ಬಜ್ಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು 50 ವರ್ಷಗಳ ಕಾಲ ಅದಾನಿ ಕಂಪನಿಗೆ ಹಸ್ತಾಂತರಗೊಳಿಸಿದ ಬಳಿಕ ವಿಮಾನ ನಿಲ್ದಾಣದ ನಾಮಫಲಕದಲ್ಲಿ ಅದಾನಿ ಏರ್‌ಪೋರ್ಟ್ ಎಂದು ಸೇರಿಸಲಾಗಿದೆ.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ನ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಮಿಥುನ್ ರೈ ಅವರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಹೆಸರು ಇಡಲು ಒತ್ತಾಯ ಮಾಡುತ್ತಲ್ಲೇ ಇದ್ದಾರೆ.
ಈ ನಡುವೆ ಈಗ ಮಿಥುನ್ ರೈ ಅವರು ಕೋಟಿ ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ನಾಮಕರಣದ ಬೋರ್ಡ್ ಹಾಕಿಸಿದ್ದಾರೆ. ಹಾಗೆಯೇ, ”ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇನ್ಮುಂದೆ ಕೋಟಿ ಚೆನ್ನಯ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಎಂದು ಕರೆಯಲಾಗುತ್ತದೆ” ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ನೀವು ನಮ್ಮ ಮಾತನ್ನು ಕೇಳುವುದಿಲ್ಲವೇ? ತುಳುವರ ಭಾವನೆಗಳಿಗೆ ನೀವು ಗಮನ ನೀಡುವುದಿಲ್ಲವೇ? ನಮ್ಮ ನಗರದಲ್ಲಿ ಅದಾನಿ ಏರ್‌ಪೋರ್ಟ್ಸ್ ಬೋರ್ಡ್‌ಗಳನ್ನು ಹಾಕಲು ನಾವು ಒಪ್ಪುವುದಿಲ್ಲ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇನ್ಮುಂದೆ ಕೋಟಿ ಚೆನ್ನಯ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಎಂದು ಕರೆಯಲಾಗುತ್ತದೆ” ಎಂದು ಹೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರು ಇಟ್ಟಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ರೂಪದಲ್ಲಿ ಈ ಬೋರ್ಡ್ ಹಾಕಲಾಗಿದೆ. ವಿಮಾನ ನಿಲ್ದಾಣಕ್ಕೆ ತೆರಳುವ ಕೆಂಜಾರು ಸಮೀಪದಲ್ಲಿ ಸುಸ್ವಾಗತ ಕೋಟಿ-ಚೆನ್ನಯ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಎಂದು ಹಾಕಲಾಗಿದ್ದು ಕೆಳ ಭಾಗದಲ್ಲಿ ಮಿಥುನ್ ರೈ ಅವರ ಭಾವಚಿತ್ರವೂ ಇದೆ.