ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ದೈನಂದಿನ ಪ್ರಕರಣ ಏರುಗತಿಯಲ್ಲೇ ಸಾಗುತ್ತಿದೆ. ಇದಕ್ಕಾಗಿ ಶುಕ್ರವಾರದಿಂದ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನಿಯಮಾವಳಿಯ ಜೊತೆ ವಾರಾಂತ್ಯ ಕರ್ಪ್ಯೂ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಇದಕ್ಕೂ ಮುಂಚೆ ರಾಜ್ಯದ ನಿಯಮಾವಳಿಗಳು ಜಾರಿಯಲ್ಲಿತ್ತು.
ಸೋಂಕಿನ ಹೆಚ್ಚಳದಿಂದ ಈಗಾಗಲೇ ಕರಾವಳಿಯ ಆಸ್ಪತ್ರೆಗಳಲ್ಲಿ ಈಗಾಗಲೇ ಬೆಡ್ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಆಕ್ಸಿಜನ್ ಕೊರತೆಯ ಮದ್ಯೆ ಐಸಿಯು – ವೆಂಟಿಲೇಟರ್ ಹೊಂದಿಸುವ ಪ್ರಯತ್ನ ಸಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಹೇಗಾದರೂ ಮಾಡಿ ಕೊವೀಡ್ ಪ್ರಸರಣಕ್ಕೆ ಕಡಿವಾಣ ಹಾಕಲೇಬೇಕೆಂಬ ಪ್ರಯತ್ನದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸಾರ್ವಜನಿಕರ ಸಲಹೆಗಳಿಗಾಗಿ ಆಹ್ವಾನ ನೀಡಿದ್ದಾರೆ.
ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಮ್ಮ ಅಧಿಕೃತ ಟ್ವಿಟರ್ ಮೂಲಕ ಟ್ವೀಟ್ ಮಾಡಿ ” ಪ್ರೀತಿಯ ಮಂಗಳೂರಿಗರೇ ಕೋವಿಡ್ -19 ಗೆ ಸರ್ಕಾರ ಈಗಾಗಲೇ ಹೊರಡಿಸಿರುವ ಗೈಡ್ ಲೈನ್ಸ್ ಗಳನ್ನು ಪಾಲಿಸಲು ಮತ್ತು ಇದನ್ನು ಮತ್ತಷ್ಟು ಉತ್ತಮವಾಗಿ ಜಾರಿಗೊಳಿಸಿ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ” ಎಂದು ಹೇಳಿದ್ದಾರೆ.
ಮೇ 9ರ ಭಾನುವಾರ, ಬೆಳಗ್ಗೆ 11ರಿಂದ 12 ಗಂಟೆಯವರೆಗೆ ಮಂಗಳೂರು ಕಮಿಷನರ್ ತಮ್ಮ ಅಧಿಕೃತ ಟ್ವಿಟರ್ ಖಾತೆ ಹಾಗು ಫೇಸ್ ಬುಕ್ ಖಾತೆಯಲ್ಲಿ ಲೈವ್ ಬರಲಿದ್ದು ಈ ವೇಳೆ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಸಾಂಕ್ರಮಿಕದ ಪ್ರಸರಣದ ಕೊಂಡಿ ಮುರಿಯಲು ಸಾರ್ವಜನಿಕರು ಹಾಗೂ ಜಿಲ್ಲಾಡಳಿತ ಕೈ ಜೋಡಿಸಿ ಪ್ರಯತ್ನಿಸಬೇಕಾಗಿದೆ.