ಕುಂದಾಪುರ: ಹದಿನೇಳು ವರ್ಷಗಳ ಕಾಲ ದೇಶಕ್ಕಾಗಿ ಸೈನಿಕನಾಗಿ ಸೇವೆ ಸಲ್ಲಿಸಿ, ಕಾಫಿ ಎಸ್ಟೇಟ್ ಒಂದರಲ್ಲಿ ಮೆನೇಜರ್ ಆಗಿ ಕೆಲಸ ನಿರ್ವಹಿಸಿದ ವ್ಯಕ್ತಿ ಈಗ ಸಾವಯವ ಅಡಿಕೆ ತೋಟದ ಸಾಧಕ.
ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಅಬ್ಲಿಗಟ್ಟೆ ತೋಟದ ಮನೆಯ ವಾಸು ಪೂಜಾರಿ ಅವರು ತನ್ನ ಹದಿನೆಂಟುವರೆ ವಯಸ್ಸಿಗೆ ಸೇನೆಗೆ ಸೇರ್ಪಡೆಯಾದರು. ಬೆಳಗಾವಿಯಲ್ಲಿ ಕಠಿನ ತರಬೇತಿ ಪಡೆದರು. ಅಟಾರಾ ಮರಾಠಿ (18 ಎಂಎಲ್) ರೆಜಿಮೆಂಟಿನಲ್ಲಿ ಪಂಜಾಬ್, ಜಮ್ಮು, ಉತ್ತರಪ್ರದೇಶ, ಅರುಣಾಚಲ ಪ್ರದೇಶ ಮೊದಲಾದೆಡೆ ಸೇವೆ ಸಲ್ಲಿಸಿದರು. ಶ್ರೀಲಂಕಾಕ್ಕೆ ತೆರಳಿದ ಭಾರತೀಯ ಶಾಂತಿಪಡೆಯ ಯೋಧನಾಗಿ ಅಲ್ಲಿ ಶ್ರೀಲಂಕಾ ಸ್ಪೆಷಲ್ ಸಿವಿಲ್ ಪೋರ್ಸ್ ಸಿದ್ಧಪಡಿಸುವಲ್ಲಿಯೂ ಪಾತ್ರ ವಹಿಸಿದ್ದವರು.
ಸೇನೆಯ ನೆನಪುಗಳೇ ಅದೊಂದು ರೋಚಕ ಅನುಭವ. ರೋಮಾಂಚನಗೊಳಿಸುವ ನೆನಪುಗಳ ಬುತ್ತಿ. ಸೇನೆಯಿಂದ ನಿವೃತ್ತರಾಗಿ ಮಡಿಕೇರಿಯಲ್ಲಿ 10 ವರ್ಷ ಕಾಫಿ ಎಸ್ಟೇಟ್ ಒಂದನ್ನು ನೋಡಿಕೊಳ್ಳುತ್ತಿದ್ದರು.
ಮೂಲತಃ ಸಾಸ್ತಾನದ ಪಾಂಡೇಶ್ವರದವರಾದ ವಾಸು ಪೂಜಾರಿ ಅವರಿಗೆ ತಾಯ್ನಾಡ ಅಕ್ಕರೆ ಕೈಬೀಸಿ ಕರೆಯುತ್ತಿತ್ತು. ಹಾಗಾಗಿ ಬೆಳ್ವೆಯಲ್ಲಿ ಕೃಷಿ ನಡೆಸಲುದ್ದೇಶಿಸಿದರು. ಇದಕ್ಕೆ ನೆರವಾದವರು ಪತ್ನಿ ಪದ್ಮಾವತಿ. ಅವರು ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆಯಲ್ಲಿ ಪ್ರಗತಿಬಂಧು ಒಕ್ಕೂಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾಡು, ಹುಲ್ಲು, ದಿನ್ನೆ ಕಸ ಕಡ್ಡಿ ಬೆಳೆದ ನಾಲ್ಕೆಕರೆ ಜಾಗ. ಹುಲ್ಲಿನ ಮಾಡಿನ ಮನೆ. ಹದಿಮೂರು ವರ್ಷಗಳ ಹಿಂದೆ ಇವಿಷ್ಟೇ ಇದ್ದುದು. ಅಂತಹ ಜಾಗದಲ್ಲಿ ಬಾಳೆ ಬೆಳೆದು, ಬೂದುಕುಂಬಳ ನೆಟ್ಟು, ಅಡಿಕೆ ತೋಟ, ಫಾರಂ ಹುಲ್ಲು ಕೃಷಿ ಮಾಡಿದರು. ಅಡಿಕೆ ಫಸಲು ಬರುವವರೆಗೆ ಇಂತಹ ಸಣ್ಣಪುಟ್ಟ ಆದಾಯ ಹೊಟ್ಟೆ ಹೊರೆಯುತ್ತಿತ್ತು.
ಈಗ 2 ಎಕರೆಯಲ್ಲಿ ಸುಮಾರು 1 ಸಾವಿರದಷ್ಟು ಅಡಿಕೆ. ಮತ್ತೆ ಒಂದು ಎಕರೆಯಲ್ಲಿ ತೆಂಗು, ಕಾಳುಮೆಣಸು. ಮತ್ತುಳಿದ ಜಾಗದಲ್ಲಿ ಮೇವು ಹುಲ್ಲು, ಗೇರು ಹಾಗೂ ಕಾಡು ಮರಗಳು. ತೋಟದ ಪಕ್ಕದಲ್ಲಿ ಸೊಪ್ಪು, ಸೌದೆಗೆಂದೇ ಗಿಡ ನೆಟ್ಟು ಕಾಡು ಬೆಳೆಸಿದ್ದಾರೆ.
ಅಡಿಕೆ ಕೃಷಿಯನ್ನು ಸಾವಯವವಾಗಿ ಮಾಡಿದ್ದು ರಸಗೊಬ್ಬರದ ಸೋಂಕಿಲ್ಲ. ಐದು ಹಸುಗಳನ್ನು ಸಾಕಿ ಹೈನುಗಾರಿಕೆಯನ್ನೂ ಮಾಡುತ್ತಿದ್ದು ಅದರ ಹಟ್ಟಿಯ ನೀರು ಸ್ಲರಿಯಾಗಿ ಮೂರು ತಿಂಗಳಿಗೊಮ್ಮೆ ಪ್ರತಿ ಅಡಿಕೆ ಮರದ ಬುಡಕ್ಕೆ 15 ಲೀ.ನಷ್ಟು ಎರೆಯುತ್ತಾರೆ. ಪಶು ಆಹಾರವಾಗಿ ಅಜೋಲ ಬೆಳೆಸಿದ್ದು, ಕಾಂಪೋಸ್ಟ್ ತೊಟ್ಟಿ, ಎರೆಹುಳ ಗೊಬ್ಬರವನ್ನೂ ಮಾಡಿದ್ದಾರೆ. ಕೃಷಿ ಇಲಾಖೆಯಿಂದ ಇಂತಹ ಕೆಲಸಗಳಿಗೆ ಸಹಾಯ ದೊರೆತಿದೆ ಎನ್ನುತ್ತಾರೆ ವಾಸು ಅವರು. ವೀರಭದ್ರ ಪ್ರಗತಿಬಂಧು ತಂಡದ ಅಧ್ಯಕ್ಷರಾಗಿ, ಬೆಳ್ವೆ ಎ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿರುವ ಪದ್ಮಾವತಿ – ವಾಸು ದಂಪತಿಗೆ ಇಬ್ಬರು ಪುತ್ರಿಯರು. ಹುಲ್ಲಿನ ಮನೆಯಿದ್ದಲ್ಲಿ ಈಗ ತಾರಸಿ ಮನೆಯಿದೆ. ಮನದಲ್ಲಿ ನೆಮ್ಮದಿಯಿದೆ. ಜೈ ಜವಾನ್, ಜೈ ಕಿಸಾನ್ ಎಂಬ ಮಾತಿಗೆ ಇವರು ಅನ್ವರ್ಥ.
ಸೇನೆಯ ಬದುಕು ಬೇರೆಯೇ. ಈಗ ಕೃಷಿ ಬದುಕು ಪ್ರತ್ಯೇಕ. ಎರಡರಲ್ಲೂ ನೆಮ್ಮದಿ ಇದೆ. ಸಾಯವಯ ಕೃಷಿ ಮಾಡಬೇಕೆಂಬ ಒಲವಿನಿಂದಲೇ ಮಾಡಿದ್ದು. ಎಲ್ಲೂ ನಂಬಿದ ಕೃಷಿ ಕೈ ಕೊಟ್ಟಿಲ್ಲ. ಧರ್ಮಸ್ಥಳ ಯೋಜನೆ ಹಾಗೂ ಕೃಷಿ ಇಲಾಖೆಯ ಮಾರ್ಗದರ್ಶನ, ನೆರವಿನಿಂದ ಇನ್ನಷ್ಟು ತೊಡಗಿಸಿಕೊಳ್ಳಲು ಅನುವಾಯಿತು.
ವಾಸು ಪೂಜಾರಿ
ಮಾಜಿ ಸೈನಿಕ, ಸಾವಯವ ಕೃಷಿಕ, ಬೆಳ್ವೆ
9449255063
By- ಲಕ್ಷ್ಮೀ ಮಚ್ಚಿನ