ಪರಂಪರೆಯಿಂದ ಲಭಿಸಿದ ಗದ್ದೆಯನ್ನೇ ಕೃಷಿ ಮಾಡಲು ಅನಾನುಕೂಲವಾಗುತ್ತಿರುವ ಸಂದರ್ಭದಲ್ಲಿ ಹೊಸತಾಗಿ ಗದ್ದೆ ಮಾಡಿ, ಭತ್ತದ ಕೃಷಿ ಮಾಡುವ ಮೂಲಕ ಮಾದರಿಯಾಗಿದ್ದಾರೆ ಹರೀಶ್ ಶಾಂತಿ.ಬಂಟ್ವಾಳ ತಾಲೂಕಿನ ಸಾಲೆತ್ತೂರು ಪುಡ್ಕೆತ್ತೂರು ಎಂಬಲ್ಲಿ ಗುಡ್ಡವನ್ನು ಸಮತಟ್ಟುಗೊಳಿಸಿ , ಒಂದೂವರೆ ಎಕರೆ ಗದ್ದೆ ಮಾಡಿದ್ದಾರೆ. ಅರ್ಧ ಕಳಸೆ ಭತ್ತ ಬಿತ್ತಿ ಸರಿಸುಮಾರು ಮೂರೂವರೆ ಕ್ವಿಂಟಾಲ್ ಭತ್ತ ಬೆಳೆಯುತ್ತಿದ್ದಾರೆ. ಇಡೀ ಕುಟುಂಬಕ್ಕೆ ಒಂದು ವರ್ಷಕ್ಕೆ ಬೇಕಾದಷ್ಟು ಅಕ್ಕಿ ಇಲ್ಲಿ ಲಭ್ಯವಾಗುತ್ತದೆ.
ಕಳೆದ ನಾಲ್ಕು ವರ್ಷದಿಂದ ಇದನ್ನು ನಡೆಸಿಕೊಂಡು ಬರುತ್ತಿದ್ದು ಜಯ ಮತ್ತು ಜ್ಯೋತಿ ತಳಿಯನ್ನು ಬೆಳೆಯುತ್ತಿದ್ದಾರೆ. ನೇಜಿ ನೆಡಲು ಮತ್ತು ಪೈರು ಕೊಯ್ಯಲು ಯಂತ್ರವನ್ನು ಬಳಸುವ ಕಾರಣ, ತಗಲುವ ವೆಚ್ಚವನ್ನು ಕಡಿಮೆಗೊಳಿಸಿದ್ದಾರೆ. ಒಂದು ಬೆಳೆಗೆ ಕೇವಲ 3500 ವೆಚ್ಚ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಗದ್ದೆ ಕೃಷಿಯನ್ನು ನಷ್ಟ ಎಂದೇ ಬಿಂಬಿಸುವವರ ಮಧ್ಯೆ , ಹರೀಶ್ ಶಾಂತಿಯವರು ನಮಗೆ ಮಾದರಿಯಾಗಿದ್ದಾರೆ.