ಸಮುದಾಯ ಭಾವನೆ ಜತೆ ಚೆಲ್ಲಾಟ ಬೇಡ:ಸತ್ಯಜಿತ್
ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು, ಕೋಟಿ ಚೆನ್ನಯರ ಹೆಸರಿನಲ್ಲಿ ಬಿಲ್ಲವ ಸಮಾಜದ ಜನರ ಭಾವನೆಗಳ ಜತೆಗೆ ಚೆಲ್ಲಾಟವಾಡುವ ಪ್ರಯತ್ನ ಮುಂದುವರಿಸಿದರೆ, ಈ ಬಾರಿ ಅದಕ್ಕೆ ತಕ್ಕ ಉತ್ತರವನ್ನು ಸಮಾಜದ ಜನತೆ ನೀಡಲಿದ್ದಾರೆ ಎಂದು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಲ್ಲವ ಸಮಾಜ ನಂಬಿಕಸ್ತ ಹಾಗೂ ಮುಗ್ಧ ಸಮಾಜ. ಭಾವನಾತ್ಮಕವಾಗಿ ಅವರ ಜತೆ ಚೆಲ್ಲಾಟವಾಡಬಹುದು ಎಂಬುದು ಸ್ಥಳೀಯ ಬಿಜೆಪಿ ನಾಯಕರು ಭಾವಿಸಿದ್ದರೆ, ಅದು ಇನ್ನು ಮುಂದೆ ಸಾಧ್ಯವಿಲ್ಲ. ಪ್ರಧಾನಿ ಮೋದಿಯವರು ಮಂಗಳೂರಿಗೆ ಆಗಮಿಸಿ ರೋಡ್ ಶೋ ನಡೆಸುವ ವೇಳೆ ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಲಿರುವುದು ಸ್ವಾಗತಾರ್ಹ. 2022ರ ಗಣರಾಜ್ಯೋತ್ಸವ ಪರೇಡ್‌ಗಾಗಿ ಕೇರಳ ಸರಕಾರವು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ರೂಪಿಸಿದ್ದ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಅಂದು ಪ್ರಧಾನಿಯವರು ಅದಕ್ಕೆ ಅವಕಾಶ ನೀಡಿದ್ದರೆ ಅದು ನಾರಾಯಣ ಗುರು ಹಾಗೂ ಅವರನ್ನು ಪೂಜಿಸುವ, ಗೌರವಿಸುವ ಬಿಲ್ಲವ ಸಮುದಾಯಕ್ಕೆ ಮಾಡುವ ದೊಡ್ಡ ಗೌರವ ಆಗಿರುತ್ತಿತ್ತು ಎಂದರು.
ಹಿ0ದಿನ ಬಿಜೆಪಿ ಆಡಳಿತ ಅವಧಿಯಲ್ಲಿ ಪಠ್ಯಪುಸ್ತಕದಿಂದ ನಾರಾಯಣಗುರುಗಳ ಹೆಸರನ್ನು ಕೈಬಿಡಲಾಗಿತ್ತು. ಇದಕ್ಕೂ ಪ್ರತಿಭಟನೆ ನಡೆದು ಸಾಕಷ್ಟು ಸಬೂಬು ನೀಡಿದ್ದ ಬಿಜೆಪಿ ಸರಕಾರ ಸಮಾಜದ ಪ್ರತಿಭಟನೆಯ ಕಾವು ಹೆಚ್ಚಾದಾಗ ಮಣಿದು ಪಠ್ಯವನ್ನು ಅಳವಡಿಸಿತ್ತು. ಆದರೆ ಪಠ್ಯವನ್ನು ಕೈಬಿಡುವಲ್ಲಿ ಪ್ರಮುಖ ಕಾರಣಕರ್ತರಾಗಿದ್ದ ರೋಹಿತ್ ಚಕ್ರತೀರ್ಥರನ್ನು ಬಿಜೆಪಿ ಶಾಸಕರು ವೇಣೂರಿನ ಕಾರ್ಯಕ್ರಮದಲ್ಲಿ ಸನ್ಮಾನಿಸುವ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಮಾತ್ರವಲ್ಲದೆ, ಅವರಿಗೆ ಅಪಮಾನ ಮಾಡಿದ ವ್ಯಕ್ತಿಗೆ ಸನ್ಮಾನ ಮಾಡಿರುವುದು ಸಮಾಜ ಮರೆತ್ತಿಲ್ಲ ಎಂದರು.
ದ.ಕ., ಶಿವಮೊಗ್ಗ ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಮಾಜದ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಕಾರ್ಯ ನಡೆಯುತ್ತಿದೆ. ಸಮಾಜದಲ್ಲಿ ಬದಲಾವಣೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದು ಚುನಾವಣೆಯ ಫಲಿತಾಂಶದಿAದ ನಿರ್ಧಾರ ಆಗಲಿದೆ. ಸಮಾಜಕ್ಕೆ ಯಶಸ್ಸು ಸಿಗುವ ವಿಶ್ವಾಸ ಇದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ವೇದ ಕುಮಾರ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಗೆಜ್ಜೆಗಿರಿ ಕ್ಷೇತ್ರದ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ ಉಪಸ್ಥಿತರಿದ್ದರು.