TOP STORIES:

ರಾಜಕಾರಣಿಯಾದವನು ಯಾವಾಗಲೂ ಪ್ರಾಮಾಣಿಕನಾಗಿರಬೇಕು: ಬಿ ಜನಾರ್ದನ ಪೂಜಾರಿ


ಆಗಿನ್ನೂ ನನಗೆ 8-9 ವರ್ಷ ಪ್ರಾಯ. ಮಂಗಳೂರಿನ ಬೊಕ್ಕಪಟ್ಣದ ಮುಸ್ಲಿಮರ ಮನೆಯಲ್ಲಿ ಬಾಡಿಗೆ ಬಿಡಾರಲ್ಲಿದ್ದೆವು. ನನ್ನ ತಂದೆಯವರ ಕುಟುಂಬ ಬೋಳಂತೂರಿನ ಮರಕಡಬೈಲಿನಲ್ಲಿತ್ತು. ಬೊಕ್ಕಪಟ್ಣದಿಂದ ಬೋಳಂತೂರಿಗೆ ಸುಮಾರು 17 ಮೈಲು ಅಂತರ. ನಡೆದುಕೊಂಡೇ ಹೋಗುತ್ತಿದ್ದೆವು. ಹೀಗೆ ಒಂದು ದಿನ ನಾನು ಮತ್ತು ನನ್ನ ತಂದೆಯವರು ನಡೆದುಕೊಂಡು ಹೋಗುತ್ತಿದ್ದಾಗ ಪಾಣೆಮಂಗಳೂರು ದಾಟುತ್ತಿದ್ದಂತೆ ತಂದೆಯವರು ಹೊಟೇಲಿಗೆ ಕರೆದುಕೊಂಡು ಹೋದರು. ಇನ್ನೇನು ಒಳಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಹೊಟೇಲಿನವರು ನಮ್ಮನ್ನು ತಡೆದರು. ಒಳಗೆ ಕಾಲಿಡಬಾರದು ಎಂದರು. ನಾವು ಹೊರಗಡೆ ನಿಂತೆವು. ತೆಂಗಿನ ಗೆರಟೆ (ಚಿಪ್ಪು)ಯಲ್ಲಿ ಚಹಾ ತಂದುಕೊಟ್ಟರು. ನನ್ನ ತಂದೆ ಅದನ್ನು ಸ್ವೀಕರಿಸಲಿಲ್ಲ.
ಮತ್ತೊಂದು ಘಟನೆ… ಹತ್ತೋ ಹನ್ನೆರಡೋ ವರ್ಷವಿದ್ದೀತು ನನಗೆ. ನನ್ನ ಅಣ್ಣ ಕನ್ನಡಿ ತಯಾರಿಸುವ ಕೆಲಸ ಮಾಡುತ್ತಿದ್ದ. ಅದನ್ನು ಶುದ್ಧ ನೀರಿನಲ್ಲಿ ಮಾಡಬೇಕು. ಮಂಗಳೂರಿನ ದೇವಾಲಯವೊಂದರಲ್ಲಿ ನೈಸರ್ಗಿಕವಾಗಿ ಒಸರುವ ಶುದ್ಧ ನೀರನ್ನು ತರಲು ಹೇಳಿ ನನ್ನ ಕೈಗೆ ನಾಲ್ಕಾಣೆ ಕೊಟ್ಟು ದೊಡ್ಡ ಬಾಟಲಿ ನೀಡಿ ಕಳುಹಿಸುತ್ತಿದ್ದ. ಪ್ರತಿಸಲ ಆ ದೇವಾಲಯಕ್ಕೆ ಹೋದಾಗ ಅಲ್ಲಿದ್ದ ಏಳೆಂಟು ಸಣ್ಣ ಸಣ್ಣ ಕೆರೆಗಳಲ್ಲಿ ಆಟವಾಡಿ, ಸ್ನಾನ ಮಾಡಿ, ದೇವಾಲಯದ ಒಳಗೆ ಹೋಗಿ ಪ್ರಾರ್ಥನೆ ಮಾಡಿ ಬಳಿಕ ನೀರು ಕೊಂಡೊಯ್ಯುತ್ತಿದ್ದೆ. ಒಂದು ದಿನ ದೇವಾಲಯದ ಒಳಗೆ ಹೋಗುವಾಗ ನಾನು ಬಿಲ್ಲವ ಜಾತಿಯವನು ಎನ್ನುವುದು ಅವರಿಗೆ ಗೊತ್ತಾಯಿತು. ನನ್ನ ಕುತ್ತಿಗೆಗೆ ಕೈ ಹಾಕಿ ಎಳೆದುಕೊಂಡು ಬಂದು ಹೊರದೂಡಿದರು. ಅತಿ ಸಣ್ಣ ವಯಸ್ಸಿನಲ್ಲಿ ನನ್ನ ಮನಸ್ಸಿನ ಮೇಲಾದ ಅಸ್ಪಶ್ಯತೆಯ ಗಾಯ ಮಾಸಲಿಲ್ಲ. ಅಲ್ಲಿಗೆ ಹೋಗುವುದನ್ನೇ ನಿಲ್ಲಿಸಿದೆ. ನಾನು ಮಂತ್ರಿಯಾದ ಮೇಲೆ ಅದೇ ದೇವಾಲಯಕ್ಕೆ ನನ್ನನ್ನು ಕರೆದರು. ಬ್ಯಾಂಡ್ ವಾಲಗದೊಂದಿಗೆ ಭಾರಿ ಜನ ಒಟ್ಟು ಸೇರಿ ಸ್ವಾಗತಿಸಿದರು.
ಹುಟ್ಟಿನಿಂದ ಯಾರೂ ಅಸ್ಪಶ್ಯರಲ್ಲ. ನಾವೆಲ್ಲರೂ ಪರಮಾತ್ಮನ ಮಕ್ಕಳು. ಹುಟ್ಟಿದ ಮಗುವಿಗೆ ಜಾತಿ, ಧರ್ಮ ಯಾವುದೂ ಇಲ್ಲ. ನನ್ನನ್ನು ಅವಹೇಳನ ಮಾಡಿದ್ದಕ್ಕೆ ನಾನು ಯಾರನ್ನೂ ದೂರಲಾರೆ. ನಾನು ಶ್ರೀಮಂತನಾಗಿ ಹುಟ್ಟಿದ್ದಿದ್ದರೆ ಇದೆಲ್ಲ ನಡೆಯುತ್ತಿರಲಿಲ್ಲ. ಬಡತನವೇ ಇದಕ್ಕೆಲ್ಲ ಮೂಲ ಕಾರಣ. ಬಡತನ, ಅಸ್ಪಶ್ಯತೆ ನನ್ನೊಬ್ಬನ ಒಳಬೇಗುದಿಯಾಗಿರಲಿಲ್ಲ. ಅದು ಈ ದೇಶದ ಪಿಡುಗಾಗಿತ್ತು.
ಕಾಲ ಸರಿಯಿತು. ದೇಶದ ಅರ್ಥಖಾತೆಗೆ ಮಂತ್ರಿಯಾದೆ. ಅರ್ಥ ವ್ಯವಸ್ಥೆಯ ಯಾವ ಸೌಲಭ್ಯಗಳೂ ಬಡವರನ್ನು ತಲುಪುತ್ತಿರಲಿಲ್ಲ. ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕಾದರೆ ಲಂಚ ಕೊಡಬೇಕಿತ್ತು. ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಬಡವರಿಗಂತೂ ಸಾಲ ಕೈಗೆಟುಕದ ನಕ್ಷತ್ರ. ಇದನ್ನು ವಿರೋಧಿಸಿದೆ. ಸಾಲವನ್ನು ನೀಡುವ ಪ್ರಕ್ರಿಯೆ ಗೌಪ್ಯವಾಗಿ ನಡೆಯಬಾರದು. ಅದಕ್ಕಾಗಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ಸಾಲಮೇಳಗಳನ್ನು ಆರಂಭಿಸಿದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಸಾಲ ಮೇಳಗಳು ನಡೆದವು. ಊರೂರು ಅಲೆದಾಡಿ ಜಾತಿ, ಧರ್ಮ, ಪಕ್ಷಗಳ ಮುಖ ನೋಡದೆ ಎಲ್ಲ ಬಡವರು, ಕಾರ್ಮಿಕರು, ಮಹಿಳೆಯರು, ರೈತರಿಗೆ ೫ ಲಕ್ಷ ರು.ವರೆಗೆ ಯಾವ ಜಾಮೀನನ್ನೂ ಪಡೆಯದೆ ಸಾಲ ನೀಡುವ ಏರ್ಪಾಡು ಮಾಡಿದೆ. ಇದಕ್ಕೆ ದೇಶದೆಲ್ಲೆಡೆಗಳಿಂದ ತೀವ್ರ ವಿರೋಧ ಎದುರಾಯಿತು. ಬ್ಯಾಂಕ್‌ಗಳಿಂದ ಭಾರಿ ಪ್ರತಿಭಟನೆಗಳು ನಡೆದವು. ಪಾರ್ಲಿಮೆಂಟ್‌ನಲ್ಲಿ ಗಲಾಟೆ ಮಾಡಿಸಿದರು. ನನ್ನ ಪ್ರಾಣಕ್ಕೆ ಅಪಾಯ ಬರುವವರೆಗೆ ಅದು ಮುಂದುವರಿಯಿತು. ಆಂಧ್ರಪ್ರದೇಶದ ಮೆಹಬೂಬ್ ನಗರದಲ್ಲಿ ನನ್ನ ದೇಹಕ್ಕೆ ಚೂರಿಯಿಂದ ಇರಿದರು. ನಾನೇನೂ ಧೃತಿಗೆಡಲಿಲ್ಲ, ಸಾಲಮೇಳವನ್ನೂ ನಿಲ್ಲಿಸಲಿಲ್ಲ.
ಸಣ್ಣವನಿರುವಾಗ ಎರಡು ಹೊತ್ತಿನ ಊಟಕ್ಕೂ ಗತಿ ಇರಲಿಲ್ಲ. ಕನಿಷ್ಠ ಒಂದು ಅಂಗಿಯೂ ಇಲ್ಲದೆ ಹರಿದ ಚಡ್ಡಿಯಲ್ಲೇ ಶಾಲೆ ಕಲಿತವನು. ನಾನು ಮಾತಿಗೆ ನಿಂತರೆ ಜನ ಸ್ತಬ್ಧರಾಗಿ ಕೇಳುತ್ತಿದ್ದರು. ಅವರ ಕಣ್ಣುಗಳಲ್ಲಿ ನೀರು ಮಡುಗಟ್ಟುತ್ತಿತ್ತು. ಕರ್ನಾಟಕದ ೨೨೪ ಕ್ಷೇತ್ರಗಳಲ್ಲೂ ಸಾಲ ಮೇಳಗಳನ್ನು ನಡೆಸಿದೆ. ಪ್ರತಿ ಸಭೆಯಲ್ಲೂ ಲಕ್ಷಾಂತರ ಮಂದಿ ಬಡವರು ಸೇರುತ್ತಿದ್ದರು. ಇಡೀ ದೇಶದ ೨೫ ಕೋಟಿ ಜನರಿಗೆ ಇದೇ ಕೈಗಳಿಂದ ಸಾಲ ವಿತರಿಸಿದೆ. ಬಹಿರಂಗವಾಗಿ ಸಾಲ ನೀಡಿದ್ದರಿಂದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಕಡಿಮೆಯಾಯಿತು. ಬ್ಯಾಂಕ್ ಸಾಲ ನೀಡುವಾಗ ಲಂಚ ಪಡೆಯುವ ಪಿಡುಗೂ ನಿವಾರಣೆಯಾಯಿತು.
ನಮಗೆ ದೇವರಿರಲಿಲ್ಲ. ನಾವು ದೇವರನ್ನು ಮುಟ್ಟಬಾರದಿತ್ತು. ದೇವಾಲಯಗಳಿಗೂ ಪ್ರವೇಶ ಇರಲಿಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳು ಗೋಕರ್ಣನಾಥನನ್ನು ಪ್ರತಿಷ್ಠಾಪಿಸಿ ನಮಗೆ ದೇವರನ್ನು ಕೊಟ್ಟರು. ನಾವು ಮನುಷ್ಯರಾದೆವು. ನಾನು ಮಂತ್ರಿಯಾಗಿದ್ದಾಗ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆಂದು ಆಡಳಿತ ಮಂಡಳಿಯವರು ನನ್ನ ಬಳಿ ಬಂದರು. ೨೫ ಲಕ್ಷ ರು. ಕೊಡುತ್ತೇನೆಂದ ವ್ಯಕ್ತಿಯೊಬ್ಬರು ಕೈ ಕೊಟ್ಟಾಗ ನಾನು ಸಾರ್ವಜನಿಕ ಸಭೆಗಳನ್ನು ನಡೆಸಿದೆ. ಅವಿಭಜಿತ ದ.ಕ. ಜಿಲ್ಲೆಯಾದ್ಯಂತ ಅಷ್ಟೇ ಅಲ್ಲ, ಬೆಂಗಳೂರು, ಮುಂಬೈನಲ್ಲೂ ಸಾರ್ವಜನಿಕ ಸಭೆಗಳನ್ನು ಮಾಡಿ ಹಣ ಒಟ್ಟು ಮಾಡಿದೆವು. ಒಂದು ದಿನ ಹೀಗೆ ಸಭೆಯಲ್ಲಿ ನಾನು ಮಾತನಾಡುತ್ತಿರಬೇಕಾದರೆ ಒಬ್ಬ ಭಿಕ್ಷುಕ ಬಂದ. ಹರಿದ ಚಡ್ಡಿಯ ಕಿಸೆಯಿಂದ ಐದು ಪೈಸೆಯ ನಾಣ್ಯ ತೆಗೆದು, ‘ನಾನು ಭಿಕ್ಷುಕ. ನನ್ನ ಬಳಿ ಇಷ್ಟೇ ಇರುವುದು. ಇದನ್ನು ತೆಗೆದುಕೊಳ್ತೀರಾ’ ಎಂದು ಕೇಳಿದ. ಆಶ್ಚರ್ಯವಾಯಿತು ನನಗೆ. ಅದೇ ಐದು ಪೈಸೆಯನ್ನು ಜನರಿಗೆ ತೋರಿಸಿದೆ. ನೋಡನೋಡುತ್ತಿದ್ದಂತೆ ೬೫ ಲಕ್ಷ ರು. ಗುರಿಯನ್ನೂ ಮೀರಿ ಕೋಟ್ಯಂತರ ರು. ಧನ ಸಂಗ್ರಹವಾಯಿತು. ಕೇವಲ ಹದಿಮೂರೇ ತಿಂಗಳಲ್ಲಿ ಬೃಹತ್ ದೇವಾಲಯ ತಲೆಯೆತ್ತಿ ನಿಂತಿತು. ಮುಂದೆ ಗೋಕರ್ಣನಾಥೇಶ್ವರ ಕಾಲೇಜು ಕೂಡ ಸ್ಥಾಪನೆಯಾಯಿತು. ಒಮ್ಮೊಮ್ಮೆ ಒಂದು ಶಕ್ತಿ ಎನ್ನುವುದು ಇರದಿದ್ದರೆ ಇದೆಲ್ಲ ಸಾಧ್ಯವಾಗುತ್ತಿತ್ತೇ ಎನಿಸುತ್ತದೆ. ದೇವಾಲಯದಲ್ಲಿ ಒಂದು ಲಾಡು, ಪ್ರಸಾದ ತೆಗೆದುಕೊಂಡರೂ ಅದರ ಹಣ ಕೊಟ್ಟಿದ್ದೇನೆ.
ನಾನು ಬಿಲ್ಲವನಾದರೂ ಬಿಲ್ಲವ ಎಸೋಸಿಯೇಶನ್‌ನ ಸದಸ್ಯನಲ್ಲ. ಕಾಲೇಜು ಆಡಳಿತ ಮಂಡಳಿಯಲ್ಲೂ ನಾನು ಸದಸ್ಯನಲ್ಲ. ಇನ್ನು ದೇವಾಲಯ. ಅದರಲ್ಲೂ ನಾನು ಸದಸ್ಯನಲ್ಲ. ನಮಗೆ ಕೊನೆಗೂ ದೇವಾಲಯ ಸಿಕ್ಕಿತು. ದೇವರನ್ನು ಕಂಡು, ಮುಟ್ಟಿ ನಮಸ್ಕರಿಸಿದೆವು. ಇಷ್ಟೆಲ್ಲ ಆಗುವ ಹೊತ್ತಿಗೆ ಚಿಕ್ಕ ಪ್ರಾಯದ ವಿಧವೆಯರ ತಲೆಯನ್ನು ಬೋಳಿಸಿ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದ ನೆನಪಿನ ಚಿತ್ರಗಳು ಕಣ್ಣ ಮುಂದೆ ಹರಿದವು. ಅವರೂ ಕೂಡ ಪರಮಾತ್ಮನ ಮಕ್ಕಳೇ. ಒಂಭತ್ತು ತಿಂಗಳ ಕಾಲ ಹೆತ್ತು ಹೊತ್ತು, ಮಕ್ಕಳಿಗೆ ದಾರಿದೀಪ ತೋರಿಸುವ ದೇವತೆ ಹೆಣ್ಣು. ಗಂಡ ಸತ್ತ ಮೇಲೆ ಅವರು ಅಪವಿತ್ರ ಹೇಗಾಗುತ್ತಾರೆ? ಯೋಚಿಸಿದೆ. ದೇಶದಲ್ಲೇ ಪ್ರಥಮ ಬಾರಿಗೆ ಎಲ್ಲ ಜಾತಿಗಳ ೫ ಸಾವಿರ ವಿಧವೆಯರನ್ನು ಸೇರಿಸಿ ದೇವಾಲಯದಲ್ಲಿ ಅವರ ಕೈಯಿಂದಲೇ ಚಂಡಿಕಾಹೋಮ ಮಾಡಿಸಿದೆ. ಅವರ ಕೈಗಳಿಗೆ ಬಳೆ ತೊಡಿಸುವ, ಹಣೆಗೆ ಕುಂಕುಮವನ್ನು ದೇವರೆದುರೇ ಇರಿಸುವ ಕೆಲಸ ಮಾಡಿದೆ. ಇಡೀ ದೇಶವೇ ಈ ಕಾರ್ಯಕ್ಕೆ ಬೆಂಬಲ ಕೊಟ್ಟಿತು.
ಮರುವರ್ಷ ಪರಿಶಿಷ್ಟ ಜಾತಿಯ ವಿಧವೆ ಶಿಕ್ಷಕಿಯನ್ನು ಕರೆಸಿ ಅವರಿಗೆ ನಾನೇ ಪಾದಪೂಜೆ ಮಾಡಿ ಆರತಿಯನ್ನು ಬೆಳಗಿದೆ. ಅದಾದ ನಂತರ ಹಿಂದುಳಿದ ವರ್ಗದ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ವಿಧವೆಯರನ್ನು ಅರ್ಚಕಿಯರನ್ನಾಗಿ ನೇಮಕ ಮಾಡಿದೆ. ಗರ್ಭಗುಡಿಯಲ್ಲಿ ನಿಂತು ಶಿವನಿಗೆ ಅವರೇ ತಮ್ಮ ಕೈಯಾರೆ ಪೂಜೆ ಮಾಡಿದರು. ಇದಾದ ಮೇಲೆ ಮಥುರಾದಲ್ಲಿ ವಿಧವೆಯರಿಗೆ ಹೋಳಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಯಿತು. ಪಾಂಡವಪುರದಲ್ಲಿ ಪರಿಶಿಷ್ಟ ವರ್ಗದ ವಿಧವೆಯರನ್ನು ಅರ್ಚಕಿಯರನ್ನಾಗಿ ನೇಮಿಸಿದರು. ದೇಶಾದ್ಯಂತ ಅನೇಕ ಕಡೆಗಳಲ್ಲಿ ಪರಿವರ್ತನೆಯ ಯುಗ ಆರಂಭವಾಯಿತು.
ಈಗ ನಾನು ರಾತ್ರಿಯ ಏಕಾಂತದಲ್ಲಿ ಕುಳಿತು ಯೋಚಿಸುತ್ತೇನೆ. ಇಷ್ಟೆಲ್ಲ ಕೆಲಸಗಳು ಹೇಗಾದವು? ದಟ್ಟ ದಾರಿದ್ರ್ಯದಲ್ಲಿ ಹುಟ್ಟಿದ್ದರೂ ಇಡೀ ದೇಶದ ಅರ್ಥ ಖಾತೆಯೇ ನನ್ನ ಅಧೀನಕ್ಕೆ ಬಂದಿತ್ತು. ಆದರೆ ಒಂದು ಲೋಟ ನೀರು, ಒಂದೇ ಒಂದು ಬಾಳೆಹಣ್ಣನ್ನು (ಆಮಿಷ) ನನಗೆ ಕೊಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಮಂತ್ರಿಯಾಗಿ ಪ್ರವಾಸದಲ್ಲಿದ್ದಾಗ ಬರೀ ಬಿಸಿನೀರು- ಬಿಸ್ಕತ್ತೇ ನನಗೆ ಆಹಾರ. ಭಾರಿ ಭಕ್ಷ್ಯ ಭೋಜನಗಳನ್ನು ನೀಡಲು ಅಧಿಕಾರದಲ್ಲಿದ್ದವರು ಮುಂದೆ ಬರುತ್ತಿದ್ದರು. ಅದನ್ನು ಕಣ್ಣೆತ್ತಿಯೂ ನೋಡದೆ ಮುಂದೆ ಸಾಗುತ್ತಿದ್ದೆ. ಟಾಟಾ, ಬಿರ್ಲಾ, ಇದೇ ಅಂಬಾನಿಗಳ ಕೊಡುಗೆಗಳು, ಹಣ್ಣು ಹಂಪಲುಗಳ ಬುಟ್ಟಿಗಳು ಗೇಟ್‌ನಿಂದಲೇ ವಾಪಸ್ ಹೋಗುತ್ತಿದ್ದವು. ಈಗ ನಾನು ಯಾರಿಗೂ ಹೆದರದೆ ಮಾತನಾಡಲು ಸಾಧ್ಯವಾಗಿರುವುದು ಅಂತಹ ವ್ಯಕ್ತಿತ್ವದಿಂದಲೇ. ರಾಜಕಾರಣಿಯಾದವನು ಯಾವಾಗಲೂ ಪ್ರಾಮಾಣಿಕನಾಗಿರಬೇಕು.

 

billavaswarriors.com

***B Janardhana Poojary***


Related Posts

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »