ಮಂಗಳೂರು: ಕನ್ನಡದ ಜನಪ್ರಿಯ ವಾಹಿನಿ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಹಾಗೂ ಕನ್ನಡದ ಖ್ಯಾತ ದಿನಪತ್ರಿಕೆ ‘ಕನ್ನಡ ಪ್ರಭ’ ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಹೆಲ್ತ್‌ಕೇರ್ ಎಕ್ಸಲೆನ್ಸ್ 2025’ ಅವಾರ್ಡ್‌ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿ ಅವರು ಭಾಜನರಾಗಿದ್ದಾರೆ.
ಬೆಂಗಳೂರಿನ ಡಿ ಲಲಿತ್ ಅಶೋಕ್ ಹೊಟೇಲ್‌ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಮಾರಂಭದಲ್ಲಿ ವೈದ್ಯಲೋಕದಲ್ಲಿ ಸೇವೆ ಸಲ್ಲಿಸಿದ ಅಪ್ರತಿಮ ಸಾಧಕರಿಗೆ ಹೆಲ್ತ್‌ಕೇರ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸಚಿವ ಭೈರತಿ ಸುರೇಶ್, ಮಾಜಿ ಸಚಿವ ಡಾ.ಕೆ ಸುಧಾಕರ್, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಮಣಿಪಾಲ್ ಸಮೂಹ ಆಸ್ಪತ್ರೆ ಮುಖ್ಯಸ್ಥ ಡಾ.ಸುದರ್ಶನ್ ಬಲ್ಲಾಳ್, ಪ್ರದಶ್ರೀ ಪುರಸ್ಕೃತ ಡಾ.ವಿಜಯಲಕ್ಷ್ಮೀ ದೇಶಮಾನೆ ಇದ್ದರು.
ಆರೋಗ್ಯ ಕ್ಷೇತ್ರದಲ್ಲಿ ಡಾ. ಸದಾನಂದ ಪೂಜಾರಿ ಅವರ ಗಮರ್ನಾಹ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೂತ್ರರೋಗ ವಿಭಾಗದ ಮುಖ್ಯಸ್ಥರಾಗಿರುವ ಇವರು ಬಡರೋಗಿಗಳ ಜೀವರಕ್ಷಕ ಎಂದೇ ಹೇಳಿದರೂ ತಪ್ಪಗಲಾರದು.
ಡಾ. ಸದಾನಂದ ಪೂಜಾರಿ ಅವರು ಮಂಗಳೂರಿನಲ್ಲಿ ಮೂತ್ರರೋಗ ತಜ್ಞರಾಗಿ ಹೆಸರುವಾಸಿಯಾಗಿದ್ದಾರೆ. ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ. ಅವರು ಸಮಾಜಮುಖಿ ಸೇವೆಗಾಗಿ ಹೆಸರುವಾಸಿಯಾಗಿದ್ದಾರೆ.
ಡಾ. ಸದಾನಂದ ಪೂಜಾರಿಯವರು ಬೆಳ್ತಂಗಡಿ ತಾಲೂಕಿನ ತೆಂಕ ಕಾರಂದೂರು ಗ್ರಾಮದ ಅಂಗಡಿಬೆಟ್ಟು ಮಾಯಿಲಪ್ಪ ಪೂಜಾರಿ ಮತ್ತು ಶ್ರೀಮತಿ ರೇವತಿ ದಂಪತಿಯ ಸುಪುತ್ರನಾಗಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆ ಬೆಳ್ತಂಗಡಿಯಲ್ಲಿ ಮತ್ತು ಪಿ.ಯು.ಸಿ ಶಿಕ್ಷಣವನ್ನು ಎಸ್.ಡಿ.ಯಂ. ಕಾಲೇಜು ಉಜಿರೆಯಲ್ಲಿ ಪೂರೈಸಿ ಮಂಗಳೂರಿನ ಕೆ.ಎಂ.ಸಿ.ಯಲ್ಲಿ ಎಂ.ಬಿ.ಬಿ.ಎಸ್ ಮತ್ತು ಜನರಲ್ ಸರ್ಜರಿಯಲ್ಲಿ ಎಂ.ಎಸ್. ಪದವಿಯನ್ನು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಪಡೆದಿದ್ದಾರೆ. ಸೂಪರ್ ಸ್ಪೆಷಲಿಸ್ಟ್ ಎಂಸಿಎಚ್ ಯುರಾಲೊಜಿ ಅನ್ನು ಬೆಂಗಳೂರು ಮೆಡಿಕಲ್ ಕಾಲೇಜುನಲ್ಲಿ ಪಡೆದಿರುತ್ತಾರೆ.
ಡಾ. ಸದಾನಂದ ಪೂಜಾರಿ ಅವರು ಈಗಾಗಲೇ 5000 ಕ್ಕಿಂತಲೂ ಹೆಚ್ಚು ಶಸ್ತ್ರ ಚಿಕಿತ್ಸೆಗಳನ್ನು ನಡೆಸಿರುತ್ತಾರೆ. ಇವರ ಸೇವೆಯ ಜೊತೆ ಜೆ.ಸಿ.ಐ ಯಿಂದ ಅತ್ಯುತ್ತಮ ಯಂಗ್ ಇಂಡಿಯನ್ ಅವಾರ್ಡ್. ಕರ್ನಾಟಕ ಸೇವಾ ಪ್ರತಿಷ್ಠಾನದಿಂದ ಸಾಮಾಜಿಕ ಸೇವಾ ಪುರಸ್ಕಾರ, ಪ್ರತಿಷ್ಠಿತ ಐಎಂಎ ಪ್ರಶಸ್ತಿ, ಬೆಸ್ಟ್ ಸರ್ಜನ್ ಅವಾರ್ಡ್ ಹಾಗೂ ಯುವವಾಹಿನಿ, ಲಯನ್ಸ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಲಾಗಿದೆ.