Movie Review by Padmaraj Ramaiah.
‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ಚಿತ್ರದ ಟೈಟಲೇ ವಿಭಿನ್ನ. ಮತ್ತೆ ಸಿನಿಮಾ ಅಷ್ಟೇ ವಿಭಿನ್ನವಾಗಿ ಇರದೆ ಇರುತ್ತದಾ…? ಹೌದು ಆನಂದ್ ಎನ್.ಕುಂಪಲ ನಿರ್ಮಾಣದಲ್ಲಿ ಹೊಸ ಹುಡುಗರೇ ಸೇರಿಕೊಂಡು ನಿರ್ಮಿಸಿದ ಚೊಚ್ಚಲ ಸಿನಿಮಾದಲ್ಲೇ ಪ್ರೇಕ್ಷಕರ ಹೃದಯ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ. ಇಡೀ ಸಿನಿಮಾದಲ್ಲಿ ಯಾವುದೇ ಅಶ್ಲೀಲ ಕಾಮಿಡಿ ತುರುಕಿಸದೇ ಎರಡುವರೆ ಗಂಟೆ ಹಾಸ್ಯದ ಹೊನಲಿನ ಜತೆ ಸ್ವಲ್ಪ ಸೆಂಟಿಮೆಂಟಿನೊಂದಿಗೆ ಸುಂದರ ಮನೋರಂಜನಾತ್ಮಕ ಚಿತ್ರವನ್ನು ನೀಡಿದ್ದಾರೆ ನಿರ್ದೇಶಕ ರಾಹುಲ್ ಅಮೀನ್.
ಯುವ ಪೀಳಿಗೆ ಗುನುಗುನಿಸುವಂತ ಸಾಹಿತ್ಯ, ಸಂಗೀತ. ಸದಾ ನಗಿಸುವ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಕುಸಲ್ದರಸೆ ನವೀನ್ ಡಿ. ಪಡೀಲ್ ‘ಸೌಂಡ್ಸ್ ಆಂಡ್ ಲೈಟ್ಸ್’ ಮಾಲೀಕ ರಾಜಣ್ಣನ ಪಾತ್ರದಲ್ಲಿ ಹಾಸ್ಯದಿಂದ ಹೊರಬಂದು ಗಂಭೀರ ಪಾತ್ರದ ಮೂಲಕ ಪ್ರೇಕ್ಷಕರ ಕಣ್ಣಂಚು ತೇವಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸ್ಯ ದಿಗ್ಗಜರಾದ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸತೀಶ್ ಬಂದಲೆ, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ರವಿ ರಾಮಕುಂಜ, ಚೈತ್ರಾ ಶೆಟ್ಟಿ ಡೈಲಾಗ್ ಶೈಲಿ ಪ್ರೇಕ್ಷಕರನ್ನು ನಗೆಗಡಲಿಗೆ ಕೊಂಡೊಯ್ಯುತ್ತದೆ. ಕರೀಷ್ಮ ಅಮೀನ್, ಯಶ ಶಿವಕುಮಾರ್ ನಟನೆಗೆ ಫುಲ್ ಮಾರ್ಕ್ಸ್.. ನಿರ್ದೇಶಕ ರಾಹುಲ್ ಅಮೀನ್ ಸಿನಿಮಾವನ್ನು ಅಚ್ಚುಕಟ್ಟಾಗಿ ಹೆಣೆದಿದ್ದಾರೆ. ನಾಯಕ ನಟ ಆರ್.ಜೆ.ವಿನೀತ್ ತಮ್ಮ ಪಾತ್ರವನ್ನು ಉತ್ತಮವಾಗಿ ನಿಭಾಯಿಸುವ ಮೂಲಕ ಎಲ್ಲ ವರ್ಗದ ಪ್ರೇಕ್ಷಕನಿಗೂ ಇಷ್ಟವಾಗುತ್ತಾರೆ. ಪ್ರಸನ್ನ ಶೆಟ್ಟಿ ಬೈಲೂರ್ ಅವರ ಸಂಭಾಷಣೆ ಚಿತ್ರಕ್ಕೆ ಪ್ಲಸ್ ಪಾಯಿಂಟ್… ಏನೇ ಆಗಲಿ ಹೊಸಬರ ಚಿತ್ರವಾದರೂ ಪರಭಾಷೆಯ ಚಿತ್ರಗಳಿಗೆ ಕಡಿಮೆ ಇಲ್ಲ ಅನ್ನೋ ಮಟ್ಟದಲ್ಲಿ ಬಹಳ ಅಚ್ಚುಕಟ್ಟಾಗಿ ತುಳುವಿಗೊಂದು ಅದ್ಭುತ ಕೊಡುಗೆ ನೀಡಿದ್ದಾರೆ. ತುಳುನಾಡಿಗೆ ಇಂತಹ ಸುಂದರ ಚಿತ್ರ ನೀಡಿದ್ದಕ್ಕೆ ಸಿನಿಮಾದ ಇಡೀ ತಂಡಕ್ಕೆ ಅಭಿನಂದನೆಗಳು. ಎಲ್ಲರೂ ಸಿನಿಮಾ ನೋಡಿ ಯುವ ತಂಡದ ಪ್ರಯತ್ನಕ್ಕೆ ಪ್ರೋತ್ಸಾಹಿಸೋಣ….