ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ ಭಗವದ್ಗೀತೆಯ ಸಂದೇಶವೂ ಇದೇ ಅರ್ಥವನ್ನು ಸೂಚಿಸುತ್ತದೆ. ಬದುಕಿನಲ್ಲಿ ಬಂದೆರಗುವ ಸನ್ನಿವೇಶ ಮತ್ತು ಸವಾಲುಗಳನ್ನು ನಗುಮುಖದಿಂದ ಎದುರಿಸಲು ಆಲೋಚನಾ ಕ್ರಮಗಳು ಸಕಾರಾತ್ಮಕವಾಗಿದ್ದರೆ ಮಾತ್ರ ಸಾಧ್ಯವಾಗುತ್ತದೆ. ಅಂಥವರ ವ್ಯಕ್ತಿತ್ವ ಎಲ್ಲರಿಗಿಂತಲೂ ಉನ್ನತವಾಗಿದ್ದು ಅವರ ನಡೆಯೂ ಇತರರಿಗೆ ಆದರ್ಶವಾಗಿರುತ್ತದೆ. ಈ ಗುಣವೇ ಅವರನ್ನು ನಾಯಕತ್ವದ ಹಾದಿಯಲ್ಲಿ ಮುನ್ನಡೆಸುತ್ತದೆ. ಇತರ ವ್ಯಕ್ತಿಗಳಿಗಿಂತ ವಿಭಿನ್ನವಾಗಿ ನೋಡುವಂತೆ ಮಾಡುತ್ತದೆ ಎನ್ನುವುದಕ್ಕೆ ನಮ್ಮ ಮುಂದೆ ಉದಾಹರಣೆಯಾಗಿ ನಿಲ್ಲುವ ಯಶಸ್ವಿ ಸಾಧಕರಲ್ಲಿ ಸೂರ್ಯಕಾಂತ್ ಜಯ ಸುವರ್ಣರು ಮುಖ್ಯರಾಗುತ್ತಾರೆ. ಇವರಿಗೀಗ ಐವತ್ತರ ಸಂಭ್ರಮ.
ಮುಂಬಯಿಯ ಪ್ರತಿಷ್ಠಿತ ಮಲ್ಟಿಸ್ಟೇಟ್ ಶೆಡ್ಯೂಲ್ಡ್ ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರು ಸಾಧನೆಯ ಹಾದಿಯಲ್ಲಿ ಉನ್ನತ ಮಟ್ಟದ ಧ್ಯೇಯವನ್ನು ಇಟ್ಟುಕೊಂಡು ಮುನ್ನಡೆಯುತ್ತಿರುವವರು. ೨೦೧೩ರಿಂದ ೨೦೨೩ರವರೆಗೆ ಭಾರತ್ ಬ್ಯಾಂಕ್‌ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರಿಗೆ ಬ್ಯಾಂಕಿಂಗ್ ಕ್ಷೇತ್ರದ ಕಾರ್ಯಚಟುವಟಿಕೆಗಳ ಕುರಿತು ಅಪಾರ ಅನುಭವವೂ ಇತ್ತು. ೨೦೨೩ರಲ್ಲಿ ಇವರು ಕಾರ್ಯಾಧ್ಯಕ್ಷರಾದ ಮೇಲೆ ಭಾರತ್ ಬ್ಯಾಂಕ್ ಗಣನೀಯ ಪ್ರಗತಿಯನ್ನು ಕಂಡಿದೆ. ೨೦೨೪ರಲ್ಲಿ ಮುಂಬಯಿಯ ಲಲಿತ್ ಗ್ರ್ಯಾಂಡ್ ಆಡಿಟೋರಿಯಂನಲ್ಲಿ ಮೇ ೨೨ ರಂದು ನಡೆದ ಭಾರತ ರತ್ನ ಸಹಕಾರಿತಾ ಸಮ್ಮಾನ್ ಬ್ಯಾಂಕಿಂಗ್ ಶೃಂಗ ಸಭೆಯಲ್ಲಿ, ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಸುವರ್ಣರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಕರಣೀಯ ನಾಯಕತ್ವಕ್ಕೆ ಅತ್ಯುತ್ತಮ ಕಾರ್ಯಾಧ್ಯಕ್ಷ ಪ್ರಶಸ್ತಿಯೂ ಲಭಿಸಿತು. ಈ ಪ್ರಶಸ್ತಿಯನ್ನು ಭಾರತ ಸರ್ಕಾರದ ಸಂವಹನ ಸಚಿವಾಲಯದ ಮಹಾ ನಿರ್ದೇಶಕ ಸುಮೇಶ್ ಜೋಶಿಯವರು ನೀಡಿ ಗೌರವಿಸಿದರು. ಬ್ಯಾಂಕಿನ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸುತ್ತಿರುವ ಸಲುವಾಗಿ ಸೂರ್ಯಕಾಂತ್ ಅವರಿಗೆ ಈ ಪ್ರಶಸ್ತಿ ಅರ್ಹವಾಗಿ ಸಂದಿದೆ.
ಬಿಲ್ಲವ ಸಮಾಜದ ಅಭಿವೃದ್ದಿಯ ರೂವಾರಿ ಸನ್ಮಾನ್ಯ ಜಯ ಸಿ. ಸುವರ್ಣ ಅವರ ಹಿರಿಯ ಪುತ್ರರಾದ ಸೂರ್ಯಕಾಂತ್ ಅವರ ಮುಂದಾಳತನದಲ್ಲಿ ಭಾರತ್ ಬ್ಯಾಂಕ್‌ನ ದೂರದೃಷ್ಟಿಯ ಕಾರ್ಯತಂತ್ರಗಳು, ವೃತ್ತಿನಿಷ್ಠೆ ಮತ್ತು ಪ್ರಾಯೋಗಿಕ ವಿಧಾನಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ ಎನ್ನುವುದಕ್ಕೆ ಈ ಪ್ರಶಸ್ತಿ ಸಾಕ್ಷಿಯಾಗಿದೆ. ಇದು ಭಾರತ್ ಬ್ಯಾಂಕ್‌ನ ಘನತೆಯನ್ನೂ ಹೆಚ್ಚಿಸಿದೆ. ಅವರ ವಿಚಾರಪೂರ್ಣ ನಿಲುವು, ಕ್ರಿಯಾತ್ಮಕ ಚಿಂತನೆಗಳು ಬ್ಯಾಂಕಿನ ಏಳಿಗೆಯ ಸಲುವಾಗಿ ಅವರಿಗಿರುವ ಬದ್ಧತೆ ಮತ್ತು ಉತ್ತಮ ನಾಯಕತ್ವದ ಗುಣಗಳಿಂದಾಗಿ ಭಾರತ್ ಬ್ಯಾಂಕ್ ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೇರಬಹುದೆನ್ನುವ ಭರವಸೆಯನ್ನು ಮೂಡಿಸಿದೆ. ಸೂರ್ಯಕಾಂತ್ ಅವರು, ‘ಈ ಸಾಧನೆಯ ಹಿಂದಿನ ಸಾಮೂಹಿಕ ಪ್ರಯತ್ನ ಮತ್ತು ಕಠಿಣ ಪರಿಶ್ರಮಕ್ಕೆ ಬ್ಯಾಂಕಿನ ಎಲ್ಲ ಪೂರ್ವ ಕಾರ್ಯಾಧ್ಯಕ್ಷರಿಗೆ, ಪೂರ್ವ ಮತ್ತು ಪ್ರಸ್ತುತ ಸಹ ನಿರ್ದೇಶಕರಿಗೆ, ಶ್ರಮವಹಿಸಿ ದುಡಿಯುತ್ತಿರುವ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗದವರಿಗೆ, ಬ್ಯಾಂಕಿನ ಮೇಲೆ ನಂಬಿಕೆ ಇಟ್ಟಿರುವ ನಿಷ್ಠಾವಂತ ಶೇರುದಾರರು, ಜಯ ಸುವರ್ಣ ಹಿತೈಷಿಗಳು ಮತ್ತು ಗ್ರಾಹಕರಿಗೆ ಈ ಪ್ರಶಸ್ತಿಯ ಗೌರವವನ್ನು ಸಮರ್ಪಿಸಿದ್ದಾರೆ.
ಕೊರೋನ ಕಾಲದ ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ಮೂರು ವರ್ಷಗಳ ಕಾಲ ಬ್ಯಾಂಕಿನ ಸಿಬ್ಬಂದಿವರ್ಗದವರಿಗೆ ಲಾಭಾಂಶದ ಮೊತ್ತ ಲಭಿಸಿರಲಿಲ್ಲ. ಸೂರ್ಯಕಾಂತ್ ಕಾರ್ಯಧ್ಯಕ್ಷರಾದ ಮೇಲೆ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿವರ್ಗದವರಿಗೂ ಲಾಭಾಂಶದ ಮೊತ್ತವನ್ನು ಕೊಡಿಸುವ ಕೆಲಸವನ್ನು ಮೊದಲು ಮಾಡಿದರು. ಯಾಕೆಂದರೆ ಬ್ಯಾಂಕಿನ ಏಳಿಗೆಗೆ ಸಿಬ್ಬಂದಿ ವರ್ಗದವರ ಪಾತ್ರವನ್ನು ಅವರು ಅರಿತಿದ್ದರು. ಬ್ಯಾಂಕ್‌ನಲ್ಲಿ ಪಿಯೋನ್‌ನಿಂದ ಹಿಡಿದು ಎಂ.ಡಿಯವರೆಗೆ ಎಲ್ಲರನ್ನೂ ಸಮಾನ ನೆಲೆಯಿಂದ ನೋಡುತ್ತಿದ್ದ ಜಯ ಸಿ. ಸುವರ್ಣರಲ್ಲಿದ್ದ ಗುಣ ಸೂರ್ಯಕಾಂತ್ ಅವರಲ್ಲಿಯೂ ಪಡಿಮೂಡಿದೆ. ನಯ ವಿನಯತೆ, ನಿಷ್ಠೆ ಪ್ರಾಮಾಣಿಕತೆ, ಮುಂದಾಲೋಚನೆ, ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಧರ್ಮದ ಜೊತೆಗೆ ಬ್ಯಾಂಕನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ಛಲ ಸೂರ್ಯಕಾಂತ್ ಅವರಲ್ಲಿರುವ ವಿಶಿಷ್ಟ ಗುಣವಾಗಿದೆ. ಬ್ಯಾಂಕ್‌ನ ಆಡಳಿತ ಕೈಗೆ ಸಿಕ್ಕಿದ ಕೂಡಲೇ ಅವರು ಮಂಗಳೂರು, ಬೆಂಗಳೂರು, ಗುಜರಾತ್, ಪುಣೆ ಮತ್ತು ಮುಂಬಯಿ ಹೀಗೆ ಭಾರತ್ ಬ್ಯಾಂಕ್‌ನ ಎಲ್ಲ ಶಾಖೆಗಳಿಗೆ ಭೇಟಿ ನೀಡಿ ಸಭೆಯನ್ನು ನಡೆಸಿದ್ದಾರೆ. ಬ್ಯಾಂಕ್‌ನ ಧ್ಯೇಯೋದ್ದೇಶಗಳನ್ನು ಸಿಬ್ಬಂದಿವರ್ಗಕ್ಕೆ ಮನವರಿಕೆ ಮಾಡಿಸಿ ಉತ್ಸಾಹದಿಂದ ಕಾರ್ಯಪ್ರವೃತ್ತರಾಗಲು ಹುರಿದುಂಬಿಸಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ಮತ್ತು ಉದ್ಯೋಗಗಳಿಗೆ ಆರ್ಥಿಕ ಅಗತ್ಯತೆಗಳನ್ನು ಒದಗಿಸುವ ಗುರಿಯೊಂದಿಗೆ ಬ್ಯಾಂಕಿನ ಶೇರುದಾರರ ಕುರಿತಾಗಿ ಮಹತ್ವದ ಚಿಂತನೆಯನ್ನೂ ನಡೆಸಿದ್ದಾರೆ.
ಸೂರ್ಯಕಾಂತ್ ಕಾರ್ಯಾಧ್ಯಕ್ಷರಾದ ಮೇಲೆ, ಡಾಟಾ ಕ್ವಾಲಿಟಿ ಅವಾರ್ಡ್, ‘ಬೆಸ್ಟ್ ಐಟಿ ರಿಸ್ಕ್ ಮ್ಯಾನೇಜ್ಮೆಂಟ್ ಅವಾರ್ಡ್’, ಎರಡು ಬಾರಿ ಬೆಸ್ಟ್ ಹೆಚ್‌ಆರ್ ಮ್ಯಾನೇಜ್ಮೆಂಟ್ ಅವಾರ್ಡ್(೨೦೨೩-೨೦೨೪) ಮತ್ತು , ಬೆಸ್ಟ್ ಸೆಕ್ಯೂರಿಟಿ ಇನಿಟೇಟಿವ್, ಐಟಿ ಎಕ್ಸೆಲೆನ್ಸ್ ಅವಾರ್ಡ್, ಬೆಸ್ಟ್ ಸೈಬರ್ ಸೆಕ್ಯೂರಿಟಿ ಇನಿಟೇಟಿವ್ ಅವಾರ್ಡ್, ಬೆಸ್ಟ್ ಚೇರ್ಮನ್ ಅವಾರ್ಡ್, ಬೆಸ್ಟ್ ರಿಸ್ಕ್ ಆ್ಯಂಡ್ ಸೈಬರ್ ಸೆಕ್ಯೂರಿಟಿ ಇನಿಟೇಟಿವ್ ಅವಾರ್ಡ್ ಹೀಗೆ ಒಟ್ಟು ಒಂಬತ್ತು ಪ್ರಶಸ್ತಿಗಳು ಭಾರತ್ ಬ್ಯಾಂಕ್‌ಗೆ ಲಭಿಸಿವೆ. ಭಾರತ್ ಬ್ಯಾಂಕ್‌ನ ಪಿನಾಕಲ್ ಯಶಸ್ಸು ಅನೇಕ ಕೋ-ಆಪರೇಟಿವ್ ಬ್ಯಾಂಕ್‌ಗಳು ಮತ್ತು ಇತರ ಬ್ಯಾಂಕುಗಳ ಅಧ್ಯಯನ ತಂಡಕ್ಕೆ ಸಂಶೋಧನ ವಿಷಯವಾಗಿದೆ. ಕಳೆದ ವರ್ಷ ಬೆಸ್ಟ್ ಐಟಿ ರಿಸ್ಕ್ ಮ್ಯಾನೇಜ್ಮೆಂಟ್ ಪ್ರಶಸ್ತಿಯೂ ಸಿಕ್ಕಿರುವುದರಿಂದ ಕೆಲವು ಅಧ್ಯಯನ ತಂಡಗಳು ಭಾರತ್ ಬ್ಯಾಂಕಿನ ಕೇಂದ್ರ ಕಚೇರಿಯನ್ನು ಸಂದರ್ಶಿಸಿರುವುದು ಹೆಮ್ಮೆಯ ವಿಷಯವಾಗಿದೆ. ಸೂರ್ಯಕಾಂತ್ ಅವರ ಕಾರ್ಯಾಧ್ಯಕ್ಷತೆಯಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರದಲ್ಲಿ ಹೆಚ್ಚಳವಾಗಿದೆ. ಬ್ಯಾಂಕ್ ಮತ್ತಷ್ಟು ಅಭಿವೃದ್ಧಿಯನ್ನು ಕಾಣುತ್ತಿದೆ. ಎನ್‌ಪಿಎ ಕಡಿಮೆಯಾಗಿದೆ. ಆರ್‌ಬಿಐ ಕೆಲವು ನಿಯಮಗಳನ್ನು ಹೊಂದಿದ್ದು ಅದರ ಅಡಿಯಲ್ಲಿ ಸಮರ್ಥವಾಗಿ ಬ್ಯಾಂಕ್‌ನ ಆಡಳಿತವರ್ಗ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ, ಹೊಟೇಲ್ ಉದ್ಯಮಿಗಳಿಗೆ ವಿಶೇಷ ಸಾಲದ ವ್ಯವಸ್ಥೆ ಮಾಡಲಾಗಿದೆ. ಸಾಲದ ಮರು ಪಾವತಿಯಲ್ಲೂ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಉತ್ತಮ ಸೇವೆಯನ್ನು ನೀಡಲು ಭಾರತ್ ಬ್ಯಾಂಕ್‌ನ ಆಡಳಿತವರ್ಗ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ.
ಸೂರ್ಯಕಾಂತ್ ಓರ್ವ ತರಬೇತಿ ಪಡೆದ ಪೈಲಟ್ ಮತ್ತು ಬಹು ವಿಧದ ವ್ಯವಹಾರದಲ್ಲಿ ಅಪಾರ ಅನುಭವ ಮತ್ತು ಯಶಸ್ಸನ್ನು ಕಂಡಿರುವ ಉದ್ಯಮಿಯೂ ಆಗಿದ್ದಾರೆ. ಪ್ರಸ್ತುತ ಸಾಮಾಜಿಕ ಮತ್ತು ಬ್ಯಾಂಕ್‌ನ ಜವಾಬ್ದಾರಿಯಲ್ಲಿ ವ್ಯಸ್ತರಾಗಿದ್ದಾರೆ. ಇವರು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ತಂದೆ ಜಯ ಸುವರ್ಣಯಂತೆಯೇ ಸದ್ದಿಲ್ಲದೆ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಅವರದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಇವರು ತಮ್ಮ ವಿದ್ಯಾಭ್ಯಾಸವನ್ನು ಎಸ್.ಎಸ್.ಸಿ.ಯವರೆಗೆ ಮಹಾರಾಷ್ಟ್ರದ ಪಂಚಗನಿಯ ಸಂಜೀವನ್ ವಿದ್ಯಾಲಯ ಬೋರ್ಡಿಂಗ್ ಶಾಲೆಯಲ್ಲಿ ಪೂರೈಸಿ, ಉನ್ನತ ಶಿಕ್ಷಣವನ್ನು ಮುಂಬಯಿಯ ಅಂಧೇರಿಯಲ್ಲಿರುವ ಎಮ್.ವಿ.ಎಲ್.ಯು. ಕಾಲೇಜಿನಲ್ಲಿ ಪಡೆದಿದ್ದಾರೆ. ಯು.ಎಸ್. ಡಲ್ಲಾಸ್‌ನಲ್ಲಿ ವಾಣಿಜ್ಯ ಪೈಲೆಟ್ ತರಬೇತಿಯನ್ನು ಪಡೆದು, ಅಮೇರಿಕಾ ಮತ್ತು ಭಾರತದ ಪರವಾನಗಿಯನ್ನೂ ಗಳಿಸಿಕೊಂಡ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಸಮಾಜಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟುಕೊಂಡಿದ್ದ ಜಯ ಸುವರ್ಣರ ಸಾಮಾಜಿಕ ಚಟುವಟಿಕೆಗಳಿಗೆ ಬೆಂಬಲ ನೀಡಲು ಸೂರ್ಯಕಾಂತ್ ಅವರು ತನ್ನ ತಂದೆಯ ಉದ್ಯಮದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡರು. ೨೦೧೧ರಿಂದ ೨೦೧೯ರವರೆಗೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಯುವ ಅಭ್ಯುದಯ ಉಪಸಮಿತಿಯಲ್ಲಿ ಸೇವೆ ಸಲ್ಲಿಸಿದರು. ಸಮಾಜದ ಯುವಜನರು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ಪ್ರಥಮ ಬಾರಿಗೆ ಯೂತ್ ಫೆಸ್ಟಿವಲ್ ಅನ್ನು ಸಂಘಟಿಸಿದರು. ಇದರಿಂದ ಸಮಾಜದ ಯುವ ಬಾಂಧವರು ಎಸೋಸಿಯೇಶನ್‌ನೊಂದಿಗೆ ಸಂಬಂಧ ಬೆಸೆಯುವಲ್ಲಿ ಇನ್ನಷ್ಟು ಪ್ರೇರಣೆಯಾಯಿತು. ಸಮಾಜದೊಂದಿಗೆ ಹೇಗಿರಬೇಕು, ಸಮಾಜ ಸೇವೆ ಹೇಗೆ ಮಾಡಬೇಕು, ನಮ್ಮಿಂದ ಇತರರಿಗೆ ಯಾವ ರೀತಿ ಸಹಕಾರಿಯಾಗಬೇಕು ಎಂಬುದನ್ನು ಸೂರ್ಯಕಾಂತ್ ಅವರು ತಂದೆಯಿಂದಲೇ ಕಲಿತುಕೊಂಡಿದ್ದಾರೆ. ಬ್ಯಾಂಕ್ ಅನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ತನ್ನ ತಂದೆಯ ಮರಣದ ನಂತರ ಅವರ ನೆನಪಿನ ಸಲುವಾಗಿ ಮೂಲ್ಕಿಯಲ್ಲಿ ಜಯ ಸಿ. ಸುವರ್ಣ ರೋಟರಿ ಕ್ಲಬ್ ಚಿಲ್ಡ್ರನ್ಸ್ ಪಾರ್ಕ್ ಸ್ಥಾಪಿಸಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಕಲಿಯುವ ವಿದ್ಯಾರ್ಥಿಗಳಿಗೆ ಜಯಲೀಲ ಟ್ರಸ್ಟ್ ನ ಮುಖಾಂತರ ಶಿಷ್ಯವೇತನವನ್ನು ನೀಡುತ್ತಿದ್ದಾರೆ.
ಸೂರ್ಯಕಾಂತ್ ಅವರು ಊರು ಮತ್ತು ಪರವೂರಿನಲ್ಲಿ ನಡೆಯುವ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಸಮಾಜದ ಬಾಂಧವರ ಜೊತೆಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡಿರುವುದು ಮಾತ್ರವಲ್ಲದೆ ಕೆಲವೊಂದು ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ. ಶ್ರೀ ನಾರಾಯಣ ಗುರು ಇಂಗ್ಲಿಷ್ ಮೀಡಿಯಂ ಸ್ಕೂಲ್ ಮುಲ್ಕಿ ಇದರ ಟ್ರಸ್ಟಿ, ದೇಯಿ ಬೈದೆತಿ, ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ ಇದರ ಟ್ರಸ್ಟಿ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇದರ ಅಭಿವೃದ್ದಿ ಸಮಿತಿಯ ಸದಸ್ಯರಾಗಿ, ಹಾಗೂ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಇದರ ಮುಂಬಯಿ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ, ರೈನ್‌ಬೋ ಬುಡೊಕನ್ ಕರಾಟೆ ಅಕಾಡೆಮಿ, ಒಳನಾಡು ಮತ್ತು ಹೊರನಾಡಿನ ತುಳು ಕನ್ನಡಿಗರ ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳಿಂದ ಈಗಾಗಲೇ ಹಲವಾರು ಸನ್ಮಾನ ಪುರಸ್ಕಾರಗಳು ಲಭಿಸಿವೆ.
ಸಮಾಜ ಸೇವೆಯ ಕುರಿತು ಸೂರ್ಯಕಾಂತ್ ಅವರು, “ನನ್ನ ಅಪ್ಪನ ಸಾಮಾಜಿಕ ಕಾರ್ಯಗಳನ್ನು ಬಹಳ ಹತ್ತಿರದಿಂದ ಕಂಡವನಿದ್ದೇನೆ. ಸಮಾಜ ಸೇವೆ ಮಾಡುವುದೆಂದರೆ ಅದೊಂದು ತಪಸ್ಸು. ಸಾಮಾಜಿಕ ವಿಷಯದಲ್ಲಿ ನಾನಿನ್ನೂ ಬಹಳಷ್ಟು ತಿಳಿಯಬೇಕಾಗಿದೆ. ಸಮಾಜದ ಜೊತೆಗೆ ಒಡನಾಟದಲ್ಲಿಟ್ಟುಕೊಂಡೇ ಜನಸೇವೆಯ ಅನುಭವವನ್ನು ಪಡೆಯಬೇಕು. ಅಪ್ಪ ಮಾಡಿದ ಸಮಾಜ ಸೇವೆಯ ಒಂದಿಷ್ಟಾದರೂ ಮಾಡಲು ಸಾಧ್ಯವಾದರೆ ನನ್ನ ಜೀವನ ಸಾರ್ಥಕ” ಎಂದು ಪ್ರಬುದ್ಧತೆಯಿಂದ ನುಡಿಯುತ್ತಾರೆ. ವ್ಯಕ್ತಿ ಹಣದಲ್ಲಿ ಶ್ರೀಮಂತನಾಗುವುದಕ್ಕಿಂತ ಗುಣದಲ್ಲಿ ಶ್ರೇಷ್ಠನಾಗಿರಬೇಕು. ಅಹಂಕಾರವನ್ನು ತೊರೆದು ಎಲ್ಲರ ಜೊತೆಗೆ ಬೆರೆಯುವ ಮನೋವೈಶಾಲ್ಯತೆಯಿರಬೇಕು. ಸಮಾಜ ಬಾಂಧವರಲ್ಲಿ ಏಕತೆಯಿರಬೇಕು ಇಂಥ ಮೇರು ಮಟ್ಟದ ವ್ಯಕ್ತಿತ್ವ ಸೂರ್ಯಕಾಂತ್ ಅವರದ್ದು. ಜಯ ಸುವರ್ಣರಲ್ಲಿದ್ದ ನಾಯಕತ್ವದ ಗುಣ ಸೂರ್ಯಕಾಂತ್ ಅವರೊಳಗೂ ಇದೆಯೆಂಬುದು ಅವರ ಕಾರ್ಯಚಟುವಟಿಕೆಗಳಿಂದ ತಿಳಿದುಬರುತ್ತದೆ.
ಸೂರ್ಯಕಾಂತ್ ಸಮಾಜಸೇವೆ ಮಾಡುವ ದೀಕ್ಷೆಯನ್ನು ಕೈಗೊಂಡಾಗ ಕೆಲವೊಂದು ಸಂದರ್ಭದಲ್ಲಿ ಇಲ್ಲ ಸಲ್ಲದ ಅಪವಾದಗಳು ಅವರನ್ನು ಮುತ್ತಿಕೊಂಡವು. ಆದರೆ ಅವರು ಎಂದೂ ವಿಚಲಿತರಾಗಲಿಲ್ಲ. “ಯಾರೇನೇ ಹೇಳಲಿ, ಏನೇ ಮಾಡಲಿ. ನಾರಾಯಣ ಗುರುಗಳು ಎಲ್ಲವನ್ನೂ ಗಮನಿಸುತ್ತಾರೆ. ಅವರೇ ನಮ್ಮನ್ನು ರಕ್ಷಿಸುತ್ತಾರೆ. ಅವರಿಚ್ಛೆಯಂತೆಯೇ ಎಲ್ಲವೂ ನಡೆಯುತ್ತದೆ. ಕೋಟಿ ಚೆನ್ನಯರ ಆದರ್ಶಪಾಲನೆಯೇ ನಮ್ಮ ಜೀವನದ ಮುಖ್ಯ ಧ್ಯೇಯವಾಗಬೇಕು” ಎನ್ನುತ್ತ ತಮಗೆ ಬಂದ ಅಪವಾದಗಳಿಗೆ ಮರುಗದೆ ಸಹನೆಯಿಂದ ಹಿತೈಷಿಗಳಿಗೆ ಸಾಂತ್ವನ ನೀಡುವ ಅವರು ಬಲು ಎತ್ತರದ ಸ್ಥಾನದಲ್ಲಿ ಕಂಡುಬರುತ್ತಾರೆ. “ನಮ್ಮ ನಡೆ ಸತ್ಯದ ಹಾದಿಯಲ್ಲಿರಬೇಕು. ಆ ಹಾದಿಯಲ್ಲಿ ನಡೆಯುವುದು ಸ್ವಲ್ಪ ಕಷ್ಟವೇ. ಆದರೆ ಗೆಲ್ಲುವುದು ಸತ್ಯವೇ.” ಎನ್ನುವ ಧ್ಯೇಯ ವಾಕ್ಯವನ್ನು ಅಕ್ಷರಶಃ ಪಾಲಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಹಿರಿಯರಿಗೆ ತಲೆಬಾಗುವ, ಕಿರಿಯರನ್ನು ಗೌರವಿಸುವ ಸುಕೃತ ಸಂಸ್ಕಾರವನ್ನು ಹೊಂದಿರುವ ಸೂರ್ಯಕಾಂತ್ ಬಿಲ್ಲವ ಸಮಾಜದ ಶ್ರೇಷ್ಠ ನಾಯಕನಾಗಿ ಬೆಳೆಯಬಲ್ಲರು ಎನ್ನುವ ಭರವಸೆ ಗಟ್ಟಿಯಾಗುತ್ತದೆ.
‘ಸೂರ್ಯಕಾಂತ್ ತುಂಬಾ ಕಡಿಮೆ ಮಾತನಾಡ್ತಾರೆ. ನಮ್ಮ ಮಾತಿಗೆ ಪ್ರತಿಕ್ರಿಯಿಸುವುದೇ ಇಲ್ಲ’ ಎಂದು ಕೆಲವರ ಆರೋಪವಿದೆ. ಹೌದು ಸೂರ್ಯಕಾಂತ್ ಯಾರನ್ನೂ ಮಾತಿನಲ್ಲಿ ರಮಿಸುವುದಿಲ್ಲ. ಅವರ ಮಾತೆಂದರೆ ಪುಟಕ್ಕಿಟ್ಟ ಚಿನ್ನದಂತೆ. ಆಡುವ ಮಾತು ಹೇಗಿರಬೇಕು ಎಂಬುದನ್ನು ಸರಿಯಾಗಿ ಅರಿತವರು. ನಮ್ಮ ಮಾತು ಅನ್ಯರ ನೋವಾಗದೆ, ಸೋತವರನ್ನು ಅರಳಿಸುವ ಹೂವಾಗಬೇಕು ಎಂಬ ನಿಲುವನ್ನು ಹೊಂದಿರುವ ಇವರು ತಮ್ಮ ಬಳಿ ಬಂದವರೆಲ್ಲರ ಮಾತನ್ನು ತಾಳ್ಮೆಯಿಂದ ಆಲಿಸುತ್ತಾರೆ. “ಮುಂದೆ ಪಶ್ಚಾತಾಪ ಪಡುವಂತಹ ಯಾವುದೇ ತಪ್ಪುಗಳು ನಮ್ಮಿಂದ ಆಗಬಾರದು” ಎನ್ನುವ ಇವರು ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.
✍️ ಅನಿತಾ ಪಿ. ತಾಕೊಡೆ