ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಮೂರ್ತಿ ಇರುವ ಸಬ್ದ ಚಿತ್ರವನ್ನು ಕೇಂದ್ರ ಗಣರಾಜ್ಯೋತ್ಸವದ ಆಯ್ಕೆ ಸಮಿತಿ ನಿರಾಕರಿಸಿದ್ದನ್ನು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಖಂಡಿಸುತ್ತದೆ, ಎಂದು ಎಸ್ ಎನ್ ಜಿ ಯ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಆಕ್ಷೇಪ ವ್ಯಕ್ತಪಡಿಸಿದರು.
“ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶವನ್ನು ಸಾರಿದ ಸಂತ, ಮಾನವತಾವಾದಿ, ಸಮಾಜ ಸುಧಾರಕ, ಹಿಂದುಳಿದ ವರ್ಗಗಳ ಶೋಷಿತ ವರ್ಗಗಳ ತುಳಿತಕ್ಕೆ ಒಳಗಾದ ಸಮುದಾಯದವರನ್ನು ಮೇಲೆತ್ತಿದವರು, ಅವರ ಬದುಕಿನಲ್ಲಿ ಆಶಾಕಿರಣವನ್ನು ಮೂಡಿಸಿದವರು ಹಾಗೂ ಅಕ್ಷರ ಬ್ರಹ್ಮ ಎಂದೆ ಜನಮಾನಸದಲ್ಲಿ ಮನೆಮಾತಾಗಿರುವ, ಬ್ರಹ್ಮರ್ಷಿ ನಾರಾಯಣ ಗುರುಗಳು ಕೇರಳದ ಮೂಲಕ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ, ಸರ್ವ ಧರ್ಮಗಳ ಜನರು ಸಹ ಬಾಳ್ವೆಗಳ ಮೂಲಕ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು, ‘ಮನುಷ್ಯ ಕುಲಂ ತಾನೊಂದೇ ವಲಂ’ ಎನ್ನುವ ಆದಿಕಪಿ ಪಂಪನ ಮಾತುಗಳನ್ನು ತಮ್ಮ ಧಾರ್ಮಿಕ ತತ್ವಾದರ್ಶಗಳ ಮೂಲಕ ನನಸು ಮಾಡಿದ ಭಾರತೀಯ ದಾರ್ಷನಿಕರಾದ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ರವೀಂದ್ರನಾಥ ಠಾಗೂರ್ ಇವರುಗಳು ಬ್ರಹ್ಮರ್ಷಿ ನಾರಾಯಣ ಗುರುಗಳ ಪ್ರಭಾವಕ್ಕೆ ಒಳಗಾಗಿ ಪ್ರೇರೆಪಣೆಯನ್ನು ಪಡೆದ ಮಹನೀಯರು, ಇಂತಹ ಮನುಕುಲದ ದಿವ್ಯ ಜ್ಯೋತಿಯೊಂದರ ಸ್ಥಬ್ದ ಚಿತ್ರವೊಂದನ್ನು ಕೇರಳದ ಸರ್ಕಾರವು ದೆಹಲಿಯಲ್ಲಿ ನಡೆಯಲಿರುವ ಜನವರಿ 26 ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕೇರಳ ರಾಜ್ಯದ ಹೆಮ್ಮೆಯ ಪ್ರತೀಕವಾಗಿ ಕಳಿಸಿರುವುದನ್ನು ಕೇಂದ್ರ ಆಯ್ಕೆ ಸಮಿತಿ ತಿರಸ್ಕರಿಸಿರುವುದು ಅತ್ಯಂತ ನೋವಿನ ವಿಚಾರವಾಗಿದೆ, ಸ್ತ್ರೀ ಸಮಾನತೆ ಪ್ರತಿಪಾದಿಸಿ ಜಾತಿ, ಮತ ಭೇದಗಳನ್ನು ದಿಕ್ಕರಿಸಿ ಸಮಾಜೋದ್ಧಾರಕ್ಕೆ ಶ್ರಮಿಸಿದ ಮಹಾನ್ ಚೇತನ. ಅಂತವರ ಮೂರ್ತಿ ಇದ್ದ ಸ್ಥಬ್ಧ ಚಿತ್ರವನ್ನು ತಿರಸ್ಕಾರ ಮಾಡಿರುವುದು ಕ್ಷಮಾರ್ಹವಲ್ಲದ ತಪ್ಪು ಹಾಗೂ ಭಾರತೀಯ ಸುಧಾರಣಾ ಪರಂಪರೆಯ ಬಗ್ಗೆ ತಿಳುವಳಿಕೆ ಇಲ್ಲದ ಅಜ್ಞಾನದ ಪರಮಾವಧಿ, ಆಯ್ಕೆ ಸಮಿತಿಯಲ್ಲಿ ಇಂತಹ ಅಜ್ಞಾನಿಗಳಿರುವುದು ದೇಶಕ್ಕೆ ಶೋಭೆಯಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕೆಲವು ಮೂಲಗಳ ಪ್ರಕಾರ, ಗುರುಗಳ ಶಿಲ್ಪದ ಬದಲು ಶಂಕರಾಚಾರ್ಯರ ಪ್ರತಿಮೆ ಇಡಬಹುದು ಎಂಬ ಮಾಹಿತಿ ಇದ್ದು ಅದನ್ನು ಖಂಡಿಸುತ್ತೇವೆ . ಕೇವಲ ಶಂಕರಾಚಾರ್ಯರ ಶಿಲ್ಪ ಇಡುತ್ತಿದ್ದರೆ ಆ ಬಗ್ಗೆ ಯಾವುದೇ ಆಕ್ಷೇಪ ಇರುತ್ತಿರಲಿಲ್ಲ ಎಂದರು.
ಸಮಾನತೆಯ ಸಮಾಜದ ಕನಸು ಕಾಣುವ ಪ್ರತಿಯೊಬ್ಬ ಭಾರತೀಯರು ಖಂಡಿಸಬೇಕಿದೆ. ಇದು ಹಿಂದುಳಿದ ಶೋಷಿತ ದಲಿತ ಗುರುಗಳಿಗೆ ಮತ್ತು ಸಮಾಜಕ್ಕೆ ಮಾಡಿದ ಅವಮಾನವಾಗಿದ್ದು ಬ್ರಹ್ಮರ್ಷಿ ನಾರಾಯಣ ಗುರುಗಳ ಮೂರ್ತಿ ಇರುವ ಸ್ಥಬ್ಧ ಚಿತ್ರವನ್ನು ಗಣರಾಜ್ಯೋತ್ಸವದ ಮೆರವಣಿಗೆಯ ಸಮಿತಿಯು ಅಂಗೀಕಾರ ಮಾಡದೇ ಗುರುಗಳಿಗೆ ಗೌರವವನ್ನು ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಚ್ಚುತ ಅಮೀನ್ ಕಲ್ಮಾಡಿ, ರಾಜ್ಯ ಉಪಾಧ್ಯಕ್ಷರು, ರಾಜು ಪೂಜಾರಿ ಉಳ್ಳೂರು, ಗೌರವ ಅಧ್ಯಕ್ಷರು, ಜಗನ್ನಾಥ್ ಕೋಟೆ, ಉಡುಪಿ ಜಿಲ್ಲಾ ಅಧ್ಯಕ್ಷರು, ಶಶಿಧರ ಎಮ್. ಅಮೀನ್, ವಡಭಾಂಡೇಶ್ವರ, ತಾಲೂಕು ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.