ತುಳುವರ ಸಭೆ ಸಮಾರಂಭಗಳಲ್ಲಿ ಕೈಗೆ ಮೈಕ್ ಸಿಕ್ಕ ಕೂಡಲೇ- ‘‘ನಮ್ಮದು ಪರಶುರಾಮ ಸೃಷ್ಟಿ’’ ಎಂದು ಹೇಳುತ್ತಲೇ ಭಾಷಣ ಶುರು ಮಾಡುವವರು ಹಲವರಿದ್ದಾರೆ. ಆದರೆ ಈ ಕಥೆಯನ್ನು ಅವರೆಂದೂ ವಿಶ್ಲೇಷಿಸಿರುವುದಿಲ್ಲ. ನಿಜವಾಗಿ ತುಳುನಾಡನ್ನು ಪರಶುರಾಮ ಸೃಷ್ಟಿಸಿದ್ದು ಎಂಬ ಪೌರಾಣಿಕ ಕಥೆಗೆ ಯಾವುದೇ ಐತಿಹಾಸಿಕ ಅಥವಾ ವೈಜ್ಞಾನಿಕ ಆಧಾರಗಳಿಲ್ಲ. ಕೇರಳದ ತ್ರಿವೇಂದ್ರಂನಿಂದ ಹಿಡಿದು ಗುಜರಾತ್‌ನ ಉಮರ್ಗಾಮ್‌ವರೆಗಿನ ನಮ್ಮ ಪಶ್ಚಿಮ ಕರಾವಳಿ ಸೃಷ್ಟಿಯಾಗಿದ್ದು, ಸುಮಾರು ನಾಲ್ಕರಿಂದ ಆರು ಕೋಟಿ ವರ್ಷಗಳ ಹಿಂದೆ, ಅದೂ ಆಫ್ರಿಕಾ ಖಂಡದಿಂದ ತುಂಡಾಗಿ ಸರಿದು ಬಂದ ಭೂಭಾಗವಿದು.
ಕೇರಳದಿಂದ ಮಹಾರಾಷ್ಟ್ರ-ಗುಜರಾತ್ ಗಡಿಯವರೆಗೆ ಇರುವ ಸಹ್ಯಾದ್ರಿ ಪರ್ವತ ಶ್ರೇಣಿ ಹುಟ್ಟಿಕೊಂಡಿದ್ದೇ ಆಗ ನಡೆದ ಈ ಭೂಭಾಗಗಳ ಘರ್ಷಣೆಯಿಂದ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇಂಟರ್ನೆಟ್ ಸರ್ಚ್‌ನಲ್ಲಿ-ಗೋಂಡ್ವಾನಾ ಲ್ಯಾಂಡ್ ಅಥವಾ ಕಾಂಟಿನೆಂಟಲ್ ಡ್ರಿಫ್ಟ್- ಎಂದು ಬರೆದು ಹುಡುಕಿದರೆ ಇದರ ಪೂರ್ಣ ಮಾಹಿತಿ ವಿಡಿಯೋದೊಂದಿಗೆ ಸಿಗುತ್ತದೆ. ಭೂ-ವಿಜ್ಞಾನಿಗಳಿಗೆ ನಮ್ಮ ಭಾರತದ ಪಶ್ಚಿಮ ಕರಾವಳಿಯಲ್ಲಿ ಸಿಕ್ಕಿರುವ ಜುರಾಸಿಕ್ ಯುಗದ ಸಸ್ಯಗಳ ಕಲ್ಲಾಗಿರುವ ಪಳೆಯುಳಿಕೆಯ ಆಧಾರದಲ್ಲಿ ಈ ಕರಾವಳಿಯ ಭೂಮಿ ನಾಲ್ಕು ಕೋಟಿ ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿ ಇತ್ತು ಎಂಬುದನ್ನು ಸಾಬೀತು ಪಡಿಸುತ್ತದೆ. ಆಗ ಪರಶುರಾಮ ಎಂಬ ಮಾನವ ಬಿಡಿ ಯಾವುದೇ ವರ್ಗದ ಸಸ್ತನಿಗಳೂ ಇಲ್ಲಿರಲಿಲ್ಲ. ಆಗ ಇಲ್ಲಿದ್ದದ್ದು ಕೇವಲ ಮೊಟ್ಟೆಯಿಕ್ಕುವ ಜಾತಿಯ ಶೀತ ರಕ್ತದ ಡೈನೋಸಾರ್ ತರಹದ ಸರೀಸೃಪಗಳು ಮತ್ತು ಅಂತಹದ್ದೇ ಪಕ್ಷಿಗಳು ಮಾತ್ರ.
ಕೇವಲ ಚರ್ಚೆಗಾಗಿ ನಾವು ಪುರಾಣ ಕಥೆಗಳು ಸತ್ಯ ಎಂದು ಒಂದು ಕ್ಷಣ ಒಪ್ಪಿದರೂ ಈ ಕೆಳಗಿನ ಜಿಜ್ನಾಸೆಗಳು ಹುಟ್ಟುತ್ತವೆ. ಬಲೀಂದ್ರ ತುಳುನಾಡಿನ ಅತ್ಯಂತ ಜನಾನುರಾಗಿ ಅರಸನಾಗಿದ್ದ ಎಂದು ನಮ್ಮ ಕರಾವಳಿಯ ಮೂಲನಿವಾಸಿಗಳ ನಂಬಿಕೆ. ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ವಾಮನ ದೇವರು ವಿಷ್ಣುವಿನ ಐದನೆಯ ಅವತಾರ. ಆದರೆ ಪರಶುರಾಮನು ವಿಷ್ಣುವಿನ ಆರನೆಯ ಅವತಾರ. ಇದರ ಅರ್ಥ ವಾಮನ ಅವತಾರದ ಸಾವಿರಾರು ವರ್ಷಗಳ ನಂತರ ಪರಶುರಾಮ ಅವತಾರ ಹುಟ್ಟಿದ್ದು. ಅಂದರೆ ಪರಶುರಾಮನಿಗಿಂತ ಮೊದಲೇ ಬಲಿ ಚಕ್ರವರ್ತಿ ಆಳುತ್ತಿದ್ದ ಪಶ್ಚಿಮ ಕರಾವಳಿ ಅಸ್ತಿತ್ವದಲ್ಲಿ ಇತ್ತೆಂದು ಪುರಾಣಕರ್ತರೇ ಒಪ್ಪಿಕೊಂಡಂತಾಯಿತು. ಹಾಗಾದರೆ ಪರಶುರಾಮನಿಗಿಂತ ಸಾವಿರಾರು ವರ್ಷಗಳ ಮೊದಲೇ ವಾಮನ ದೇವರು ಹೆಜ್ಜೆಯಿಟ್ಟಿದ್ದ ತುಳುನಾಡನ್ನು ಮುಂದಿನ ಅವತಾರದಲ್ಲಿ ಪರಶುರಾಮನು ಪುನಃ ಸೃಷ್ಟಿಸುವುದು ಹೇಗೆ ಸಾಧ್ಯ? ಈ ರೀತಿ ನಮ್ಮ ಪಶ್ಚಿಮ ಕರಾವಳಿಯನ್ನು ಪರಶುರಾಮನೇ ಸೃಷ್ಟಿಸಿದ್ದು ಎಂಬ ಕಥೆ ತಾರ್ಕಿಕವಾಗಿ ತಪ್ಪುಎಂದು ವಿಷ್ಣು ಪುರಾಣ ಬರೆದವರೇ ರುಜುವಾತು ಮಾಡಿದಂತೆ ಆಯಿತಲ್ಲವೇ!
ಪುರಾಣದ ಆಧಾರದಲ್ಲಿಯೇ ಹೇಳುವುದಾ ದರೆ ಶುದ್ಧ ಜಾತಿವಾದಿ ಭಾರ್ಗವ ಪರಶು ರಾಮನು ಒಬ್ಬನೇ ಒಬ್ಬ ಕ್ಷತ್ರಿಯನಿಗೆ ಸಹಾಯ ಮಾಡಿಲ್ಲ. ತನ್ನ ಪ್ರಿಯ ಶಿಷ್ಯನಾದ ಕರ್ಣನು ಬ್ರಾಹ್ಮಣನಲ್ಲ ಅವನು ಕ್ಷತ್ರಿಯನು ಎಂದು ಗೊತ್ತಾದ ತಕ್ಷಣ ಅವನಿಗೂ ಪರಶು ರಾಮನು ತಾನೇ ಕಲಿಸಿದ ಸಮರ ಕಲೆ ಯುದ್ಧ ಭೂಮಿಯಲ್ಲೇ ಮರೆತು ಹೋಗಲಿ ಎಂಬ ಘೋರ ಶಾಪ ಕೊಟ್ಟು ಕುರುಕ್ಷೇತ್ರ ಯುದ್ಧದಲ್ಲಿ ವೀರ ಕರ್ಣನ ದುರ್ಮರಣಕ್ಕೆ ಪರೋಕ್ಷ ಕಾರಣವಾಗಿದ್ದನು. ಅದಕ್ಕೆ ಮೊದಲು ಪರಶುರಾಮನು ಭೀಷ್ಮನೊಂದಿಗೆ ಯುದ್ಧ ಮಾಡಿ ಸೋತು ಜಮದಗ್ನಿಯ ಮಧ್ಯಸ್ಥಿಕೆಯಿಂದಾಗಿ ಭೀಷ್ಮನಿಂದ ಜೀವದಾನ ಪಡೆದಿದ್ದನು. ರಾಮಾಯಣ ಕಾಲದಲ್ಲಿ ಶ್ರೀರಾಮನಿಂದ ಸೋತು ಈ ಭಾರ್ಗವ ಜೀವ ಭಿಕ್ಷೆ ಬೇಡಿದ್ದ. ಬಾಲಗಣೇಶನೊಂದಿಗೆ ದುರಹಂಕಾರದಿಂದ ಜಗಳವಾಡಿ ಪಾರ್ವತಿಯಿಂದ ಈತ ಶಪಿತನಾಗಿದ್ದನು. ಅಕ್ಕ-ತಂಗಿಯರಿಗೆ ಹುಟ್ಟಿದ ಬಂಟ, ಬಿಲ್ಲವ ಮತ್ತು ಮೊಗವೀರರು ಒಂದೇ ಮೂಲದ ಕ್ಷತ್ರಿಯರು ಎನ್ನುತ್ತವೆ ತುಳುನಾಡಿನ ಜಾನಪದ ಕಥೆಗಳು. ಈ ಮೂರು ಜಾತಿಗಳು ಕೂಡಿ ಇಲ್ಲಿಯ 60% ಜನಸಂಖ್ಯೆ ಆಗುತ್ತದೆ. ಬದ್ಧ ಕ್ಷತ್ರಿಯದ್ವೇಷಿ ಪರಶುರಾಮ ತಾನೇ ಸೃಷ್ಟಿಸಿದ ನೆಲದಲ್ಲಿ ಒಟ್ಟು ಜನಸಂಖ್ಯೆಯ 60%ರಷ್ಟು ಕ್ಷತ್ರಿಯ ಜನಾಂಗದವರನ್ನು ಸ್ವತಃ ತಾನೇ ತಂದು ನೆಲೆಗೊಳಿಸಿದ ಎಂಬ ಕಥೆಯೇ ವಿರೋಧಾಭಾಸದಿಂದ ಕೂಡಿದ್ದು. ಆದರೂ ವೈದಿಕರು ಕಟ್ಟಿದ ‘ಪರಶುರಾಮ ಸೃಷ್ಟಿ’ ಎಂಬ ಕಾಲ್ಪನಿಕ ಕಥೆಗೆ ಶೂದ್ರರು ನೀರು ಗೊಬ್ಬರ ಹಾಕಿ ವಿಚಾರಹೀನರಂತೆ ಪೋಷಿಸುತ್ತಿದ್ದಾರೆ ಅಷ್ಟೇ. ತುಳುನಾಡಿನ ಇತಿಹಾಸದ ಸಂಶೋಧಕರಲ್ಲಿ ಅತೀ ಹೆಚ್ಚು ಮಾನ್ಯತೆ ಪಡೆದಿರುವ ಡಾ. ಪಿ. ಗುರುರಾಜ ಭಟ್ ಇವರೂ ಪರಶುರಾಮನ ಕಥೆಗೂ ತುಳುನಾಡಿನ ಇತಿಹಾಸಕ್ಕೂ ಸಂಬಂಧವೇ ಇಲ್ಲ ಎಂದಿದ್ದಾರೆ. ಇದು ಕೇವಲ ದಕ್ಷಿಣ ಕೇರಳದಲ್ಲಿ ಒಂದು ಜಾನಪದ ಕಥೆಯಾಗಿ ಮೊದಲು ಪ್ರಚಲಿತವಿತ್ತು. ಕೇರಳೋತ್ಪತ್ತಿ ಎಂಬ ಹದಿನಾರನೆ ಶತಮಾನದ ಒಂದು ಗ್ರಂಥ ಹೊರತು ಪಡಿಸಿ ಬೇರೆಲ್ಲಿಯೂ ಇದರ ಉಲ್ಲೇಖವಿಲ್ಲವಂತೆ. ನಮ್ಮ ತುಳುನಾಡಿನ ಅಥವಾ ಮಹಾರಾಷ್ಟ್ರದ ಯಾವುದೇ ಪ್ರಾಚೀನ ಗ್ರಂಥಗಳಲ್ಲಿ ಈ ಕತೆಯ ಉಲ್ಲೇಖವೇ ಇಲ್ಲ.
ಇನ್ನೂರು ವರ್ಷಗಳ ಹಿಂದೆ ‘ಸತ್ಯನಾರಾಯಣ ವ್ರತ’ ಎಂಬ ಕಾಲ್ಪನಿಕ ಕಥೆಯು ಉತ್ತರ ಭಾರತದ ವೈಶ್ಯ ವ್ಯಾಪಾರಿಗಳ ಮನೆಯಲ್ಲಿ ಹುಟ್ಟಿ ನಂತರ ದೇಶವಿಡೀ ಪಸರಿಸಿದಂತೆ ‘ಪರಶುರಾಮ ಸೃಷ್ಟಿ’ ಎಂಬ ಕಾಲ್ಪನಿಕ ಕಥೆಯೂ ಇನ್ನೂರು ವರ್ಷಗಳ ಹಿಂದೆ ಕೇರಳಕ್ಕೆ ಹೋಗಿ ಬಂದಿದ್ದ ಕರಾವಳಿಯ ಬ್ರಾಹ್ಮಣ ತಂತ್ರಿಗಳ ಮೂಲಕ ತುಳುನಾಡಲ್ಲಿ ಪಸರಿಸಿತಂತೆ. ತುಳುನಾಡಿನ ಯಾವುದೇ ಪುರಾತನ ಇತಿಹಾಸ, ಭೂತಾಳ ಪಾಂಡ್ಯನ ಜಾನಪದ ಕಥೆ, ಅಥವಾ ತುಳು ಪಾಡ್ಢನಗಳಲ್ಲಿ ಪರಶುರಾಮ ಸೃಷ್ಟಿಯ ಕಥೆಯ ಉಲ್ಲೇಖವಿಲ್ಲ. ದ್ವಾಪರ ಯುಗದಲ್ಲಿ ಇಷ್ಟು ವಿಸ್ತಾರವಾದ ಕರಾವಳಿಯ ಭೂಮಿಯನ್ನು ಪರಶುರಾಮನು ಕೇವಲ ಕಶ್ಯಪ ಗೋತ್ರದ ಬ್ರಾಹ್ಮಣರಿಗೆ ಮಾತ್ರವೇ ದಾನ ಕೊಟ್ಟಿದ್ದನು ಎಂಬುದು ಆ ಕತೆಯಲ್ಲಿದೆ. ಆದರೆ ವಾಸ್ತವ ವಾಗಿ ಇಷ್ಟು ವಿಸ್ತಾರವಾದ ಭೂಮಿ ದಾನ ಪಡೆಯಲು ಆಗ ಇಲ್ಲಿ ಯಾವುದೇ ಗೋತ್ರದ ಬ್ರಾಹ್ಮಣ ಜನಾಂಗವೇ ಇರಲಿಲ್ಲವಲ್ಲ!
ಬ್ರಾಹ್ಮಣರು ತುಳುನಾಡಿಗೆ ಬಂದಿದ್ದೇ ಕೇವಲ 1,600 ವರ್ಷಗಳ ಹಿಂದೆ ಕದಂಬರ ಕಾಲದಲ್ಲಿ. ನಮ್ಮ ಕರಾವಳಿಯು ಪರಶುರಾಮನು ಸೃಷ್ಟಿಸಿದ ಭೂಮಿಯೆಂದು ಸ್ಕಂದ ಪುರಾಣದಲ್ಲಿ ಬರೆದಿದ್ದು ನಿಜವೇ ಆಗಿದ್ದರೆ ಮಧ್ವಾಚಾರ್ಯ ಮತ್ತು ವಾದಿರಾಜರು ತಮ್ಮ ಆರಾಧ್ಯ ದೈವ ವಿಷ್ಣುವಿನ ಆರನೆಯ ಅವತಾರದ ಈ ಘನ ಕಾರ್ಯವನ್ನು ತಮ್ಮ ಯಾವುದಾದರೂ ಗ್ರಂಥದಲ್ಲಿ ಒಮ್ಮೆಯಾದರೂ ಉಲ್ಲೇಖಿಸದೇ ಇರುತ್ತಿರಲಿಲ್ಲ. ಸ್ಕಂದ ಪುರಾಣದಲ್ಲಿ ‘ಸಹ್ಯಾದ್ರಿ ಖಂಡ’ ಎಂಬ ಬಾಲಂಗೋಚಿಯನ್ನು ನಂತರ ಯಾರೋ ಸೇರಿಸಿದ್ದು ಹಾಗೂ ಅದು ಮೂಲ ಸ್ಕಂದ ಪುರಾಣದಲ್ಲಿ ಇಲ್ಲವೇ ಇಲ್ಲ ಎಂದು ಕಾಶಿಯ ಧರ್ಮ ಸಂಸದಿನ ಪಂಡಿತರು ಎಂದೋ ಘೋಷಿಸಿದ್ದಾರೆ ಎಂದು ಕುಕ್ಕೆ ಹಾಗೂ ಉಡುಪಿ ದೇವಳಗಳ ಇತಿಹಾಸ ಸಂಶೋಧಕ ಡಾ. ಅಚ್ಚುತ ಶರ್ಮ ಇವರ ಅಭಿಪ್ರಾಯ. ಆದರೆ ಇದೇಕೋ ನಮ್ಮ ತುಳುನಾಡಿನ ಪಂಡಿತರಿಗೆ ಅರ್ಥವಾಗುತ್ತಿಲ್ಲ! ನೂರಾರು ವರ್ಷ ತುಳುನಾಡನ್ನು ಆಳಿದ ಅಳುಪ ರಾಜರು ಎಲ್ಲ ಶೈವ ವೈಷ್ಣವ ಶಾಕ್ತ ದೇವರ ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ, ಆದರೆ ಒಂದೇ ಒಂದು ಪರಶುರಾಮ ದೇವಸ್ಥಾನ ಯಾಕೆ ಕಟ್ಟಿಸಲಿಲ್ಲ? ರಾಮ-ಸೀತೆ-ಲಕ್ಷ್ಮಣ ಹಾಗೂ ದ್ರೌಪದಿ- ಕೃಷ್ಣ-ಪಾಂಡವರು ಅಡುಗೆ, ಸ್ನಾನ, ತಪಸ್ಸು ಅಥವಾ ಬೇರೇನೋ ಮಾಡಿದ ಸ್ಥಳವೆಲ್ಲ ಪವಿತ್ರ ಕ್ಷೇತ್ರಗಳಾಗಿ ಮಾರ್ಪಟ್ಟಿವೆ. ಆದರೆ ಯಾವ ಸ್ಥಳದಲ್ಲಿ ಪರಶುರಾಮ ತಪಸ್ಸು ಮಾಡಿ ಸಮುದ್ರಕ್ಕೆ ಕೊಡಲಿ ಬೀಸಿದ್ದನೋ ಆ ಸ್ಥಳ ಪವಿತ್ರ ಕ್ಷೇತ್ರ ಯಾಕಾಗಲಿಲ್ಲ? ಸಹ್ಯಾದ್ರಿ ಪರ್ವತವಿರುವುದು ಕೇವಲ ತುಳುನಾಡಿನಲ್ಲಿ ಮಾತ್ರವಲ್ಲ, ಅದು ಕೇರಳದ ತ್ರಿವೇಂದ್ರಮ್‌ನಿಂದ ದಕ್ಷಿಣ ಗುಜರಾತ್‌ನ ವರೆಗೆ ಹರಡಿದೆ. ಹಾಗಿರುವಾಗ ಪರಶುರಾಮ ಸೃಷ್ಟಿ ಸಹಾ ಪಶ್ಚಿಮ ಕರಾವಳಿಯ ಈ ಐದೂ ರಾಜ್ಯಗಳಲ್ಲಿ ಹರಡಿದೆ ತಾನೆ?. ಯಾಕೆಂದರೆ ಸಮಸ್ತ ಪಶ್ಚಿಮ ಕರಾವಳಿ ಹಾಗೂ ಸಹ್ಯಾದ್ರಿ ಪರ್ವತ ಒಂದೇ ಸಮಯಕ್ಕೆ ಉಂಟಾಗಿದ್ದು. ಹಾಗಿದ್ದರೂ ಗೋವಾ, ಮಹಾರಾಷ್ಟ್ರ ದಕ್ಷಿಣ-ಗುಜರಾತ್‌ನವರು ಈ ಕಥೆ ನಂಬುತ್ತಲೇ ಇಲ್ಲ. ಅಲ್ಲಿಯವರು ನಾಗದೇವರ ಹೆಸರಲ್ಲಿ 30-40 ಲಕ್ಷ ಖರ್ಚು ಮಾಡಿ ನಾಗಮಂಡಲ ಮಾಡುವುದೇ ಇಲ್ಲ. ಹಾಗಾದರೆ ಅವರನ್ನೆಲ್ಲ ಪರಶುರಾಮ ಘೋರ ನರಕಕ್ಕೆ ಕಳುಹಿಸುತ್ತಾನೆಯೇ? ನಾಗ ದೇವರನ್ನು ತುಳುವರೆಲ್ಲ ಪೂಜಿಸ ಬೇಕೆಂದು ಪರಶುರಾಮನೇ ಹೇಳಿದ್ದು ಎಂಬುದು ಸರಿಯಲ್ಲ. ಆರ್ಯ ಪುರಾಣಗಳ ಪ್ರಕಾರ ಪರಶುರಾಮನಿದ್ದದ್ದು ಮೂರು ಸಾವಿರ ವಗಳ ಹಿಂದೆ. ಆದರೆ ದ್ರಾವಿಡ ತುಳುವರು ಅದಕ್ಕಿಂತ ಮುಂಚಿನಿಂದಲೂ ನಾಗಪೂಜೆ ಮಾಡುತ್ತಿದ್ದ್ದುದ್ದು ತುಳುನಾಡಿನ ಇತಿಹಾಸದಿಂದ ತಿಳಿದುಬರುತ್ತದೆ.
ಮೇಲಾಗಿ ಸಮುದ್ರದ ಉಪ್ಪುನೀರಿನಲ್ಲಿ ನಾಗಜಾತಿಯ ಸರ್ಪಗಳೇ ವಾಸಿಸುವುದಿಲ್ಲ. ಹಾಗಿರುವಾಗ ಪರಶುರಾಮ ನಮ್ಮ ಭೂಮಿಯನ್ನು ಸಮುದ್ರದಿಂದ ಮೇಲೆತ್ತಿದಾಗ ಇಲ್ಲೆಲ್ಲ ನಾಗರಹಾವುಗಳೇ ತುಂಬಿಕೊಂಡಿದ್ದವು ಎನ್ನುವುದನ್ನು ಉರಗತಜ್ಞರು ಒಪ್ಪುವುದಿಲ್ಲ. ಹಾಗಾಗಿ ನಾಗಪೂಜೆಗೂ ಪರಶುರಾಮನಿಗೂ ನಂಟು ಕಲ್ಪಿಸುವುದು ತಪ್ಪು. ಪುರಾಣದ ಹೂರಣ ಹೊರ ತೆಗೆದ ಸಂಶೋಧಕರ ಪ್ರಕಾರ ಸಹ್ಯಾದ್ರಿ ಪರ್ವತಕ್ಕೆ ಹೊಂದಿಕೊಂಡಿರುವ ಕರಾವಳಿಯೂ ದಟ್ಟ ಅರಣ್ಯದಿಂದ ತುಂಬಿತ್ತು. ಆದರೆ ಉತ್ತರದಿಂದ ಬಂದ ಆರ್ಯನ್ನರು ಕೊಡಲಿಯಿಂದ ಮರ ಕಡಿದು ಅರಣ್ಯ ನಾಶ ಮಾಡಿದ್ದರ ಸಂಕೇತವೇ ಕೊಡಲಿ ಹಿಡಿದ ಭಾರ್ಗವರಾಮ. ಅರಣ್ಯ ನಾಶವನ್ನು ವಿರೋಧಿಸಿದ ಪ್ರಕೃತಿ ಪ್ರೇಮಿ ಬುಡಕಟ್ಟು ಜನರನ್ನು ಆರ್ಯನ್ನರು ಕೊಂದು ಹಾಕಿದ್ದರ ಸಂಕೇತವೇ ಪರಾಶುರಾಮನಿಂದ ಕ್ಷತ್ರಿಯ ಸಂಹಾರ. ಅಂದರೆ ದುಷ್ಟ ಆರ್ಯನ್ನರ ಆಕ್ರಮಣ ಹಾಗೂ ದ್ರಾವಿಡ ಆದಿವಾಸಿಗಳ ಭೂಮಿಯನ್ನು ಬಲಾತ್ಕಾರದಿಂದ ಕಸಿದುಕೊಂಡದ್ದನ್ನು ಸಂಕೇತಿಸುವ ಕಥೆಯೇ ಪರಶುರಾಮ ಸೃಷ್ಟಿಯ ಕಥೆ. ಅರಣ್ಯನಾಶದಿಂದ ನೆಲೆ ಕಳೆದುಕೊಂಡ ನಾಗರ ಹಾವುಗಳು ಅನಿವಾರ್ಯವಾಗಿ ಊರೊಳಗೆ ಬಂದು ಜನರನ್ನು ಕಚ್ಚುತ್ತಿದ್ದುದರಿಂದ ಆ ನಾಗರಹಾವುಗಳನ್ನು ಆರ್ಯ ಆಕ್ರಮಣಕಾರರು ನಿರ್ದಯವಾಗಿ ಕೊಂದಿದ್ದನ್ನು ಪ್ರಕೃತಿ ಪ್ರೇಮಿ ಆದಿವಾಸಿಗಳು ವಿರೋಧಿಸಿದಾಗ ಅವರನ್ನು ಸಮಾಧಾನಗೊಳಿಸಲು ನಾಗನ ಪ್ರತಿಮೆ ಮಾಡಿಕೊಟ್ಟು ಸಣ್ಣ ಸಣ್ಣ ವನ (ಬನ) ದಲ್ಲಿ ಇವನ್ನಿಟ್ಟು ಪೂಜಿಸಿದರೆ ನಾಗಗಳು ತೃಪ್ತಿ ಹೊಂದುತ್ತವೆ ಎಂದು ಆರ್ಯರು ಬ್ರೈನ್ ವಾಷ್ ಮಾಡಿದರು. ಹಾಗಾಗಿ ಕೇವಲ ಶೂದ್ರ ಜಾತಿಯ ತುಳುವರಿಗೆ ಮಾತ್ರ ನಾಗಮೂಲ ಇರುವುದು. ತುಳು ಬ್ರಾಹ್ಮಣರಿಗೆ ನಾಗಮೂಲ ಇಲ್ಲ!
ಹಾಗೆಯೇ ಅರಣ್ಯ ನಾಶದಿಂದ ನೆಲೆ ಕಳೆದುಕೊಂಡ ವನ್ಯಪ್ರಾಣಿಗಳಾದ ಕಾಡುಹಂದಿ, ಹುಲಿ, ಕಾಡೆಮ್ಮೆಗಳು ನಾಡಿಗೆ ಬಂದು ಉಪಟಳ ಕೊಡುತ್ತಿದ್ದುದರಿಂದ ಅವುಗಳ ಉಪಶಮನಕ್ಕೆ ಪಂಜುರ್ಲಿ, ಪಿಲಿಚಂಡಿ, ಮೈಸಂದಾಯ ಈ ಭೂತಗಳ ಸ್ವರೂಪದಲ್ಲಿ ಆದಿವಾಸಿಗಳು ಪ್ರಾಣಿಪೂಜೆ ಶುರುಮಾಡಿರಬೇಕು.
ಯಾವುದೇ ಆಯುಧ, ಶಸಾಸ್ತ್ರಗಳಿಲ್ಲದೇ, ಸ್ವಲ್ಪವೂ ರಕ್ತಪಾತವಿಲ್ಲದೇ, ಕೇವಲ ಕಾಲ್ಪನಿಕ ಪುರಾಣ ಕಥೆಗಳ ಬಲದಿಂದ ಶಬ್ದಗಳ ಜಾಲ ಹೆಣೆದು ವೈದಿಕರು ಇಡೀ ಹಿಂದೂ ಸಮಾಜವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿರುವುದು ನಿಜ ಎಂಬುದಕ್ಕೆ ನಮ್ಮ ತುಳುನಾಡಿನ ಶೂದ್ರರು ಈಗಲೂ ಹೆಮ್ಮೆಯಿಂದ ಮೆಲ್ಲುತ್ತಿರುವ ವೈದಿಕರ ಉಚ್ಛಿಷ್ಟವಾದ ಪರಶುರಾಮ ಸೃಷ್ಟಿಯ ಕಥೆಯೇ ಸ್ಪಷ್ಟ ನಿದರ್ಶನ.
Credits: ಡಾ|| ಇಂದಿರಾ ಹೆಗ್ಡೆ