ಗೆಜ್ಜೆಗಿರಿ ಹೇಗೆ ಕೋಟಿ ಚೆನ್ನಯರ ಮೂಲಸ್ಥಾನ?
ಅವಳಿ ವೀರರು ಕೋಟಿ- ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಮೂಲಸ್ಥಾನ ಗರಡಿ ನಿರ್ಮಾಣಗೊಂಡು, ದೇಯಿ ಬೈದ್ಯೆತಿ ಸತ್ಯ ಧರ್ಮ ಚಾವಡಿ ನಿರ್ಮಾಣಗೊಂಡು ವಿಜೃಂಭಣೆಯ ಬ್ರಹ್ಮಕಲಶೋತ್ಸವ ಮತ್ತು ಮೂಲಸ್ಥಾನ ನೇಮೋತ್ಸವ ನಡೆದು ಹತ್ತು ತಿಂಗಳು ಕಳೆಯುತ್ತಿದೆ. ಐನೂರು ವರ್ಷಗಳ ಹಿಂದೆ ಕೋಟಿ ಚೆನ್ನಯರು ನಲಿದಾಡಿದ, ತಮ್ಮ ಬಾಲ್ಯ ಮತ್ತು ಯೌವನವನ್ನು ಕಳೆದ ಗೆಜ್ಜೆಗಿರಿಯ ಮಣ್ಣು ಈಗ ಆ ಕಾರಣಿಕ ಶಕ್ತಿಗಳ ಮಹಿಮೆಯಿಂದಾಗಿ ಮಹಾಕ್ಷೇತ್ರವಾಗಿ ಕಂಗೊಳಿಸುತ್ತಿದೆ.
ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ ಮತ್ತು ನೇಮೋತ್ಸವಕ್ಕೆ ಕ್ಷೇತ್ರ ಸಜ್ಜುಗೊಳ್ಳುತ್ತಿದೆ. ಗೆಜ್ಜೆಗಿರಿ ಹೇಗೆ ಕೋಟಿ ಚೆನ್ನಯರಿಗೆ ಮೂಲಸ್ಥಾನ ಎಂಬ ವಿಚಾರದ ಸಂಪೂರ್ಣ ವಿಮರ್ಶೆಯನ್ನು ನಾಲ್ಕೈದು ವರ್ಷಗಳಿಂದ ಮಾಡಿಕೊಂಡು, ಇಡೀ ತುಳುನಾಡಿನ ಜನ ಇದನ್ನು ಅರ್ಥಮಾಡಿಕೊಂಡು ತಲೆದೂಗಿದ್ದರ ಪರಿಣಾಮವೇ ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಹೊಸ ಇತಿಹಾಸ ಸೃಷ್ಟಿಸಲು ಸಾಧ್ಯವಾಯಿತು.
ಆದರೂ ಈ ಲೇಖನ ಯಾಕೆ ಬರೆಯಬೇಕಾಯಿತು ಎಂದರೆ, ಇದೀಗ ಕೆಲವರು ಅನಗತ್ಯವಾಗಿ ಕೋಟಿ ಚೆನ್ನಯರ ಮೂಲಸ್ಥಾನ ಎಂಬ ಪರಿಕಲ್ಪನೆಯನ್ನು ತಿರುಚಲು, ಜನರನ್ನು ಗೊಂದಲದಲ್ಲಿ ಮುಳುಗಿಸಲು ಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ಈ ಲೇಖನ ಬರೆಯಬೇಕಾಗಿ ಬಂತು.
ಗೆಜ್ಜೆಗಿರಿ ಕ್ಷೇತ್ರ ಇರುವುದು ಹಿಂದಿನ ಪರ್ಮಲೆ (ಪಡುಮಲೆ) ಸಂಸ್ಥಾನದ ವ್ಯಾಪ್ತಿಯಲ್ಲಿಯೇ. ಒಂದು ಭಾಗದಲ್ಲಿ ಪಡುಮಲೆ ಬೀಡು (ಪರ್ಮಲೆ ಬೂಡು) ಇದ್ದರೆ, ಅಲ್ಲಿಂದ ಒಂದೆರಡು ಮೈಲು ದೂರದಲ್ಲಿ ಗೆಜ್ಜೆಗಿರಿ ನಂದನ ಬಿತ್ತ್‌ಲ್ (ಏರಾಜೆ ಬರ್ಕೆ) ಇದೆ.
ರಾಜಕೀಯ ದೃಷ್ಟಿಕೋನದಿಂದ ಕೋಟಿ ಚೆನ್ನಯರ ಊರು ಪಡುಮಲೆ ಎಂಬ ಮಾತು ಜನಜನಿತ. ಯಾಕೆಂದರೆ ಕೋಟಿ ಚೆನ್ನಯರನ್ನು ಮೊನ್ನೆ ಮೊನ್ನೆಯವರೆಗೂ ಪಡುಮಲೆ ಬಳ್ಳಾಲರ ಸಂಸ್ಥಾನದ ಕುವರರು ಎಂಬ ಅರ್ಥದಲ್ಲಿ, ಅಂದರೆ ರಾಜಕೀಯ ಅರ್ಥದಲ್ಲಿ ನೋಡುತ್ತಾ ಬರಲಾಗಿತ್ತು. ಇದರಲ್ಲಿ ಪೂರ್ತಿ ತಪ್ಪೇನು ಇಲ್ಲ. ಇತಿಹಾಸ ಮತ್ತು ಪುರಾಣಗಳೆರಡರಲ್ಲೂ ಕಾರಣಿಕ ಪುರುಷರನ್ನು, ವೀರರನ್ನು ಅವರವರು ವಾಸವಿದ್ದ ಪ್ರದೇಶದ ಅರಸು ಸಂಸ್ಥಾನದ ಹೆಸರಿನಲ್ಲಿ ಗುರುತಿಸಿಕೊಂಡು ಬರಲಾಗಿದೆ. ಕಾಂತಾಬಾರೆ- ಬುದಾ ಬಾರೆಯರನ್ನು ಮೂಲ್ಕಿ ಸಾವಂತರ ಹೆಸರಿನಲ್ಲಿ ಕರೆಯಲಾಗುತ್ತಿದೆ. ಹಾಗೆಂದು ಒಳಹೊಕ್ಕು ನೋಡಿದರೆ ಮೂಲ್ಕಿ ಅರಮನೆಯಿಂದ ಹೊರತಾದ ಪ್ರತ್ಯೇಕ ಕುಟುಂಬ ಮೂಲ ಈ ವೀರರಿಗಿದೆ.
ಅದೇ ರೀತಿ ಕೋಟಿ ಚೆನ್ನಯರನ್ನು ಗಮನಿಸಿದಾಗ, ರಾಜಕೀಯ ದೃಷ್ಟಿಯಿಂದ ಅವರು ಪಡುಮಲೆ ಬಳ್ಳಾಲರ ವ್ಯಾಪ್ತಿಯವರು. ಇದು ನಿಸ್ಸಂಶಯ. ವೀರರ ಸಾಮರಸ್ಯ ಮತ್ತು ಸಂಘರ್ಷ ಎರಡೂ ಇದ್ದಿದ್ದು ಇದೇ ಪಡುಮಲೆ ಬೀಡಿನೊಂದಿಗೆ. ಅವರು ಜನಿಸಿದ್ದು ಕೂಡ ಇದೇ ಪಡುಮಲೆ ಬಳ್ಳಾಲರ ಬೀಡಿನಲ್ಲಿ.
ಇದು ಸತ್ಯವಾದರೂ.. ಇದೊಂದೇ ಸತ್ಯವಲ್ಲ. ಯಾಕೆಂದರೆ ಪಡುಮಲೆ ಸಂಸ್ಥಾನ ವ್ಯಾಪ್ತಿಯಲ್ಲಿ ಕೋಟಿ ಚೆನ್ನಯರ ಮನೆ ಯಾವುದೆಂದು ಕೇಳಿದರೆ ಅದಕ್ಕೆ ಸಿಗುವ ಉತ್ತರ- ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನ ಏರಾಜೆ ಬರ್ಕೆ. ಇದು ಸಾಯನ ಬೈದ್ಯರ ನೆಲ. ಅವರ ಹಿರಿಯರ ಕಾಲದಿಂದಲೂ ಪ್ರತಿಷ್ಠಿತ ಬಿಲ್ಲವ ಬರ್ಕೆ ಮನೆತನವಾಗಿ ಕಂಗೊಳಿಸುತ್ತಾ ಬಂದ ತಾಣ. ಈ ಮನೆತನದ ಧರ್ಮದೈವ ಧೂಮಾವತಿ ಅರ್ಥಾತ್ ಜುಮಾದಿ.
ಕೋಟಿ ಚೆನ್ನಯರಿಗೆ ಜನ್ಮ ನೀಡಿದಾಗ ಮಾತೆ ದೇಯಿ ಬೈದ್ಯೆತಿ ಪಡುಮಲೆ ಬೀಡಿನಲ್ಲಿದ್ದರು. ಬಳ್ಳಾಲರ ಕಾಲಿನ ನೋವಿಗೆ ಔಷಧಿ ಮಾಡಲೆಂದು ಗೆಜ್ಜೆಗಿರಿಯ ತನ್ನ ತವರು ಮನೆಯಿಂದ ಬೀಡಿಗೆ ಬಂದಿದ್ದ ಆ ತಾಯಿ, ತನ್ನ ಕೆಲಸ ಮುಗಿಸಿ ಮನೆಯ ಕಡೆ ಹೊರಟು ಕೆಲವೇ ದೂರ ಹೋಗಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗೆಜ್ಜೆಗಿರಿವರೆಗೆ ಹೋಗಲು ಸಮಯಾವಕಾಶ ಇಲ್ಲದ ಕಾರಣ ಬೀಡಿಗೆ ಕರೆತಂದು ಅಲ್ಲೇ ಹೆರಿಗೆ ಮಾಡಿಸಲಾಗಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಡುಮಲೆ ಬೀಡಿಗೂ ದೇಯಿ ಮಾತೆಗೂ ಯಾವುದೇ ಸಂಬಂಧವಿಲ್ಲ. ಜಾತಿ, ಸಮುದಾಯ, ಕೌಟುಂಬಿಕ ಸಂಬಂಧ ಇಲ್ಲವೇ ಇಲ್ಲ. ಆಕೆ ಕೇವಲ ತನ್ನ ಸೇವಾ ಕೈಂಕರ್ಯದ ಕಾರಣಕ್ಕೆ ಅಲ್ಲಿಗೆ ಬಂದಿದ್ದರು.
ಮಕ್ಕಳಿಗೆ ಜನ್ಮ ನೀಡಿ ಹದಿನಾರರ ಅಮೆ ಮುಗಿಯುವ ಮುನ್ನವೇ ಆಕೆ ಇಹಲೋಕ ತ್ಯಜಿಸಿದರು. ಪ್ರತಿಷ್ಠಿತ ಏರಾಜೆ ಬರ್ಕೆ ಮನೆತನದ ಗುರಿಕಾರರಾದ ಸಾಯನ ಬೈದ್ಯರು ತನ್ನ ತಂಗಿಯ ಪಾರ್ಥಿವವನ್ನು ತಂದು ಗೆಜ್ಜೆಗಿರಿಯಲ್ಲಿ ಸಮಾಧಿ ಮಾಡುತ್ತಾರೆ. ಐನೂರು ವರ್ಷಗಳ ಹಿಂದೆ ಬಿಲ್ಲವ ಸಮಾಜದಲ್ಲಿ ದಫನ ಪದ್ಧತಿ ಇತ್ತೇ ಹೊರತು ಈಗಿನಂತೆ ದಹನ ಪದ್ಧತಿ ಇರಲಿಲ್ಲ ಎಂಬುದನ್ನು ಮನಗಾಣಬೇಕು. ಮೇಲಾಗಿ ದೇಯಿ ಮಾತೆ ಆಗ ಹಸಿ ಬಾಣಂತಿ. ಅಮೆ ಸೂತಕ ಕಳೆಯುವ ಮುನ್ನ ಮೃತಪಟ್ಟರೆ ದಫನ ಮಾಡಬೇಕೆಂಬ ನಂಬಿಕೆಯೂ ಹಿಂದೆ ಚಾಲ್ತಿಯಲ್ಲಿತ್ತು. (ದೇಯಿ ಮಾತೆಯ ಪಾರ್ಥಿವವನ್ನು ಬೀಡಿನ ಪಕ್ಕದಲ್ಲಿ ಗಂಧದ ಕಟ್ಟಿಗೆಯಿಂದ ದಹನ ಮಾಡಲಾಯಿತು ಎಂದು ಹೇಳುವವರ ಗಮನಕ್ಕೆ ಈ ವಿಷಯ ಬರೆಯಬೇಕಾಯಿತು.)
ಕಾಡಲ್ಲಿ ಪರಿತ್ಯಕ್ತ ಸ್ಥಿತಿಯಲ್ಲಿ ಸಿಕ್ಕಿದ ಜೇವು ಕೇದಗೆಯನ್ನು (ಸ್ವರ್ಣ ಕೇದಗೆ ಎನ್ನುತ್ತಾರೆ.) ಮನೆಗೆ ಕರೆ ತಂದು ತಂಗಿಯ ಸ್ಥಾನ ನೀಡಿ, ಆಕೆಗೆ ಹೊಸ ಬದುಕು ನೀಡಿ, ತನ್ನ ಜಾತಿಗೆ ಸೇರಿಸಿಕೊಂಡು, ಔಷಧಿ ವಿದ್ಯೆ ಕಲಿಸಿ, ತನ್ನದೇ ಬಾಮೈದನಿಗೆ ಮದುವೆ ಮಾಡಿಕೊಟ್ಟ ಸಾಯನ ಬೈದ್ಯರು, ಅದೇ ತಂಗಿ ಮೃತಪಟ್ಟಾಗ ಆಕೆಯ ಪಾರ್ಥಿವವನ್ನು ಬಳ್ಳಾಲರ ಬೀಡಿನಲ್ಲಿ ಸಂಸ್ಕಾರ ಮಾಡಲು ಬಿಡುತ್ತಾರೆಯೇ? ಗೌರವ ಪೂರ್ಣವಾಗಿ ತನ್ನ ಜಮೀನಿನಲ್ಲೇ ಅಂತ್ಯಸಂಸ್ಕಾರ ಮಾಡುವುದಿಲ್ಲವೇ? ಹಾಗೆ ಮಾಡುತ್ತಾರೆ ಸಾಯನರು. ಹಾಗಾಗಿಯೇ ಇಂದಿಗೂ ಗೆಜ್ಜೆಗಿರಿಯಲ್ಲಿ ದೇಯಿ ಮಾತೆಯ ಸಮಾಧಿ ಇದೆ.
ಕೋಟಿ ಚೆನ್ನಯರು ಶೈಶಾವಸ್ಥೆಯಲ್ಲೇ ತಾಯಿಯನ್ನು ಕಳೆದುಕೊಂಡರು. ಸಾಯನ ಬೈದ್ಯರು ಹನ್ನೊಂದು ತಿಂಗಳ ಮಕ್ಕಳನ್ನು ಬೀಡಿನಿಂದ ಗೆಜ್ಜೆಗಿರಿಗೆ ಕರೆತಂದು ಸಾಕುತ್ತಾರೆ. ದುರಂತವೆಂದರೆ ಈ ಹೊತ್ತಿಗೆ ಅವರ ತಂದೆ ಕರ್ಗಲ್ಲ ತೋಟ ಕಾಂತಣ್ಣ ಬೈದ್ಯರೂ ಕಾಲವಾಗಿರುತ್ತಾರೆ. ಒಂದು ವೇಳೆ ತಂದೆ ಇರುತ್ತಿದ್ದರೆ ಮಕ್ಕಳನ್ನು ಅವರು ಕರ್ಗಲ್ಲ ತೋಟದ ಮನೆಗೆ ಕರೆದೊಯ್ದು ಸಾಕುತ್ತಿದ್ದರೋ ಏನೋ? ಆದರೂ ಶೈಶಾವಸ್ಥೆಯಲ್ಲಿ ತಾಯಿ ಕಳೆದುಕೊಂಡ ಮಗುವನ್ನು ಹಿಂದಿನಿಂದಲೂ ಅಜ್ಜಿ ಮನೆಯಲ್ಲಿ ಸಾಕುವುದೇ ಹೆಚ್ಚು.
ಕೋಟಿ ಚೆನ್ನಯರ ವಿಚಾರದಲ್ಲೂ ಹೀಗೇ ಆಯಿತು. ದೇಯಿ ಬೈದ್ಯೆತಿಗೆ ಪುನರ್ಜನ್ಮ ಸಿಕ್ಕಿದ ಮನೆ ಗೆಜ್ಜೆಗಿರಿ. ಅದನ್ನೇ ಆಕೆ ತಾಯಿ ಮನೆಯಾಗಿ ಸ್ವೀಕರಿಸಿದ್ದರು. ಹೇಗೆಂದರೆ ಸಾಯನರನ್ನು ಆಕೆ ಅಣ್ಣನಾಗಿ ಸ್ವೀಕರಿಸಿದ್ದರು. ಆಕೆಯ ಬಾಲ್ಯದ ಹೆಸರು ಜೇವು ಕೇದಗೆ ಅರ್ಥಾತ್ ಸ್ವರ್ಣ ಕೇದಗೆ. ತತ್ತಿ ಒಡೆದು ಮಗುವಾಗಿ ಜನಿಸಿದ ಅಯೋನಿಜೆ ಈಕೆ. ಸಾಕಿದ್ದು ಬ್ರಾಹ್ಮಣ ಮನೆತನದವರು. ಆದರೆ ಅದೇ ಮನೆಯವರು ಈ ಮಗು ತಮಗೆ ಬೇಡವೆಂದು ನಿಷ್ಕಾರುಣ್ಯವಾಗಿ ಕಾಡಿನಲ್ಲಿ ಬಿಟ್ಟು ಹೋಗಿದ್ದರು. ಅಂದೇ ಕೇದಗೆಯ ಬದುಕಿನಲ್ಲಿ ಆ ಮನೆ, ಆ ಜಾತಿ ಮತ್ತು ಆ ಕುಲಾಚಾರದ ಸಂಬಂಧ ಕಡಿದು ಹೋಗಿತ್ತು. ವಿಧಿವತ್ತಾಗಿ ಆಕೆ ಬಿಲ್ಲವ ಜಾತಿಗೆ ಸೇರಿ ದೇಯಿ ಎಂಬ ಹೆಸರು ಪಡೆದ ಮೇಲೆ ಆಕೆಯ ಪೂರ್ವಾಶ್ರಮದ ಎಲ್ಲ ಬಂಧಗಳೂ ಕಡಿದುಕೊಂಡಿದ್ದವು. ಹೆಸರು, ಜಾತಿ, ಪದ್ಧತಿ, ಸಂಸ್ಕೃತಿ ಎಲ್ಲವೂ ಬದಲಾಗಿತ್ತು. ಹೀಗಾಗಿ ಪೂರ್ವಾಶ್ರಮ ನೆನಪು ಮಾತ್ರವೇ ಹೊರತು ಅಲ್ಲಿನ ಎಲ್ಲ ಸಂಬಂಧಗಳೂ ಕಡಿದು ಹೋದವು. ನಂತರ ಯಾವತ್ತೂ ಆಕೆ ಅಲ್ಲಿಗೆ ಹೋಗಿಯೇ ಇಲ್ಲ. ಇವತ್ತಿಗೂ ಈ ಹೆಣ್ಣು ದೇಯಿ ಬೈದ್ಯೆತಿ ಹೆಸರಲ್ಲೇ ಪ್ರಸಿದ್ಧಳೇ ಹೊರತು ಜೇವು ಕೇದಗೆ ಹೆಸರಿನಲ್ಲಿ ಅಲ್ಲ. ಹೀಗಾಗಿ ಪುನರ್ಜನ್ಮ ಸಿಕ್ಕಿದ ಗೆಜ್ಜೆಗಿರಿಯೇ ದೇಯಿ ಮಾತೆಯ ಪಾಲಿಗೆ ಸ್ವಂತ ಮನೆ ಮತ್ತು ಮೂಲ ಮನೆ.
ಇದಕ್ಕೆ ಇನ್ನೊಂದು ಕಾರಣವೂ ಇದೆ. ದೇಯಿಯನ್ನು ಕಾಂತಣ್ಣ ಬೈದ್ಯರಿಗೆ ಮದುವೆ ಮಾಡಿ ಕೊಡುವಾಗ ಸಾಯನ ಬೈದ್ಯರ ಬರಿ- ಬಾಂದ್ರ ಹೇಳಿ ಮದುವೆ ಮಾಡಿಸಲಾಗುತ್ತದೆ. ಇಲ್ಲಿ ಪೂರ್ವಾಶ್ರಮದ ಮನೆಯ ಗೋತ್ರ ಉಲ್ಲೇಖಿಸಲಿಲ್ಲ. ಇದೊಂದರಿಂದಲೇ ತಿಳಿಯುತ್ತದೆ ದೇಯಿ ಮಾತೆ ಪೂರ್ಣ ಪ್ರಮಾಣದಲ್ಲಿ ಬಿಲ್ಲವ ಕುಲಕ್ಕೆ ಅರ್ಪಣೆಗೊಂಡಿದ್ದಳು. ಹಾಗಾಗಿಯೇ ಬರಿ (ಬಳಿ) ತಂದುಕೊಟ್ಟ ಗೆಜ್ಜೆಗಿರಿ ದೇಯಿ ಬೈದ್ಯೆತಿಗೆ ಮೂಲಮನೆ.
ಇನ್ನು ಕೋಟಿ ಚೆನ್ನಯರ ವಿಷಯಕ್ಕೆ ಬರುವುದಾದರೆ, ಬಿಲ್ಲವ ಕುಲದಲ್ಲಿ ಮಾತೃಸಂಸ್ಕೃತಿ ಇದೆ. ಕೋಟಿ ಚೆನ್ನಯರಿಗೆ ಬರಿ- ಬಾಂದ್ರ ಬರುವುದು ಸಾಯನ ಬೈದ್ಯರ ಮೂಲದಿಂದ. ಶೈಶಾವಸ್ಥೆಯಲ್ಲಿ ತಂದೆಯನ್ನು ಕಳೆದುಕೊಂಡ ಕಾರಣ ತಾಯಿಯ ತವರು ಮನೆಯಾದ ಗೆಜ್ಜೆಗಿರಿಯೇ ವೀರರ ಪಾಲಿಗೆ ಸ್ವಂತ ಮನೆಯಾಗುತ್ತದೆ. ಇದೇ ಮನೆಯಲ್ಲಿ ಅವರು ೨೮ ವರ್ಷಗಳ ಕಾಲ ಜೀವಿಸಿದ್ದರು. ಇದೇ ಮನೆ ಮಾವನ ಮನೆಯೂ ಆಗಿರುವ ಕಾರಣ, ಇದೇ ಮನೆಯಲ್ಲಿ ಮಾವನ ಮನೆತನದ ಧರ್ಮದೈವ ಇರುವ ತರವಾಡು ಇರುವ ಕಾರಣ ಸಹಜವಾಗಿ ಕೋಟಿ ಚೆನ್ನಯರಿಗೆ ಇದು ಕುಟುಂಬದ ಮೂಲ ಮನೆಯೇ ಆಗುತ್ತದೆ. ಈ ಕಾರಣಕ್ಕಾಗಿಯೇ ಗೆಜ್ಜೆಗಿರಿಯನ್ನು ಕೋಟಿ ಚೆನ್ನಯರ ಮೂಲಸ್ಥಾನ ಎನ್ನುವುದು. ಇದು ಅಪ್ಪಟ ತೌಳವ ಮಾತೃಮೂಲ ಸಂಸ್ಕೃತಿಯಿಂದ ಮೂಡಿದ ಪರಿಕಲ್ಪನೆ.
ತಮ್ಮ ತಾಯಿ ಕಾರ್ಯನಿಮಿತ್ತ ಪಡುಮಲೆ ಬೀಡಿಗೆ ಹೋಗಿದ್ದಾಗ ಅಲ್ಲಿ ವೀರರು ಜನಿಸುತ್ತಾರೆ. ಹಾಗಾಗಿ ಆ ಬೀಡಿನ ಸ್ಥಳ ವೀರರ ಪಾಲಿನ ಜನ್ಮ ಸ್ಥಳವಾಗುತ್ತದೆ. ಅದು ಸತ್ಯ. ಹಾಗೆಂದು ಅದು ಅವರ ಸ್ವಂತ ಮನೆಯೂ ಅಲ್ಲ. ಮೂಲ ಮನೆಯೂ ಅಲ್ಲ. ಜಾತಿಯ ಮನೆಯೂ ಅಲ್ಲ. ವ್ಯಕ್ತಿಯ ಮೂಲವನ್ನು ಆತನ ಮನೆ, ಕೌಟುಂಬಿಕ ನೆಲೆಯಿಂದ ಗುರುತಿಸಲಾಗುತ್ತದೆಯೇ ಹೊರತು, ಆತ ಜನಿಸಿದ ಸ್ಥಳದಿಂದಲ್ಲ. (ಇವತ್ತಿನ ದಿನಗಳಲ್ಲಿ ಮಕ್ಕಳು ಆಸ್ಪತ್ರೆಯಲ್ಲಿ ಜನಿಸುತ್ತಾರೆ. ಹಾಗೆಂದು ಆಸ್ಪತ್ರೆಯನ್ನು ಅವರ ಮೂಲ ಮನೆಯೆಂದು ಹೇಳಲಾಗದು. ಅದು ಕೇವಲ ಬರ್ಥ್ ಪ್ಲೇಸ್ ಮಾತ್ರ.)
ಕೋಟಿ ಚೆನ್ನಯರ ಇತಿಹಾಸದಲ್ಲಿ ದಾಖಲಾದ ಒಂದು ಮಹತ್ವದ ಅಂಶವೆಂದರೆ ಅವರು ಪಡುಮಲೆ ಬಳ್ಳಾಲರ ಬೀಡಿಗೇ ಗಡುವಿಟ್ಟು, ನಾವು ಇನ್ನು ಮುಂದೆ ಇಲ್ಲಿಗೆ ಬರುವುದಿಲ್ಲ ಎಂದು ಶಪಥ ಹಾಕಿ ಇಳಿದು ಹೋಗುತ್ತಾರೆ. ಕೋಟಿ ಚೆನ್ನಯರ ಈ ಪ್ರತಿಜ್ಞೆ ಮಹಾಭಾರತದ ಭೀಷ್ಮ ಪ್ರತಿಜ್ಞೆಯಷ್ಟೇ ಪ್ರಸಿದ್ಧವಾದುದು.
ಬಿಲ್ಲವ ಸಮಾಜದ ಮಾತೃಮೂಲ ಸಂಸ್ಕೃತಿಯ ಮಾನದಂಡದ ಅಡಿಯಲ್ಲಿ ಕೋಟಿ ಚೆನ್ನಯರ ಮೂಲ ಅಳೆಯಬಹುದೇ ಹೊರತು ಪಿತೃಮೂಲ ಸಂಸ್ಕೃತಿ ಅಥವಾ ಇನ್ನಾವುದೇ ಲೆಕ್ಕಾಚಾರದಿಂದಲ್ಲ.
ಸ್ವರ್ಣ ಕೇದಗೆಯ ಮೊದಲ ಮನೆ ಬ್ರಾಹ್ಮಣರ ಮನೆತನ. ಆಕೆ ಅಲ್ಲೇ ಬೆಳೆದು ಬದುಕಿದ್ದರೆ ಸಹಜವಾಗಿ ಆ ಮನೆಯೇ ಆಕೆಯ ಪಾಲಿಗೆ ಮೂಲಸ್ಥಾನವಾಗುತ್ತಿತ್ತು. ಯಾಕೆಂದರೆ ಅದಕ್ಕಿಂತ ಹಿಂದೆ ಆಕೆಗೆ ಮನೆತನ ಪರಂಪರೆಯಿಲ್ಲ. ಆಕೆ ಅಯೋನಿಜೆ. ಯಾವಾಗ ಬ್ರಾಹ್ಮಣ ಸಾಕು ತಂದೆ ಈ ಹೆಣ್ಣು ಮಗಳನ್ನು ಕಾಡಿನಲ್ಲಿ ಪರಿತ್ಯಕ್ತಗೊಳಿಸಿ ಈ ಮಗು ತಮ್ಮ ಮನೆ, ಕುಟುಂಬ, ಮನೆತನಕ್ಕೆ ಬೇಡವೆಂದು ಕೈಬಿಟ್ಟರೋ ಅಂದೇ ಆ ಮನೆ ಮತ್ತು ಕೇದಗೆಯ ನಡುವಿನ ಸಂಬಂಧ ಕಡಿದು ಹೋಗಿದೆ. ಒಂದು ವೇಳೆ ನಂತರದ ಬದುಕಿನಲ್ಲಿ ಕೇದಗೆ ಬ್ರಾಹ್ಮಣಳಾಗಿಯೇ ಬೆಳೆಯುತ್ತಿದ್ದರೆ ಆಗ ಖಂಡಿತವಾಗಿಯೂ ಆಕೆಯ ಮೂಲ ಬೇರು ಪೆಜನಾರ್ ಬ್ರಾಹ್ಮಣರ ಮನೆಯಲ್ಲೇ ಉಳಿಯುತ್ತಿತ್ತು.
ಹಾಗಾಗಲಿಲ್ಲ. ಕೇದಗೆ ಬದಲಾದಳು. ಬಿಲ್ಲವ ಜಾತಿಗೆ ಸೇರ್ಪಡೆಗೊಂಡಳು. ಯಾವ ದಿನ ಆಕೆ ಕಾಡಿನಿಂದ ಗೆಜ್ಜೆಗಿರಿಗೆ ಬಂದು ಬೈದ್ಯ ಕುಲದ ಮಗಳಾಗಿ ಅಧಿಕೃತವಾಗಿ ಬಿಲ್ಲವ ಗುರಿಕಾರರ ಸಮ್ಮುಖದಲ್ಲಿ ಬಿರುವ ಸಮಾಜಕ್ಕೆ ಸೇರ್ಪಡೆಗೊಂಡಳೋ ಅದೇ ದಿನ ಆಕೆ ಮತ್ತು ಪೆಜನಾರ್ ಬ್ರಾಹ್ಮಣ ಮನೆತನದ ಸಂಬಂಧ ಪೂರ್ಣವಾಗಿ ಕಡಿದು ಹೋಗುತ್ತದೆ. ಮತ್ತೇನಿದ್ದರೂ ಆಕೆಯದು ಹೊಸ ಬದುಕು. ಆ ಹೊಸ ಬದುಕು ಟಿಸಿಲೊಡೆದ ಗೆಜ್ಜೆಗಿರಿ ಮನೆಯೇ ದೇಯಿಯ ಮೂಲ. ಕೇದಗೆ ಹೆಸರು ಅಳಿಸಿ ದೇಯಿ ಬೈದ್ಯೆತಿ ಹೆಸರು ಸ್ಥಾಪನೆಗೊಂಡ ಮನೆಯೇ ಆಕೆಯ ಪಾಲಿಗೆ ಮೂಲ. ತಾಯಿಗೆ ಮೂಲವಾದ ಮನೆಯೇ ಸಹಜವಾಗಿ ಅಳಿಯಕಟ್ಟು ಮನೆತನದ ಕೋಟಿ ಚೆನ್ನಯರಿಗೂ ಮೂಲ ಮನೆಯಾಗುತ್ತದೆ.
ಇವತ್ತು ಗೆಜ್ಜೆಗಿರಿಯಲ್ಲಿ ನಡೆಯುತ್ತಿರುವ ಆರಾಧನೆ ಇದೇ ಮೂಲಸ್ಥಾನದ ಕಲ್ಪನೆಯಲ್ಲಿದೆ. ಇಲ್ಲಿ ಸಾಯನ ಗುರುಗಳು, ಸಹೋದರಿ ದೇಯಿ ಬೈದ್ಯೆತಿ ಮತ್ತು ಅಳಿಯಂದಿರಾದ ಕೋಟಿ ಚೆನ್ನಯರ ಆರಾಧನೆ ನಡೆಯುತ್ತದೆ. ಮತ್ತು ಈ ಶಕ್ತಿಗಳು ಅವತಾರ ರೂಪದಲ್ಲಿ ಬದುಕಿದ್ದಾಗ ನಂಬಿಕೊಂಡಿದ್ದ ಧರ್ಮ ದೈವ ಧೂಮಾವತಿಯ ಉಪಾಸನೆಯೂ ಇಲ್ಲಿದೆ. ಜತೆಗೆ ನಾಗಾರಾಧನೆ, ಸಪರಿವಾರ ದೈವಗಳ ಉಪಾಸನೆಯೂ ಇದೆ. ಒಟ್ಟಾರೆಯಾಗಿ ಹೇಳುವುದಿದ್ದರೆ ತುಳುನಾಡಿನ ಮೂಲಸ್ಥಾನ (ತರವಾಡು) ಕಲ್ಪನೆಯ ಸಮಗ್ರ ಚಿತ್ರಣ ಗೆಜ್ಜೆಗಿರಿಯಲ್ಲಿದೆ.
-ಫಾಲಾಕ್ಷ