ಮಂಗಳೂರು: ”ಅಂತರ್ ರಾಷ್ಟ್ರೀಯ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕು” ಎಂದು ವಿಧಾನಸಭೆಯಲ್ಲಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಧ್ವನಿ ಎತ್ತಿದ್ದಾರೆ.
”ಈ ನಾಡಿನಲ್ಲಿ ಜನ್ಮತಳೆದು ತಮ್ಮ ಬದುಕು ಮತ್ತು ಸಾಧನೆಯಿಂದ ವೀರ ಪುರುಷರಾದವರು, ದೈವಿಕ ಶಕ್ತಿ ಗಳಿಸಿಕೊಂಡವರು ಅನೇಕರು ಇದ್ದಾರೆ. ಅವರಲ್ಲಿ ವೀರ ಪುರುಷರು ಎನಿಸಿಕೊಂಡು, ತಮ್ಮ ಜನ ಸೇವೆಯಿಂದ, ವೀರಗಾಥೆಯಿಂದ, ಅಸಮಾನ್ಯ ನಡೆನುಡಿಗಳಿಂದ ದೈವತ್ವಕ್ಕೆ ಏರಿದ ಅಮರರಾದವರಲ್ಲಿ ಕೋಟಿ ಚೆನ್ನಯರ ಹೆಸರು ನಿಜವಾಗಿಯು ಎಲ್ಲರಿಗೂ ತಿಳಿದಿದೆ. ವೀರ ಪುರುಷರಾದ ಕೋಟಿ ಚೆನ್ನಯರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬೇಕು. ವೀರ ಪುರುಷ ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಎಂದು ನಾಮಕರಣ ಮಾಡಬೇಕು” ಎಂದು ಶಾಸಕ ಉಮಾನಾಥ್ ಕೋಟ್ಯಾನ್ ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾರೆ.
”ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಈಗಾಗಲೇ ಮಂಗಳೂರಿನಲ್ಲಿ ಕೋಟಿ ಚೆನ್ನಯರ ಹೆಸರು ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಪ್ರತಿಭಟನೆ, ರ್‍ಯಾಲಿಗಳನ್ನು ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ಜನಾಭಿಪ್ರಾಯಕ್ಕೆ ಮನ್ನಣೆಯನ್ನು ಕೊಟ್ಟು ವೀರ ಪುರುಷ ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಎಂದು ಹೆಸರು ಇಡಬೇಕು” ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.