ಪ್ರತಿಯೊಂದು ಜೀವಿಯೂ ಈ ಸೃಷ್ಟಿಯ ಕೂಸು. ಬುದ್ಧಿಜೀವಿ ಮಾನವನಿಂದ ಹಿಡಿದು ಇತರ ಕೋಟ್ಯಾಂತರ ಜೀವ-ಜಂತುಗಳವರೆಗೆ, ಒಂದನ್ನೊಂದು ಅನುಸರಿಸಿಯೇ ಬಾಳುವುದು ಈ ಸೃಷ್ಟಿಯ ಮೂಲಭೂತ ಸಹಕಾರ ತತ್ವ. ಆದರೆ ಮಾನವ ತನ್ನ ಹಣದ ಹಸಿವಿಗಾಗಿ ಉಸಿರನ್ನು ಕೊಡುವ ಗಿಡ-ಮರಗಳನ್ನು ನಶಿಸಿ, ತನ್ನ ಕಾಲಿಗೆ ತಾನೇ ಕೊಡಲಿ ಏಟು ಹಾಕಿಕೊಂಡಿದ್ದಾನೆ.
ಇದರಿಂದಾಗಿ ಎಷ್ಟೋ ಪ್ರಾಣಿ ಸಂಕುಲಗಳು ಅಳಿವಿನ ಅಂಚಿನಲ್ಲಿವೆ. “ಹಸಿರೇ ಉಸಿರು” ಅನ್ನುವುದನ್ನು ಮರೆತು, ಉಸಿರನ್ನು ಕೊಂದು ಹಸಿವನ್ನು ನೀಗಿಸಲು ಹೊರಟಂತಿದೆ ಆತನ ಪರಿಸ್ಥಿತಿ. ಜಾಗತಿಕ ತಾಪಮಾನವೂ ವಿನಾಶದ ಅಂಚಿಗೆ ಕಾರಣವಾಗಿದೆ. ಈ ಶತಮಾನದ ಅಂತ್ಯದ ವೇಳೆಗೆ ಭೂಮಿಯ ಉಷ್ಣಾಂಶ ೪ ಡಿಗ್ರಿಯಷ್ಟು ಹೆಚ್ಚಾಗುತ್ತದೆಯೆಂದು ವಿಜ್ಞಾನಿಗಳು ಹಾಗೂ ವಿಶ್ವಸಂಸ್ಥೆಯ ವಾಯುಗುಣ ಬದಲಾವಣೆ ಕುರಿತಾದ ಅಂತರರಾಷ್ಟ್ರೀಯ ಸಂಸ್ಥೆಯು ತಿಳಿಸಿದೆ. ಆದರೆ, ಉಷ್ಣಾಂಶ ಇನ್ನೆರಡು ಡಿಗ್ರಿಯಷ್ಟು ಹೆಚ್ಚಾದರೂ ಮನುಷ್ಯರು ಬದುಕುವುದೂ ಕೂಡ ದುಸ್ತರ.
ಇಡೀ ಜೈವಿಕ ವ್ಯವಸ್ಥೆ ಹಾಳಾದ ಬಳಿಕವೂ ತಾನು ಉಳಿಯುತ್ತೇನೆ ಅನ್ನೋದು ಕೇವಲ ಭ್ರಮೆ. ನಮ್ಮ ಸಾವಿಗೆ ನಾವೇ ಮುನ್ನುಡಿ ಬರೆದಂತೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮ್ಮ ದುರಾಸೆಗಳಿಗೆ ಕಡಿವಾಣ ಹಾಕಿ, ಜೀವಿಗಳ ಅಳಿವು ಉಳಿವಿನ ಮಹತ್ವ ಹಾಗೂ ಪ್ರಕೃತಿಯ ಸಮತೋಲನದ ಅಗತ್ಯದ ಬಗ್ಗೆ ಅರಿತುಕೊಂಡು, ಪರಿಸರ ಸಂರಕ್ಷಣೆಯಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಳ್ಳೋಣ.
✍️ರಶ್ಮಿ ಸನಿಲ್
(ರಶ್ಮಿತಾ ಮಂಗಳೂರು)
ಲೆಕ್ಕ ಪರಿಶೋಧಕಿ