ತುತ್ತು ಅನ್ನ ತಿನ್ನೋಕೆ,ಬೋಗಸೆ ನೀರು ಕುಡಿಯೋಕೆ,ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ,ಅಂಗೈ ಅಗಲ ಜಾಗ ಸಾಕುಹಾಯಾಗಿರೋಕೆ ನಾ ಹಾಯಾಗಿರೋಕೆ” ಇದು ಕನ್ನಡದ ಜನಪ್ರಿಯ ಚಲನಚಿತ್ರದ ಒಂದು ಹಾಡಿನ ಸಾಲು. ಹೌದು ಮನುಷ್ಯ ಈಭೂಮಿಯಲ್ಲಿ ಬದುಕಬೇಕಾದರೆ ನೀರು,ಗಾಳಿ, ಆಹಾರ, ಮತ್ತು ಬಟ್ಟೆ ಬೇಕೇ ಬೇಕು.ಆಹಾರವಿಲ್ಲದೆ ಮನುಷ್ಯ ಹೆಚ್ಚು ಕಾಲಬದುಕಲಾರ.ಪ್ರಪಂಚದ ಎಲ್ಲಾ ದೇಶಗಳು ತನ್ನದೇ ಆದ ಆಹಾರ ಪದ್ದತಿಯನ್ನು ಹೊಂದಿರುತ್ತದೆ. ಅದು ಅಲ್ಲಿಯವಾತಾವರಣ,ಸಂಸ್ಕೃತಿ,ಸಂಪ್ರದಾಯ, ಜಾತಿ ಮತ್ತು ಧರ್ಮಗಳಿಗೆ ಅನುಸಾರವಾಗಿ ವಿಕಸಿತವಾಗಿರುತ್ತದೆ.ಉದಾಹರಣೆಗೆ ನಮ್ಮಮಂಗಳೂರಿನ ಜನರು ಬೆಳಿಗ್ಗೆ ಇಡ್ಲಿ ಸಾಂಬಾರು ತಿಂದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜನರು ಸಾಂಡ್ವಿಚ್ಚ್ ತಿನ್ನುತ್ತಾರೆ.ನಾವು ಮೀನುಸಾರು ಮಾಡಿದರೆ ಉತ್ತರ ಕರ್ನಾಟಕದ ಜನರು ಬೇಳೆ ಸಾರು ಮಾಡುತ್ತಾರೆ. ಪ್ರತಿಯೊಂದು ದೇಶದಲ್ಲಿಯೂ ತನ್ನದೇ ಆದ ವಿಶಿಷ್ಠಮತ್ತು ಹೆಸರುವಾಸಿಯಾದ ಆಹಾರ ಪದಾರ್ಥಗಳಿರುತ್ತದೆ.
(Copyrights owned by: billavaswarriors.com )
ಮಧ್ಯಪ್ರಾಚ್ಯ ದೇಶವಾದ ಸೌದಿ ಅರೇಬಿಯಾದ ಪ್ರಮುಖ ಆಹಾರ ಯಾವುದು ಅಂದರೆ ಅದು ಕುಬ್ಬುಸು ಕುಬ್ಬುಸು ಮೈದಾಗೋಧಿಯಿಂದ ತಯಾರಿಸುವ ಒಂದು ರೊಟ್ಟಿಯ ಆಕಾರದ ಆಹಾರ. ಸೌದಿ ಅರೇಬಿಯಾದ ಈ ಮಣ್ಣಲ್ಲಿ ಕಾಲಿಟ್ಟ ದಿನವೇ ನನ್ನಬಾಯಿಗೆ ಹೋದ ಮೊದಲ ಆಹಾರವೇ ಕುಬ್ಬುಸು. ಕುಬ್ಬುಸುನ್ನು ಬಡವರ ಬಂಧು ಎಂದು ಕರೆದರು ತಪ್ಪಾಗಲಾರದು. ಯಾಕೆಂದರೆಅದು ಅತೀ ಕಡಿಮೆ ಬೆಲೆಗೆ ಸಿಗುವ ಮತ್ತು ಅತೀ ಹೆಚ್ಚು ಜನರು ಉಪಯೋಗಿಸುವ ಒಂದು ಉತ್ತಮ ಆಹಾರ. ಕುಬ್ಬುಸುನ್ನು ನನ್ನದೆಆದ ದ್ರಷ್ಟಿ ಕೋನದಲ್ಲಿ ನೋಡಿದಾಗ ನನಗೆ ಅದು ಒಂದು ಬಹಳ ವಿಶಿಷ್ಠವಾದ ಹಾಗೂ ಅದ್ಬುತ ಆಹಾರದಂತೆ ಕಂಡು ಬಂದಿತು.
ತ್ಯಾಗದ ಸಂಕೇತವಾಗಿ ಕುಬ್ಬುಸು : ನಿಮ್ಮಲ್ಲಿ ಈಗ ಒಂದು ಪ್ರಶ್ನೆ ಮೂಡಬಹುದು.ಅದು ಏನೆಂದರೆ ಕುಬ್ಬುಸಿಗೂ ತ್ಯಾಗಕ್ಕೂ ಸಂಬಂಧಏನು ಎಂದು.ಸಂಬಂಧ ಇದೆ.ಸೌದಿಯಲ್ಲಿ ಹೊಟ್ಟೆಪಾಡಿಗಾಗಿ ಉದ್ಯೋಗವನ್ನು ಹರಸಿ ಬಂದಂತಹ ಕಡಿಮೆ ವೇತನ ಪಡೆಯುವಕಾರ್ಮಿಕ ವಲಸಿಗರ ಸಂಖ್ಯೆಯೇ ಅತೀ ಹೆಚ್ಚು. ಅವರು ಈ ಮರುಭೂಮಿಯ ದೊಡ್ಡ ದೊಡ್ಡ ನಿರ್ಮಾಣ ಯೋಜನೆಗಳಲ್ಲಿ ಬಿಸಿಲುಚಳಿಯನ್ನು ಲೆಕ್ಕಿಸದೆ, ಕಿಕ್ಕಿರದ ಕ್ಯಾಂಪ್ ಗಳಲ್ಲಿ ನೆಲೆಸುತ್ತಾ.ದಿನಾ ತಾನು ಒಣ ಕುಬ್ಬುಸು ತಿಂದು ಊರಿನಲ್ಲಿ ತನ್ನನ್ನು ಆಶ್ರಯಿಸಿರುವತನ್ನ ಕುಟುಂಬದ ಸದಸ್ಯರು ಕನಿಷ್ಟ ಪಕ್ಷ ಮೂರು ಹೊತ್ತು ಚೆನ್ನಾಗಿ ಊಟ ಮಾಡಲಿ ಎಂಬ ಉದ್ದೇಶದಿಂದ ತನ್ನ ಎಲ್ಲಾ ಆಸೆಆಕಾಂಕ್ಷೆಗಳನ್ನು ತನ್ನ ಕುಟುಂಬಕ್ಕಾಗಿ ತ್ಯಾಗ ಮಾಡುತ್ತಾರೆ. ಅಂದರೆ ಕುಬ್ಬುಸು ತ್ಯಾಗದ ಒಂದು ಸಂಕೇತ ಎಂದಾಯಿತು ಅಲ್ಲವೇ?
ಆರೋಗ್ಯದ ಸಂಕೇತವಾಗಿ ಕುಬ್ಬುಸು: ಕೈ ತುಂಬಾ ಸಂಬಳ ಇರುವ ಜನರು ಕೂಡಾ ಇಲ್ಲಿ ಕುಬ್ಬುಸಿನ ಮೊರೆ ಹೋಗುತ್ತಾರೆ. ಯಾಕೆಂದರೆ ಕುಬ್ಬುಸು ಒಂದು ಆರೋಗ್ಯದಾಯಕ ಆಹಾರ. ಇಲ್ಲಿನ ಜನರು ಫಾಸ್ಟ್ ಫುಡ್ಡಿನ ದಾಸರಾಗಿ ಮೈಯಲ್ಲಿ ಕೊಬ್ಬನ್ನುಬೆಳೆಸಿಕೊಂಡು,ರಕ್ತದ ಒತ್ತಡ ಹಾಗೂ ಸಕ್ಕರೆ ಕಾಯಿಲೆಗೆ ಗುರಿಯಾಗಿ,ಕೊಬ್ಬು, ಸಕ್ಕರೆ ಕಾಯಿಲೆ ಹಾಗೂ ರಕ್ತದ ಒತ್ತಡಗಳನ್ನು ಕಡಿಮೆಮಾಡಲು ಕುಬ್ಬುಸಿನ ಮೊರೆಹೋಗುತ್ತಾರೆ.ಕೆಲವರು ತನ್ನವರು ಊರಿನಲ್ಲಿ ಸುಖವಾಗಿರಲಿ ಎಂದು ಆಹಾರವಾಗಿ ಕುಬ್ಬುಸುನ್ನುತಿಂದರೆ ಇನ್ನು ಕೆಲವರು ಬೇಕಾ ಬಿಟ್ಟಿ ತಿಂದು ಬೊಜ್ಜು ಕರಗಿಸಲು ಕುಬ್ಬುಸು ತಿನ್ನುವುದು ನಿಜವಾಗಲೂ ಒಂದು ವಿಪರ್ಯಾಸ.
ಕೊನೆಯಾದಗಿ ಒಂದು ಮಾತು, ಆಹಾರ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಅತೀ ಮುಖ್ಯವಾದದ್ದು .ಆಹಾರವನ್ನುಮಿತವಾಗಿ ಹಾಗೂ ಹಿತವಾಗಿ ಸೇವಿಸಬೇಕು. ನಾವಿಂದು ತಿಂದು ತೇಗಿ ಆಹಾರವನ್ನು ಚೆಲ್ಲುತ್ತಾ ಇದ್ದೇವೆ.ಆದರೆ ಇಂದಿಗೂ ಅದೆಷ್ಟೋಜನರು ಒಪ್ಪೋತ್ತೀನ ಊಟಕ್ಕಾಗಿ ಪರಿತಪಿಸುತ್ತಾ ಇದ್ದಾರೆ.ಆದುದರಿಂದ ಆರೋಗ್ಯಕ್ಕೆ ಉತ್ತಮವಾದ ಆಹಾರವನ್ನು ಮಿತವಾಗಿಸೇವಿಸೋಣ.ಸೌದಿಯಲ್ಲಿ ಸಿಗುವ ಕುಬ್ಬುಸು ಅಂತಹ ಆಹಾರಗಳಲ್ಲಿ ಒಂದು.ಇಂತಹ ಒಂದು ಅದ್ಭುತವಾದ ಆಹಾರವನ್ನು ನೀಡಿದ್ದಕ್ಕೆನಿಜವಾಗಿಯೂ ನಾವೆಲ್ಲಾ ಇಲ್ಲಿನ ಮಣ್ಣಿಗೆ ಋಣಿಯಾಗಲೇ ಬೇಕು. ಇಡೀ ಪ್ರಪಂಚವೇ ಬೆಲೆಯೇರಿಕೆಯ ಸುಳಿಗೆ ಸಿಕ್ಕಿದರೂ, ಕೇವಲಒಂದೇ ರಿಯಾಲಿಗೆ ಒಂದು ಕಟ್ಟು ಕುಬ್ಬುಸುನ್ನು ನೀಡುತ್ತಿರುವ ಇಲ್ಲಿನ ಸರಕಾರಕ್ಕೆ ನನ್ನದೊಂದು ಸಲ್ಯೂಟ್.
✍ ಲೇಖನ: ನಾಗರಾಜ್ ಅಂಚನ್ ಬಜಾಲ್