14-5-2022 ರಂದು ವಿಶ್ವಬಿಲ್ಲವ ಮಹಿಳಾ ಸಂಘದ ವಾರ್ಷಿಕ ಕಾರ್ಯಕ್ರಮ ಅಂಗವಾಗಿ ನಡೆದ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಕುದ್ರೋಳಿ ಶ್ರೀ ಗೋಕರ್ಣನಾಥ ಸನ್ನಿಧಿಯಲ್ಲಿರು ಕೊರಗಪ್ಪ ಮೆಮೋರಿಯಲ್ ಹಾಲ್ ನ ಸಭಾಂಗಣದಲ್ಲಿ ಜರುಗಿತು.
ಸಂಘದ ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್ ರವರು ಪದಾಧಿಕಾರಿಗಳೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕುಮಾರಿ ಅಖಿಲಾರವರ ಸ್ವಾಗತ ನೃತ್ಯದ ಬಳಿಕ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಗುಣಶ್ರೀ ಹಾಗೂ ಗಾಯತ್ರಿರವರು ಗುರುಸ್ಮರಣೆ ಮಾಡಿದರು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ದುಬೈನಲ್ಲಿ ಶಿಪ್ಪಿಂಗ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಶ್ರೀಮತಿ ಪೂರ್ಣಿಮ ಜಿತೇಂದ್ರ ಕೊಟ್ಯಾನ್ , ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾಗಿರುವ ಎಚ್.ಎಸ್. ಸಾಯಿರಾಂ, ಸಮಾಜಸೇವಕರಾದ ಪ್ರೊ.ಹಿಲ್ಡಾ ರಾಯಪ್ಪನ್, ಅನುಮಪ ಪತ್ರಿಕೆಯ ಸಂಸ್ಧಾಪಕಿ ಶಹನಾಜ್ ಎಂ, ಉಪಸ್ಥಿತರಿದ್ದರು.ವಿಜಯ ಅರುಣ್ ರವರು ಅತಿಥಿಗಳನ್ನು ಸ್ವಾಗತಿಸಿ,ಡಾ.ಅನಸೂಯ ಬಿ.ಸಾಲ್ಯಾನ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ಪೂರ್ಣಿಮಾ ಜಿತೇಯ ಕೊಟ್ಯಾನ್ ರವರು ಮಾತನಾಡುತ್ತಾ ದೇಶದಲ್ಲಿ ಸಾಧನಾಶೀಲ ಮಹಿಳೆಯರ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ ಅವರ ಗುರಿ ಸಾಧನೆಗಳು ನಮಗೆ ಪ್ರೇರಣೆಯಾಗಬೇಕು , ಸಂಘಟನೆಯಲ್ಲಿ ಮಹಿಳೆಯ ಬಹುಮುಖ್ಯ ಪಾತ್ರವೇನು. ಸಂಘದಲ್ಲಿ ಮಹಿಳೆಯರು ಇನ್ನೊಬ್ಬರ ಆಸ್ತಿ, ಅಂತಸ್ತು, ಇನ್ನೊಬ್ಬರ ವೈಯಕ್ತಿಕ ವಿಷಯಗಳ ಬಗ್ಗೆ ಯೋಚಿಸದೆ, ಸಂಘಟನೆಗೆ ಹಾಗೂ ಸಮುದಾಯದ ಮಹಿಳೆಯರ ಏಳಿಗೆಯ ಬಗ್ಗೆ ಮಾತ್ರ ಚಿಂತಿಸುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾದ ಮಕ್ಕಳಿಗೆ ಪ್ರೋತ್ಸಾಹ ಸಿಗಬೇಕು ವಿನಾ ಅವರನ್ನು ವೇದಿಕೆಗೆ ಕರೆದು ಅದ್ದೂರಿಯಾಗಿ ಶಾಲು, ಸನ್ಮಾನ ಹೊದಿಸಿ ಅವರ ತಲೆಯೊಳಗೆ ತಾನು ಇತರರಿಗಿಂತ ಭಿನ್ನ ಎಂಬ ವಿಚಾರವನ್ನು ತುಂಬುವಂತಾಗಬಾರದು ಎಂದರು. ಬಳಿಕ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ ವಿತರಿಸಿದ ಎಚ್.ಎಸ್.ಸಾಯಿರಾಂ ಸಂಘದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಶುಭವನ್ನು ಹಾರೈಸಿದರು. ನಂತರ ಡಿಗ್ರಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದ ಪ್ರಜ್ಞಾ ಸಲಹಾ ಕೇಂದ್ರದ ಸಂಸ್ಥಾಪಕರಾದ ಹಿಲ್ಡಾ ರಾಯಪ್ಪನ್ ಮಾತನಾಡಿ ಬಾಲ್ಯದಲ್ಲಿ ತಾನು ಬಿಲ್ಲವ ಸಮುದಾಯದ ಮನೆಯಲ್ಲಿ ಬೆಳೆದ ರೀತಿ, ಸಂಪ್ರದಾಯ ಬಧ್ದರಾಗಿ ತಾನು ಈ ಮಟ್ಟದಲ್ಲಿ ಬೆಳೆಯಲು ಕಾರಣರಾದ ಪಾಂಡೇಶ್ವರದ ಬಿಲ್ಲವ ಸುತ್ತಿನ ಮನೆಯವರೊಂದಿಗಿನ ಸವಿನೆನಪನ್ನು ಹಂಚಿಕೊಂಡರು.
ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಗಮನಿಸಿ ಮಹಿಳೆಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಸಾಂತ್ವನ ಕೇಂದ್ರ ಸ್ಥಾಪಿಸಿ ನೋವಿಗೆ ದ್ವನಿಯಾಗಲು ಕರೆನೀಡಿದರು.ಇನ್ನುಳಿದ ಇತರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಿದ ಅನುಪಮ ಪತ್ರಿಕೆಯ ಸಂಪಾದಕಿ ಶಹನಾಜ್ ಎಂ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವವನ್ನು ಒಪ್ಪಿಕೊಂಡು ಪೂಜನೀಯ ಸ್ಥಾನ ಕೊಟ್ಟ ತನ್ನ ತಾಯಿಯ ಬಗ್ಗೆ ನೆನೆಪಿಸಿಕೊಂಡು ಹಾಗೆಯೇ ಕೇಂದ್ರದ ಮಾಜಿ ಸಚಿವರಾದ ಶ್ರೀ ಜನಾರ್ದನ ಪೂಜಾರಿಯವರು ತನ್ನ ಪತಿಯ ತಾಯಿಯ ಒಡನಾಟದಲ್ಲಿ ಬೆಳೆದು ಬಂದ ಬಗ್ಗೆಯ ಬಗ್ಗೆ ಹಾಗೂ ಆ ದಿನಗಳಲ್ಲಿ ಜಾತಿ, ಮತ,ಭೇದ ಇಲ್ಲದೆ ಬದುಕಿದ ರೀತಿಯನ್ನು ಕೊಂಡಾಡಿದರು. ಹಿಂದು , ಮುಸ್ಲಿಂ, ಕ್ರಿಶ್ಚನ್ ಎಂಬ ಭೇದವಿಲ್ಲದೆ ಎಲ್ಲ ಧರ್ಮವನ್ನು ಪ್ರೀತಿಸಿ ಗೌರವಿಸಿದ ಧೀಮಂತ ವ್ಯಕ್ತಿ ಸನ್ಮಾನ್ಯ ಶ್ರೀ ಜನಾರ್ದನ ಪೂಜಾರಿಯವರು ಎಂದು ಹೆಮ್ಮೆಯಿಂದ ನುಡಿದರು. ಇಂದು ವಿಶ್ವಬಿಲ್ಲವ ಮಹಿಳಾ ಸಂಘವು ಈ ವೇದಿಕೆಯಲ್ಲಿ ನಾರಾಯಣ ಗುರುಗಳ ತತ್ವವನ್ನು ಪಾಲಿಸಿಕೊಂಡು ಮುನ್ನಡೆದಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಣೇತ್ರದ ಸಭಾಂಗಣದಲ್ಲಿ ನಡೆದ ಈ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಇಂದು ನಾನು ಸಾಮರಸ್ಯದ ಬದುಕಿಗೆ ಅರ್ಥ ಕೊಟ್ಟ ಅರ್ಧ ಭಾರತವನ್ನು ಇಲ್ಲಿ ಕಂಡಂತಾಗಿದೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಕ್ಷರಾಗಿದ್ದ ಉರ್ಮಿಳಾ ರಮೇಶ್ ಕುಮಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಮಹನೀಯರು ಮಾಡುವ ಸಮಾಜಸೇವೆಯನ್ನು ಶ್ಲಾಘಿಸುತ್ತ ನಮ್ಮೀ ಸಂಘ ಕೂಡ ಎಲ್ಲರ ಸಹಕಾರವನ್ನು ಪಡೆಯುತ್ತ ಸಮಾಜದಲ್ಲಿ ಆರ್ಥಿಕವಾಗಿ ಕಂಗಲಾಗಿದ್ದ ಆಶಕ್ತರನ್ನು ಮೇಲೆತ್ತಿ ಸಶಕ್ತರನ್ನಾಗಿ ಮಾಡುವ ಮಾಡಲು ಕಂಕಣ ಬಧ್ದರಾಗಿ ಈ ಸಂಘವನ್ನು ವಿಶ್ವಮಟ್ಟದಲ್ಲಿ ಬೆಳೆಸಿ ವಿಶ್ವದಾದ್ಯಂತ ನೆಲೆಸಿರುವ ಬಿಲ್ಲವರ ಸಹಕಾರ ಪಡೆದು ನಮ್ಮೀ ಸಂಘದ ಹೆಜ್ಜೆ ಗುರುತನ್ನು ಶಾಶ್ವತವಾಗಿರಿಸಲು ಇಟ್ಟ ಹೆಜ್ಜೆ ಹಿಂದೆ ಇಡದೆ ಸಂಘದ ಸದಸ್ಯರೆಲ್ಲರು ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಮುಂದೆ ಮುಂದೆ ಸಾಗೋಣ ಎಂದರು. ಸಂಘದ ಸಲಹೆಗಾರರಾದ ಕೆ.ಎ.ರೋಹಿಣಿಯವರು ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಸುಜಾತ ಸುವರ್ಣ ಕೊಡ್ಮಾಣ್ ಇವರು ಧನ್ಯವಾದ ಸಮರ್ಪಿಸಿದರು.