ನಯರ ನೇಮೋತ್ಸವ ಸಂದರ್ಭದಲ್ಲಿ ಆವೇಶದಲ್ಲಿ ಚೆನ್ನಯ ಇದು ನನ್ನದೇ ಹೆಜ್ಜೆಗುರುತು ಎಂಬುದಾಗಿ ಸಮರ್ಥಿಸಿಕೊಂಡಿರುವುದರಿಂದ ಇದೊಂದು ಕೋಟಿ-ಚೆನ್ನಯರ ಪವಾಡ ಎಂದು ಕ್ಷೇತ್ರದ ಭಕ್ತರು ಹೇಳಿ ಕೊಳ್ಳುತ್ತಿದ್ದರು.
.
*!ಗೆಜ್ಜೆ ಗಿರಿಯಲ್ಲಿ ಮಾತೆ-ಮಕ್ಕಳ ಪುನೀತ ಸಮಾಗಮ!*
ಪುನರುಸ್ಥಾನ ಗೊಂಡ ಗೆಜ್ಜೆಗಿರಿಯ ಶಿಖರಾಗ್ರದಲ್ಲಿ ಕೋಟಿ-ಚೆನ್ನಯರ ಮೂಲಸ್ಥಾನ ಗರಡಿ ನೇಮೋತ್ಸವ ಅಲ್ಲದೆ ತಪ್ಪಲಲ್ಲಿ ಧರ್ಮದೈವ ಧೂಮಾವತಿ, ಕುಪ್ಪೆ ಪಂಜುರ್ಲಿ ನೇಮೋತ್ಸವ, ಕಲ್ಲಾಲ್ದಾಯ ದೈವ, ಕೊರತಿ ದೈವದ ಕೋಲ ,ಮಹಾಮಾತೆ ದೇಯಿ ಬೈದೆತಿ ಮಹಾ ನೇಮ ಜರಗಿದ್ದಿತು. ಶ್ರೀ ಗೆಜ್ಜೆಗಿರಿ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಬಳಿಕ ತಾಯಿ ಮಕ್ಕಳ ಪುನೀತ ಸಮಾಗಮ ಅಪೂರ್ವ ಕ್ಷಣವಾಗಿತ್ತು. ಗೆಜ್ಜೆಗಿರಿ ಶಿಖರಾಗ್ರದಲ್ಲಿನ ಮೂಲಸ್ಥಾನ ಗರಡಿಯಿಂದ ಕೋಟಿ-ಚೆನ್ನಯರು(ಬೈದೆರ್ಲ ಪಾತ್ರಿ) ಸುರಿಯ ಹಿಡಿದು ಚೆಂಡೆ, ವಾದ್ಯ, ಬ್ಯಾಂಡ್ ಘೋಷಗಳೊಂದಿಗೆ ತಪ್ಪಲಲ್ಲಿರುವ ಸತ್ಯಧರ್ಮ ಚಾವಡಿಗೆ ಸಾಗಿಬಂದು ಮಾತೆ ದೇಯಿ ಬೈದೆತಿಯ ದರ್ಶನ ಪಡೆದರು. ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಮಂದಿ ಭಕ್ತರು ಸೇರಿದ್ದರು. ಶ್ರದ್ದಾ ಭಕ್ತಿಯಿಂದ ಗೆಜ್ಜೆ ಗಿರಿಯಲ್ಲಿ ಸೇರಿದ್ದ ಭಕ್ತ ಸಮೂಹ ಈ ವಿಶೇಷ ಕ್ಷಣವನ್ನು ವೀಕ್ಷಿಸಿ ಪುನೀತರಾದರು.
ಪ್ರಸ್ತುತ ಎಲ್ಲರ ಬಾಯಲ್ಲೂ ಪುತ್ತೂರಿನ ಗೆಜ್ಜೆಗಿರಿ ಹೆಸರು ಗುಣು ಗುಣಿಸುತ್ತಿದೆ. ನಂದನವನದ ಉತ್ಸವದಲ್ಲಿ ದಾಖಲೆಯ ಭಕ್ತ ಜನ ಸಾಗರವೇ ಹರಿದು ಬಂದಿರುವುದರಿಂದ
ತುಳು ನಾಡಿನ ಇತಿಹಾಸದಲ್ಲಿ ಗೆಜ್ಜೆಗಿರಿ ಹೆಸರು ಸ್ಥಾಯಿಯಾಗಿದೆ. ತುಳುನಾಡಿನಲ್ಲಿ ಆರಾಧಿಸಲ್ಪಡುತ್ತಿರುವ ಅದೆಷ್ಟೊ ಗರಡಿ ಗಳಿದ್ದರೂ ಇವೆಲ್ಲಕ್ಕೂ ತಿಲಕ ಪ್ರಾಯವೆಂಬಂತೆ ಈಗ ಗೆಜ್ಜೆಗಿರಿ ಮೂಡಿಬಂದಿದೆ.ನಂದನ ಬಿತ್ತ್ ಲ್ ಎಂದಿದ್ದ ಈ ನಾಡು ಕೋಟಿ-ಚೆನ್ನಯ, ದೇಯಿ ಬೈದೆತಿ ಮತ್ತು ಸಾಯನ ಬೈದ್ಯರ ಕುಟುಂಬ ನೆಲೆಯಾಗಿದ್ದ ಸತ್ಯದ ನಾಡು. ಅದೆಷ್ಟೋ ವರ್ಷಗಳು ಸಂದು ಹೋಗಿದ್ದರೂ ಈ ಕಾಲಕ್ಕೆ ಗೆಜ್ಜೆಗಿರಿ ನಂದನ ಬಿತ್ತ್ ಲ್ ನ ಮಹಿಮೆ ಏನೆಂಬುದು ಜಾಹೀರು ಗೊಂಡಿದೆ.ಕಳೆದ ಫೆಬ್ರವರಿಯಲ್ಲಿ ಜರಗಿದ
ಉತ್ಸವದ ಪ್ರತಿದಿನವೂ ಒಂದೊಂದು ವಿಶೇಷತೆಗೆ, ಪವಾಡಕ್ಕೆ ಗೆಜ್ಜೆಗಿರಿ ಸಾಕ್ಷಿಯಾಯಿತು. ಬಿರು ಬೇಸಗೆಯಲ್ಲೂ ಉತ್ಸವದ ಆರಂಭ ಹಾಗೂ ಕೊನೆಯ ದಿನ ಮಳೆಯಾಗಿದ್ದರೆ ಮತ್ತೊಂದು ದಿನ ಭಕ್ತಕೋಟಿಯೇ
ನಿಬ್ಬೆರಗಾಗುವಂತಹ ಹೆಜ್ಜೆಗುರುತುಗಳು ಮೂಡಿ ಬಂದಿದ್ದವು. ನಿರೀಕ್ಷೆಗೂ ಮೀರಿ ಸಾಗರೋಪಾದಿಯಲ್ಲಿ ಭಕ್ತರ ಕೋಡಿ ಹರಿದು ಬಂದಿರುವುದು ಪವಾಡವೇ ಸರಿ. ಪ್ರತಿ ಕ್ಷಣಕ್ಕೂ ಇಲ್ಲಿ ದಾಖಲೆ ನಿರ್ಮಾಣಗೊಂಡಿದೆ. ಶ್ರೀ ಕ್ಷೇತ್ರಕ್ಕೆ ಬಂದಿರುವ ಹಸಿರು ಹೊರೆಕಾಣಿಕೆ ತುಳುನಾಡಿನ ಈ ವರೆಗಿನ ದಾಖಲೆಯನ್ನು ಅಳಿಸಿ ಹಾಕಿದೆ. ಭಕ್ತ ಸಮುದಾಯದ ಮೇಲಿದ್ದ ಸಾನಿಧ್ಯ ಶಕ್ತಿಗಳ ಕೃಪೆಯಿಂದ ಬ್ರಹ್ಮಕಲಶೋತ್ಸವ ನಿಮಿತ್ತ ಜರಗಿದ ಒಟ್ಟು ಎಂಟು ದಿನಗಳ ಉತ್ಸವ ಯಾವುದೇ ವಿಘ್ನಗಳಿಲ್ಲದೆ ಅತ್ಯಂತ ಸುಸೂತ್ರವಾಗಿ ನಡೆದಿತ್ತು. ಭವಿಷ್ಯದಲ್ಲಿ ಗೆಜ್ಜೆಗಿರಿಯು ಕರಾವಳಿ, ಮಲೆನಾಡು ಒಳಗೊಂಡಂತೆ ಕರ್ನಾಟಕದಲ್ಲಿಯೇ
ಪ್ರಸಿದ್ಧ ಯಾತ್ರಾ ತಾಣವಾಗುವುದರಲ್ಲಿ
ಯಾವುದೇ ಸಂದೇಹವಿಲ್ಲ.
ಪ್ರಸ್ತುತ ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ.ದೇಶ ವಿದೇಶದ ಲಕ್ಷಾಂತರ ಅಮಾಯಕ ಜೀವಗಳನ್ನು ಕೊರೊನಾ ಬಲಿ ತೆಗೆದುಕೊಂಡಿದೆ. ತುಳುನಾಡಿನ ಜನರು ಕೂಡಾ ಕೊರೊನಾ ಮಹಾಮಾರಿಯಿಂದಾಗಿ ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದಾರೆ. ಉದ್ಯೋಗ ದಂಧೆಗಳಿಲ್ಲದೆ ಕೆಲವರು ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ.ಜನರು ಚಿಂತೆಯೊಳಗಾಗಿ
ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಮಾನಸಿಕ ಚಿಂತೆಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅಲ್ಲದೆ ಕಷ್ಟ,ಸಮಸ್ಯೆಗಳಿಂದ ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ.ಪ್ರಸ್ತುತ ಕೊರೊನಾಗೆ ನಾಟಿ ಮದ್ದು ಅಮೃತಬಳ್ಳಿ ರಾಮಬಾಣ ಎಂಬುದಾಗಿ ಹೇಳಲಾಗುತ್ತಿದೆ.ಕೊರೊನಾ ಅತಂಕದ ಈ ಸಮಯದಲ್ಲಿ ಭಾರತೀಯ ಗಿಡಮೂಲಿಕೆಯ ಪರಿಣಾಮಕಾರಿ ಔಷಧೀಯ ಗುಣವುಳ್ಳ ಅಮೃತ ಬಳ್ಳಿಯು ತುಂಬಾ ಸುದ್ದಿ ಮಾಡಿದೆ. ಕಾಕತಾಳಿಯ ಎಂಬಂತೆ ಗೆಜ್ಜೆಗಿರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಿಮಿತ್ತ ಜರಗಿದ ನೇಮೋತ್ಸವದಲ್ಲಿ ಮಹಾಮಾತೆ ದೀಯಿ ಬೈದೆತಿಯ ಪ್ರಸಾದ ರೂಪದಲ್ಲಿ ಅಮೃತಬಳ್ಳಿಯ ಕಡ್ಡಿಯನ್ನೇ ಭಕ್ತರಿಗೆ ನೀಡಲಾಗಿತ್ತು. ಗೆಜ್ಜೆಗಿರಿಯ ಮಹೋತ್ಸವ ಕೊನೆಗೊಂಡ ಕೆಲವೇ ದಿನಗಳಲ್ಲಿ
ಕೊರೊನಾ ಮಹಾಮಾರಿ ಭಾರತಕ್ಕೂ ದಾಳಿ ಮಾಡಿತು. ಹೀಗಿರುವಾಗ ಜಗತ್ತಿನ ಜನರನ್ನು ಭಯದಲ್ಲಿರಿಸಿದ ಕೊರೊನಾ ಮಹಾಮಾರಿಯ ನಿವಾರಣೆಗೆ ಹಾಗು ಇತರ ಮಾರಕ ರೋಗಗಳಿಗೂ ಈ ಅಮೃತಬಳ್ಳಿ ಸಂಜೀವಿನಿಯಾಗಲಿ.ಕೊರೊನಾ ಮಹಾಮಾರಿಯು ಸಂಪೂರ್ಣ ನಾಶ ಹೊಂದಿ ಎಲ್ಲೆಡೆಯ ಜನತೆ ಎಂದಿನಂತೆ ಉಲ್ಲಾಸ,ಉತ್ಸಾಹ,ನೆಮ್ಮದಿ, ನಿಶ್ಚಿಂತೆಯಿಂದ ಬಾಳುವಂತಾಗಲಿ. ಆರೋಗ್ಯಕರ, ಸಂಭ್ರಮದ ವಾತಾವರಣ ಎಲ್ಲೆಡೆ ಪಸರಿಸಲಿ. ದಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವ ಮತ್ತೆ ಮರುಕಳಿಸಲಿ ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಸರ್ವ ದೈವ ಶಕ್ತಿಗಳಲ್ಲಿ ನಮ್ಮ ಪ್ರಾರ್ಥನೆ.
ಪ್ರಸ್ತುತ ಗೆಜ್ಜೆಗಿರಿಯಲ್ಲಿ ಎಂದಿನಂತೆ ಪೂಜೆ-ಪುನಸ್ಕಾರಗಳು ಆರಂಭಗೊಂಡಿದೆ.
ಭಕ್ತರಿಗೆ ಕೊವಿಡ್ 19 ರ ನಿಯಮದ ಪ್ರಕಾರ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಸಂದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
ಕ್ಷೇತ್ರ ವಿಳಾಸ:
*ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್*
*ದೇಯಿ ಬೈದೆತಿ -ಕೋಟಿ ಚೆನ್ನಯ* *ಮೂಲ ಸ್ಥಾನ*
*ಬಡಗನ್ನೂರು,ಪುತ್ತೂರು*
*ದ.ಕ-574223*
✍ : ಬರಹ-ನವೀನ್ .ಕೆ ಇನ್ನ