ಅಂಡರ್ – 19 ಕ್ರಿಕೆಟಿಗೆ ಕಟಪಾಡಿಯ ತೇಜಸ್ವಿನಿ
ಕಟಪಾಡಿ, ಅ, 21: ಬಿಸಿಸಿಐ ನಡೆಸುವ ಅಂಡರ್-19 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಉಡುಪಿ ಜಿಲ್ಲೆಯ ಕಟಪಾಡಿಯ ಕೆಆರ್ ಎಸ್ ಕ್ರಿಕೆಟ್ ಅಕಾಡೆಮಿಯ ತೇಜಸ್ವಿನಿ ಉದಯ್ ಆಯ್ಕೆಯಾಗಿದ್ದಾರೆ.ಇವರು ಆರಂಭಿಕ ಆಟಗಾರ್ತಿ ಮತ್ತು ಮಧ್ಯಮ ವೇಗಿ ಆಗಿದ್ದು,ಭರವಸೆಯ ಬ್ಯಾಟಿಂಗ್ ಮೂಲಕ ರಾಜ್ಯ ತಂಡಕ್ಕೆ ಪ್ರವೇಶ ಮಾಡಿದ್ದಾರೆ.
5ನೇ ವಯಸ್ಸಿನಲ್ಲಿ ಬಿಳಿ ಜೆರ್ಸಿ ತೊಟ್ಟು ಕ್ರಿಕೆಟ್ ಆಡಬೇಕೆಂದು ಹಠಹಿಡಿದ ತೇಜಸ್ವಿನಿಗೆ ಬ್ಯಾಟ್ ಹಿಡಿಯಲು ಹೇಳಿಕೊಟ್ಟು ಶುಭ ಹಾರೈಸಿದ್ದು ಭಾರತದ ಮಾಜಿ ಆಟಗಾರ ಸೈಯದ್ ಕಿರ್ಮಾನಿ ಎಂಬುದು ವಿಶೇಷ.
ಎಂಜಿಎಂ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ತೇಜಸ್ವಿನಿ,ಕಳೆದ ವರ್ಷ ರಾಜ್ಯ ಸಂಭಾವ್ಯ ತಂಡದಲ್ಲಿದ್ದರು.ಆದರೆ ಪ್ರಧಾನ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಈ ವರ್ಷ ಲಭಿಸಿದ ಅವಕಾಶಗಳನ್ನೆಲ್ಲ ಸದುಪಯೋಗಪಡಿಸಿಕೊಂಡರು. ತಂದೆ ಉದಯ್ ಕುಮಾರ್ ಅವರ ಶಿಸ್ತಿನ ತರಬೇತಿ ಕೂಡ ಆಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತು.
ತೇಜಸ್ವಿನಿ ಇತ್ತೀಚೆಗೆ ಶೈನ್ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ 90 ಎಸೆತಗಳಿಂದ ಶತಕ ಬಾರಿಸಿದ್ದರು. ಇದರಲ್ಲಿ 20 ಬೌಂಡರಿ ಸೇರಿತ್ತು. ವಿವಿಧ ಪಂದ್ಯಗಳಲ್ಲಿ 350ಕ್ಕೂ ಹೆಚ್ಚು ರನ್ ಗಳಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ತೇಜಸ್ವಿನಿಯ ಆಯ್ಕೆ ಕರಾವಳಿಯ ಯುವ ಮಹಿಳಾ ಕ್ರಿಕೆಟಿಗರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಸಾಮಾನ್ಯವಾಗಿ ರಾಜ್ಯ ತಂಡಕ್ಕೆ ಬೆಂಗಳೂರು ವಲಯದ ಆಟಗಾರರು ಆಯ್ಕೆಯಾಗುವುದೇ ಹೆಚ್ಚು ಉಡುಪಿ ಜಿಲ್ಲೆಯಿಂದ ಮಹಿಳಾ ಕ್ರಿಕೆಟಿಗರೊಬ್ಬರು ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ.
ಇವರು ಕಟಪಾಡಿಯ ಶ್ರೀಶೈಲ ಹಾಗೂ ಉದಯ್ ಕುಮಾರ್ ದಂಪತಿ ಪುತ್ರಿ.