ಪ್ರೀತಿಯಿಂದ ಕುಡ್ಲದ ಜನತೆ ಮನಗೆದ್ದೆ
ಭಾವುಕರಾಗಿ ನುಡಿದ ಎಸಿಪಿ ಮಹೇಶ್‌ಕುಮಾರ್ ಮಂಗಳೂರು ನಾಗರಿಕ ಸಮಿತಿಯಿಂದ ಬೀಳ್ಕೊಡುಗೆ
ಮಂಗಳೂರು: ಮಂಗಳೂರು ಜನರನ್ನು ಕಾನೂನು ಮತ್ತು ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ. ಕರಾವಳಿ ಜನತೆಗೆ ಪ್ರೀತಿ ಕೊಟ್ಟರೆ ಅವರು ನೂರುಪಟ್ಟು ಪ್ರೀತಿ ತೋರಿಸುತ್ತಾರೆ…
ಹೀಗೆ ಭಾವುಕರಾಗಿ ನುಡಿದವರು ಮಂಗಳೂರು ಸೆಂಟ್ರಲ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್‌ಕುಮಾರ್.
ಕೊಡಗಿಗೆ ವರ್ಗಾವಣೆಗೊಂಡ ಅವರನ್ನು ಮಂಗಳೂರು ನಾಗರಿಕ ಸಮಿತಿ ವತಿಯಿಂದ ಭಾನುವಾರ ಆಯೋಜಿಸಲಾದ ಅದ್ದೂರಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪೊಲೀಸ್ ಕೆಲಸದ ಜತೆಗೆ ಸಾಮಾಜಿಕ ಚಟುವಟಿಕೆಯಿಂದ ನಾನು ಜೀವನದಲ್ಲಿ ಖುಷಿ ಕಂಡಿದ್ದೇನೆ. ಮಂಗಳೂರು ಸರ್ವಧರ್ಮಗಳ ನೆಲೆಬೀಡು ಆಗಬೇಕು ಎನ್ನುವುದು ನಮ್ಮೆಲ್ಲರ ಕನಸು. ಈ ಸೌಹಾರ್ದದ ಮಂಗಳೂರಿನ ಗತವೈಭವ ಸಾರಲು ನಾವೆಲ್ಲ ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ಒಳ್ಳೆಯ ಕೆಲಸ ಮಾಡುವವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಮಹೇಶ್‌ಕುಮಾರ್ ಒಬ್ಬ ದಕ್ಷ, ಪ್ರಾಮಾಣಿಕ, ಜನಸ್ನೇಹಿ ಅಧಿಯಾಗಿರುವ ಜತೆಗೆ ತಮ್ಮ ಸಾಮಾಜಿಕ ಚಟುವಟಿಕೆಗಳ ಮೂಲಕ ಅನೇಕ ಮಂದಿಯ ಕಣ್ಣೀರೊರೆಸಿದ್ದಾರೆ. ಕರಾವಳಿಯ ಮೂಲೆಮೂಲೆಯ ಕಲಾವಿದರನ್ನು ಗುರುತಿಸಿ ಅವರಿಗೊಂದು ವೇದಿಕೆ ಕಲ್ಪಿಸುವ ಮೂಲಕ ಕಲಾಮಾಣಿಕ್ಯರಾಗಿದ್ದರು ಎಂದು ಶ್ಲಾಘಿಸಿದರು.
ಮಾಜಿ ಮೇಯರ್ ಶಶಿಧರ ಹೆಗ್ಡೆ ಮಾತನಾಡಿ, ನಿಷ್ಠೆ, ಪ್ರಬುದ್ಧತೆ, ಪ್ರಾಮಾಣಿಕತೆಯಿಂದಾಗಿ ಎಸಿಪಿ ಮಹೇಶ್‌ಕುಮಾರ್ ಮಂಗಳೂರಿನ ಜನತೆಯ ಮನಗೆದ್ದಿದ್ದಾರೆ. ಇಂದು ಇಂತಹ ಅಧಿಕಾರಿಗಳ ಅನಿವಾರ್ಯತೆ ಇದೆ ಎಂದರು.
ಗಾಯಕರಾರ ರಮೇಶ್ಚಂದ್ರ, ಸಂಯುಕ್ತ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಕೆ.ಕೆ.ನೌಷಾದ್, ಡಿವೈಎಸ್‌ಪಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಡಾ.ಅಮರಶ್ರೀ ಅಮರನಾಥ ಶೆಟ್ಟಿ, ಜಯಪ್ರಕಾಶ್ ರೈ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಉಪಾಧ್ಯಕ್ಷ ಐವನ್ ಡಿಸೋಜ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉದ್ಯಮಿ ಶೈಲೇಂದ್ರ ವೈ ಸೂವರ್ಣ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಮೊದಲಾದವರಿದ್ದರು. ತೋನ್ಸೆ ಪುಷ್ಕಳ್‌ಕುಮಾರ್ ಸ್ವಾಗತಿಸಿದರು. ಆರ್.ಜೆ. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.
—-
ಪುಷ್ಪವೃಷ್ಟಿಗೈದು ಭಾವುಕರಾದರು
ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಎಸಿಪಿ ಮಹೇಶ್‌ಕುಮಾರ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ನಾಗರಿಕರು ಮಹೇಶ್‌ಕುಮಾರ್ ಮೇಲೆ ಪುಷ್ಪವೃಷ್ಟಿಗೈದು ಭಾವುಕರಾಗಿ ಬೀಳ್ಕೊಟ್ಟರು.