“ಎಲ್ಲಿ ಸ್ತ್ರೀ ಶಕ್ತಿಯನ್ನು ಪೂಜಿಸುತ್ತಾರೋ ಅಲ್ಲಿ ದೈವಿಕ ಶಕ್ತಿ ನೆಲೆಸುತ್ತದೆ” ಎಂಬ ನಂಬಿಕೆ ಇರುವ ದೇಶ ಭಾರತ. ಆದರೆ, ಇಂದು ವಿಶ್ವದಲ್ಲೇ ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ದೇಶ. ಅದಕ್ಕೆ ಕಾರಣ ಇತ್ತೀಚೆಗೆ ಮಹಿಳೆಯರ ಮೇಲೆ ನಡೆಯುತ್ತಿರುವ ಭೀಕರ ಅತ್ಯಾಚಾರಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು.
ಭಾರತದಲ್ಲಿ ಪ್ರತಿ ಒಂದು ಗಂಟೆಗೆ ನಾಲ್ಕು ಅತ್ಯಾಚಾರ ಪ್ರಕರಣ ದಾಖಲಾಗುತ್ತಿದೆಯಂತೆ. ದಾಖಲಾಗದೆ ಉಳಿದ ಅತ್ಯಾಚಾರಗಳನ್ನು ಪರಿಗಣಿಸಿದರೆ ಗಂಟೆಗೆ ೧೦ಕ್ಕೂ ಹೆಚ್ಚು ಅತ್ಯಾಚಾರಗಳಾಗುತ್ತಿವೆ ಎಂಬುದು ಆತ್ಮವನ್ನೇ ಹಿಸುಕಿ ಹಾಕುವ ಕಠೋರ ಸತ್ಯ.
ಭಾರತದಲ್ಲಿ ಪ್ರಮುಖವಾಗಿ ಮಹಿಳೆಯರ ಮೇಲೆ ಮೂರು ವಿಧದ ದೌರ್ಜನ್ಯಗಳು ನಡೆಯುತ್ತಿವೆ. ಮೊದಲನೆಯದು ಲೈಂಗಿಕ ಅತ್ಯಾಚಾರ, ಎರಡನೆಯದು ಧಾರ್ಮಿಕ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಆಗುತ್ತಿರುವ ದೌರ್ಜನ್ಯ, ಮೂರನೆಯದ್ದು ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳಲು ಮಾನವ ಕಳ್ಳ ಸಾಗಣೆ ಮಾಡುವುದು ಕೂಡ ಭಾರತದಲ್ಲಿಯೇ ಹೆಚ್ಚಂತೆ.
ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ಹಾಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತ ಮಹಿಳಾ ಸುರಕ್ಷತೆ ವಿಷಯದಲ್ಲಿ ಮಾತ್ರ ಇಡೀ ವಿಶ್ವದ ಮುಂದೆ ತಲೆ ತಗ್ಗಿಸುವಂತಾಗಿದೆ.
ಮಹಿಳೆಯನ್ನು ಪೂಜ್ಯನೀಯ ಭಾವನೆಯಲ್ಲಿ ಕಂಡು ಪೂಜಿಸುವ ದೇಶ ನಮ್ಮದು ಎನ್ನುವ ಹೆಮ್ಮೆಯ ಮಾತಿಗೆ ಕಳಂಕ ತರುವ ಕಾರ್ಯವನ್ನು ಇಂದು ಕೆಲವೊಂದು ಕಾಮ ಪಿಶಾಚಿಗಳು ಹಾಗೂ ದುಷ್ಟ, ದುಷ್ಕರ್ಮಿಗಳು ಎಸಗಿ ಹೂವಿನಂತಹ ಹೆಣ್ಣಿಗೆ ಮಾತ್ರ ಲೋಕದ ಕಟ್ಟು ಪಾಡು ಎನ್ನುವಂತೆ ಮಾಡಿದ್ದಾರೆ. ಮನೆಯ ಮಗನಿಗೆ ಬುದ್ಧಿ ಹೇಳಿದರೆ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಯಾಕೆಂದರೆ ಇಂದು ಹೆಣ್ಣನ್ನು ಅವಳು ತೊಡುವ ಬಟ್ಟೆಯಿಂದ ಅಳೆಯಲಾಗುತ್ತಿದೆ. ಆದರೆ ಅತ್ಯಾಚಾರ ಆದ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರ ಸಂಖ್ಯೆಯೂ ಹೆಚ್ಚಾಗಿದೆ. ಹೊರದೇಶಗಳಲ್ಲಿ ಅರೆಬರೆ ಬಟ್ಟೆ ತೊಟ್ಟರೂ ಅತ್ಯಾಚಾರದ ಸಂಖ್ಯೆ ಕಡಿಮೆ. ಹಾಗಾದರೆ ಇಲ್ಲಿ ಯಾರ ತಪ್ಪಿದೆ ಹೇಳಿ? ನೋಡುವವರ ದೃಷ್ಟಿ ಸರಿ ಇದ್ದರೆ ಎಲ್ಲವೂ ಪೂಜ್ಯನೀಯ ಅಲ್ಲವೇ? ಅದಕ್ಕಾಗಿ ಮನೆಯಿಂದಲೇ ಇದರ ಅರಿವು ಮೂಡಿಸಬೇಕು. ಮನೆಯಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಿದರೆ ಬೇರೊಬ್ಬರಿಗೆ ಉಪದೇಶ ನೀಡುವ ಅಗತ್ಯ ಬರುವುದಿಲ್ಲ. ಅತ್ಯಾಚಾರ, ಲೈಂಗಿಕ ಶೋಷಣೆಯಂತಹ ಅಮಾನವೀಯ, ದುಷ್ಕೃತ್ಯಗಳು ಸ್ವಲ್ಪ ಮಟ್ಟಿಗೆಯಾದರೂ ಕಡಿಮೆಯಾಗಬಹುದು.