ನಾರಾಯಣಗುರುಗಳ ಸಂದೇಶವನ್ನು ಅರಿತು, ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ. ಅವರ ಸಂದೇಶಗಳು ಬದುಕಿಗೆ ಸಮರ್ಪಕವಾಗುವಂತಹ ಗಳು. ಅಂದಿನ ಅವರ ಚಿಂತನೆಯಿಂದ ಇಂದು ಬದಲಾವಣೆಯತ್ತ ನಾವು ಸಾಗುತ್ತಿದ್ದೇವೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಹೇಳಿದರು.
ಬ್ರಹ್ಮಶ್ರೀ ನಾರಾಯಣಗುರುಗಳ 92 ನೇ ಪುಣ್ಯತಿಥಿಯ ಅಂಗವಾಗಿ ಪಡುಬಿದ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಮತ್ತು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಸಮಾಜದಲ್ಲಿ ಸಮಾನತೆಯನ್ನು ಸಾರುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂಬ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ, ಸರಕಾರಿ ಕಾಲೇಜು ತೆಂಕನಿಡಿಯೂರಿನ ಉಪನ್ಯಾಸಕರಾದ ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು ಮಾತನಾಡಿ ಜಾತಿ-ವರ್ಗಗಳ ಬೇಧವನ್ನು ಮರೆತು ಮಾನವೀಯತೆ, ಸಮಾನತೆಯ ಮನಸ್ಥಿತಿ ನಮ್ಮಲ್ಲಿ ಇದ್ದಾಗ ಸಮಾಜ ಪರಿವರ್ತನೆ ಸಾಧ್ಯವಾಗುತ್ತದೆ. ಗುರುಗಳ ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶ ಇಡೀ ಸಮಾಜವೇ ಒಪ್ಪಿಕೊಂಡಿದೆ. ಸಂಘಟನೆಗಳು ನೈತಿಕ ಬಲ ತುಂಬುವ ಮೂಲಕ ಸಮಾಜದ ತಪ್ಪುಗಳನ್ನು ಪ್ರಶ್ನಿಸುವ ಗುಣವು ನಮ್ಮಲ್ಲಿ ಬರಬೇಕಾಗಿದೆ. ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಸಂದೇಶ ಸಮಾನತೆ ತರುವಲ್ಲಿ ಸಹಕಾರಿಯಾಗಿದೆ ಎಂದರು.
ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಮಾತನಾಡಿ ನಾರಾಯಣಗುರುಗಳು ಸಾಮಾಜಿಕ ಕ್ರಾಂತಿ ಮಾಡಿ ಹಿಂದುಳಿದ ವರ್ಗಗಳಿಗೆ ಶಕ್ತಿಯಾದರು. ಸತ್ಯದ ಹೋರಾಟದ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಿ ಬದಲಾವಣೆಯ ತಂದರು. ಅವರ ಅಂದಿನ ಸಂದೇಶ ಸಾರ್ವಕಾಲಿಕವಾಗಿದೆ.ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ. ಕೋಟ್ಯಾನ್ ವಹಿಸಿದ್ದರು.
ಸಮಾರಂಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕರಾದ ಜಗದೀಶ್ ಸುವರ್ಣ, ಬಿಲ್ಲವ ಸಂಘದ ಕಾರ್ಯದರ್ಶಿ ಲಕ್ಷ್ಮಣ್ ಬಿ. ಅಮೀನ್, ಘಟಕದ ಕಾರ್ಯದರ್ಶಿ ಶಾಶ್ವತ್ ಎಸ್. ಉಪಸ್ಥಿತರಿದ್ದರು.
ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ. ಕೋಟ್ಯಾನ್ ಸ್ವಾಗತಿಸಿ, ಘಟಕದ ಮಾಜಿ ಅಧ್ಯಕ್ಷರಾದ ಸುಜಿತ್ ಕುಮಾರ್ ಪ್ರಸ್ತಾವಿಸಿ, ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಜಯ ಎನ್. ಪೂಜಾರಿ ವಂದಿಸಿ, ಯಶೋಧ ಕಾರ್ಯಕ್ರಮ ನಿರ್ವಹಿಸಿದರು.