ಗೆಜ್ಜೆಗಿರಿಯಲ್ಲಿ ಒಂದು ದಿನ – ಶ್ರೀಮತಿ ಅನಿತಾ ಪಿ ಪೂಜಾರಿ ತಾಕೊಡೆ
ಊರೆಂದರೆ ಎಂದೂ ಮುಗಿಯದ ಸಂಭ್ರಮ. ಈಬಾರಿ ದೀಪಾವಳಿಯ ಶುಭ ಸಂದರ್ಭದಲ್ಲಿ ಊರಿಗೆ ಹೋಗಿರುವ ಕಾರಣ ಪರಿವಾರ ಹಾಗೂ ಆಪ್ತರೊಂದಿಗೆ ಸೇರಿ ಎಂದಿಗಿಂತ ತುಸು ಹೆಚ್ಚೇ ಸಂಭ್ರಮಿಸಿದೆ.
ಊರಿನಲ್ಲಿದ್ದ ಹತ್ತು ದಿನಗಳಲ್ಲಿ ಸುತ್ತಾಡಿದ್ದು, ಸಂದರ್ಶಿಸಿದ್ದು ಹಚ್ಚ ಹಸಿರಿನ ರಮಣೀಯ ತಾಣಗಳನ್ನೇ. ಕಡಲಕೆರೆ, ಆಗುಂಬೆ ತಿರುವುಗಳು, ತೀರ್ಥಹಳ್ಳಿ, ರಿಪ್ಪನ್ ಪೇಟೆ, ಗೆಜ್ಜೆಗಿರಿ…. ಎಲ್ಲವೂ ಅವಿಸ್ಮರಣೀಯ ನೆನಪುಗಳೇ. ಪ್ರಕೃತಿಯ ಮಡಿಲಲ್ಲಿ ವಿಹರಿಸುವಾಗ ಸಮಾನ ಮನಸ್ಸುಗಳು ಜೊತೆಯಿದ್ದರೆ ಆ ಚೆಲುವಿನ ಆಸ್ವಾದನೆಯು ಇನ್ನಷ್ಟು ವೃದ್ಧಿಸುವುದಂತೂ ಸತ್ಯ.
ಗೆಜ್ಜೆಗಿರಿ ರಮ್ಯ ಮನೋಹರವಾದ ಪ್ರಕೃತಿಯ ಚೆಲುವಿನ ವೈಭವವಿರುವ ಪುಣ್ಯಕ್ಷೇತ್ರ. ಬೆಟ್ಟದ ಮೇಲಿರುವ ಕೋಟಿ ಚೆನ್ನಯರ ಗರಡಿಗಳು. ನಾಗಬನ, ದೇಯಿ ಬೈದ್ಯೆತಿಯ ಸಮಾದಿ, ಕಲಾತ್ಮಕವಾದ ಕೆತ್ತನೆಯಿಂದ ಕೂಡಿರುವ ದೇಯಿ ಬೈದ್ಯೆತಿಯ ಸತ್ಯ ಧರ್ಮದ ಚಾವಡಿ, ವಿಶಿಷ್ಟ ರೀತಿಯಲ್ಲಿ ನವೀಕರಿಸಿದ ಬಾವಿ ಭಕ್ತಾದಿಗಳ ಜೊತೆಗೆ ಪ್ರಕೃತಿಯ ಆರಾಧಕರನ್ನೂ ಸೆಳೆಯುತ್ತದೆ. ಅಲ್ಲಿರುವ ಅರ್ಚಕರಿಂದ ಹಿಡಿದು ಪ್ರತಿಯೊಬ್ಬರೂ ನಮ್ಮನ್ನು ಉಪಚರಿಸುವ ರೀತಿಗೆ ನಿಜಕ್ಕೂ ಬೆರಗಾದೆ.
ಮೊದಲ ಬಾರಿ ನನ್ನ ಪರಿವಾರದವರೊಂದಿಗೆ ಗೆಜ್ಜೆಗಿರಿಯ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದ ಧನ್ಯತಾಭಾವದೊಂದಿಗೆ ಅಲ್ಲಿ ಕಳೆದ ಪ್ರತಿಕ್ಷಣಗಳೂ ನನ್ನೊಳಗೆ ಚಿರವಾಗಿದೆ.