ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ ಪ್ರವೀಣ್ ಪೂಜಾರಿ ಆಕ್ರೋಶ
ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂ ಬೆಳಗ್ಗೆ 4.30 ರ ಸುಮಾರಿಗೆ ನುಗ್ಗಿ ಯುವತಿಗೆ ಹಲ್ಲೆ ನಡೆಸಿ, ದಾಂಧಲೆ ನಡೆಸಿರುವುದನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಖಂಡಿಸಿದೆ.
ಜಿಲ್ಲಾಧ್ಯಕ್ಷ ಪ್ರವೀಣ್ ಪೂಜಾರಿ ಪತ್ರಿಕಾ ಪ್ರಕಟಣೆ ಹೊರಡಿಸಿ, ಕೊಡವೂರಿನಲ್ಲಿ ಆರೋಪಿಯ ಮನೆ ಇದ್ದರೂ, ಬ್ರಹ್ಮಾವರ ಠಾಣಾ ವ್ಯಾಪ್ತಿಯ ಚಿಕ್ಕಮ್ಮನ ಮನೆಗೆ ಮಹಿಳಾ ಪೋಲಿಸರು ಇಲ್ಲದೇ, ಕೇವಲ ಪುರುಷ ಪೋಲಿಸರು ನುಗ್ಗಿ, ಅಕ್ಷತಾ ಪೂಜಾರಿ ಎಂಬ ಮುಗ್ದ ಯುವತಿಯನ್ನು ಹಲ್ಲೆ ನಡೆಸಿದ್ದಾರೆ. ನಂತರ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರಿಗೆ ಹೇಳಿಕೆಯನ್ನು ಕೊಟ್ಟಾಗ ಠಾಣಾಧಿಕಾರಿ ಆಕೆಯ ಕೇಸನ್ನು ದಾಖಲಿಸದೆ ಪೊಲೀಸರನ್ನು ರಕ್ಷಿಸುವ ಸಲುವಾಗಿ ಅಕ್ಷತಾ ಪೂಜಾರಿ ಮತ್ತು ಆಕೆಯ ತಾಯಿಯ ಮೇಲೆ ಕರ್ತವ್ಯಕ್ಕೆ ಅಡ್ಡಿ ಎಂಬ ಸುಳ್ಳು ಕೇಸು ದಾಖಲಿಸಿದ್ದಾರೆ.
ಹಲ್ಲೆಯಿಂದ ಗಂಭೀರ ನೋವುಂಟಾಗಿ ಆಕೆಯೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನ್ಯಾಯಕ್ಕೊಳಗಾದ ಕುಟುಂಬದ ಜೊತೆಗೆ ಬಿಲ್ಲವ ವೇದಿಕೆ ನಿಂತಿದ್ದು, ಮಹಿಳಾ ಪೋಲಿಸರಿಲ್ಲದೇ ಅಕ್ರಮವಾಗಿ ಮನೆಗೆ ನುಗ್ಗಿ, ಯುವತಿಗೆ ಹಲ್ಲೆ ನಡೆಸಿದ ಪೋಲಿಸರನ್ನು ಬಂಧಿಸಬೇಕು. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಲಿದ್ದು, ಪ್ರತಿಭಟನೆಯನ್ನು ಮಾಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

