– ಪದ್ಮರಾಜ್ ಆರ್.
ವಕೀಲರು, ಕೋಶಾಧಿಕಾರಿ ಶ್ರೀ ಗೋಕರ್ಣನಾಥ ದೇವಸ್ಥಾನ ಕುದ್ರೋಳಿ
ಮಾದರಿಯಾದ ಕಾರ್ಕಳ ಉತ್ಸವ
ಸಚಿವ ಸುನೀಲ್ ಕುಮಾರ್ ನೇತೃತದಲ್ಲಿ ನಡೆಯುತ್ತಿರುವ ಕಾರ್ಕಳ ಉತ್ಸವ ಮಾದರಿ ಉತ್ಸವವಾಗುತ್ತಿದೆ. ಜಾತಿ ಮತ, ಪಕ್ಷ ಭೇದವಿಲ್ಲದೆ ಕಾರ್ಕಳದ ಸುತ್ತಮುತ್ತದ ಜನತೆಗೆ ಹಬ್ಬದ ವಾತಾವರಣ ಸೃಷ್ಟಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕಾರ್ಕಳದ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಲ್ಲದೆ ರಾಜ್ಯದ ಹಾಗೂ ರಾಷ್ಟ್ರದ ವಿವಿಧ ಜನಪದ ಕಲೆ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸುವ ಮೂಲಕ ಹೊಸತನಕ್ಕೆ ನಾಂದಿ ಹಾಡಿರುವುದು ಶ್ಲಾಘನೀಯ. ಇಡೀ ಉತ್ಸವಕ್ಕೆ ಮೆರುಗು ಎಂಬಂತೆ ಹೆಲಿಕಾಪ್ಟರ್ ವಿಹಾರವನ್ನು ಸಚಿವರು ಪೌರ ಕಾರ್ಮಿಕರ ಜತೆ ಪಯಣಿಸುವ ಮೂಲಕ ಚಾಲನೆ ನೀಡಿ ಸಾಮಾನ್ಯರ ನಡುವಿನ ಸಚಿವ ಎನ್ನುವುದಕ್ಕೆ ಸಾಕ್ಷಿಯಾದರು. ಮಾತ್ರವಲ್ಲದೆ ಮರೆಯಾದ ಕಾರ್ಕಳದ ಸಾಧಕರನ್ನು ಸ್ಮರಿಸುವ ಕಾರ್ಯವೂ ಇಲ್ಲಿ ನಡೆದಿದೆ.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾತ್ಮರ ಹೆಸರನ್ನು ವೇದಿಕೆ, ಮಳಿಗೆ ಸಭಾಂಗಣಗಳಿಗೆ ಹೆಸರಿಸುವ ಮೂಲಕ ಗೌರವ ನಮನ ಸಲ್ಲಿಸಿರುವುದು ಮಾದರಿ. ಜಸ್ಟೀಸ್ ಕೆ.ಎಸ್.ಹೆಗ್ಡೆ ವೇದಿಕೆ, ಕಾರ್ಕಳದ ಶಾಸಕರಾಗಿದ್ದ ಸರಳ ರಾಜಕಾರಣಿ ದಿ.ಗೋಪಾಲ ಭಂಡಾರಿ, ಶಿಲ್ಪಕಲೆಯಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಧರ್ಮಸ್ಥಳದ ಗೊಮ್ಮಟೇಶ್ವರನ ಮೂರ್ತಿ ಕೆತ್ತಿದ ಮಹಾನ್ ಶಿಲ್ಪಿ ದಿ.ರೆಂಜಾಳ ಗೋಪಾಲಕೃಷ್ಣ, ಮೊದಲ ಶಿಲ್ಪಕಲಾ ಅಧ್ಯಕ್ಷರಾಗಿದ್ದ ಶಿಲ್ಪಿ ಶ್ಯಾಮರಾಯ ಆಚಾರ್ಯ, ಕನ್ನಡ ಸಾಹಿತ್ಯ ಲೋಕದ ಮಹಾಕವಿ ನಂದಳಿಕೆಯ ಮುದ್ದಣ್ಣ, ಕರ್ನಾಟಕದ ಏಕೀಕರಣಕ್ಕಾಗಿ ಅವಿರತ ಹೋರಾಡಿದ ಕಾಂತಾವರ ಬಾರಾಡಿ ಬೀಡಿನ ಜಿನರಾಜ ಹೆಗ್ಡೆ, ಅಡುಗೆ ಭೋಜಣ್ಣ ಎಂದೇ ಖ್ಯಾತರಾಗಿದ್ದ ಮುಡಾರು ಗ್ರಾಮದ ಭೋಜರಾಜ ಜೈನ್ ಬನ್ನಾಡಿ ಹೆಸರಲ್ಲಿ ವೇದಿಕೆ ಮಾಡುವ ಮೂಲಕ ಅಗಲಿದವರನ್ನು ನೆನಪಿಸುವ ಕಾರ್ಯ ಮಾಡಿರುವುದು ಉತ್ತಮ ಹೆಜ್ಜೆ. ಅಲ್ಲದೆ ತಾಲೂಕಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ಕಾರ್ಯವೂ ನಡೆಯುತ್ತಿರುವುದು ಶ್ಲಾಘನೀಯ. ಈ ರೀತಿ ಎಲ್ಲ ರಾಜಕಾರಣಿಗಳು ಜಾತಿ ಮತ, ಪಕ್ಷ ಭೇದ ಮರೆತು ಮಾದರಿ ಕಾರ್ಯಕ್ರಮ ಆಯೋಜಿಸುವ ಪ್ರಯತ್ನ ಮಾಡಲಿ….