ಮುಂಬೈ: ಕಳೆದು ಹೋದ ಸ್ಮಾರ್ಟ್ ಫೋನ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ವಾಪಸ್ ಕೊಡಿಸುವಲ್ಲಿ ಮುಂಬೈ ರೈಲ್ವೇ ಪೊಲೀಸರು ಭಾರಿ ಸಾಧನೆ ಮಾಡಿದ್ದಾರೆ.
ಕಳೆದ ಆಗಸ್ಟ್ ನಿಂದ 675 ಮೊಬೈಲ್ ಗಳನ್ನು ಪತ್ತೆ ಮಾಡಲಾಗಿದ್ದು, ಮಾಲೀಕರಿಗೆ ಫೋನ್ ಗಳನ್ನು ಮರಳಿಸಲಾಗಿದೆ.
ಗೂಗಲ್ ನ ‘ಫೈಂಡ್ ಮೈ ಫೋನ್’ ಆಪ್ ಬಳಸಿ ಮೊಬೈಲ್ ಪತ್ತೆ ಮಾಡಲಾಗಿದೆ.
ಆಪ್ ನೆರವಿನಿಂದ ರೈಲ್ವೆ ಪೊಲೀಸರು ಕಳೆದುಹೋದ ಮೊಬೈಲ್ ಗಳನ್ನು ಹುಡುಕಿ ವಾರಸುದಾರರಿಗೆ ಕೊಡಿಸಿದ್ದಾರೆ. ಈ ಆಪ್ ಮೂಲಕ ಫೋನ್ ಅನ್ನು ಕೊನೆಯ ಸಲ ಎಲ್ಲಿ ಬಳಸಲಾಗಿದೆ ಎನ್ನುವುದು ಗೊತ್ತಾಗುತ್ತದೆ.
ಅದನ್ನು ಆಧರಿಸಿ ಸುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯ ಕೈಗೊಂಡು ಸುಲಭವಾಗಿ ಹುಡುಕಬಹುದು ಎಂದು ಹೇಳಲಾಗಿದೆ. ಕಾಂಡಿವಿಲಿ ವಿದ್ಯಾರ್ಥಿನಿಯೊಬ್ಬಳು ಇತ್ತೀಚೆಗಷ್ಟೇ ರೈಲಿನಲ್ಲಿ ಮೊಬೈಲ್ ಕಳೆದುಕೊಂಡಿದ್ದು, ಅದನ್ನು ಆಪ್ ಬಳಸಿ ಹುಡುಕಲಾಗಿದೆ.
ವಿದ್ಯಾರ್ಥಿನಿ ಕುಳಿತುಕೊಂಡಿದ್ದ ಸೀಟಿನ ಕೆಳಗಿನ ನೀರಿನ ಪೈಪ್ ನಲ್ಲಿ ಸಿಲುಕಿತ್ತು. ಇದೇ ರೀತಿ ಪ್ರಯಾಣಿಕರು ರೈಲಿನಲ್ಲಿ ಕಳೆದುಕೊಂಡ ಸ್ಮಾರ್ಟ್ ಫೋನ್ ಗಳನ್ನು ಹುಡುಕಿ ರೈಲ್ವೆ ಪೊಲೀಸರು ವಾಪಸ್ ಕೊಟ್ಟಿದ್ದಾರೆ.