ಮೀಸಲಾತಿ ಕುರಿತಂತೆ ಬಿಲ್ಲವ ಸಮುದಾಯದ ಬೇಡಿಕೆಯನ್ನೂ ಪರಿಗಣಿಸಬೇಕು : ಪ್ರವೀಣ್ ಎಂ ಪೂಜಾರಿ
ಕರ್ನಾಟಕ ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ಬಿಲ್ಲವರು ಮತ್ತು ಈಡಿಗರು ಸಂಬಂಧಿತ ಉಪಪಂಗಡಗಳು ಈ ಹಿಂದಿನಿಂದಲೂ ಮೀಸಲಾತಿ ಪ್ರವರ್ಗ2A ನಿಂದ ಪ್ರವರ್ಗ1 ರಲ್ಲಿ ಅವಕಾಶ ಒದಗಿಸುವಂತೆ ಬೇಡಿಕೆ ಸಲ್ಲಿಸುತ್ತಾ ಬಂದಿದೆ. ಬ್ರಹ್ಮಾವರದಲ್ಲಿ ಜರಗಿದ ಬೃಹತ್ ಬಿಲ್ಲವ ಸಮಾವೇಶದಲ್ಲೂ ಈ ಬೇಡಿಕೆಯನ್ನೂ ಮಂಡಿಸಲಾಗಿತ್ತು.
ಆದರೆ ಯಾವುದೇ ಸೂಕ್ತ ಕ್ರಮಕೈಗೊಳ್ಳದ ರಾಜ್ಯ ಸರ್ಕಾರ ಬಿಲ್ಲವ, ಈಡಿಗ ಸಮುದಾಯವನ್ನು ವಂಚಿಸುತ್ತಿದೆ. ಮೀಸಲಾತಿಯ ಅನುಕೂಲವನ್ನು ಬೇರೆ ಬೇರೆ ಸಮುದಾಯಕ್ಕೆ ಮಾಡ ಹೊರಟಿರುವ ಕುರಿತು ನಮ್ಮ ವಿರೋಧವಲ್ಲ. ಆದರೆ ನಿನ್ನೆಯ ಉದಯವಾಣಿ ಹಾಗೂ ಇತರ ದಿನಪತ್ರಿಕೆ ಮುಖಪುಟ ಸುದ್ದಿ ಗಮನಿಸಿದಾಗ ಸರ್ಕಾರಕ್ಕೆ ಬಿಲ್ಲವ, ಈಡಿಗ ಸಮುದಾಯದ ಕುರಿತಾಗಿರುವ ನಿರ್ಲಕ್ಷ್ಯದ ಕುರಿತು ಸ್ಪಷ್ಟವಾಗುತ್ತದೆ. ಯಾಕೆ ಈ ರೀತಿಯ ತಾತ್ಸಾರ.
ಇತ್ತೀಚಿನ ದಿನಗಳಲ್ಲಿ ಬಿಲ್ಲವರಿಗೆ, ನಮ್ಮ ಆರಾಧ್ಯ ದೈವ ಕೋಟಿ ಚೆನ್ನಯರು, ಹಿರಿಯ ಬಿಲ್ಲವ ಮುಖಂಡ ಜನಾರ್ಧನ ಪೂಜಾರಿಯವರ ಕುರಿತು ಜಗದೀಶ್ ಅಧಿಕಾರಿ ಅವಹೇಳನ ಮಾಡಿದಾಗಲೂ ಆಡಳಿತ ಪಕ್ಷ ಜಗದೀಶ್ ಅಧಿಕಾರಿರವರ ವಿರುದ್ಧ ಕ್ರಮತೆಗೆದುಕೊಳ್ಳದೆ ಇರುವುದು ನೋಡಿದಾಗ ನಾವು ಕೇವಲ ವೋಟ್ ಬ್ಯಾಂಕ್ ಗೆ ಸೀಮಿತ ಅನ್ನುವ ಹಾಗೆ ಅನಿಸುತ್ತಿದೆ ಮತ್ತು ನಮ್ಮ ಸಮುದಾಯವನ್ನು ನಿರ್ಲಕ್ಷಿಸುತ್ತಿರುವುದು ಇನ್ನೊಮ್ಮೆ ಸಾಭೀತಾಗಿದೆ.
ಸರ್ಕಾರ ಬಿಲ್ಲವ, ಈಡಿಗ ಸಮುದಾಯದ ಮೀಸಲಾತಿ ಸಂಪೂರ್ಣ ನಿರ್ಲಕ್ಷಿಸುತ್ತಿದ್ದು, ಇದರ ಬಗ್ಗೆ ನಮ್ಮ ಸಮುದಾಯದ ಜನಪ್ರತಿನಿಧಿಗಳಾಗಲಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಾಗಲಿ ಈ ಕುರಿತು ತುಟಿ ಬಿಚ್ಚದಿರದ್ದು ವಿಷಾದನೀಯ. ಇತರ ಸಮುದಾಯವು ಸರ್ಕಾರಕ್ಕೆ ಹೇಗೆ ಪ್ರಾಮುಖ್ಯವೊ ನಮ್ಮನ್ನೂ ಆದ್ಯತೆಯಲ್ಲಿ ಪರಿಗಣಿಸಬೇಕು. ಮೀಸಲಾತಿ ಸಂಬಂಧಿಸಿ ಎಲ್ಲಾ ಸವಲತ್ತುಗಳು ನಮಗೂ ದೊರಕುವಲ್ಲಿ ಸರ್ಕಾರ ಪ್ರಯತ್ನಿಸಬೇಕೆಂದು ಒತ್ತಾಯಿಸುತ್ತೇವೆ.
ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ)