ತಾಯ ಹಾಲಿಗಿಂತಲೂ ‘ಇಪ್ಪೆ’ ಹಣ್ಣಿನ ರಸವೇ ಶ್ರೇಷ್ಠ!
ನೀವಿದನ್ನು ನಂಬಲೇಬೇಕು! HONEY TREE ಎಂದು ಇಂಗ್ಲೀಷ್ ನಲ್ಲಿ ಕರೆಯಲ್ಪಡುವ ಮಾದಕ ಅಂಶಗಳುಳ್ಳ, ಆದಿವಾಸಿಗಳು ಪೂಜಿಸುವ ಒಂದು ಪವಿತ್ರ ಮರ. BUTTER TREE ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಇಪ್ಪೆ ಮರ ಎಂದು, ತಮಿಳಿನಲ್ಲಿ ಇಲ್ಲಿಪ್ಪೆ, ತೆಲುಗಿನಲ್ಲಿ ಇಪ್ಪಿ ಎಂದು, ಹಿಂದಿಯಲ್ಲಿ ಮೊಹ್ವ, ಸಂಸ್ಕ್ರತದಲ್ಲಿ ಮಧೂಕ, ಮಂಗಳೂರು ಮತ್ತು ಉಡುಪಿ ಆಸುಪಾಸಿನಲ್ಲಿ ‘ನಾನಿಲ್ ಮರ’ ಎಂದೂ ಕರೆಯುತ್ತಾರೆ. ಮೋಹ, ಮಹಲ, ಇಲುಪ, ಪೂನಮ, ಮಹುವಾ ಎಂದೂ ನಾನಾ ಭಾಷೆಗಳಲ್ಲಿ ಕರೆಯುವುದುಂಟು. ಇದರ ವೈಜ್ಙಾನಿಕ ಹೆಸರು ‘ಬ್ಯಾಸ್ಸಿಯ ಲ್ಯಾಟಿಫೂಲಿಯಾ’. ಇದು ‘ಸಪೋಟೇಸಿ’ ಕುಟುಂಬ ವರ್ಗಕ್ಕೆ ಸೇರಿದೆ.
ಇದು ಎಲೆ ಉದುರುವ ಮರದ ಜಾತಿಗೆ ಸೇರಿದೆ. ಸುಮಾರು 12 ರಿಂದ 20 ಮೀ ಎತ್ತರ ಬೆಳೆಯುವ ಇಪ್ಪೆ ಮರ, ಒಣ ಹವೆ ಮತ್ತು ತೇವ ಹವೆಯ ಕಾಡುಗಳಲ್ಲಿ ಬಿಡಿ ಬಿಡಿಯಾಗಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಪಶ್ಚಮ ಘಟ್ಟದ ಕಾಡು ಹೊಳೆಯ ಸಮೀಪದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ತೊಗಟೆ ತಿಳಿ ಕಪ್ಪು ಅಥವಾ ಬೂದು ಬಣ್ಣದಿಂದ ಕೂಡಿದ್ದು, ಗೆಲ್ಲುಗಳು ಚದುರಿ ಚದುರಿದಂತೆ ಇದ್ದು ನೋಡಲು ತುಂಬಾ ಆಕರ್ಷಕವಾಗಿರುತ್ತದೆ.
ಚಳಿಗಾಲ ಬಂತೆಂದರೆ ಈ ಮರ ವಿಶಿಷ್ಟವಾದ ಕಟು ಮಧುರ ಹೂವಿನ ಪರಿಮಳವನ್ನು ಸೂಸುತ್ತದೆ. ನೇರವಾದ ಕಾಂಡದ ಮೇಲೆ ಕೊಂಬೆಗಳು ಮತ್ತು ತುದಿ ಚೂಪಾಗಿರುವ ಎಲೆಗಳು – ಛತ್ರಿಗಳು ಬಿಡಿಸಿಟ್ಟಂತೆ ಹರಡಿಕೊಂಡಿರುತ್ತದೆ. ವರ್ಷಕ್ಕೊಮ್ಮೆ ಎಲೆ ಉದಿರುವ ಈ ಮರ, ಹೊಸ ಚಿಗುರು ಬಂದಾಗ ತಾಮ್ರಗೆಂಪು ಬಣ್ಣದಿಂದ ನಳನಳಿಸುತ್ತದೆ. ಈ ಸಮಯದಲ್ಲಿ ಬಸ್ತಾರ್ ನ ಆದಿವಾಸಿಗಳು ಮತ್ತು ಮಧ್ಯಪ್ರದೇಶದ ಗೊಂಡ ಆದಿಮಾಸಿಗಳು ಆ ಮರವನ್ನು ಪೂಜಿಸುತ್ತಾರೆ.
ಹೊಸ ಚಿಗುರು ಮಾಗಿ ಎಲೆ ದಪ್ಪಗಾದ ಕೂಡಲೇ ಮರ ಹೂ ಬಿಡಲು ಆರಂಭಿಸುತ್ತದೆ. ಈ ಹೂಗಳು ಮಾಸಲು ಬಣ್ಣವನ್ನು ಹೊಂದಿದ್ದು, ಕೊಂಬೆಯ ತುದಿಯಲ್ಲಿ ಜೋತು ಬಿದ್ದಿರುತ್ತದೆ. ಈ ಹೂವಿನ ಪುಷ್ಪಪಾತ್ರೆಯ ಭಾಗ ಹಣ್ಣಾಗಿ ತಿನ್ನಲು ರುಚಿಯಾಗಿರುತ್ತದೆ. ಹಕ್ಕಿಗಳು ಮತ್ತು ಕಾಡು ಪ್ರಾಣಿಗಳಿಗೂ ಈ ಹಣ್ಣು ಬಹಳ ಪ್ರಿಯ. ಇಪ್ಪೆ ಹಣ್ಣಿನಿಂದ ಆದಿವಾಸಿಗಳು ಹೆಂಡವನ್ನು ತಯಾರಿಸುತ್ತಾರೆ. ಇದರ ಬೀಜದಿಂದ ಎಣ್ಣೆ ತೆಗೆದು ಅಡುಗೆಗೆ ಉಪಯೋಗಿಸುತ್ತಾರೆ. ಕಾಡಿನಲ್ಲಿ ಆಹಾರಕ್ಷಾಮ ಉಂಟಾದಾಗ ಆದಿವಾಸಿಗಳಿಗೆ ಈ ಮರದ ಹೂವು ಹಣ್ಣುಗಳೇ ಆಹಾರ. ಗೊಂಡ ಆದಿವಾಸಿಗಳಲ್ಲಿ ಚಳಿಗಾಲದಲ್ಲಿ ಮಗು ಜನಿಸಿದರೆ, ತಾಯ ಹಾಲಿಗೂ ಮೊದಲು ಇಪ್ಪೆ ಹಣ್ಣಿನ ರಸವನ್ನು ನೆಕ್ಕಿಸುತ್ತಾರೆ. ಯಾಕೆಂದರೆ ಅದು ಆದಿವಾಸಿಗಳ ಪಾಲಿನ ಪವಿತ್ರ ಮತ್ತು ಆರಾಧನೀಯ ಮರ.
(ಸಂಗ್ರಹ)
PC: Dinesh bangera irvattur