ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಐದು ಬಾರಿ ಶಾಸಕರಾಗಿ ತಾಲೂಕಿನ ಅಭಿವೃದ್ಧಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದ ನೇರ ನಡೆನುಡಿಯ, ದಿಟ್ಟ ಹೋರಾಟಗಾರ, ಭ್ರಷ್ಟಾಚಾರಿಗಳಿಗೆ ದುಃಸ್ವಪ್ನರಾಗಿದ್ದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಇಂದು ಸಂಜೆ ಚಿರನಿದ್ರೆಗೆ ಜಾರಿದ್ದು, ಅವರ ಪ್ರಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನ ನಾಳೆ ಮೇ 9ರಂದು ಬೆಳಿಗ್ಗೆ ಹಳೆಕೋಟೆಯ ಅವರ ಮನೆಯಲ್ಲಿ ನಡೆಯಲಿದೆ.
ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿ ಐದು ಅವಧಿಗೆ ಸೇವೆ ಸಲ್ಲಿಸಿ, ತಾಲೂಕಿನ ಅಭಿವೃದ್ಧಿಗೆ ವಿಶೇಷ ಕೊಡುಗೆಯನ್ನು ಬಂಗೇರರು ನೀಡಿದ್ದರು, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳಿಂದ ಸ್ಪರ್ಧಿಸಿ ಚುನಾಯಿತರಾದ ಏಕೈಕ ಶಾಸಕ ಬಂಗೇರರು, ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಂಗೇರರು, ಶ್ರೀ ಗುರುದೇವ ಪದವಿ ಪೂರ್ವ ಹಾಗೂ ಪದಪಿ ಕಾಲೇಜನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ಆನೇಕ ಮಂದಿ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಿದ ಕೀರ್ತಿ ಬಂಗೇರರಿಗೆ ಸಲ್ಲುತ್ತದೆ. ಕಳೆದ ನಾಲೈದು ತಿಂಗಳ ಹಿಂದೆ ಅಸೌಖ್ಯಕ್ಕೆ ಒಳಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಗೇರರು ಇಂದು ಸಂಜೆ ಆಸ್ಪತ್ರೆಯಲ್ಲಿ ನಿಧನರಾದರೆಂದು ವರದಿಯಾಗಿದೆ. ಬಂಗೇರರ ಪಾರ್ಥಿವ ಶರೀರವನ್ನು ಇಂದು ರಾತ್ರಿ 3 ಗಂಟೆಗೆ ಬೆಳ್ತಂಗಡಿಯ ಹಳೆಕೋಟೆಯ ಮನೆಗೆ ತರುವ ಸಾಧ್ಯತೆಗಳಿದ್ದು, ನಾಳೆ ಬೆಳಿಗ್ಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.