ಬಂಟ್ವಾಳ: ಶಬರಿಮಲೆಗೆ ಪಾದಯಾತ್ರೆಯಲ್ಲಿ ಹೊರಟ ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳ ತಂಡಕ್ಕೆ ದಾರಿ ಮಧ್ಯೆ ಸಿಕ್ಕಿ ಶ್ವಾನವೊಂದು ಅವರ ಜತೆಗೆ ಕಿಲೋ ಮೀಟರ್‌ಗಟ್ಟಲೆ ಹೆಜ್ಜೆ ಹಾಕಿ, ಅವರು ವಾಸ್ತವ್ಯ ಹೂಡಿದ ಸ್ಥಳದಲ್ಲೇ ನಿಂತು, ಅವರು ಕೊಟ್ಟ ತಿಂಡಿ ತಿನಸುಗಳನ್ನು ತಿಂದು, ಅವರ ತಂಡದ ಪ್ರೀತಿಯ “ಮಲ್ಲಿ’ಯಾಗಿ ಇದೀಗ ವ್ರತಾಧಾರಿಗಳು ಅದನ್ನು ಊರಿಗೆ ತರುವುದಕ್ಕೆ ನಿರ್ಧರಿಸಿದ್ದಾರೆ.
ಮಣಿನಾಲ್ಕೂರು ಗ್ರಾಮದ ಬಡೆಕೊಟ್ಟಿನಿಂದ ಡಿ. 11ರಂದು ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳ ತಂಡವೊಂದು ಪಾದಯಾತ್ರೆಯ ಮೂಲಕ ಶಬರಿಮಲೆಗೆ ಹೊರಟಿತ್ತು. ತಂಡವು ಎಟ್ಟುಮಾನೂರ್ ತಲುಪಿದ ಸಂದರ್ಭದಲ್ಲಿಅವರ ಜತೆ ಶ್ವಾನವೊಂದು ಹೆಜ್ಜೆ ಹಾಕುವುದನ್ನು ಕಂಡರು. ಬಳಿಕ ಅವರು ಅದಕ್ಕೆ ತಿಂಡಿ ಹಾಕಲು ಆರಂಭಿಸಿದ್ದು, ಅಂದಿನಿಂದ ನಿರಂತರವಾಗಿ ಹಲವು ದಿನಗಳ ಕಾಲ ಆ ತಂಡದ ಜತೆಗೆ ಶ್ವಾನ ಹೆಜ್ಜೆ ಹಾಕಿದೆ.
ದಾರಿ ಕಾಯುವ ಶ್ವಾನ
ಬೆಳಗ್ಗೆ ಇವರ ಜತೆಗೆ ಹೆಜ್ಜೆ ಹಾಕುವ ಶ್ವಾನವು ಮುಂದೆ ಹೋಗಿ ನಿಂತು ಇವರು ಬರುವುದನ್ನೇ ಕಾಯುತ್ತದೆ. ಇವರ ತಂಡ ಹತ್ತಿರಕ್ಕೆ ಬಂದ ಬಳಿಕ ಮತ್ತೆ ಮುಂದೆ ಸಾಗುತ್ತದೆ. ಹೀಗೆ ಸಾಗುತ್ತಿರುವ ವೇಳೆ ಮಣ್ಣಕಟ್ಟ ಬದ್ರಿ ದೇವಸ್ಥಾನದ ಬಳಿ ಶ್ವಾನ ತಪ್ಪಿ ತಮಿಳುನಾಡಿನ ತಂಡವೊಂದರ ಜತೆ ಸೇರಿತ್ತು. ಬಳಿಕ ಅದು ಇವರ ತಂಡ ಅಲ್ಲ ಎಂದು ತಿಳಿದು ಮತ್ತೆ ಇವರನ್ನು ಹುಡುಕಿಕೊಂಡು ಬಂದಿತ್ತು ಎಂದು ವ್ರತಾಧಾರಿಗಳು ವಿವರಿಸುತ್ತಾರೆ.
ಮತ್ತೊಂದು ಶ್ವಾನ ಬಂದಿತ್ತು!
ಪಾಲಾದ ಬಳಿಕ ಮತ್ತೊಂದು ದೊಡ್ಡ ಗಾತ್ರದ ಶ್ವಾನವೊಂದು ಇವರ ತಂಡದ ಜತೆಗೆ ಹೆಜ್ಜೆ ಹಾಕಲು ಆರಂಭಿಸಿತ್ತು. ಆದರೆ ಬಳಿಕ ಅದಕ್ಕೆ ನಡೆದು ಆಯಾಸವಾಗಿ ಕಾಲನೋವು ಆರಂಭಗೊಂಡಿತ್ತು. ವ್ರತಾಧಾರಿಗಳು ದೇವಸ್ಥಾನದಲ್ಲಿ ನಿಂತ ಸಂದರ್ಭ ಅದನ್ನು ಆರೈಕೆ ಮಾಡಿ ನೋವಿಗೆ ಸ್ಟ್ರೇ ಔಷಧ ಹಾಕಿದ್ದರು. ಆದರೆ ಸ್ವಲ್ಪ ದೂರ ಇವರ ಜತೆ ಸಾಗಿದ ಆ ಶ್ವಾನ ಮುಂದೆ ಕಣ್ಮರೆಯಾಗಿತ್ತು.
ಊರಿಗೆ ತರುವುದಕ್ಕೆ ನಿರ್ಧಾರ
ಜ. 3ರಂದು ಅಯ್ಯಪ್ಪ ವ್ರತಾಧಾರಿಗಳ ತಂಡ ಪಂಪೆಗೆ ತಲುಪಿದ್ದು, ಸ್ವಾಮಿಯ ಸನ್ನಿಧಿಗೆ ತೆರಳಿದ್ದಾರೆ. ತಂಡದ ಚೇತನ್ ಗುರುಸ್ವಾಮಿ ಅದನ್ನು ತಮ್ಮ ಊರಿಗೆ ಕರೆದುಕೊಂಡು ಬರುವುದಾಗಿ ನಿರ್ಧರಿಸಿ, ಹೀಗಾಗಿ “ಮಲ್ಲಿ’ಯನ್ನು ಹೊಟೇಲೊಂದರ ಬಳಿ ಕಟ್ಟಿ ಹಾಕಿ ದ್ದಾರೆ. ಸನ್ನಿಧಿಗೆ ಹೋಗಿ ಹಿಂದಿರು ವವರೆಗೆ ನೋಡಿಕೊಳ್ಳಿ, ಸ್ಥಳದ ಬಾಡಿಗೆ ಯನ್ನೂ ಕೊಡುತ್ತೇವೆ ಎಂದು ಹೊಟೇಲ್‌ನವರಲ್ಲಿ ವಿನಂತಿಸಿದ್ದಾರೆ.