ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈ ದಕ್ಷಿಣಮ್ | ಎಂಬಂತೆ ದಕ್ಷಿಣ ಸಮುದ್ರದ ಉತ್ತರಕ್ಕೆ ಹಾಗೂ ಹಿಮವತ್ ಪರ್ವತದ ದಕ್ಷಿಣಕ್ಕೆ ಇರುವ ಈ ಸನಾತನ ಭರತದೇಶದ ಬೇರೆಲ್ಲ ಪ್ರಾಂತ್ಯಗಳಿಗಿಂತ ನಮ್ಮ ತುಳುನಾಡು ಸರ್ವ ರೀತಿಯಲ್ಲೂ ವಿಭಿನ್ನ. ಧಾರ್ಮಿಕ, ಶೈಕ್ಷಣಿಕ, ವಿಜ್ಞಾನ, ವೈದ್ಯಕೀಯ,ಬ್ಯಾಂಕಿಂಗ್, ಉದ್ಯಮ, ಕಲೆ, ಸಾಹಿತ್ಯ, ಸಂಗೀತ,ಸಿನೆಮಾ, ಪ್ರವಾಸೋದ್ಯಮ, ಹೀಗೆ ಯಾವುದೇ ರಂಗ ನೋಡಿದರೂ ಅಲ್ಲಿ ಈ ಪ್ರಾಂತ್ಯದ ಜನರ ಸಾಧನೆ ವಿಶಿಷ್ಟವಾಗಿ ಕಾಣಿಸುತ್ತದೆ. ಹೀಗೆ ಯಾವುದೇ ಕ್ಷೇತ್ರ ಆಯ್ದುಕೊಂಡರೂ ಎಲ್ಲರಿಗಿಂತ ಭಿನ್ನವಾಗಿ ಎದ್ದು ಕಾಣುವಂತೆ ಈ ನಾಡನ್ನು ರೂಪಿಸಿಕೊಂಡಿರುವ ಈ ಜನರಿಗೆ ಇಲ್ಲಿನ ದೈವಾರಾಧನೆ, ಯಕ್ಷಗಾನದಂತಹ ಸಂಸ್ಕೃತಿ, ಆಚರಣೆಗಳು ಅಸೀಮ ಚೈತನ್ಯ ತುಂಬುತ್ತಿದೆ ಎಂದರೆ ತಪ್ಪಲ್ಲ. ನಿಮ್ಮವರ ಬದುಕಿನ ಏಳಿಗೆ,ಸಾಧನೆ, ನೆಮ್ಮದಿಗಳಿಗೆ ಏನು ಕಾರಣವಿರಬಹುದು ? ಎಂದು ಯಾವುದೇ ತುಳುವನನ್ನು ಕೇಳಿದರೆ, ಆತನ ಬಾಯಿಂದ ಬರುವ ಉತ್ತರ ಒಂದೇ “ಎಲ್ಲವೂ ನಾವು ನಂಬಿದ ಭೂತ,ನಾಗ,ದೈವದೇವರುಗಳ ದಯೆ….” ಎಂದು.
ಹೌದು, ಇಲ್ಲಿನ ಜನಜೀವನದ ಅತ್ಯಂತ ಅವಿಭಾಜ್ಯ ಅಂಗ ದೈವಾರಾಧನೆ. ಇಂದಿನ ಲೌಕಿಕ ವ್ಯವಹಾರಗಳಲ್ಲಿ ಹೇಗೆ ನಮ್ಮ ತುಳುವರು ಉನ್ನತ ಸಾಧನೆಗಳನ್ನು ಮಾಡಿದ್ದಾರೋ ಅದಕ್ಕೂ ಮಿಗಿಲಾಗಿ ದೈವಾರಾಧನೆಯ ಮೂಲಕ ಆಧ್ಯಾತ್ಮದ ಮೆಟ್ಟಿಲು ಏರುತ್ತಾ ವಿಶಿಷ್ಟ ಸಾಧನೆಯ “ಏರಾಜೆ”ಗೆ ತಲುಪಿದ ಅನೇಕ ಮಹನೀಯರು ಇಲ್ಲಿ ಆಗಿ ಹೋದವರಿದ್ದಾರೆ. ಆರಾಧನೆಯ ಉತ್ತುಂಗ ತಲುಪಿ ಅವರು ಆರಾಧಿಸಿದ ಶಕ್ತಿಗಳಿಗೆ ಸರಿಸಮಾನವಾಗಿ ತಾವೂ ಆರಾಧನೆ ಪಡೆಯುವ ಹಂತದವರೆಗಿನ ತುಳುವರ ಆಧ್ಯಾತ್ಮಿಕ ಪಯಣದ ಕಥನಗಳು ಬಹಳ ವಿಶಿಷ್ಟವಾದದ್ದು. ಇದಕ್ಕೆ ಒಂದೆರಡು ನಿದರ್ಶನಗಳನ್ನು ನೋಡಬಹುದಾದರೆ ಬ್ರಹ್ಮ ಬೈದರ್ಕಳಿಗೆ ಸಂಪೂರ್ಣ ಶರಣಾಗತಿಯನ್ನು ಹೊಂದಿ, ಬ್ರಹ್ಮ ಬೈದರ್ಕಳ ಪ್ರತಿರೂಪವೇ ಆಗಿ ಕೇಂಜ ಬಗ್ಗಪೀಠದ ಬಗ್ಗ ಪೂಜಾರಿ ಎಂಬ ಹೆಸರಿನಲ್ಲಿ ಪೀಠ ಸ್ಥಾಪನೆಗೆ ಕಾರಣರಾಗಿ ಆರಾಧನೆ ಪಡೆಯುತ್ತಿರುವ ಮೈಂದ ಬೈದ್ಯರು ಇರಬಹುದು ಅಥವಾ ಕುಪ್ಪೆಟ್ಟು ಪಂಜುರ್ಲಿಯ ಕಥನದಲ್ಲಿ ಬರುವ ಕೊರಗ ಬೈದ್ಯ ವಿರೋಧ ಭಕ್ತಿಯಿಂದಲೇ ಪಂಜುರ್ಲಿಯನ್ನು ಸಾಕ್ಷಾತ್ಕರಿಸಿಕೊಂಡು, ಆ ಪಂಜುರ್ಲಿಯೊಂದಿಗೆ ಇಂದಿಗೂ ಹಿರಿಯಜ್ಜ ಇತ್ಯಾದಿ ಹೆಸರುಗಳಿಂದ ತುಳುನಾಡಿನಾದ್ಯಂತ ಆರಾಧನೆ ಪಡೆಯುತ್ತಾರೆ. ಈ ರೀತಿ ತುಳುನಾಡಿನ ದೈವಾರಾಧನೆಯ ಪುಟಗಳನ್ನು ತಿರುವಿದರೆ ಇಂಥಹ ಅನೇಕ ಸಾಧಕರನ್ನು ಕಾಣಬಹುದು. ತಲೆತಲಾಂತರದಿಂದ ಈ ಮಣ್ಣಿನಲ್ಲಿ ನಡೆದುಕೊಂಡು ಬಂದಿರುವ ಈ ಆರಾಧನೆ ಕಾಲದಿಂದ ಕಾಲಕ್ಕೆ ಸರ್ವೇಸಹಜವಾದ ಅಲ್ಪಸ್ವಲ್ಪ ಬದಲಾವಣೆಗಳನ್ನು ಕಂಡಿರಬಹುದಾದರೂ ಆರಾಧನೆಯ ಮೂಲ ತತ್ವಕ್ಕೆ ಕುಂದಾಗದಂತೆ ನಮ್ಮ ಹಿರಿಯರು ಇದನ್ನು ನಮ್ಮ ಪೀಳಿಗೆಯ ಕೈಗಿತ್ತಿದ್ದಾರೆ, ಆದರೆ ಇತ್ತೀಚಿನ ಒಂದು ದಶಕದಿಂದ ಸಂವಹನ ವ್ಯವಸ್ಥೆಗಳು,ಸೋಶಿಯಲ್ ಮೀಡಿಯಾಗಳು ತುಂಬಾ ಪ್ರಭಾವಿಯಾಗಿರುವ ಈ ಕಾಲಘಟ್ಟದಲ್ಲಿ ನಾವೆಲ್ಲ ದೈವಾರಾಧನೆಯ ಬಗ್ಗೆ ಒಂದಷ್ಟು ವಾದ,ಪ್ರತಿವಾದಗಳನ್ನು ಕೇಳುತ್ತಿದ್ದೇವೆ, ನಮ್ಮ ತುಳುವ ಆರಾಧನೆ ಪ್ರಕೃತಿ ಕೇಂದ್ರಿತ, ಅವೈದಿಕ ಆಚರಣೆ, ನಮ್ಮ ಆರಾಧನೆ ಜಾನಪದ ಇತ್ಯಾದಿ ವಾದಗಳು ಮತ್ತು ಪುರೋಹಿತಶಾಹಿಗಳು ಈ ಆರಾಧನಾ ಕ್ರಮದ ದಿಕ್ಕು ತಪ್ಪಿಸಿ ವೈದಿಕ ಪದ್ಧತಿಯನ್ನು ಇದರ ಮೇಲೆ ಹೇರಿದ್ದಾರೆ ಎನ್ನುವ ಆರೋಪ. ಒಂದು ವಿಷಯವನ್ನು ಸಾವಿರ ಸಲ ಹೇಳುತ್ತಾ ಹೋದರೆ ಕೊನೆಗೆ ಅದೇ ಸತ್ಯ ಎನ್ನಿಸಿ ಬಿಡುತ್ತದೆಯಂತೆ, ಹಾಗೆಯೇ ಬರಬರುತ್ತಾ ನಾನೂ ಕೂಡ ಇವರ ವಾದದ ಸಮರ್ಥಕನೇ ಆಗಿದ್ದೆ, ಆದರೆ ಒಂದು ಹಂತದಲ್ಲಿ ಈ ವಾದಸರಣಿ ಆಧಾರರಹಿತ ಎನ್ನಿಸಿತ್ತಾದ್ದರಿಂದ ಇವುಗಳನ್ನು ಓದುವುದು,ಕೇಳುವುದನ್ನು ನಿಲ್ಲಿಸಿ, ಇದಕ್ಕಿಂತ ಹೊರತಾದ ಸತ್ಯಕ್ಕೆ ಹತ್ತಿರವಾದ, ತಾರ್ಕಿಕ ವಿಚಾರವಾದಕ್ಕಾಗಿ ಮನಸು ಅರಸುತ್ತಿತ್ತು.
ಹೀಗಿರುವಾಗ ಲಾಕ್ ಡೌನ್ ಸಮಯದಲ್ಲಿ ಮಂಗಳೂರಿನ ಸ್ಥಳೀಯ ವಾಹಿನಿಗಳು ದೈವಾರಾಧನೆಯ ವಿಷಯದಲ್ಲಿ ಸರಣಿ ಕಾರ್ಯಕ್ರಮ ನಡೆಸುತ್ತಿದ್ದವು, ಈ ಕಾರ್ಯಕ್ರಮಗಳಲ್ಲಿ ದೈವಾರಾಧನೆ ಕ್ಷೇತ್ರದ ಹಲವು ಹಿರಿ-ಕಿರಿಯ ಅನುಭವಿಗಳೆಲ್ಲ ಟಿವಿ ವಾಹಿನಿಗಳಲ್ಲಿ ತಮ್ಮ ದೈವಾರಾಧನೆಯ ಬಗೆಗಿನ ಅನುಭವಗಳನ್ನು ಹಂಚಿಕೊಂಡರು, ಇವರೆಲ್ಲ ಹೇಳುತ್ತಿದ್ದ ವಿಷಯಗಳನ್ನು ಕೇಳುವಾಗ ತುಳುನಾಡಿನಲ್ಲಿ ಹುಟ್ಟುವ ಪ್ರತಿಯೊಬ್ಬರೂ ಬಾಲ್ಯದಿಂದಲೇ ಕೇಳುತ್ತಾ ಬಂದಿರುವ ವಿಚಾರವನ್ನಷ್ಟೇ ಇವರು ಟಿವಿ ವಾಹಿನಿಯೊಳಗೆ ಕುಳಿತು ಹೇಳುತ್ತಿದ್ದಾರೆಯೋ ಎಂದೆನಿಸುತ್ತಿತ್ತು. ಕಾರಣ, ಇವರು ಹೇಳುತ್ತಿದ್ದ ವಿಷಯಗಳು ಬಹುತೇಕ ದಂತಕಥೆಗಳು ಮತ್ತು ಸ್ಥಳ ಪುರಾಣಗಳಂತಹ ಕಥೆಗಳ ಸುತ್ತಲೇ ಇರುತ್ತಿತ್ತು. ಒಂದೇ ಮಾತಿನಲ್ಲಿ ಹೇಳುವುದಾದರೆ ಪಾಡ್ದನಗಳನ್ನು ಮೇಲ್ನೋಟಕ್ಕೆ ಅರ್ಥೈಸಿದ ಭಾವಾನುವಾದದಂತೆ ಇರುತ್ತಿತ್ತು.
ದೈವಾರಾಧನೆ ಎಂದರೆ ಇಂಥ ಕತೆಗಳಲ್ಲ, ಕಟ್ಟುಕಟ್ಟಳೆಗಳ ಅಂಧ ಆಚರಣೆಯಲ್ಲ, ಪಾಡ್ದನಗಳೆಂದರೆ ಅಷ್ಟು ಸರಳ ಸಾಹಿತ್ಯವೂ ಅಲ್ಲ, ನಾವು ತಿಳಿದುಕೊಂಡದ್ದಕ್ಕಿಂತ ಬಹಳ ಮಹತ್ವವಾದ, ಮೇಲ್ನೋಟಕ್ಕೆ ಕಾಣುತ್ತಿರುವುದಕ್ಕೆ ಭಿನ್ನವಾಗಿ ನಿಗೂಢವಾದದ್ದೇನನ್ನೋ ಈ ಆರಾಧನೆ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ ಎಂದು ಒಂದಷ್ಟು ಆಸ್ತಿಕ ಜನರ ಒಳಮನಸ್ಸು ತಲ್ಲಣಿಸುತ್ತಿತ್ತು , ಆದರೆ ಆ ತಿರುಳೇನು? ಆ ಮೂಲತತ್ವಗಳ ಮೇಲೆ ಬೆಳಕನ್ನು ಚೆಲ್ಲಿ ನಮ್ಮೊಳಗಿನ ಜಿಜ್ಞಾಸೆಗಳ ದಾಹವನ್ನು ತಣಿಸಬಲ್ಲ ಯಾರಾದರೂ ಈ ಕಾರ್ಯಕ್ರಮಗಳಲ್ಲಿ ಬಂದು ಕುಳಿತುಕೊಳ್ಳಬಹುದೇ ಎಂದು ಕಾತರಿಸುತ್ತಿದ್ದವರಿಗೆ ಮತ್ತೆ ಮತ್ತೆ ಅದೇ ಸವಕಲಾದ ವೈದಿಕ – ಅವೈದಿಕ, ದ್ರಾವಿಡ ಆಚಾರ, ನೆಲಮೂಲ ಸಂಸ್ಕೃತಿ, ಪ್ರಕೃತಿ ಆರಾಧನೆ, ಯುದ್ಧದಲ್ಲಿ ಮರಣಿಸಿದ ವೀರರ ಆರಾಧನೆ, ಅನ್ಯಾಯಕ್ಕೆ ಒಳಗಾಗಿ ಸತ್ತವರು ದೈವಗಳಾಗುತ್ತಾರೆ ಇತ್ಯಾದಿ ಸಾವಿರದೊಂದು ಅಸಂಬದ್ಧಗಳೇ ಓತಪ್ರೋತವಾಗಿ ಕಿವಿಗಪ್ಪಳಿಸುತ್ತಿದ್ದದ್ದು. ಅದೂ ಸಾಲದ್ದಕ್ಕೆ ನಮ್ಮದ್ದು ಒಂದನೇ ಹಕ್ಕಿನ ಮನೆ, ನಮ್ಮದು ಬಟ್ಟಲು ಗಂಧದ ಹಕ್ಕು, ನಮ್ಮದು ಜೋಡು ಬೊಂಡದ ಹಕ್ಕು ಎನ್ನುತ್ತಾ ದೈವದ ಮೇಲೆಯೇ ಹಕ್ಕುದಾರಿಕೆ ಸ್ಥಾಪಿಸುವವರು. ಎಲ್ಲಿಯ ಹಕ್ಕು ಸ್ವಾಮಿ? ಅಹಂ ಪಡಲೇನುಂಟು, ದೈವಗಳು ಕೊಟ್ಟದ್ದರಿಂದಷ್ಟೇ ನಮಗೆ ಹಕ್ಕು,ಮುನ್ನೆಲೆಯ ಮರ್ಯಾದೆಯಲ್ಲವೇ? ಈ ಕನಿಷ್ಠ ಪರಿಜ್ಞಾನವೂ ಇಲ್ಲದೆ ಒಣ ಪ್ರತಿಷ್ಠೆಯ,ಆತ್ಮರತಿಯ ಬಡಿವಾರ ಬಾರಿಸುವವರು ಇನ್ನೊಂದು ಕಡೆ. ಈ ಮೇಲಾಟಗಳ ಜೊತೆಗೆ ಸ್ವಘೋಷಿತ ಜಾನಪದ ಸಂಶೋಧಕರು, ಬರಹಗಾರರು, ಎನಿಸಿಕೊಂಡು ತಮ್ಮ ಮೂಗಿನ ನೇರಕ್ಕೆ ಕಲ್ಪಿಸಿಕೊಂಡು ಬರೆಯುವ,ಮಾತಾಡುವ ಇನ್ನೊಂದು ವರ್ಗ, ಇವೆಲ್ಲದರ ನಡುವೆ ನಿಜವಾದ ದೈವಾರಾಧನೆಯ ತಿರುಳೇನು ಎಂದು ತಿಳಿಯುವ ಕುತೂಹಲ ಕುತೂಹಲವಾಗಿಯೇ ಉಳಿದು ಬಿಟ್ಟಿತೇನೋ ಎಂದುಕೊಳ್ಳುತ್ತಿರುವಾಗ ಅದೊಂದು ದಿನ ವೆಂಕಟೇಶ್ ಕರ್ಕೇರ ಅನ್ನುವ ವ್ಯಕ್ತಿಯೊಬ್ಬರು ಟಿವಿ ವಾಹಿನಿಯ ಚರ್ಚೆಯೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ.
ದೈವಾರಾಧನೆ ಕ್ಷೇತ್ರದವರು ಎಂದರೆ ಮೈ-ಕೈ ತುಂಬಾ ಆಭರಣ,ಕಡಗ, ಮಿರಿಮಿರಿ ಪಂಚೆ ಪೈಜಾಮ, ಮುಂಡಾಸುಗಳಿರಬೇಕು, ಈ ರೀತಿ ನೀಟಾಗಿ ಇನ್ ಶರ್ಟ್ ಮಾಡಿಕೊಂಡ, ದೈವಾರಾಧನೆಯ ಕ್ಷೇತ್ರಕ್ಕೆ ಸಂಬಂಧವಿಲ್ಲದಂತೆ ಕಾಣುವ ಈ ಸಾದಾ ವ್ಯಕ್ತಿ ದೈವಾರಾಧನೆಯ ಬಗೆಗಿನ ಕಾರ್ಯಕ್ರಮದಲ್ಲಿ ಏನು ಹೇಳಬಹುದು ಎಂಬ ಸಣ್ಣ ಉಡಾಫೆಯೊಂದಿಗಿನ ಕುತೂಹಲದಲ್ಲಿ ಟಿವಿ ಮುಂದೆ ಕುಳಿತರೆ ಇವರು ಹೇಳುತ್ತಿದ್ದ ವಿಚಾರಗಳೆಲ್ಲ ತೀರಾ ಅಪರಿಚಿತ ಅನ್ನಿಸಿತು. ದೈವಾರಾಧನೆಯ ಬಗ್ಗೆ ನಾವು ಕೇಳಿದ್ದ ಕತೆಗಳಿಗೂ ಈಗ ಇವರು ಹೇಳುತ್ತಿರುವ ವಿಷಯಕ್ಕೂ ಕೊಂಚ ಮಟ್ಟಿಗೆ ತಾಳೆ ಆಗುತ್ತಿರಲಿಲ್ಲ.
ದೈವಾರಾಧನೆ ಅವೈದಿಕ ಪದ್ಧತಿ ಎಂದವರಿಗೆಲ್ಲ ನಾವು ಜೈ ಅನ್ನುತ್ತಿದ್ದವರು, ಇವರು ನೋಡಿದರೆ ದೈವಾರಾಧನೆ ಶುದ್ಧ ವೇದವೇ ಹೊರತು ಬೇರೆಯದಲ್ಲ ಅನ್ನುತ್ತಾರಲ್ಲ, ನಾವೆಲ್ಲ ಅದ್ಯಾರೋ ವಿದೇಶಿಗ ಬಿತ್ತಿದ ವಿಷಬೀಜ Aryan invention theory ಎಂಬ ಆಧಾರವೇ ಇಲ್ಲದ ಒಡಕು ಸಿದ್ಧಾಂತವನ್ನು ಸತ್ಯ ಎಂದು ನಂಬಿ ನಮ್ಮ ದೈವಾರಾಧನೆಯನ್ನು ದ್ರಾವಿಡ ಆರಾಧನಾ ಪದ್ಧತಿ, ಡೆವಿಲ್ ವರ್ಶಿಪ್, ಯುದ್ಧ ವೀರರ ಸಂಸ್ಮರಣೆ,ಪ್ರಾಣಿ ಮೂಲ ಇತ್ಯಾದಿ ತಲೆಬುಡವಿಲ್ಲದ ಸಿಕ್ಕುಗಳಲ್ಲಿ ಸಿಕ್ಕಿಸಿಕೊಂಡು ಒದ್ದಾಡುತ್ತಿರುವಾಗ ಈ ವ್ಯಕ್ತಿ ದೈವಾರಾಧನೆ ಶುದ್ಧ ಸನಾತನ ಸಾಧನಾ ಮಾರ್ಗ ಎಂದು ಖಚಿತ ಧ್ವನಿಯಲ್ಲಿ ಹೇಳುತ್ತಿದ್ದಾಗ ಒಮ್ಮೆ ಬೆಚ್ಚಿ ಬೀಳುವಂತೆ ಆಗಿತ್ತು. ದೈವಾರಾಧನೆಯ ಬಗ್ಗೆ ಈ ಮಾತನ್ನು ಯಾರೂ ಇಲ್ಲಿಯವರೆಗೆ ಹೇಳಿರಲಿಲ್ಲ, ದೈವಾರಾಧನೆಯನ್ನು ಹೀಗೂ ಕಾಣಲೂ ಸಾಧ್ಯವೆ? ಎಂದೆನಿಸಿತು, ಯಾಕೆಂದರೆ ದೈವಾರಾಧನೆ ಎಂದರೆ ಅದೇನೋ ಒಂದು ರೀತಿಯ ದ್ವಿತೀಯ ದರ್ಜೆಯ ಆರಾಧನಾ ಪದ್ಧತಿ ಎಂಬ ರೀತಿಯಲ್ಲಿ ಇಲ್ಲಿಯವರೆಗೆ ಬಿಂಬಿಸಲ್ಪಡುತ್ತಿತ್ತು. ಆದರೆ ಇವರು ಈಗ ಹೇಳುತ್ತಿದ್ದ ವಿಚಾರಗಳು ಕೇಳಲು ಬಹಳ ಸತ್ವಪೂರ್ಣವಾಗಿ ಕೇಳಿಸುತ್ತಿತ್ತು,ಇವರ ವಿಚಾರಧಾರೆಯಲ್ಲಿ ಏನೋ ಶಕ್ತಿ ಇದೆ, ಸತ್ಯ ಇದೆ ಎಂದು ಒಳಮನಸ್ಸು ಬಲವಾಗಿ ಹೇಳುತ್ತಿತ್ತು. ಆದರೆ ಈ ವಿಚಾರಗಳು ಕೇವಲ ಅವರ ವೈಯುಕ್ತಿಕ ನಿಲುವುಗಳೇ ಅಥವಾ ಇದಕ್ಕೇನಾದರೂ ಆಧಾರ ಇರುವುದೇ ಎಂಬ ಪ್ರಶ್ನೆಯೂ ಮೂಡಿತ್ತು, ಕಾರಣ ಇದು ಆರಾಧನೆಗೆ ಸಂಬಂಧಿಸಿದ ವಿಚಾರವಾದ್ದರಿಂದ ಯಾರೋ ಒಬ್ಬರ ವೈಯಕ್ತಿಕ ಅಭಿಮತವನ್ನು ತಾತ್ವಿಕ ಸತ್ಯವೆಂದು ಒಪ್ಪಿಕೊಳ್ಳಲು ಕಷ್ಟವಾಗಬಹುದು. ಆರಾಧನೆಯ ವಿಚಾರಗಳಿಗೆ ಶಾಸ್ತ್ರಗಳ ಆಧಾರ ಇದ್ದರಷ್ಟೇ ಅದು ಒಪ್ಪಿತ, ಅದರಲ್ಲೂ ದೈವಾರಾಧನೆ ಈ ದಿನಗಳಲ್ಲಿ ವಿವಿಧ ಆಯಾಮಗಳಲ್ಲಿ ಚರ್ಚೆಗೆ ಒಳಪಡುತ್ತಿರುವ ವಿಷಯ, ಮೇಲೆ ಹೇಳಿದಂತೆ ವಿವಿಧ ಆಯಾಮಗಳಲ್ಲಿ ಚರ್ಚಿಸುತ್ತಿರುವವರಲ್ಲಿ ಬಹುತೇಕರು ದೈವಾರಾಧನೆಯನ್ನು ವೇದ ಉಪನಿಷತ್ತುಗಳ ಹತ್ತಿರದಲ್ಲೂ ಕಾಣಲು ಒಪ್ಪದ ಜನ. ಹೀಗೆ ವಿರುದ್ಧ ಧ್ರುವಗಳಂತಿರುವ ವೈದಿಕ ಆರಾಧನ ಕ್ರಮ ಮತ್ತು ದೈವಾರಾಧನೆಯನ್ನು ಸಮೀಕರಿಸಿ ದೈವಾರಾಧನೆ ವೇದಗಳ ಆರಾಧನೆಯ ಇನ್ನೊಂದು ರೂಪ ಎಂಬಂತೆ ಮಾತನಾಡಿದಾಗ ಸುಲಭವಾಗಿ ಒಪ್ಪುವುದು ಹೇಗೇ ಎಂದು ಎನಿಸಿತು. ಸಮಯ ಮಿತಿಯಲ್ಲಿ ನಡೆಯುವ ಈ ಟಿವಿ ಚರ್ಚೆಗಳನ್ನು ನೋಡಿದರೆ ವಿಷಯ ಸ್ಪಷ್ಟವಾಗದು, ಇದರ ಹೊರತಾಗಿ ಆ ವ್ಯಕ್ತಿಯನ್ನು ಸಂಪರ್ಕಿಸಿ ಇನ್ನಷ್ಟು ತಿಳಿದುಕೊಳ್ಳಬೇಕು ಅನ್ನಿಸಿ ಅವರ ವಿವರ ಹುಡುಕಿದಾಗ ತಿಳಿದದ್ದು ಶ್ರೀವೆಂಕಟೇಶ್ ಕರ್ಕೇರರು “ಪ್ರಜ್ಞಾನಂ ಬ್ರಹ್ಮ:” ಎನ್ನುವ ಬ್ಲಾಗ್ ಮೂಲಕ ದೈವಾರಾಧನೆ ಮತ್ತು ಬೈದ್ಯಾರಾಧನೆಗೆ ಸಂಬಂಧಪಟ್ಟ ವಿಚಾರಗಳನ್ನು ಬರೆಯುತ್ತಿದ್ದಾರೆ ಎಂದು.
ಆ ಬ್ಲಾಗ್ ಹುಡುಕಿ ಓದಲು ಶುರು ಮಾಡಿದಾಗ ಆ ಲೇಖನ ಮಾಲಿಕೆಗಳ ಪ್ರವೇಶ ಪೂರ್ವದಲ್ಲಿಯೇ ಮೊದಲು ಕಂಡದ್ದು ಕರ್ಕೇರ ಅವರು ಬರೆದಿರುವ ಒಂದು ಸಾಲು, “ದೈವಾರಾಧನೆಗೆ ಹೊಸತೊಂದು ಅರ್ಥ/ ಆಯಾಮ ಇಲ್ಲಿದೆ. ಹೊಸತು ಎಂದರೆ ಹೊಸದಾಗಿ ಬರೆದದ್ದಲ್ಲ. ಹಳೆಯದನ್ನು ಕೆದಕಿ ಹುಡುಕಿದಾಗ ಸಿಕ್ಕಿದ್ದು, ನಮಗೆ ಹೊಸತು ಅಷ್ಟೆ”, ಈ ವಾಕ್ಯ ಇಡೀ ಲೇಖನ ಸರಣಿಗಳು ಯಾವುದನ್ನು ಆಧರಿಸಿವೆ ಎಂಬುದನ್ನು ಧ್ವನಿಸುತ್ತದೆ. ಲೇಖಕರ ವೈಯಕ್ತಿಕ ನಿಲುಮೆಗಳನ್ನು ಈ ಲೇಖನಗಳ ಮೂಲಕ ಹೇರುತ್ತಿಲ್ಲ, ಬದಲಾಗಿ ಯಾವುದೋ ಶಾಸ್ತ್ರಗ್ರಂಥಗಳೋ ಅಥವಾ ಪಾಡ್ದನ ನುಡಿಗಟ್ಟುಗಳ ಆಧಾರದಿಂದಲೇ ರೂಪುಗೊಂಡ ಲೇಖನಗಳನ್ನು ಪ್ರಕಟಿಸಿದ್ದಾರೆ ಎನ್ನುವ ಸುಳಿವು ಅಲ್ಲಿಯೇ ಸಿಕ್ಕಿತ್ತು. ಮುಂದೆ ಒಂದೊಂದೇ ಬರಹಗಳನ್ನು ಓದುತ್ತಾ ಹೋದಂತೆ ನನಗೆ ಅನ್ನಿಸತೊಡಗಿದ್ದು ಪ್ರಸ್ತುತ ಸಮಾಜದಲ್ಲಿ ದೈವಾರಾಧನೆಯ ಬಗ್ಗೆ ಏನೆಲ್ಲ ಗೊಂದಲಗಳು, ಪೂರ್ವಾಗ್ರಹ ಪೀಡಿತ ವಿತಂಡವಾದಗಳು ನಡೆಯುತ್ತಿವೆಯೋ ಆ ಎಲ್ಲಾ ವಿಚಾರಗಳನ್ನು ಒಂದೊಂದಾಗಿ ಎತ್ತಿಕೊಂಡು ಲೇಖಕರು ಆ ವಿಚಾರದ ಒಳ, ಹೊರಗು ಮತ್ತು ಎಲ್ಲಾ ಪಾರ್ಶ್ವಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಅದನ್ನು ವಿಮರ್ಶಿಸುವ ಪ್ರಯತ್ನ ಮಾಡಿದ್ದಾರೆ. ಭೂತ/ಬೂತ, ದೈವ ಎನ್ನುವ ಮೂಲ ಅಂಶದಿಂದ ಪ್ರಾರಂಭಿಸಿ ದೈವ ಪ್ರತಿಷ್ಠೆ, ವೈದಿಕ ಅವೈದಿಕ ಸಂಘರ್ಷ, ಬೆಮ್ಮೆರ್, ಆದಿ ಆಲಡೆ, ತುಳುವರಲ್ಲಿ ಆತ್ಮದ ಕಲ್ಪನೆ, ಜುಮಾದಿ, ಪಂಜುರ್ಲಿ,ಮಹಾಮಾಯಿ ಹೀಗೆ ದೈವಗಳ ಹೆಸರುಗಳಲ್ಲಿರುವ ಗುಣ ತತ್ವಗಳು ಏನು?, ದೈವಾರಾಧನೆಯಲ್ಲಿ ಯಜ್ಞೇಶ್ವರ, ನೀರಿನ ದೈವ ಸ್ವರೂಪ, ಖಡ್ಸಲೆ/ಸುರಿಯ ಹೀಗೆ ಎಲ್ಲಾ ವಿಷಯಗಳ ಬಗ್ಗೆಯೂ ಚರ್ಚಿಸಿದ್ದಾರೆ, ಇಲ್ಲಿನ ಲೇಖನಗಳು ವಿಚಾರ ಪೂರ್ಣ ಮಾತ್ರವಲ್ಲದೆ ಒಂದನ್ನು ಮೀರಿ ಇನ್ನೊಂದು ರೋಚಕವಾಗಿವೆ. ಪ್ರತೀ ಲೇಖನಗಳನ್ನು ಓದಿ ಮುಗಿಸುವಾಗಲೂ ದೈವಾರಾಧನೆಯ ಬಗ್ಗೆ ನನಗಿರುವ ಮಿಥ್ಯೆಗಳು ಕರಗಿ ಇದು ಶುದ್ಧ ಸತ್ಯ ಸನಾತನದ ಆರಾಧನೆ ಎಂಬ ಭಾವ ದೃಢವಾಗುತ್ತಾ ಹೋಯಿತು. ಪ್ರತೀ ಲೇಕನದಲ್ಲೂ ಲೇಖಕರು ವೇದ,ಉಪನಿಷತ್ತುಗಳ ಯಥೇಚ್ಛ ಆಧಾರ ಒದಗಿಸುತ್ತಾ ದೈವಾರಾಧನೆ ಮತ್ತು ವೈದಿಕ ಆರಾಧನಾ ಪದ್ಧತಿಗೆ ಇರುವ ಸಾಮ್ಯತೆಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿ ಕೊಟ್ಟಿದ್ದಾರೆ.
ನಮ್ಮ ದೈವಾರಾಧನೆ ಎಷ್ಟು ಸುಂದರ, ಎಷ್ಟು ಶ್ರೀಮಂತ, ಆದರೆ ನಾವು ಮಾತ್ರ ಇದರ ವೈಶಿಷ್ಟ್ಯ, ತಾತ್ಪರ್ಯ ಅರಿಯದೆಯೇ ಕಣ್ಣು ಮುಚ್ಚಿಕೊಂಡು ಆಚರಿಸುದ್ದಿತ್ತೇವೆ, ಇಲ್ಲಿನ ಕ್ರಮ,ಕಟ್ಟು ಕಟ್ಟಳೆಗಳ ಬಗ್ಗೆ ತಿಳಿಯುವ ಕುತೂಹಲದಿಂದ ಯಾರಾದರೂ ನಮ್ಮನ್ನು ಕೇಳಿದರೆ “ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಮಾಡಿಕೊಂಡು ಬಂದಿದ್ದಾರೆ, ಈಗ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ, ಆದರೆ ಇದರ ಅರ್ಥ ಏನು, ಹೇಗೆ,ಎತ್ತ ಎನ್ನುವುದು ಗೊತ್ತಿಲ್ಲ…” ಎನ್ನುವುದು ನಮ್ಮ ಸಿದ್ಧ ಉತ್ತರವಾಗಿರುತ್ತದೆ. ಹೀಗೆ ಹಿರಿಯರು ಮಾಡಿಕೊಂಡು ಬಂದಿದ್ದಾರೆ ಎಂಬ ಕಾರಣಕ್ಕೆ ಕಟ್ಟುಕಟ್ಟಳೆಗಳಿಗೆ ಕಟ್ಟುಬಿದ್ದು ಒತ್ತಾಯದ ಮಾಘ ಸ್ನಾನ ಎಂಬಂತೆ ಯಾಂತ್ರಿಕವಾಗಿ ದೈವಾರಾಧನೆಯನ್ನು ಮಾಡುತ್ತಿದ್ದೇವೆಯೇ ಹೊರತಾಗಿ ಮನಃಪೂರ್ವಕವಾಗಿ ಅರ್ಥ ಅರಿತು, ಇದರ ಫಲಾಫಲಗಳ ಜ್ಞಾನದಿಂದ ನಾವಿದನ್ನು ಮಾಡುತ್ತಿಲ್ಲ ಎನ್ನುವುದು ಮಾತ್ರ ಕಹಿಸತ್ಯ.
ಸುಮಾರು 125ಕ್ಕೂ ಹೆಚ್ಚು ಲೇಖನಗಳ ಮೂಲಕ ದೈವಾರಾಧನೆಯ ಬೇರೆ ಬೇರೆ ಅಂಶಗಳನ್ನು ಚರ್ಚಿಸಿರುವ ವೆಂಕಟೇಶ್ ಕರ್ಕೇರ ಅವರು ಬಹಳ ತರ್ಕಬದ್ಧವಾಗಿ ಅವರ ಅಭಿಪ್ರಾಯಗಳನ್ನು ಮಂಡಿಸುತ್ತಾರೆ.ಹಾಗೆಂದು ನಮ್ಮದೇ ಸರಿ, ನಾವು ಹೇಳಿದ್ದೆ ಅಂತಿಮ ಸತ್ಯ ಎನ್ನುವ ವಾದ ಇವರದ್ದಲ್ಲ, ನಾನು ದೈವಾರಾಧನೆಗೆ ಸಂಬಂಧಪಟ್ಟ ಯಾವುದೇ ದೊಡ್ಡ ಮನೆತನ, ಕ್ಷೇತ್ರಗಳಿಗೆ ಸೇರಿದವನಲ್ಲ, ಒಬ್ಬ ಸಹಜ ಆಸ್ತಿಕನ ಕುತೂಹಲದಿಂದ ಆರಾಧನೆಗಳನ್ನು ಗಮನಿಸುತ್ತಾ ಬಂದಾಗ ಆ ಶಕ್ತಿಗಳು ನಮ್ಮ ಮತಿಗೆ ತೋರಿಸಿ ಕೊಟ್ಟದ್ದನ್ನು ನಾನು ಲೇಖನಗಳ ರೂಪದಲ್ಲಿ ದಾಖಲಿಸುತ್ತಾ ಬಂದಿರುವೆ, ಇಲ್ಲಿ ನಮ್ಮದ್ದೆನ್ನುವುದೇನು ಇಲ್ಲ, ಆದ್ದರಿಂದ ನಾವು ಹೇಳಿರುವ ವಿಚಾರಗಳಲ್ಲಿ ತಪ್ಪಿರಲೂಬಹುದು, ಅವುಗಳನ್ನು ಸಕಾರಣವಾಗಿ ನಮಗೆ ತಿಳಿಸಿದರೆ ಒಪ್ಪಿಕೊಳ್ಳಲು ಸಿದ್ಧರಿದ್ದೇವೆ, ಎಂದು ವೆಂಕಟೇಶ ಕರ್ಕೇರರು ವಿನೀತ ಭಾವದಿಂದ ಹೇಳುತ್ತಾರೆ. ಅವರು ಹೇಳಿಕೊಂಡಂತೆ ದೈವಾರಾಧನೆಗೆ ಸಂಬಂಧಪಟ್ಟ ಹಿನ್ನೆಲೆಗಳಾವುದೂ ಅವರಿಗೆ ಭೌತಿಕವಾಗಿ ಇಲ್ಲದಿರಬಹುದು ಆದರೆ ಅವರ ಲೇಖನಗಳನ್ನು ಓದುವಾಗ ಖಂಡಿತಾ ಆಂತರ್ಯದಿಂದ ಇವರಿಗೆ ದೈವಾರಾಧನೆಯ ಬಲವಾದ ನಂಟು ಉಂಟೆನ್ನುವುದು ನನ್ನ ಅನಿಸಿಕೆ. ಇವರು ನೂರಾರು ಬ್ರಹ್ಮ ಬೈದರ್ಕಳ ಗರಡಿಗಳು, ಮತ್ತು ದೈವಾರಾಧನೆಯ ಸ್ಥಳಗಳನ್ನು ದರ್ಶಿಸಿ ಅಲ್ಲಿನ ಆರಾಧನೆಯ ಕ್ರಮಗಳನ್ನು ಸ್ವತಃ ನೋಡಿ ಅಲ್ಲಿನವರಿಂದ ಕೇಳಿ ತಿಳಿದು ಬ್ಲಾಗಿನಲ್ಲಿ ಬರೆದಿದ್ದಾರೆ, ಇದರಲ್ಲೇನು ವಿಶೇಷ? ಹೀಗೆ ನೂರಾರು ಗರಡಿ,ಸಾನಗಳನ್ನು ಸುತ್ತಿ ಅಲ್ಲಿನ ಆಚರಣೆಗಳ ಕುರಿತು ಸಂಶೋಧನೆ ಮಾಡಿ ಬರೆದು ಪ್ರಶಸ್ತಿ,ಸಮ್ಮಾನ, ಬಿರುದಾವಳಿಗಳನ್ನು ಸಂಪಾದಿಸಿದವರು ನಮ್ಮ ನಡುವೆ ಬಹಳ ಜನ ಇಲ್ಲವೇ ಎಂದು ನೀವು ಕೇಳಬಹುದು, ಹೌದು ಇದ್ದಾರೆ, ಬೇಕಾದರೆ ಅವರ ಬಗ್ಗೆಯೇ “ಕರಾವಳಿಯ ಸಾವಿರದೊಂದು ಎಡಬಿಡಂಗಿಗಳು” ಎನ್ನುವ ಗ್ರಂಥವನ್ನೇ ರಚಿಸಬಹುದು. ಯಾಕೆಂದರೆ ಅವರಿಗೆ ತಾವು ಕಂಡ ಆರಾಧನೆಗಳಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ,ಜಾತಿ-ವರ್ಗಸಂಘರ್ಷದಂತಹ ಲೌಕಿಕ ವಿಚಾರಗಳೇ ಕಾಣಿಸಿದವು ಹೊರತು ಆ ಆರಾಧನೆಯ ಅಂತರಾರ್ಥ ಏನು? ತತ್ವಗಳೇನು? ಈ ಆರಾಧನೆಯು ಶಾಸ್ತ್ರ ಸೂತ್ರಗಳಿಗೆ ಹೊಂದಿಕೊಳ್ಳುತ್ತದೆಯೋ ? ಎನ್ನುವ ಚಿಂತನೆಯೂ ಅವರಿಗೆ ಬರಲಿಲ್ಲ. ಅವರಿಗೆಲ್ಲ ತಾವು ಸಂಶೋಧಕರಾಗಿ ಸ್ಥಾಪನೆಯಾಗುವ ಅವಸರ, ಭಾಷಣ ಸೆಮಿನಾರುಗಳ ಗಡಿಬಿಡಿ ಬಹಳವಿತ್ತು ಪಾಪ.
ಆದರೆ ವೆಂಕಟೇಶ್ ಕರ್ಕೇರ ಅವರಿಗೆ ಮೊದಲೇ ಖಚಿತತೆ ಇದ್ದಂತೆ ಕಾಣುತ್ತದೆ, ಹೇಗೆಂದರೆ ಅವರು ತಮ್ಮ ಲೇಖನದಲ್ಲಿ ಎಲ್ಲೋ ಒಂದು ಕಡೆ ಹೀಗೆ ಉಲ್ಲೇಖಿಸಿದ್ದಾರೆ ಏನೆಂದರೆ “ದೈವಾರಾಧನೆ ಒಂದು ಪಾರಮಾರ್ಥಿಕ ವಿಚಾರ. ಪಾರಮಾರ್ಥಿಕ ವಿಚಾರವನ್ನು ತಿಳಿಯಲು ಹೊರಟಾಗ ಅದನ್ನು ಸಾಮಾಜಿಕ, ರಾಜಕೀಯ, ವರ್ಗಸಂಘರ್ಷದಂತಹ ಲೌಕಿಕ ದೃಷ್ಟಿಕೋನದಲ್ಲಿ ಇದನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುವುದು ಮೂರ್ಖತನ. ಈ ರೀತಿ ನೋಡಿದರೆ ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ. ಆರಾಧನೆಗಳನ್ನು ಶಾಸ್ತ್ರಗಳ ತಳಹದಿಯ ಮೇಲೆ ನೋಡಿದಾಗ ಮಾತ್ರ ಅದು ತನ್ನ ಒಳಗನ್ನು ತೋರ್ಪಡಿಸುತ್ತದೆ” ಎಂದು. ಈ ಸ್ವರೂಪ ಜ್ಞಾನದಿಂದಲೇ ತಮ್ಮ ತಿರುಗಾಟದಲ್ಲಿ ಕಂಡ ಎಲ್ಲವನ್ನೂ ಸನಾತನದ ಜರಡಿಗೆ ಹಾಕಿ ಕಂಡರು, ಹಾಗೆ ಸೋಸುವಾಗ ಅವರಿಗೆ ದೈವಾರಾಧನೆ ಮತ್ತು ಬೈದ್ಯಾರಾಧನೆಯಲ್ಲಿ ಕಂಡದ್ದು ಕೇವಲ ವೇದಾಂತದ ಸಾರ ಮಾತ್ರ. ಈ ಲೇಖನ ಮಾಲಿಕೆಗಳಲ್ಲಿ ಸಿಂಹಪಾಲು ಲೇಖನಗಳು ಬೈದ್ಯಾರಾಧನೆಯ ಬಗ್ಗೆಯೇ ಇವೆ, ಬ್ರಹ್ಮ ಬೈದರ್ಕಳ ವಿಚಾರಗಳಲ್ಲಿ ಇರುವ ಹಲವಾರು ಗೊಂದಲಪೂರಿತ ವಿಚಾರಗಳು ಒಂದು ಶ್ರೇಷ್ಠ ಆರಾಧನಾ ಪದ್ಧತಿಯ ಮೇಲೆ ಕವಿದ ಕಾರ್ಮೋಡದಂತೆ ಎಲ್ಲವನ್ನೂ ಅಯೋಮಯ ಮಾಡಿದ್ದವು. ಈ ಎಲ್ಲವಕ್ಕೂ ಸಮರ್ಪಕವಾದ ಉತ್ತರ ನೀಡುವಲ್ಲಿ ಇಲ್ಲಿನ ಲೇಖನಗಳು ಖಂಡಿತಾ ಯಶ ಕಂಡಿವೆ.
ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು, ವೆಂಕಟೇಶ್ ಕರ್ಕೇರರು ಕೇವಲ ಈ ವಿಚಾರಧಾರೆಗಳನ್ನು ಬರವಣಿಗೆಯಲ್ಲಿ ನೀಡಿ ಸುಮ್ಮನಾಗಲಿಲ್ಲ, ಎಷ್ಟೇ ಮೌಲ್ಯಯುತ ವಿಷಯವಿರಲಿ, ಕೇವಲ ಬರಹ, ಭಾಷಣಗಳ ಮೂಲಕ ತಿಳಿಸಿದ ಮಾತ್ರಕ್ಕೆ ಅದರ ಫಲಶ್ರುತಿ ಲಭಿಸದು, ಆ ವಿಚಾರಗಳು ಆಚರಣೆಗೆ ಬಂದರೆ ಮಾತ್ರ ಅದು ಸಾರ್ಥಕ. ಹಾಗೆ ಬರಲು ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರೇ ಅದಕ್ಕೆ ಮಾಧ್ಯಮವಾಗಬೇಕು, ಕರ್ಕೇರ ಮತ್ತವರ ಸಸ್ನೇಹಿತ ಬಳಗ ಆರಾಧನಾ ರಂಗದಲ್ಲಿ ತೊಡಗಿರುವ ಒಂದಷ್ಟು ಹೊಸ ಪೀಳಿಗೆಯ ಯುವಕರ ವಿಶ್ವಾಸ ಗಳಿಸಿ ಅವರಿಗೆ ದೈವಾರಾಧನೆಯ ಮಹತ್ವವನ್ನು, ಇದರ ವಿಧಿವಿಧಾನಗಳನ್ನು ಶಾಸ್ತ್ರೀಯವಾಗಿ ಅರ್ಥ ತಿಳಿದು ಹೇಗೆ ನಡೆಸಬೇಕು, ಹಾಗೆ ಪರಿಪೂರ್ಣತೆಯ ಆರಾಧನೆ ನಡೆಸುವುದರಿಂದ ದೈವಗಳ ಮೇಲೆ ನಂಬಿಕೆ ಇಟ್ಟು ಬರುವ ಭಕ್ತಾದಿಗಳಿಗೆ ಇದು ಯಾವ ಫಲ ಕೊಡುತ್ತದೆ ಎಂಬುವುದನ್ನು ಮನದಟ್ಟು ಮಾಡಿ ಅವರನ್ನು ಅಣಿಗೊಳಿಸುತ್ತಾ ಬಂದರು. ಅದರಿಂದಾಗಿ ಇಂದು ಹಲವಾರು ಗರಡಿ, ದೈವಾರಾಧನಾ ಕ್ಷೇತ್ರಗಳಲ್ಲಿ ಒಂದು ರೀತಿಯ ಮೌನಕ್ರಾಂತಿ ನಡೆದಿದೆ, ಬದಲಾವಣೆ ಬಂದಿದೆ, ಯುವ ದೈವಾರಾಧಕರು ಯೋಚಿಸುವ ರೀತಿ ಬದಲಾಗಿದೆ.
ಕರ್ಕೇರರು ವಿಜ್ಞಾನ ಪದವೀಧರ, ಹಾಗಾಗಿ ಇವರು ವೈಜ್ಞಾನಿಕ ದೃಷ್ಟಿಕೋನದಿಂದ ಆರಾಧನೆಯನ್ನು ಕಾಣುತ್ತಾರೆ, ಹೀಗೆ ನೋಡುತ್ತಾ ಜೊಳ್ಳು ಯಾವುದು ಕಾಳು ಯಾವುದು ಎನ್ನುವುದನ್ನು ಬಹಳ ನಿಖರವಾಗಿ ಗುರುತಿಸಿ ಅದನ್ನು ಬೇರ್ಪಡಿಸಿ ತೋರಿಸುವ ಕೆಲಸವನ್ನು ಬಹಳ ಪರಿಣಾಮಕಾರಿಯಾಗಿ ಮಾಡಿದ್ದಾರೆ. ಅವರ ಉದ್ಯೋಗ, ಖಾಸಗಿ ಬದುಕಿನ ಜಂಜಾಟಗಳ ನಡುವೆಯೂ ಇಷ್ಟು ಸಮಯವನ್ನು ವ್ಯಯಿಸಿ, ಇಷ್ಟು ದೊಡ್ಡ ಪ್ರಮಾಣದಲ್ಲಿ ಸರಣಿ ಲೇಖನಗಳನ್ನು ಬರೆದು ಪ್ರಕಟಿಸಿದ ಅವರ ಶ್ರಮ, ಬದ್ಧತೆ, ತಾಳ್ಮೆಗೆ ಧನ್ಯವಾದಗಳು ಸಲ್ಲಲೇಬೇಕು. ಯುವಪೀಳಿಗೆಗೆ ಒಳ್ಳೆಯ ಆಕರಗಳು ಸಿಗಲಿ ಎನ್ನುವುದು ಅವರ ಇಚ್ಛೆ. ದೇವರ ವಿಚಾರ ತಿಳಿಯಲು ಅನುಭವಕ್ಕಿಂತ ಅನುಭಾವ ಮುಖ್ಯ ಎನ್ನುವುದು ಹಿರಿಯರ ಮಾತು. ಬಹುಶಃ ಆ ಶಕ್ತಿಗಳೇ ಇವರ ಒಳಗಣ್ಣನ್ನು ತುಂಬಿ ಇಂಥಹ ಗಹನವಾದ ಬರಹಗಳು ಮೂಡಲು ಕಾರಣವಾಗಿರಬಹುದು ಎನಿಸುತ್ತದೆ. ಯಾಕೆಂದರೆ ಪಾರಮಾರ್ಥಿಕ ವಿಚಾರಗಳನ್ನು ಮಾತನಾಡುವುದೋ, ಬರೆಯುವುದೋ ಮಾಡಬೇಕಾದರೆ ಹೊರಗಿನ ಬಲ ಅಂದರೆ ನಮ್ಮ ಪ್ರತಿಭೆ,ಓದು,ಬರಹ, ಶಿಕ್ಷಣ ಇತ್ಯಾದಿಗಳಷ್ಟೇ ಸಾಲದು. ಒಳಗಿನ ಸಂಸ್ಕಾರ,ಸದಾಚಾರಗಳಿಂದಷ್ಟೇ ಆ ಬಲ ಸಂಚಯವಾಗಬಹುದಾದದ್ದು. ಶ್ರೀ ವೆಂಕಟೇಶ ಕರ್ಕೇರರು ಆ ಒಳಗಿನ ಬಲದಿಂದಲೇ ಇಷ್ಟೆಲ್ಲ ತಲಸ್ಪರ್ಶಿಯಾಗಿ ದೈವಾರಾಧನೆಯನ್ನು ಕುರಿತು ಬರೆದಿದ್ದಾರೆ, ಇವರಿಂದ ಇನ್ನೂ ಬಹಳಷ್ಟು ಬರಹಗಳು ಮೂಡಿ ಬರಲಿ. ತನ್ಮೂಲಕ ದೈವಾರಾಧನರಂಗಕ್ಕೂ ದೈವಾರಾಧಕರಿಗೂ ಹಾಗೂ ಭಕ್ತರಿಗೂ ಸಮಷ್ಟಿಯಾಗಿ ಎಲ್ಲರೂ ದೈವಾರಾಧನೆಯನ್ನು ಅರಿತು ಆರಾಧಿಸುವಂತಾಗಲಿ ಈ ಮುಖೇನ ಎಲ್ಲರೂ ದೈವಾನುಗ್ರಹಕ್ಕೆ ಪಾತ್ರರಾಗಲಿ ಎಂಬ ಸದಾಶಯದೊಂದಿಗೆ “ಭದ್ರಂ ಶುಭಂ ಮಂಗಲಂ”
🖋️ ಶ್ರೀ ಹಂಸ