ಡಿಪ್ಲೊಮಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ವಿದ್ಯಾರ್ಹತೆಯನ್ನು ಪಿಯುಸಿ ವಿದ್ಯಾರ್ಹತೆಗೆ ತತ್ಸಮಾನ ಎಂದು ಪರಿಗಣಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶರಣಪ್ಪ ಮಾಹಿತಿ ನೀಡಿದ್ದು, “ಮೂರು ವರ್ಷಗಳ ಡಿಪ್ಲೊಮಾ ವಿದ್ಯಾರ್ಹತೆಯನ್ನು ಪಿಯುಸಿ ವಿದ್ಯಾರ್ಹತೆಗೆ ತತ್ಸಮಾನವೇ ಎನ್ನುವ ವಿಚಾರವನ್ನು ತೀರ್ಮಾನಿಸುವ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆದೇಶಿಸಲಾಗಿದೆ” ಎಂದು ತಿಳಿಸಿದ್ದಾರೆ.
“ನೇರ ನೇಮಕಾತಿ, ಅನುಕಂಪದ ಆಧಾರದ ನೇಮಕಾತಿ ಹೊಂದಲು ಹಾಗೂ ಉನ್ನತ ಶಿಕ್ಷಣ ಪಡೆಯಲು ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣವನ್ನು ಪಿಯುಸಿ ಗೆ ತತ್ಸಮಾನ ಎಂದು ಪರಿಗಣಿಸುವುದು” ಎಂದಿದ್ದಾರೆ.
“2015ಕ್ಕಿಂತ ಹಿಂದಿನ ವರ್ಷಗಳಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯು ಮೂರು ವರ್ಷಗಳ ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಸಕ್ಷಮ ನೇಮಕಾತಿ ಪ್ರಾಧಿಕಾರದಿಂದ ನಡೆಸುವುದು” ಎಂದು ಹೇಳಿದ್ದಾರೆ.
“2015ರ ನಂತರ ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಹಾಗೂ ಒಂದು ಐಚ್ಛಿಕ ವಿಷಯದಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯವಲ್ಲ” ಎಂದು ತಿಳಿಸಿದ್ದಾರೆ.