ಪುತ್ತೂರು ಜನವರಿ 18: ದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಕೇರಳ ಸರಕಾರವು ಪ್ರದರ್ಶಿಸಲು ಮುಂದಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ತಿರಸ್ಕರಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ (ರಿ) ಪುತ್ತೂರು ತೀವ್ರವಾಗಿ ಖಂಡಿಸಿದೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕಡಿಂಜೆ ತಿಳಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರಾತಃ ಸ್ಮರಣೀಯರು ಹಾಗೂ ಪೂಜನೀಯರು. ಭಾರತ ದೇಶ ಕಂಡ ಅತ್ಯಂತ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು. ಕೇರಳದ ಚಿತ್ರಣವನ್ನೆ ಬದಲಾಯಿಸಿದ ಸಾಮಾಜಿಕ ಹರಿಕಾರರು, ಮೇಲು-ಕೀಳು, ಸ್ಪರ್ಶ-ಅಸ್ಪರ್ಶ ಎನ್ನುವ ಜಾತಿ ಬೇಧ ತುಂಬಿದ ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೂ ಧರ್ಮದ ಉಪನಿಷತ್ತುಗಳನ್ನು ಹೇಳಿದ ಸಮಾನತೆಯ ನೈಜ ಹಿಂದೂ ಧರ್ಮದ ಜ್ಞಾನದ ಬೆಳಕಾಗಿದ್ದವರು.ಬ್ರಹ್ಮಶಿ ನಾರಾಯಣ ಗುರುಗಳು “ಒಂದೇ ಜಾತಿ, ಒಂದೇ ಮತ ಒಂದೇ ದೇವರು” ಎನ್ನು ಸಾರ್ವಕಾಲಕ ಸತ್ಯ ಸಂದೇಶವನ್ನು ಜಗಕ್ಕೆ ಸಾರಿದ ಪರಮ ಗುರುಗಳಾಗಿದ್ದು, ಇಂಥ ಸಂತನ ಸ್ತಬ್ದಚಿತ್ರವನ್ನು ಕೇಂದ್ರ ತಿರಸ್ಕರಿಸಿರುವುದು ನಾರಾಯಣ ಗುರುವಿಗೆ ಮಾಡಿದ ಅವಮಾನ ಎಂದರು. ತಕ್ಷಣವೇ ಕೇಂದ್ರ ಮಧ್ಯಪ್ರವೇಶಿಸಿ ಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ನೀಡಬೇಕು.ಇಲ್ಲದೇ ಹೋದಲ್ಲಿ ಜನವರಿ 26 ರ ಬಳಿಕ ಪುತ್ತೂರಿನಲ್ಲಿ ಎಲ್ಲಾ ಸಮಾಜದವರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.