ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ ನಂತರ ಅಲ್ಲಿ ಕೆಲವು ವರ್ಷಗಳ ಕಾಲ ವೃತ್ತಿ ಜೀವನವನ್ನು ಮಾಡಿ. ಇನ್ನೂ ಹೊರದೇಶದಲ್ಲಿ ದುಡಿದು ಹೆಚ್ಚಿನ ಸಂಪಾದನೆ ಮಾಡಿ ಏನಾದರೂ ಸಾಧಿಸಬೇಕು ಎನ್ನುವ ಛಲದಿಂದ ಮುದ್ದಣ್ಣ ಅವರ ಮುಖಾಂತರ ಏಜೆಂಟ್ ಅವರಿಂದ ಹತ್ತು ಜನ ಸದಸ್ಯರೊಂದಿಗೆ ಒಮಾನ್ ದೇಶದ ಮಸ್ಕತ್ ಗೆ ಪ್ರಪ್ರಥಮ ಬಾರಿಗೆ ಶಿಪ್ ಮುಖಾಂತರ 1976 ರಲ್ಲಿ ಆಗಮಿಸಿ ಮಸ್ಕತ್ ನ ಟವಲ್ ಗ್ರೂಪ್ ಆಫ್ ಪರ್ನಿಷಿಂಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ನಂತರ 1984 ರಲ್ಲಿ ತುಳುಕೂಟದ ಸಾಮಾನ್ಯ ಸದಸ್ಯರಾಗಿ ಸೇರಿದರು.
ಅದೇ ವರ್ಷ ಪ್ರೇಮ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಪಾಯಲ್ ಮತ್ತು ಸಾಗರ್ ಎಂಬ ಮಕ್ಕಳನ್ನು ಪಡೆದರು.
ಮಸ್ಕತ್ ನಲ್ಲಿ ಹಲವಾರು ಕಷ್ಟಕರ ಪರಿಸ್ಥಿತಿಯ ಸವಾಲುಗಳನ್ನು ಎದುರಿಸಿ. ನಂತರದ ದಿನಗಳಲ್ಲಿ ಮಸ್ಕತ್ ನಲ್ಲಿಯೇ ಉದ್ಯಮವನ್ನು ಸ್ಥಾಪಿಸಬೇಕು ಎನ್ನುವ ಮಹದಾಸೆಯನ್ನಿಟ್ಟು 1986 ರಲ್ಲಿ ಅಲ್ ನರ್ಗೀಸ್ ಪರ್ನಿಷಿಂಗ್ ಎಂಬ ಕಂಪನಿಯನ್ನು ಪ್ರಾರಂಭಿಸಿ ಯಶಸ್ವಿ ಉದ್ಯಮಿಯಾದರು. ನಂತರ 2005ರಿಂದ ರೆಡ್ ರೋಸ್ ಪರ್ನಿಷಿಂಗ್ ಎಂಬ ಕಂಪನಿಯ ಹೆಸರನ್ನು ಬದಲಾಯಿಸಿದರು. ಇವರ ಉದ್ಯಮಕ್ಕೆ ದಿವಂಗತ ಪಿತಾಂಬರ ಅಳಿಕೆ ಮತ್ತು ಶ್ರೀ ಅಶೋಕ್ ಸುವರ್ಣ ಅವರು ಬೆನ್ನೆಲುಬಾಗಿ ನಿಂತಿದ್ದರು.
ತಾವು ಪ್ರಾರಂಭಿಸಿದ ಕಂಪನಿಯನ್ನು ಯಶಸ್ವಿ ಪಥದತ್ತ ಕೊಂಡೊಯ್ದು ನಿತ್ಯ ನಿರಂತರ ಯಶಸ್ವಿ ಉದ್ಯಮಿಯಾಗಿ ಬೆಳೆದು ಇತರರಿಗೆ ಮಾದರಿಯಾದರು .
1989 ರಲ್ಲಿ ತುಳುಕೂಟ ಮಸ್ಕತ್ ಇದರ ಕಮಿಟಿ ಸದಸ್ಯರಾದರು, ಅದೇ ವರ್ಷ ಗಣೇಶ ಫೆಸ್ಟಿವಲ್ ಸಮಿತಿ ಮಸ್ಕತ್ ಇದರ ಕಮಿಟಿ ಸದಸ್ಯರಾದರು.
ಸಮಾಜ ಸೇವಕರಾಗಿ ಬೆಳೆದು ಅದೆಷ್ಟೋ ಊರಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಸಹಾಯಕರಿಗೆ ಸಹಾಯ ಹಸ್ತವನ್ನು ನೀಡಿರುವ ಕೀರ್ತಿ ಇವರದು.
2004 ರಲ್ಲಿ ಪ್ರಪ್ರಥಮ ಬಾರಿಗೆ ದೇವದಾಸ್ ಕಾಪಿಕಾಡ್ ಅವರ ತುಳು ನಾಟಕ ತಂಡವನ್ನು ಮಸ್ಕತ್ ಗೆ ತರಿಸಿದ ಕೀರ್ತಿ ಇವರದು.
ಅದೇ ವರ್ಷ ಎಸ್ ಕೆ ಪೂಜಾರಿ ಮತ್ತು ಲಕ್ಷ್ಮೀ ನಾರಾಯಣ ಭಟ್ ಜೊತೆಗೂಡಿ ವಿದ್ಯಾಭೂಷಣ ತೀರ್ಥ ಶ್ರೀಪಾದರನ್ನು ಮಸ್ಕತ್ ಗೆ ಕರೆಯಿಸಿ ಭಜನೆಯನ್ನು ನೆರವೇರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಹಾಗೂ ತುಳು ಪಿಚ್ಚರ್ ನ್ನು ಪ್ರಪ್ರಥಮ ಬಾರಿಗೆ ಮಸ್ಕತ್ ನ ಥೀಯೇಟರ್ ನಲ್ಲಿ ಪ್ರಸಾರ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಒಮಾನ್ ದೇಶದ ಮಸ್ಕತ್ ನಲ್ಲಿ ಬಿಲ್ಲವ ಕೂಟವನ್ನು ಸ್ಥಾಪಿಸಬೇಕು ಎಂಬ ಮಹದಾಸೆಯನ್ನಿಟ್ಟು ಆರು ಜನ ಘಟಾನುಘಟಿ ಬಿಲ್ಲವ ನಾಯಕರ ಜೊತೆ ಗೂಡಿ 2008 ರಲ್ಲಿ “ಒಮಾನ್ ಬಿಲ್ಲವಾಸ್” ಎಂಬ ಕೂಟವನ್ನು ಸ್ಥಾಪಿಸಿ ಕೂಟದ ಸ್ಥಾಪಕ ಸದಸ್ಯರಾದರು.
2010 ರಲ್ಲಿ ಒಮಾನ್ ಬಿಲ್ಲವಾಸ್ ಕೂಟದ ಅಧ್ಯಕ್ಷರಾದ ದಿವಂಗತ ಪಿತಾಂಬರ ಅಳಿಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಪಟ್ಲ ಸತೀಶ ಶೆಟ್ಟಿ ಅವರ ಯಕ್ಷಗಾನ ತಂಡವನ್ನು ಪ್ರಪ್ರಥಮ ಬಾರಿಗೆ ಮಸ್ಕತ್ ಗೆ ಕರೆಯಿಸಿ ಕೋಟಿ ಚೆನ್ನಯ ಯಕ್ಷಗಾನ ಪ್ರದರ್ಶನವನ್ನು ಆಡಿಸಿದ ಕೀರ್ತಿ ಎಸ್ ಕೆ ಪೂಜಾರಿ ಅವರಿಗೆ ಸಲ್ಲುತ್ತದೆ.
2015ರಲ್ಲಿ ಒಮಾನ್ ಬಿಲ್ಲವಾಸ್ ಕೂಟದ ಅಧ್ಯಕ್ಷರಾದ ಎಸ್ ಕೆ ಪೂಜಾರಿ ಅವರು ಹಿಂದಿನ ಅಧ್ಯಕ್ಷರು ಮಾಡಿರುವಂತಹ ಸತ್ಯನಾರಾಯಣ ಪೂಜೆ, ಗುರು ಪೂಜೆ, ನವರಾತ್ರಿ ಉತ್ಸವ, ಕ್ರೀಡಾ ಕೂಟ, ವಾರ್ಷಿಕ ಕಾರ್ಯಕ್ರಮ, ಮಂಗಳೂರಿನ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಗೆ ವಿದ್ಯಾರ್ಥಿ ವೇತನ ವಿತರಣೆ ಹೀಗೆ ಎಲ್ಲಾ ಕಾರ್ಯಕ್ರಮಗಳನ್ನು ಪುನರಪಿ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿಶೇಷವೆಂದರೆ ಎಸ್ ಕೆ ಪೂಜಾರಿ ಅವರ ಅಧ್ಯಕ್ಷರ ಅವಧಿಯಲ್ಲಿ ದೇಯಿ ಬೈದೆತಿ, ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆದಿ ಧೂಮಾವತಿ ದೈವಸ್ಥಾನ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಒಮಾನ್ ಬಿಲ್ಲವಾಸ್ ಕೂಟದ ವತಿಯಿಂದ ಸೇವಾ ರೂಪದಲ್ಲಿ ನೆರವೇರಿಸಿ ಗೆಜ್ಜೆಗಿರಿಯ ಪುಣ್ಯ ನೆಲದಲ್ಲಿ ಒಮಾನ್ ಬಿಲ್ಲವಾಸ್ ಕೂಟದ ಹೆಸರು ಸೂರ್ಯ ಚಂದ್ರರಿರುವರೆಗೆ ಅಜರಾಮರವಾಗಿ ಅಚ್ಚಳಿಯದೆ ಉಳಿಯಲು ಕಾರಣೀಭೂತರಾಗಿದ್ದಾರೆ. ಇದು ಒಮಾನ್ ಬಿಲ್ಲವಾಸ್ ಕೂಟಕ್ಕೆ ಹಿರಿಮೆಯ ಗರಿ.
ಏಳು ವರ್ಷಗಳಿಂದ ನಿರಂತರವಾಗಿ ಎಸ್ ಕೆ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಗಣೇಶ ಫೆಸ್ಟಿವಲ್ ಸಮಿತಿ ಮಸ್ಕತ್ ಇದರ ವತಿಯಿಂದ ಮಸ್ಕತ್ ನ ಶಿವ ದೇವಾಲಯದ ಸಭಾಂಗಣದಲ್ಲಿ ವರ್ಷಂಪ್ರತಿ ಮೂರು ದಿನಗಳ ವರೆಗೆ ಗಣೇಶೋತ್ಸವವನ್ನು ಶ್ರದ್ಧಾ ಭಕ್ತಿಯೊಂದಿಗೆ ವಿಜ್ರಂಭಣೆಯಿಂದ ನೆರವೇರಿಸುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಒಮಾನ್ ಬಿಲ್ಲವಾಸ್ ಕೂಟದ ಸ್ಥಾಪಕ ಸದಸ್ಯರಾಗಿ, ಕೂಟವು ಸ್ಥಾಪನೆಯಿಂದ ಇದುವರೆಗೂ ಹಿರಿಯ ಮಾರ್ಗದರ್ಶಕರಾಗಿ, ಸಮಾಜದ ಚಿಂತಕರಾಗಿ, ಕಿರಿಯರಿಗೆ ಮನೋಸ್ಥೈರ್ಯ – ಆತ್ಮಸ್ಥೈರ್ಯವನ್ನು ತುಂಬಿ ಸಮಾಜಕ್ಕೆ ಉತ್ತಮ ಪ್ರೇರಣಾ ಶಕ್ತಿ ದಾಯಕರಾಗಿದ್ದಾರೆ.
ಎಸ್ ಕೆ ಪೂಜಾರಿ ಅವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘಸಂಸ್ಥೆಗಳು, ಶೈಕ್ಷಣಿಕ, ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸನ್ಮಾನ ಪ್ರಶಸ್ತಿ ಪುರಸ್ಕೃತ ಗಳು ದೊರೆತಿರುತ್ತದೆ.
ಒಮಾನ್ ದೇಶದ ಮಸ್ಕತ್ ನಲ್ಲಿ ಎಲ್ಲರಿಗೂ ಚಿರಪರಿಚಿತ ರಾಗಿರುವ ಎಸ್ ಕೆ ಪೂಜಾರಿ ಅವರು ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಷ್ಟೂ ಇಳಿ ವಯಸ್ಸಿನಲ್ಲೂ ಎಲ್ಲಾ ಕ್ಷೇತ್ರಗಳಲ್ಲಿ ಉತ್ಸಾಹದಾಯಕರಾಗಿ ಸಮಾಜಸೇವೆಯನ್ನು ಮಾಡುತ್ತಿದ್ದು ಸಮಾಜಕ್ಕೆ ಸ್ಪೂರ್ತಿದಾಯಕರಾಗಿದ್ದಾರೆ.
ತಾವು ನಂಬಿರುವ ಇಷ್ಟ ದೇವರು ತಮಗೆ ಇನ್ನಷ್ಟು ಕಾಲ ಸಮಾಜಸೇವೆಯನ್ನು ಮಾಡುವ ಶಕ್ತಿ ಮತ್ತು ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುವ ಜೊತೆಗೆ ತಮ್ಮ ಸೇವಾ ಯಜ್ಞಾವು ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸುತ್ತೇವೆ.
✍️ಬರಹ
ಪ್ರಶಾಂತ್ ಪೂಜಾರಿ ಪಜೀರ್ ಮಸ್ಕತ್
ಗೆಜ್ಜೆಗಿರಿ ಮೇಳದ ಗೌರವ ಸಂಚಾಲಕರು ಮತ್ತು ಶ್ರೀ ಕ್ಷೇತ್ರ ಗೆಜ್ಜೆಗಿರಿ ಟ್ರಸ್ಟಿ



